ಬೆಂಗಳೂರು (ಸೆ.26): ಪುತ್ತೂರು ಮಹಾಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ಜಯ ಕರ್ನಾಟಕ ಮುಖ್ಯಸ್ಥ, ಕರ್ನಾಟಕ ರಾಜ್ಯ ಅಥ್ಲೆಟಿಕ್ ಸಂಸ್ಥೆ ಮುಖ್ಯಸ್ಥ ಮುತ್ತಪ್ಪ ರೈ ಅವರು ರಥ ಸಮರ್ಪಿಸಿದ್ದಾರೆ. ಈ ಬಗ್ಗೆ ಮುತ್ತಪ್ಪ ರೈ ಅವರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. 

ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮರಥ ನನ್ನ ಬದುಕಿನ ಮಹತ್ವಾಕಾಂಕ್ಷೆಗಳಲ್ಲೊಂದು. ದೇವರಿಗೆ ಮತ್ತು ಸಮಾಜಕ್ಕಾಗಿ ಆಗಾಗ ಏನಾದರೊಂದು ಅರ್ಪಿಸುತ್ತಾ, ಸಮರ್ಪಿಸುತ್ತಾ ಬಂದವನು ನಾನು. ಎರಡೂ ಕೂಡಾ ನೆಮ್ಮದಿ ಪರಮಸುಖದ ಭಾಗಗಳೇ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಒಂಬತ್ತು ವರ್ಷಗಳ ಹಿಂದೆ ನನ್ನ ಆರಾಧ್ಯ ದೇವರಾದ ಪುತ್ತೂರು ಶ್ರೀ ಮಹಾಲಿಂಗೇಶ್ವರನಿಗೆ ಸುಮಾರು ಒಂದು ಕೋಟಿ ವೆಚ್ಚ ಮಾಡಿ ಬ್ರಹ್ಮರಥ ಅರ್ಪಿಸಿದ್ದೆ. ಆ ಬೃಹತ್ ರಥದೇಗುಲ, ಅದರ ಸಮರ್ಪಣಾ  ಕಾರ್ಯಕ್ರಮ, ರಥಬೀದಿ ನಿರ್ಮಾಣ, ರಥದ ಮೊತ್ತಮೊದಲ ನಡೆ-ನಡಾವಳಿ, ರಥೋತ್ಸವಕ್ಕೆ ಸೇರಿದ ಜನಸ್ತೋಮ, ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು, ಸಾಂಸ್ಕೃತಿಕ ಕಾರ್ಯಕ್ರಮ- ಎಲ್ಲವೂ ನನ್ನ ಬದುಕಿನ ಅವಿಸ್ಮರಣೀಯ ಕ್ಷಣಗಳಾಗಿವೆ. 

ಕಡಿದ ಹತ್ತಾರು ಮರ-ಕಟ್ಟಿಗೆ ರಥವಾಗಿ ಅರಳಿ ಆ ರಥ ದೇಗುಲದ ಮೇಲೆ ಭಗವಂತ ಕೂರುವ, ಅದನ್ನು ಎಳೆಯುವ ಕೈ ಮನಸ್ಸುಗಳ ಪುಳಕ, ಭಾವುಕತೆ ಎಲ್ಲವನ್ನೂ ಆಗ ಹತ್ತಿರದಿಂದ ಕಂಡಿದ್ದೇನೆ. ಆ ಬೆರಗು, ಸಂಭ್ರಮ, ಕುತೂಹಲ ಮಾಸುವ ಮುನ್ನವೇ ಈಗ ಮತ್ತೊಂದು ರಥದ ಎಳೆಹಗ್ಗಕ್ಕೆ ಕೈ ಇಡುವ ಭಾಗ್ಯ ನನ್ನದಾಗಿದೆ.

ಕುಕ್ಕೆಗೆ ರಥ ಬೇಡಿಕೆ ಬಂದುದು ನನ್ನ ಗೆಳೆಯ ಕಡಬದ ಯುವ ಉತ್ಸಾಹೀ ತರುಣ ಅಜಿತ್ ಶೆಟ್ಟಿ ಮೂಲಕವೇ. ಎರಡು ವರ್ಷಗಳ ಹಿಂದೆ ಶಿಥಿಲಗೊಂಡ ರಥಕ್ಕೆ ಪರ್ಯಾಯ ರಥದ ಅವಶ್ಯಕತೆ ಇದೆ ಎಂದು ಸಮಿತಿ ಬೇಡಿಕೆ ಇಟ್ಟಾಗ ನಾನೊಬ್ಬನೇ ಬೇಡ, ಅಜಿತನೂ ಆ ದೇವತಾಕಾರ್ಯದಲ್ಲಿ ಪಾಲುದಾರನಾಗಲೀ ಎಂದು ನಾನೇ ಅವನನ್ನು ವಿನಂತಿಸಿಕೊಂಡೆ. ಇಬ್ಬರೂ ಸೇರಿ ನಿರ್ಧರಿಸಿದ ಈ ರಥದೇಗುಲದ ಯೋಜನೆ ಇಂದು ಕಾರ್ಯರೂಪಕ್ಕೆ ಬರುತ್ತಿದೆ. ಎಲ್ಲವೂ ಆ ಭಗವಂತನ ಕೃಪೆಯಿಂದಲೇ ಸಾಧ್ಯವಾಗಿದೆ. 

ಈ ರಥ ದೇಗುಲದ ಮೂಲಕ ನನ್ನನ್ನು ಮತ್ತು ಅಜಿತನನ್ನು ಸುದೀರ್ಘ ಕಾಲ ಉಳಿಯುವಂತೆ ಮಾಡುವ ಅವಕಾಶ ಕಲ್ಪಿಸಿದ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಗೆಳೆಯ ಶ್ರೀ ನಿತ್ಯಾನಂದ ಮುಂಡೋಡಿಯವರಿಗೆ ಮತ್ತು ಅವರ ಮಂಡಳಿಗೆ, ಸ್ನೇಹಿತರಿಗೆ, ಅಭಿಮಾನಿಗಳಿಗೆ, ರಥಶಿಲ್ಪಿ ಕೋಟೇಶ್ವರದ ಪ್ರಸಿದ್ಧ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಅವರಿಗೆ, ಮಡದಿ ಶ್ರೀಮತಿ ಅನುರಾಧಳಿಗೆ, ಮಕ್ಕಳಾದ ರಾಕಿ ಮತ್ತು ರಿಕ್ಕಿ ಹಾಗೂ ಕುಟುಂಬದ ಎಲ್ಲ ಬಂಧುಗಳಿಗೆ ಕೃತಜ್ಞತೆಗಳು ಎಂದು ಮುತ್ತಪ್ಪ ರೈ ಅವರು ಹೇಳಿದ್ದಾರೆ.