ಮೈಸೂರು[ನ.17]: ತೀವ್ರ ಕುತೂಹಲ ಕೆರಳಿಸಿರುವ, ರೆಸಾರ್ಟ್‌ ರಾಜಕಾರಣಕ್ಕೂ ಅವಕಾಶ ಮಾಡಿಕೊಟ್ಟಿರುವ ಮೈಸೂರು ನಗರ ಪಾಲಿಕೆಯ ಮೇಯರ್‌ ಮತ್ತು ಉಪ ಮೇಯರ್‌ ಸ್ಥಾನಕ್ಕೆ ಶನಿವಾರ ಬೆಳಗ್ಗೆ 11ಕ್ಕೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ನ ಎಚ್‌.ಎಂ. ಶಾಂತಕುಮಾರಿ ಮೇಯರ್‌ ಆಗುವುದು ಬಹುತೇಕ ಖಚಿತವಾಗಿದೆ.

ನಿರೀಕ್ಷೆಯಂತೆ ಮೇಯರ್‌ ಸ್ಥಾನವನ್ನು ಜೆಡಿಎಸ್‌ ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇಯರ್‌ ಚುನಾವಣೆಗೆ ಸಂಬಂಧಿಸಿ ತಲೆ ಹಾಕುವುದಿಲ್ಲ ಎಂದು ಬಾಯ್ಮಾತಿನಲ್ಲಿ ಹೇಳಿದ್ದರೂ ಸ್ಥಳೀಯ ನಾಯಕರನ್ನು ಬದಿಗಿಟ್ಟು ನೇರವಾಗಿ ಜೆಡಿಎಸ್‌ ವರಿಷ್ಠರೊಂದಿಗೆ ಮಾತನಾಡಿ, ಸಮಸ್ಯೆ ಬಗೆಹರಿಸಿದ್ದಾರೆ.

ಈ ನಡುವೆ, ಮೇಯರ್‌- ಉಪಮೇಯರ್‌ ಚುನಾವಣೆಗೆ ಸಂಬಂಧಿಸಿ ಸಮ್ಮಿಶ್ರ ಸರ್ಕಾರದ ಮೈತ್ರಿ ಪಕ್ಷಗಳ ನಡುವೆ ತಿಕ್ಕಾಟ ಶುರುವಾದ ಹಿನ್ನೆಲೆಯಲ್ಲಿ ಜೆಡಿಎಸ್‌ ಕಾರ್ಪೊರೇಟರ್‌ಗಳು ಶುಕ್ರವಾರ ರಾಮನಗರದ ಬಳಿ ಇರುವ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ‘ನಾವು 19 ಮಂದಿ(ಬಿಎಸ್ಪಿ ಸದಸ್ಯ ಸೇರಿ) ಇದ್ದೇವೆ. ಹಾಗಾಗಿ ಮೇಯರ್‌ ಸ್ಥಾನ ನಮಗೇ ಸಿಗಬೇಕು’ ಎಂದು ಜೆಡಿಎಸ್‌ನಿಂದ ಆಯ್ಕೆಯಾಗಿರುವ ಕಾರ್ಪೊರೇಟರ್‌ ರವಿಕುಮಾರ್‌ ಒತ್ತಾಯಿಸಿದ್ದಾರೆ. ‘ಆದರೆ, ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ’ ಎಂದು ಅವರು ತಿಳಿಸಿದ್ದಾರೆ.

ಕಳೆದ ಬಾರಿ ಮೇಯರ್‌ ಚುನಾವಣೆ ವೇಳೆ ಕಾಂಗ್ರೆಸ್‌ನ ಕಮಲಾ ಉದಯ್‌ ಅವರಿಗೆ ಮೇಯರ್‌ ಸ್ಥಾನ ಸಿಗುವುದು ಖಾತರಿಯಾಗಿತ್ತು. ಮೀಸಲಾತಿ ಮೂಲಕ ಜೆಡಿಎಸ್‌ ಬೆಂಬಲದೊಡನೆ, ಕಾಂಗ್ರೆಸ್‌ ಮೇಯರ್‌ ಸ್ಥಾನ ಪಡೆಯಲು ಮುಂದಾಗಿತ್ತು. ಇದಕ್ಕೆ ಅಡ್ಡಗಾಲು ಹಾಕಿದ ಜೆಡಿಎಸ್‌ ಮತ್ತು ಬಿಜೆಪಿಯ ಸ್ಥಳೀಯ ನಾಯಕರು ಕಾಂಗ್ರೆಸ್‌ನ ಬಿ. ಭಾಗ್ಯವತಿ ಅವರನ್ನು ಹೈಜಾಕ್‌ ಮಾಡಿ ಕರೆತಂದು ಮೇಯರ್‌ ಮಾಡಿದರು. ಅಂದು ಮೈಸೂರಿನಲ್ಲೇ ಇದ್ದ ಸಿದ್ದರಾಮಯ್ಯಗೆ ಇದರಿಂದ ತೀವ್ರ ಮುಜುಗರವಾಗಿತ್ತು.

ಜೆಡಿಎಸ್‌ನಲ್ಲಿ ಉಪ ಮೇಯರ್‌ ಸ್ಥಾನವನ್ನು ಅಲ್ಪಸಂಖ್ಯಾತ ಸಮುದಾಯಕ್ಕೆ ನೀಡುವ ಸಾಧ್ಯತೆ ಇದೆ. 65 ಸದಸ್ಯ ಬಲದ ನಗರ ಪಾಲಿಕೆಯಲ್ಲಿ ಬಿಜೆಪಿ 22, ಕಾಂಗ್ರೆಸ್‌ 19, ಜೆಡಿಎಸ್‌ 18, ಬಿಎಸ್ಪಿ 1 ಮತ್ತು ಐವರು ಪಕ್ಷೇತರ ಸದಸ್ಯರು ಇದ್ದಾರೆ. ಇದರ ಜತೆಗೆ, ಶಾಸಕರು, ಸಂಸದರು ಹಾಗೂ ಎಂಎಲ್ಸಿಗಳಿಗೂ ಮತ ಚಲಾಯಿಸುವ ಹಕ್ಕಿದೆ.