ಮೈಸೂರು: ದೇವರಾಜ ಮಾರುಕಟ್ಟೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ತೆರವು
ನಗರದ ಹೃದಯ ಭಾಗದಲ್ಲಿರುವ ದೇವರಾಜ ಮಾರುಕಟ್ಟೆಗೆ ನಗರ ಪಾಲಿಕೆ ಆಯುಕ್ತೆ ಡಾ.ಎನ್.ಎನ್. ಮಧು ಅವರು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.
ಮೈಸೂರು : ನಗರದ ಹೃದಯ ಭಾಗದಲ್ಲಿರುವ ದೇವರಾಜ ಮಾರುಕಟ್ಟೆಗೆ ನಗರ ಪಾಲಿಕೆ ಆಯುಕ್ತೆ ಡಾ.ಎನ್.ಎನ್. ಮಧು ಅವರು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.
ಚಿಕ್ಕಗಡಿಯಾರ ವೃತ್ತ, ಸಯ್ಯಾಜಿರಾವ್ ರಸ್ತೆಯಲ್ಲಿರುವ ಫುಟ್ ಪಾತ್ ಒತ್ತುವರಿ ಪರಿಶೀಲಿಸಿ, ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿದ ಬಳಿಕ, ದೇವರಾಜ ಮಾರುಕಟ್ಟೆ ಒಳಾವರಣದಲ್ಲಿ ಸ್ವಚ್ಛತೆ ಹಾಗೂ ಒತ್ತುವರಿಯನ್ನು ಪರಿಶೀಲನೆ ನಡೆಸಿದರು.
ಈ ವೇಳೆ ಪಾಲಿಕೆ ಆಯುಕ್ತೆ ಡಾ.ಎನ್.ಎನ್. ಮಧು ಮಾತನಾಡಿ, ಪಾಲಿಕೆಯು ದೇವರಾಜ ಮಾರುಕಟ್ಟೆಯ ಅಂಗಡಿಗಳಿಗೆ ನಿಗದಿಪಡಿಸಿದಕ್ಕಿಂದ ಹೆಚ್ಚಿನ ಜಾಗವನ್ನು ಅತಿಕ್ರಮಿಸಿ ಪದಾರ್ಥಗಳನ್ನು ಜೋಡಿಸಲಾಗುತ್ತಿದೆ. ಅದಕ್ಕೆ ಬಿಸಿಲು ಬೀಳಬಾರದೆಂಬ ಕಾರಣಕ್ಕೆ ಟಾರ್ಪಾಲು ಹೊದಿಕೆ ಮಾಡಿರುವುದನ್ನು ಗಮನಿಸಿ ಶನಿವಾರ ಅವನ್ನು ತೆರವುಗೊಳಿಸಲಾಗಿದೆ ಎಂದರು.
ಒತ್ತುವರಿ ಮಾಡಿದರೆ ಗ್ರಾಹಕರ ಓಡಾಟಕ್ಕೆ ಅನಾನುಕೂಲವಾಗುತ್ತದೆ. ಹೀಗಾಗಿ, ನಿಗದಿತ ಜಾಗದಲ್ಲೇ ನಿಮ್ಮ ಪದಾರ್ಥಗಳನ್ನು ಇರಿಸಿ ವ್ಯಾಪಾರ ನಡೆಸಬೇಕು. ಸಯ್ಯಾಜಿರಾವ್ ರಸ್ತೆ, ಚಿಕ್ಕಗಡಿಯಾರ ವೃತ್ತದಲ್ಲಿ ಫುಟ್ ಪಾತ್ ನಲ್ಲಿ ವ್ಯಾಪಾರ ನಡೆಸಬಾರದು ಎಂದು ಅವರು ಸೂಚಿಸಿದರು.
ಮಾರುಕಟ್ಟೆಯಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ನಿಷೇಧಿತ ಪ್ಲಾಸ್ಟಿಕ್ ಬಳಕೆಯಾಗುತ್ತಿರುವ ಮಾಹಿತಿಯಿದ್ದು, ಅನೇಕ ಬಾರಿ ದಾಳಿ ನಡೆಸಲಾಗಿದೆ. ಅದನ್ನು ಮುಂದುವರೆಸಬೇಡಿ. ಅಂಗಡಿಗಳ ನೆರಳಿಗಾಗಿ ಆಕಾಶ ನೀಲಿ ಅಥವಾ ಬಿಳಿ ಬಣ್ಣದ ಟಾರ್ಪಾಲುಗಳನ್ನಷ್ಟೇ ಬಳಸಿ, ಒತ್ತುವರಿ ಮುಂದುವರೆದರೆ ಕಠಿಣ ಕ್ರಮ ವಹಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಪಾಲಿಕೆ 6ನೇ ವಲಯ ಉಪ ಆಯುಕ್ತೆ ವೀಣಾ, ಪರಿಸರ ಎಂಜಿನಿಯರ್ ಮೈತ್ರಿ, ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.