Mysuru : ಪಾಲಿಕೆಯ 1,2 ವಲಯ ಕಚೇರಿಗಳಲ್ಲಿ ಅದಾಲತ್‌

ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹರಿಸಲು ಮೈಸೂರು ಮಹಾನಗರಪಾಲಿಕೆಯು ವಲಯ 1 ಮತ್ತು 2ರ ಕಚೇರಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಅದಾಲತ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

Mysuru   Adalat in 1,2 Zonal Offices of Corporation snr

 ಮೈಸೂರು :  ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹರಿಸಲು ಮೈಸೂರು ಮಹಾನಗರಪಾಲಿಕೆಯು ವಲಯ 1 ಮತ್ತು 2ರ ಕಚೇರಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಅದಾಲತ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ನಗರದ ತ್ಯಾಗರಾಜ ರಸ್ತೆಯ ಅಕ್ಕನ ಬಳಗದ ಬಳಿಯ ವಲಯ ಕಚೇರಿ-1 ಮತ್ತು ಜಯನಗರದಲ್ಲಿರುವ ವಲಯ ಕಚೇರಿ 2ರಲ್ಲಿ ಪ್ರತ್ಯೇಕವಾಗಿ ನಡೆದ ಅದಾಲತ್‌ನಲ್ಲಿ ಮೇಯರ್‌ ಶಿವಕುವಾರ್‌ ಅವರು ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸುವ ಮೂಲಕ ಚಾಲನೆ ನೀಡಿದರು.

ನಂತರ ಮೇಯರ್‌ ಶಿವಕುವಾರ್‌ ಮಾತನಾಡಿ, ವಲಯ ಕಚೇರಿಗಳಲ್ಲಿ ದಿನನಿತ್ಯ ಬರುವ ಅರ್ಜಿಗಳಿಗೆ ವಿಳಂಬ ಮಾಡದೆ ಸೇವೆ ಒದಗಿಸದಿದ್ದಲ್ಲಿ ಮುಖ್ಯ ಕಚೇರಿಗೆ ಬರುತ್ತಾರೆ. ಸ್ಥಳೀಯವಾಗಿ ಪರಿಹರಿಸಲು ಗಮನಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಣ್ಣಪುಟ್ಟಸಮಸ್ಯೆ, ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಅನಗತ್ಯವಾಗಿ ಜನರನ್ನು ಅಲೆದಾಡಿಸುವುದು, ಹಣಕ್ಕಾಗಿ ಒತ್ತಾಯಿಸುವುದು, ಬ್ರೋಕರ್‌ಗಳಿಗೆ ಪ್ರೋತ್ಸಾಹ ನೀಡುವುದು ಕಂಡು ಬಂದಲ್ಲಿ ಅಂತಹ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ಸಿಬ್ಬಂದಿ ಸಾರ್ವಜನಿಕರು ಬಂದಾಗ ತಾಳ್ಮೆಯಿಂದ ದೂರು ಆಲಿಸಿ ಇತ್ಯರ್ಥಪಡಿಸಬೇಕು. ತಮ್ಮ ವರ್ತನೆ ಬದಲಿಸಿಕೊಳ್ಳಬೇಕು. ಸಾರ್ವಜನಿಕರೊಂದಿಗೆ ಅನಾಗರಿಕರಂತೆ ವರ್ತಿಸುವವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಖಾತೆಗೆ ಅರ್ಜಿ ಸಲ್ಲಿಸಿ ಎರಡು ತಿಂಗಳಾದರೂ ಸ್ಥಳ ಪರಿಶೀಲನೆ ನಡೆಸದೆ ಟೇಬಲ್‌ನಲ್ಲಿ ಇಟ್ಟುಕೊಂಡಿದ್ದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಮೇಯರ್‌, ಕೂಡಲೇ ವಿಲೇವಾರಿ ಮಾಡಿ ಖಾತೆ ಮಾಡಬೇಕು ಎಂದು ಸೂಚಿಸಿದರು.

ಹೊಸ ಮೀಟರ್‌ ಅಳವಡಿಸಿ

ನೀರಿನ ಬಿಲ್‌ ಜಾಸ್ತಿ ಬರುತ್ತಿದ್ದು, ಹೊಸ ಮೀಟರ್‌ ಅಳವಡಿಸುವಂತೆ ಮನವಿ ಮಾಡಿದರೂ ಪರಿಶೀಲಿಸಿಲ್ಲ. ಇದರಿಂದಾಗಿ ತಿಂಗಳಿಗೆ . 500 ಬಿಲ್‌ ಬರುತ್ತಿದೆ. ಕೂಲಿ ಮಾಡುವ ನಾವು ಇಷ್ಟೊಂದು ಹಣ ಕಟ್ಟುವುದಕ್ಕೆ ಸಾಧ್ಯವಿಲ್ಲ. ಹೊಸ ಮೀಟರ್‌ ಅಳವಡಿಸುವಂತೆ ಹುಲ್ಲಿನ ಬೀದಿಯ ತರಕಾರಿ ವ್ಯಾಪಾರಿ ಶಿವಮ್ಮ ಅಳಲು ತೋಡಿಕೊಂಡರು.

ನಿವೇಶನ, ಮನೆಗಳ ಖಾತೆ ವರ್ಗಾವಣೆ, ಕಂದಾಯ ನಿಗದಿ, ಬಿಲ್ಡಿಂಗ್‌ ಪ್ಲಾನ್‌, ಸಿಆರ್‌, ಟ್ರೇಡ್‌ ಲೈಸನ್ಸ್‌, ನೀರು ಸರಬರಾಜು, ಒಳಚರಂಡಿ, ಆಶ್ರಯ ಯೋಜನೆಯಡಿ ಮನೆ ಮಂಜೂರಾಗಿದ್ದವರಿಗೆ ಸ್ವಾಧೀನ ಪತ್ರ, ಜನನ- ಮರಣ ಪ್ರಮಾಣ ಪತ್ರ ಸೇರಿದಂತೆ ಇನ್ನಿತರ ಸೇವೆ ಕೋರಿ ಬಂದ ಅರ್ಜಿಗಳನ್ನು ಪರಿಶೀಲಿಸಿ, ಅದಕ್ಕೆ ಸಲ್ಲಿಸಿರುವ ದಾಖಲೆಗಳ ಪತ್ರಗಳನ್ನು ಪರಿಶೀಲಿಸಿ ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಲಾಯಿತು.

ಉಪ ಮೇಯರ್‌ ಡಾ.ಜಿ. ರೂಪ, ನಗರ ಪಾಲಿಕೆ ಸದಸ್ಯರಾದ ಎಂ.ಎಸ್‌. ಶೋಭಾ, ಮ.ವಿ. ರಾಮಪ್ರಸಾದ್‌, ಪಲ್ಲವಿ ಬೇಗಂ, ಬಿ.ವಿ. ಮಂಜುನಾಥ್‌, ಛಾಯಾದೇವಿ, ಸೌಮ್ಯ, ವಲಯ ಆಯುಕ್ತರಾದ ಮಂಜುನಾಥ್‌ ರೆಡ್ಡಿ, ಸೋಮಶೇಖರ್‌ ಮೊದಲಾದವರು ಇದ್ದರು.

----

ಕೋಟ್‌...

ಸಾರ್ವಜನಿಕರು ಅರ್ಜಿ ಸಲ್ಲಿಸಿದ ಒಂದು ವಾರದೊಳಗೆ ಸ್ಥಳೀಯವಾಗಿ ಇತ್ಯರ್ಥಪಡಿಸಬೇಕು. ಸಾಧ್ಯವಾಗದಿದ್ದಲ್ಲಿ ಮುಖ್ಯ ಕಚೇರಿಗೆ ರವಾನಿಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು. ಅರ್ಜಿ ಕೊಟ್ಟರೆ ಕೆಲಸ ಕಾರ್ಯಗಳು ವಿಳಂಬವಾಗುತ್ತದೆ ಎನ್ನುವ ದೂರು ಕೇಳಿ ಬರುತ್ತಿರುವುದರಿಂದ ಅದಾಲತ್‌ ಮಾಡಲಾಗುತ್ತಿದೆ.

- ಶಿವಕುಮಾರ್‌, ಮೇಯರ್‌

Latest Videos
Follow Us:
Download App:
  • android
  • ios