Asianet Suvarna News Asianet Suvarna News

ಮೈಸೂರು: 19 ರಂದು ರೇಷ್ಮೆ ಮಾರುಕಟ್ಟೆಗೆ ಮುತ್ತಿಗೆ, 20 ರಂದು ಎಪಿಎಂಸಿ ಬಂದ್

 ರೇಷ್ಮೆ ಮಾರುಕಟ್ಟೆಯಲ್ಲಿ ರೀಲರ್‌ ಗಳೊಡನೆ ಅಧಿಕಾರಿಗಳು ಶಾಮೀಲಾಗಿರುವ ಕಾರಣ ರೇಷ್ಮೆ ಬೆಳೆಗಾರರಿಗೆ ರೇಷ್ಮೆ ಗೂಡಿನ ದರದ ವಿಷಯದಲ್ಲಿ ಅನ್ಯಾಯವಾಗುತ್ತಿದೆ. ಹೀಗಾಗಿ, ಇದನ್ನು ವಿರೋಧಿಸಿ ಮತ್ತು ರೈತರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿ ಏ.19 ರಂದು ಮೈಸೂರು ರೇಷ್ಮೆ ಮಾರುಕಟ್ಟೆಗೆ ಮುತ್ತಿಗೆ ಹಾಗೂ ಏ.20 ರಂದು ಮೈಸೂರಿನ ಎಪಿಎಂಸಿ ಸಂಪೂರ್ಣ ಬಂದ್ ಹಮ್ಮಿಕೊಳ್ಳಲಾಗಿದೆ

Mysore   APMC bandh on April 20th snr
Author
First Published Apr 12, 2024, 6:19 PM IST

 ಮೈಸೂರು : ರೇಷ್ಮೆ ಮಾರುಕಟ್ಟೆಯಲ್ಲಿ ರೀಲರ್‌ ಗಳೊಡನೆ ಅಧಿಕಾರಿಗಳು ಶಾಮೀಲಾಗಿರುವ ಕಾರಣ ರೇಷ್ಮೆ ಬೆಳೆಗಾರರಿಗೆ ರೇಷ್ಮೆ ಗೂಡಿನ ದರದ ವಿಷಯದಲ್ಲಿ ಅನ್ಯಾಯವಾಗುತ್ತಿದೆ. ಹೀಗಾಗಿ, ಇದನ್ನು ವಿರೋಧಿಸಿ ಮತ್ತು ರೈತರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿ ಏ.19 ರಂದು ಮೈಸೂರು ರೇಷ್ಮೆ ಮಾರುಕಟ್ಟೆಗೆ ಮುತ್ತಿಗೆ ಹಾಗೂ ಏ.20 ರಂದು ಮೈಸೂರಿನ ಎಪಿಎಂಸಿ ಸಂಪೂರ್ಣ ಬಂದ್ ಹಮ್ಮಿಕೊಳ್ಳಲಾಗಿದೆ ಎಂದು ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿದ್ಯಾಸಾಗರ್ ತಿಳಿಸಿದರು

ಮಾರುಕಟ್ಟೆಯಲ್ಲಿ ವೈಜ್ಞಾನಿಕವಾಗಿ ರೇಷ್ಮೆಗೂಡಿನ ಪರಿಶೀಲನೆ ನಡೆಯುತ್ತಿಲ್ಲ. ಗೂಡಿನ ಗುಣಮಟ್ಟದ ಆಧಾರದ ಮೇಲೆ ಆನ್‌ ಲೈನ್‌ ನಲ್ಲಿ ಇರುವ ದರ ನಿಗದಿ ಆಗುತ್ತಿಲ್ಲ. ಮಾರುಕಟ್ಟೆಗೆ ಮೊದಲೇ ದಲ್ಲಾಳಿಗಳು ಅಧಿಕಾರಿಗಳು ಶಾಮೀಲಾಗಿ ತಮ್ಮ ಮನಸೋಯಿಚ್ಛೆ ದರ ನಿಗದಿ ಮಾಡುತ್ತಿದ್ದಾರೆ ಎಂದು ಅವರು ದೂರಿದರು.

ರಾಮನಗರ ಮಾರುಕಟ್ಟೆಯಲ್ಲಿ ಅತಿ ಕಳಪೆ ಗೂಡಿಗೆ ನಿರ್ಧಾರವಾದ ಬೆಲೆಗಿಂತ ಕಡಿಮೆ ಬೆಲೆಯನ್ನು ಮೈಸೂರಿನ ಉತ್ತಮ ಗೂಡುಗಳಿಗೆ ನಿಗದಿ ಮಾಡುತ್ತಿದ್ದಾರೆ. ಈ ರೀತಿ ಕೆಜಿಗೆ 50 ರಿಂದ 60 ರೂ. ಕಡಿಮೆ ದರ ದೊರೆಯುತ್ತಿದೆ. ಮೊದಲನೇ ಹರಾಜು ದರಕ್ಕೆ ಒಪ್ಪದೇ ರೈತ ಎರಡನೇ ಹರಾಜಿಗೆ ಕಾದು ಕುಳಿತಾಗ ರೀಲರ್‌ ಗಳು ಎರಡನೇ ಹರಾಜಿನಲ್ಲಿ ಮೊದಲ ಹರಾಜಿಗಿಂತ ಕೆಜಿಗೆ 15 ರಿಂದ 30 ರೂ. ಕಡಿಮೆ ದರಕ್ಕೆ ಕೂಗುತ್ತಿದ್ದಾರೆ. ಅಧಿಕಾರಿಗಳನ್ನು ಪ್ರಶ್ನಿಸಿದರೇ ನಾವೇನೂ ಮಾಡುವುದಿಲ್ಲ ಎಂದು ಉತ್ತರ ನೀಡುತ್ತಾರೆ ಎಂದು ಅವರು ಆರೋಪಿಸಿದರು.

ಹೀಗಾಗಿ ರೀಲರ್‌ ಗಳೊಡನೆ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಉತ್ತಮ ದರ ನಿಗದಿ ಮಾಡಿಸಬೇಕು ಎಂಬ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರೇಷ್ಮೆ ಬೆಳೆಗಾರರ ಹೋರಾಟ ಹಮ್ಮಿಕೊಳ್ಳಲಾಗಿದೆ. ಒಂದು ವೇಳೆ ನಿರ್ಲಕ್ಷಿಸಿದರೇ ರೇಷ್ಮೆ ಬೆಳೆಗಾರರು ಈ ಬಾರಿಯ ಲೋಕಸಭಾ ಚುನಾವಣೆ ಬಹಿಷ್ಕರಿಸಲಿದ್ದಾರೆ ಎಂದು ಅವರು ಎಚ್ಚರಿಸಿದರು.

ರೈತ ಮುಖಂಡರಾದ ಮಂಜು ಕಿರಣ್, ಇಮ್ಮಾವು ರಘು, ವೆಂಕಟೇಶ್, ಮಾದೇಶ್, ವರಕೂಡು ಕೃಷ್ಣೇಗೌಡ ಇದ್ದರು.

Follow Us:
Download App:
  • android
  • ios