Asianet Suvarna News Asianet Suvarna News

Uttara Kannada: ಕುಮಟಾದಲ್ಲಿ ಶಾಲಾ ಬಳಿಯೇ ಎಂಎಸ್‌ಐಎಲ್ ನಿರ್ಮಾಣಕ್ಕೆ ಸಿದ್ಧತೆ

ಶಿಕ್ಷಣ ಸಂಸ್ಥೆಗಳ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಮದ್ಯ ಹಾಗೂ ಇತರ ವ್ಯಸನ ಪದಾರ್ಥಗಳನ್ನು ಮಾರಾಟ ಮಾಡಬಾರದು ಎಂಬ ಕಾನೂನು ಇದೆ.

villager opposes to opem msil shop near school in kumata taluk gvd
Author
Bangalore, First Published Apr 3, 2022, 8:18 PM IST

ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಕುಮಟಾ (ಏ.03): ಶಿಕ್ಷಣ ಸಂಸ್ಥೆಗಳ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಮದ್ಯ ಹಾಗೂ ಇತರ ವ್ಯಸನ ಪದಾರ್ಥಗಳನ್ನು ಮಾರಾಟ ಮಾಡಬಾರದು ಎಂಬ ಕಾನೂನು ಇದೆ. ಆದರೆ, ಉತ್ತರ ಕನ್ನಡ (Uttara Kannada) ಜಿಲ್ಲೆಯ ಕುಮಟಾದಲ್ಲಿ (Kumata) ಮಾತ್ರ ಎಲ್ಲಾ ನಿಯಮಗಳನ್ನು ಮೀರಿ ಅಬಕಾರಿ ಸಚಿವರು ಹಾಗೂ ಶಾಸಕರ ಕೃಪಾಕಟಾಕ್ಷದಲ್ಲಿ ಎಂಎಸ್‌ಐಎಲ್ (MSIL Shop) ನಿರ್ಮಾಣವಾಗಲು ಸಿದ್ಧವಾಗುತ್ತಿದೆ. ಸಿರಿವಂತರು ಹಣ ಬಲದಿಂದ ಈ ಎಂಎಸ್‌ಐಎಲ್ ನಿರ್ಮಾಣ ಮಾಡಲು ಮುಂದಾದರೆ ಸ್ಥಳೀಯರು ಜನರು ಮಾತ್ರ ಶಾಲಾ (School) ಬಳಿ ಇದು ನಿರ್ಮಾಣವಾಗಲೇಬಾರದು ಎಂದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ.

ಉತ್ತರಕನ್ನಡ ಜಿಲ್ಲೆಯ‌ ಕುಮಟಾ ತಾಲೂಕಿನ ಬಾಡ-ಕಾಗಾಲ ಗ್ರಾಮದಲ್ಲಿರುವ ಜನತಾ ವಿದ್ಯಾಲಯ ಕನ್ನಡ ಮಾಧ್ಯಮ ಪ್ರೌಢಶಾಲೆ 1954ರಲ್ಲಿ ನಿರ್ಮಾಣಗೊಂಡಿದ್ದು, ನೂರಾರು ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಬಾಡ- ಕಾಗಾಲ ಮಾತ್ರವಲ್ಲದೇ, ಸುತ್ತಮುತ್ತಲಿನ ಗ್ರಾಮದ ವಿದ್ಯಾರ್ಥಿಗಳು ಕೂಡಾ ಇದೇ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಉತ್ತಮ ಶಿಕ್ಷಣದೊಂದಿಗೆ ಹಸನಾದ ಭವಿಷ್ಯ ಕಾಣಬೇಕಾದ ಈ ಮಕ್ಕಳ ಜೀವನದಲ್ಲಿ ಖಾಸಗಿ ವ್ಯಕ್ತಿಗಳು ಚೆಲ್ಲಾಟವಾಡಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಸಾಥ್ ನೀಡುವ ಆರೋಪ ಎದುರಿಸುತ್ತಿರುವವರು ಅಬಕಾರಿ ಸಚಿವ ಕೆ. ಗೋಪಾಲಯ್ಯ (K Gopalaiah) ಹಾಗೂ ಕುಮಟಾ ಶಾಸಕ ದಿನಕರ ಶೆಟ್ಟಿ (Dinakara Shetty). 

ಹೌದು, ಶ್ರೀನಿವಾಸ ಮಾಧವ ಯಾನೆ ಮಹಾದೇವ ನಾಯ್ಕ್ ಹುಬ್ಬಣಗೇರಿ ಎಂಬವರು ಜನತಾ ವಿದ್ಯಾಲಯ ಶಾಲೆಯಿಂದ 60 ಮೀಟರ್ ದೂರದ ಸರ್ವೆ ನಂಬರ್ 52/02ರ ಕಟ್ಟಡ ನಿರ್ಮಾಣ ಸಂಖ್ಯೆ 312ರಲ್ಲಿ ಎಂಎಸ್‌ಐಎಲ್ ಮದ್ಯ ಮಾರಾಟ ಮಳಿಗೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಇದಕ್ಕೆ ಕುಮಟಾ ಶಾಸಕರ ವಿನಂತಿಯ ಮೂಲಕ ಅಬಕಾರಿ ಸಚಿವರಿಂದ ತಕ್ಷಣ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಆದೇಶ ಕೂಡಾ ನೀಡಿದ್ದಾರೆ. ಈ ವ್ಯಾಪ್ತಿಯಲ್ಲಿ ಈಗಾಗಲೇ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಎಂಎಸ್‌ಐಎಲ್ ನಿರ್ಮಾಣಕ್ಕೆ ಅನುಮತಿ ನೀಡುವ ಪತ್ರ ಸದ್ಯಕ್ಕೆ ಉತ್ತರಕ‌ನ್ನಡ ಜಿಲ್ಲಾಧಿಕಾರಿಯವರ ಟೇಬಲ್ ಮೇಲಿದೆ. 

ಜೈನ ಬಸದಿಯಲ್ಲಿ ನಡೀತು ಹೈಡ್ರಾಮಾ: ಗರ್ಭಗುಡಿಯಿಂದ ಆವರಣಕ್ಕೆ ಬಂತು ದೇವರ ಮೂರ್ತಿ..!

ಒಂದು ವೇಳೆ ಜಿಲ್ಲಾಧಿಕಾರಿ ಅನುಮತಿ ನೀಡಿದಲ್ಲಿ ಕಾನೂನು ಉಲ್ಲಂಘಿಸಿ ಈ ಭಾಗದಲ್ಲಿ ಎಂಎಸ್‌ಐಎಲ್ ನಿರ್ಮಾಣವಾಗಲಿದೆ. ಕುಮಟಾ ನಿವಾಸಿಗಳು ಮಾತ್ರ ಶಾಲೆಯ ಬಳಿ ಮದ್ಯ ಮಾರಾಟ ಮಳಿಗೆ ತೆರಯಲು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸರಕಾರಕ್ಕೆ ಆದಾಯ ನೀಡುವ ಈ ಎಂಎಸ್‌ಐಎಲ್‌ ಅನ್ನು ಶಾಲೆಯಿಂದ 100 ಮೀಟರ್ ದೂರದಲ್ಲಿ ಹೊರಕ್ಕೆ ಎಲ್ಲಿ ಬೇಕಾದರೂ ನಿರ್ಮಾಣ ಮಾಡಲಿ. ಕಾನೂನು ಉಲ್ಲಂಘಿಸಿ ಶಾಲೆಯಿಂದ 60 ಮೀಟರ್ ದೂರದಲ್ಲೇ ಇದನ್ನು ನಿರ್ಮಾಣ ಮಾಡೋದು ಸರಿಯಲ್ಲ. ಜನಪ್ರತಿನಿಧಿಗಳ ಸೂಚನೆಯಂತೆ ಜಿಲ್ಲಾಡಳಿತ ಎಂಎಸ್‌ಐಎಲ್‌ಗೆ ಅನುಮತಿ ನೀಡಿದಲ್ಲಿ ಹೈ ಕೋರ್ಟ್ ಮೆಟ್ಟಿಲೇರುತ್ತೇವೆ ಅಂತಾರೆ ಕುಮಟಾದ ನಿವಾಸಿಗಳು. 

ಅಂದಹಾಗೆ, ಈ ಎಂಎಸ್‌ಐಎಲ್ ನಿರ್ಮಾಣಕ್ಕೆ ಅನುಮತಿ ನೀಡಲು ಅಧಿಕಾರಿ ವರ್ಗ ಕೂಡಾ ಸಾಕಷ್ಟು ನಾಟಕವಾಡಿದ್ದಾರೆ. ಅಬಕಾರಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮೀಟರ್ ಟೇಪ್ ಮೂಲಕ ಸರ್ವೆ ನಡೆಸಿದ್ದು, ದಾಖಲೆಯಲ್ಲಿ ಶಾಲೆಯಿಂದ ಎಂಎಸ್‌ಐಎಲ್ ಹೆಚ್ಚು ದೂರವಿದೆ ಎಂದು ತೋರಿಸಲು ಸರ್ವೆ ನಂಬರ್ 52/01ರಲ್ಲಿರುವ ಸ್ಥಳೀಯರಾದ ನಾಗರಾಜ ಸಾರಿಂಗ ನಾಯ್ಕ ಅವರ ಜಾಗವನ್ನು ಸೇರಿಸಿ ಅಳೆಯಲು ಮುಂದಾಗಿದ್ದರು. ಆದರೆ, ಸ್ಥಳೀಯರು ವಿರೋಧ ವ್ಯಕ್ತಪಡಿಸಿದಾಗ ಸದ್ಯಕ್ಕೆ ಕಟ್ಟಡದ ದೂರ ಮಾತ್ರ ಅಳೆಯುತ್ತಿದ್ದು,  ಮುಂಭಾಗದಲ್ಲಿರುವ ರಸ್ತೆ ಸಾರ್ವಜನಿಕವೋ ಅಥವಾ ಖಾಸಗಿಯೋ ಎಂದು ಮಾಹಿತಿ ದೊರೆತ ಬಳಿಕ ಕ್ರಮ ಕೈಗೊಳ್ತೇವೆ ಎಂದು ತಿಳಿಸಿದರು.

ಇನ್ನು ಎಂಎಸ್‌ಐಎಲ್ ನಿರ್ಮಾಣಕ್ಕೆ ಅನುಮತಿ ನೀಡುವ ಸಂಬಂಧ ಕುಮಟಾ ತಹಶೀಲ್ದಾರ್, ಸರ್ವೆ ನಂಬರ್ 52/02ರಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿರುವ ಮದ್ಯದ ಮಳಿಗೆಯ ಮುಂದಿನ ದಾರಿ ಸಾರ್ವಜನಿಕ ರಸ್ತೆಯಾಗಿದ್ದು, ಕುಮಟಾ- ಅಘನಾಶಿನಿ ರಸ್ತೆಗೆ ಹೊಂದಿಕೊಂಡಿದೆ ಎಂದು ಮದ್ಯದ ಮಳಿಗೆ ನಿರ್ಮಾಣ ಮಾಡೋ ಮಾಲಕನ ಪರವಾಗಿ ವರದಿ ನೀಡಿದ್ದರು. ಆದರೆ, ಯಾವಾಗ ಸ್ಥಳೀಯರು ತಹಶೀಲ್ದಾರ್ ಕಚೇರಿಗೆ ತೆರಳಿ ಈ ಬಗ್ಗೆ ಪ್ರಶ್ನಿಸಿದ್ದರೋ ಆಗ ಸ್ಥಳೀಯರಲ್ಲಿ ಮೌಕಿಕವಾಗಿ ಕ್ಷಮೆ ಕೇಳಿ, ಮದ್ಯ ಮಳಿಗೆಯ ಮುಂಭಾಗ ಸಾಗುವ ರಸ್ತೆಯು ಖಾಸಗಿಯಾಗಿದ್ದು, ನಾಗರಾಜ ಸಾರಿಂಗ ನಾಯ್ಕ ಎಂಬವರ ಮಾಲ್ಕಿ ಜಮೀನಾಗಿರುತ್ತದೆ ಎಂದು ಮತ್ತೆ ನೂತನ ವರದಿ ನೀಡಿದ್ದರು. 

ಮಲೆನಾಡಲ್ಲಿ ನಿಲ್ಲದ ಹಿಜಾಬ್‌ ವಿವಾದ: ಸಿ.ಟಿ.ರವಿ ಹುಟ್ಟೂರಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧ

ಆದರೆ, ತಹಶೀಲ್ದಾರ್ ನೀಡಿದ ಮೊದಲನೇ ವರದಿಯನ್ನೇ ತೋರಿಸಿ ಎಂಎಸ್‌ಐಎಲ್ ಪ್ರಾರಂಭಿಸಲು ಇಚ್ಛಿಸಿದವರು ಸರಕಾರದಿಂದ ಅನುಮತಿ ಕೋರಿದ್ದಾರೆ. ಇದಕ್ಕೆ ಅಬಕಾರಿ ಸಚಿವರು ಹಾಗೂ ಕುಮಟಾ ಶಾಸಕರು ಗ್ರೀನ್ ಸಿಗ್ನಲ್ ನೀಡಿದ್ದು, ಕೂಡಲೇ ಅನುಮತಿ ನೀಡುವಂತೆ ಅಧಿಕಾರಿ ವರ್ಗಕ್ಕೆ ಒತ್ತಡ ಹಾಕುತ್ತಿದ್ದಾರೆ ಅನ್ನೋ ಆರೋಪಗಳು ಕೇಳಿ ಬರುತ್ತಿದೆ. ಸುಳ್ಳು ದಾಖಲೆ ಸೃಷ್ಠಿಸಿ ಎಂಎಸ್‌ಐಎಲ್ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗುತ್ತಿದ್ದು, ಜಿಲ್ಲಾಧಿಕಾರಿಗಳು ಇದನ್ನು ವಜಾ ಮಾಡಬೇಕೆಂದು ಕುಮಟಾ ನಿವಾಸಿಗಳು ಕೋರಿದ್ದಾರೆ. 

ಒಟ್ಟಿನಲ್ಲಿ ಸಚಿವರು, ಶಾಸಕರು ಹಾಗೂ ಅಧಿಕಾರಿ ವರ್ಗ ಕಾನೂನು ಬಾಹಿರವಾಗಿ ಎಂಎಸ್‌ಐಎಲ್ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ಒದಗಿಸಲು ಸಿದ್ಧತೆ ಮಾಡುತ್ತಿದ್ದು, ಸ್ಥಳೀಯರ ವಿರೋಧದಿಂದಾಗಿ ಕೊಂಚ ಸಮಯ ಕಾಯ್ದುಕೊಂಡಿದೆ. ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಜಿಲ್ಲಾಡಳಿತ ಅನುಮತಿ ನೀಡಿದ್ದಲ್ಲಿ ಸ್ಥಳೀಯ ನಿವಾಸಿಗಳು ಹೈಕೋರ್ಟ್ ಮೆಟ್ಟಿಲೇರಿ ಅಧಿಕಾರಿ ವರ್ಗಕ್ಕೆ ಬಿಸಿಯೇಟು ನೀಡಲು ಸಿದ್ಧತೆ ನಡೆಸುವುದಂತೂ ಪಕ್ಕಾ. 

Follow Us:
Download App:
  • android
  • ios