ರಾಜಕಾರಣ ನೆಪದಲ್ಲಿ ಅಂಜನಾದ್ರಿಗೆ ಜೀವಕಳೆ: ಭಕ್ತರಿಂದ ಹರಿದುಬಂತು 6 ಕೋಟಿ ಹಣದ ಹೊಳೆ
ಆಂಜನೇಯನ ಜನ್ಮಸ್ಥಳ ಅಂಜನಾದ್ರಿಯಲ್ಲಿ ಆರು ವರ್ಷಗಳ ಹಿಂದೆ 247 ರೂ. ಇದ್ದ ಆದಾಯ ಈಗ 6 ಕೋಟಿ ರೂ.ಗೆ ಏರಿಕೆಯಾಗಿದೆ.ಕೆಲವರು ರಾಜಕಾರಣ ಮಾಡಿದರೆ, ಭಕ್ತರು ತನು, ಮನ, ಧನ ಕೊಡುಗೆ ನೀಡಿದ್ದಾರೆ.
ವರದಿ- ದೊಡ್ಡೇಶ್ ಯಲಿಗಾರ್, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಪ್ಪಳ (ಜು.24): ಕಳೆದ ಆರು ವರ್ಷಗಳ ಹಿಂದಷ್ಟೇ ನಾಡಿನ ಜನರಿಗೆ ಹೆಚ್ಚು ಪರಿಚಿತವಿರದ ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಬೆಟ್ಟದಲ್ಲಿ ಲಕ್ಷಾಂತರ ಭಕ್ತರು ಸೇರುತ್ತಿದ್ದಾರೆ. ಆಗ ಕೇವಲ 247 ರೂ. ಇದ್ದ ದೇವರ ಹುಂಡಿಯಲ್ಲಿ ಈಗ 6 ಕೋಟಿ ರೂ. ದೇಣಿಗೆ ಸಂಗ್ರಹವಾಗುತ್ತಿದೆ. ರಾಜಕಾರಣಿಗಳು ಅಂಜನಾದ್ರಿ ಪರ್ವತವನ್ನು ಚುನಾವಣೆಗೆ ಬಳಕೆ ಮಾಡಿಕೊಂಡರೆ, ಭಕ್ತರು ಇಡೀ ಪರ್ವತವನ್ನೇ ಅಪ್ಪಿಕೊಂಡು ತನು, ಮನ, ಧನವನ್ನು ಅರ್ಪಿಸಿ ಅಭಿವೃದ್ಧಿಗೆ ಸಾಕ್ಷಿಯಾಗಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತ ಆಂಜನೇಯನ ಜನ್ಮಸ್ಥಳವಾಗಿದೆ. ಕಳೆದ ಆರು ವರ್ಷಗಳ ಹಿಂದಷ್ಟೇ ಯಾರಿಗೂ ಪ್ರಸಿದ್ಧಿಯಾಗದ ಹಾಗೂ ಜನರು ಹೋಗಲೂ ಬಯಸದ ತಾಣದಲ್ಲಿ ಈಗ ಭಕ್ತರ ದಂಡೇ ತುಂಬಿ ತುಳುಕುತ್ತಿದೆ. ಕಳೆದೆರಡು ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಅಂಜನಾದ್ರಿ ಬೆಟ್ಟವನ್ನು ರಾಜಕೀಯ ದಾಳಕ್ಕೆ ಉಪಯೋಗಿಸಿಕೊಂಡರು. ಇದಾದ, ನಂತರ ಆಂಜನೇಯನ ಜನ್ಮಸ್ಥಳದ ಮಹತ್ವ ಜನರಿಗೆ ತಿಳಿದಿದ್ದು, ಈಗ ಲಕ್ಷಾಂತರ ಭಕ್ತರು ಭೇಟಿ ಮಾಡುತ್ತಿದ್ದಾರೆ. ಹಾಗಾದ್ರೆ ಬನ್ನಿ ಅಂಜನಾದ್ರಿಗೆ ಎಷ್ಟೇಲ್ಲ ದೇಣಿಗೆ ಬಂದಿದೆ ಅನ್ನೋದನ್ನ ನೋಡೋಣ ಈ ರಿಪೋರ್ಟ್ ನಲ್ಲಿ.
ಶಕ್ತಿ ಯೋಜನೆಯಿಂದ ತುಂಬಿ ತುಳುಕುತ್ತಿರುವ ದೇವಾಲಯಗಳ ಹುಂಡಿಗಳು: ಯಾವ ದೇವಾಲಯಕ್ಕೆ ಆದಾಯವೆಷ್ಟು ನೋಡಿ..
ಐತಿಹಾಸಿಕ ಹಿನ್ನಲೆಯ ಅಂಜನಾದ್ರಿ ಪರ್ವತ: ಕೊಪ್ಪಳದ ಗಂಗಾವತಿ ತಾಲೂಕಿನ ಚಿಕ್ಕ ರಾಂಪೂರ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಅಂಜನಾದ್ರಿ ಪರ್ವತವು ರಾಮಾಯಣದಲ್ಲಿ ಬರುವ ಹನುಮಂತ ಜನಿಸಿದ ಸ್ಥಳ ಎಂದು ಕರೆಯಲಾಗುತ್ತಿದೆ. ಹಂಪಿಯ ಸಮೀಪದಲ್ಲಿ ಇರುವ ಅಂಜನಾದ್ರಿ ಪರ್ವತಕ್ಕೆ ಸಾಕಷ್ಟು ಇತಿಹಾಸ ಇರುವುದರಿಂದ ಸ್ಥಳೀಯ ಭಕ್ತರು ಸೇರಿದಂತೆ ದೇಶ, ವಿದೇಶಗಳಿಂದ ಕೂಡ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಇನ್ನೂ ವಾರದ ಕೊನೆಯ ದಿನಗಳಾದ ಶನಿವಾರ, ಭಾನುವಾರದಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಅಂಜನಾದ್ರಿ ಪರ್ವತಕ್ಕೆ ಆಗಮಿಸಿ, ಆಂಜನೇಯಸ್ವಾಮಿಯ ದರ್ಶನ ಪಡೆದುಕೊಳ್ಳುತ್ತಾರೆ. ಅಯೋದ್ಯೆಯಷ್ಟೇ ಪವಿತ್ರತೆಯನ್ನು ಹೊಂದಿರುವ ಅಂಜನಾದ್ರಿ ಪರ್ವತವನ್ನು ಕಳೆದ ಆರು ವರ್ಷಗಳಿಂದ ತಾಲೂಕು ಆಡಳಿತ ಹಾಗೂ ಧಾರ್ಮಿಕ ದತ್ತಿ ಇಲಾಖೆಯವರು ನಿರ್ವಹಣೆ ಮಾಡುತ್ತಿದ್ದು, ಭಕ್ತರಿಗೆ ಸಕಲ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ದೇವಸ್ಥಾನ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಅಂಜನಾದ್ರಿ ಪರ್ವತ ತಾಲೂಕು ಆಡಳಿತ ವಶಕ್ಕೆ: ಸುಮಾರು ವರ್ಷಗಳಿಂದ ಖಾಸಗಿ ಒಡೆತನದಲ್ಲಿ ನಡೆಸಲಾಗುತ್ತಿದ್ದ ಅಂಜನಾದ್ರಿ ಬೆಟ್ಟದ ದೇವಸ್ಥಾನವನ್ನು 2018 ಜುಲೈ 22 ರಂದು ಮುಜರಾಯಿ ಇಲಾಖೆ ಹಾಗೂ ಕಂದಾಯ ಇಲಾಖೆ ವಶಕ್ಕೆ ಪಡೆದುಕೊಂಡಿದೆ. ಜಿಲ್ಲಾಡಳಿತವೇ ದೇವಸ್ಥಾನ ನಿರ್ವಹಣೆಯ ಹೊಣೆ ಹೊತ್ತುಕೊಂಡಿದೆ.
ಆರಂಭದಲ್ಲಿ 247 ರೂಪಾಯಿ ಇದ್ದದ್ದು, 6 ವರ್ಷದಲ್ಲಿ ಸಂಗ್ರಹವಾಗಿದ್ದು 6 ಕೋಟಿ ರೂ.: ಖಾಸಗಿ ಒಡೆತನದ ಟ್ರಸ್ಟ್ ವತಿಯಿಂದ ವಶಕ್ಕೆ ಪಡೆದುಕೊಂಡಿರುವ ವೇಳೆಯಲ್ಲಿ ದೇವಸ್ಥಾನ ಹುಂಡಿಯಲ್ಲಿ ಕೇವಲ 247 ರೂಗಳು ಕಾಣಿಕೆ ಮಾತ್ರ ಇತ್ತು. ಸದ್ಯ ದೇವಸ್ಥಾನದ ಹುಂಡಿ ಹಣ, ಪಾರ್ಕಿಂಗ್ ಹಣ, ಲಾಡು, ತೀರ್ಥ ಪ್ರಸಾದಗಳ ಮಾರಾಟ, ವಿವಿಧ ಸೇವೆಗಳ ಬರುವ ಹಣ ಸೇರಿ ಒಟ್ಟು 6 ವರ್ಷಗಳ ಅವಧಿಯಲ್ಲಿ 6 ಕೋಟಿಗೂ ಅಧಿಕ ಆದಾಯ ಸಂಗ್ರಹವಾಗಿದೆ.
ಅಂಜನಾದ್ರಿ ದೇವಾಲಯ ನಿರ್ವಹಣೆಗೆ 3.8 ಕೋಟಿ ರೂ. ಖರ್ಚು: ಇನ್ನು ದೇವಾಲಯಕ್ಕೆ ಭಕ್ತರು ನೀಡುವ ದೇಣಿಗೆಯಿಂದ ಬಂದ ಹಣವನ್ನು ತಾಲೂಕು ಆಡಳಿತ ಮಂಡಳಿಯು ದೇವಸ್ಥಾನದ ನಿರ್ವಹಣಾ ಕಾರ್ಯಕ್ಕೂ ಉಪಯೋಗ ಮಾಡಿದೆ. ಜೊತೆಗೆ, ಸಿಬ್ಬಂದಿಯ ವೇತನಕ್ಕೂ, ಪೂಜಾ ಕಾರ್ಯಗಳು ಸೇರಿದಂತೆ ಇತರೆ ಕಾರ್ಯಗಳಿಗೂ ಬಳಕೆ ಮಾಡಿಕೊಳ್ಳಲಾಗಿದೆ. ಒಟ್ಟಾರೆ ದೇವಾಲಯಕ್ಕೆ ಸಂಗ್ರವಾಹದ 6.78 ಕೋಟಿ ರೂ. ಆದಾಯದಲ್ಲಿ ದೇವಸ್ಥಾನದ ನಿರ್ವಹಣೆ, ಸಿಬ್ಬಂದಿಗಳ ವೇತನ ಸೇರಿದಂತೆ ನಾನಾ ಖರ್ಚು ವೆಚ್ಚಗಳು ಸೇರಿದಂತೆ ಒಟ್ಟು 3,83,49,281 ರೂ.ಗಳನ್ನು ಖರ್ಚು ಮಾಡಲಾಗಿದೆ. ಉನ್ನುಳಿದ 2,94,91,659 ರೂ.ಗಳನ್ನು ಬ್ಯಾಂಕಗಳಲ್ಲಿ ಉಳಿತಾಯ ಮಾಡಲಾಗಿದೆ.
ತಿರುಪತಿ ಮಾದರಿಯಲ್ಲಿ ಅಂಜನಾದ್ರಿ ಅಭಿವೃದ್ಧಿಪಡಿಸುವೆ : ರೆಡ್ಡಿ ಭರವಸೆ
- ಕಳೆದ 6 ವರ್ಷಗಳಲ್ಲಿ ವಾರ್ಷಿಕವಾಗಿ ಬಂದ ಆದಾಯದ ವಿವರ ಇಂತಿದೆ:
- ಜುಲೈ 2018 ರಿಂದ ಮಾರ್ಚ್ 2019- 73,09,505
- ಏಪ್ರಿಲ್ 2019 ರಿಂದ ಮಾರ್ಚ್ 2020- 1,12,62,404
- ಏಪ್ರಿಲ್ 2020 ರಿಂದ ಮಾರ್ಚ್2021 - 78 ,95,030
- ಏಪ್ರಿಲ್ 2021ರಿಂದ ಮಾರ್ಚ್ 2022- 1,29,42,104
- ಏಪ್ರಿಲ್ 2022 ರಿಂದ ಮಾರ್ಚ್ 2023- 2,48,32,028
- ಒಟ್ಟು 6 ವರ್ಷಗಳ ಅವಧಿಯಲ್ಲಿ- 6,78,40,941 ರೂ. ಸಂಗ್ರಹವಾಗಿವೆ.
ಒಟ್ಟಿನಲ್ಲಿ 200 ರೂಪಾಯಿಯಿಂದ ಆರಂಭವಾದ ಅಂಜನಾದ್ರಿಯ ಆದಾಯ ಇದೀಗ ಕೋಟಿಗಟ್ಟಲೆ ಆಗಿರುವುದು ನಿಜಕ್ಕೂ ಅಚ್ಚರಿಯೇ ಸರಿ. ದಿನದಿಂದದ ದಿನಕ್ಕೆ ಅಂಜನಾದ್ರಿಗೆ ಬರುವ ಭಕ್ತರ ಸಂಖ್ಯೆಯು ಹೆಚ್ಚಳವಾಗುತ್ತಿದೆ. ಮತ್ತೊಂದಡೆ ಆದಾಯ ಹೆಚ್ಚಳವಾಗುತ್ತಿರುವುದು ಆಂಜನೇಯನ ಪ್ರಸಿದ್ಧಿಯನ್ನು ಎತ್ತಿ ತೋರಿಸುತ್ತಿದೆ.