ಸಿಂದಗಿ: ಚನ್ನಮ್ಮ ವೃತ್ತ ನಿರ್ಮಾಣಕ್ಕೆ ಭೂಮಿ ದಾನ ಮಾಡಿದ ಮುಸ್ಲಿಂ ವ್ಯಕ್ತಿ
ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದ ಶೌಕತ್ತಲಿ ಸುಂಬಂಡ ಜಾಗ ದಾನ ಮಾಡಿದ ರೈತ| ಸಿಂದಗಿ ಸರ್ವೆ ನಂ. 1024ರಲ್ಲಿರುವ 15 ಗುಂಟೆ ಜಾಗದಲ್ಲಿನ 425 ಚದುರ ಅಡಿ ಭೂಮಿಯನ್ನು ಚನ್ನಮ್ಮ ವೃತ್ತ ನಿರ್ಮಿಸಲು ದಾನ ಮಾಡಿದ ಶೌಕತ್ತಲಿ|
ಸಿಂದಗಿ(ಜೂ.15): ಪಟ್ಟಣದಲ್ಲಿ ಈಚೆಗೆ ನಿರ್ಮಾಣವಾಗಿ, ತೆರವುಗೊಂಡು ತೀವ್ರ ವಿವಾದಕ್ಕೆ ಎಡೆಮಾಡಿದ್ದ ವೀರ ರಾಣಿ ಕಿತ್ತೂರು ಚನ್ನಮ್ಮ ವೃತ್ತಕ್ಕೆ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಸ್ವಂತದ ಜಾಗ ದಾನ ಮಾಡುವ ಮೂಲಕ ಸುಖಾಂತ್ಯ ಹಾಡಿದ್ದಾರೆ.
ಅವರೇ ಸಿಂದಗಿ ಪಟ್ಟಣದ ವಿಜಯಪುರ- ಕಲಬುರಗಿ ಮಾರ್ಗ ಮಧ್ಯದಲ್ಲಿ ಈಚೆಗೆ ನಿರ್ಮಾಣಗೊಂಡಿದ್ದ ವೀರ ರಾಣಿ ಕಿತ್ತೂರು ಚನ್ನಮ್ಮ ಆಲಮೇಲ ಪಟ್ಟಣದ ಶೌಕತ್ತಲಿ ಸುಂಬಂಡ (55) ಜಾಗ ದಾನ ಮಾಡಿದ ರೈತ. ಇವರು ಸಿಂದಗಿ ಸರ್ವೆ ನಂ. 1024ರಲ್ಲಿರುವ 15 ಗುಂಟೆ ಜಾಗದಲ್ಲಿನ 425 ಚದುರ ಅಡಿ ಭೂಮಿಯನ್ನು ಚನ್ನಮ್ಮ ವೃತ್ತ ನಿರ್ಮಿಸಲು ದಾನ ಮಾಡಿದ್ದಾರೆ. ವೃತ್ತವನ್ನು ಕಾನೂನು ಬಾಹಿರವಾಗಿ ನಿರ್ಮಾಣಗೊಂಡಿದೆ ಎಂದು ತಾಲೂಕಾಡಳಿತ ತೆರವುಗೊಳಿಸಿತ್ತು. ಈ ಹಿನ್ನಲೆಯಲ್ಲಿ ಅದಕ್ಕೆ ಉತ್ತರವೆಂಬಂತೆ ಮುಸ್ಲಿಂ ವ್ಯಕ್ತಿ ತನ್ನ ಸ್ವಂತ ಜಾಗ ನೀಡಿದ್ದಾರೆ. ಈ ವೃತ್ತ ನಿರ್ಮಾಣಕ್ಕೆ ಮರು ಭೂಮಿ ಪೂಜೆ ಮತ್ತು ಧ್ವಜಾರೋಹಣ ಸಮಾರಂಭ ಸೋಮವಾರ ಬೆಳಗ್ಗೆ 9ಕ್ಕೆ ಪಟ್ಟಣದ ವಿಜಯಪುರ ರಸ್ತೆಗೆ ಹೊಂದಿಕೊಂಡಿರುವ ಆರ್.ಡಿ.ಪಾಟೀಲ ಕಾಲೇಜಿನ ಸಮೀಪದ ಜಾಗದಲ್ಲಿ ನಡೆಯಲಿದೆ.
ಯಾವುದೇ ಲಕ್ಷಣ ಇರದಿದ್ರೂ ವಕ್ಕರಿಸುತ್ತೆ ಮಹಾಮಾರಿ ಕೊರೋನಾ..?
ಏನಿದು ವಿವಾದ?:
ಪಟ್ಟಣದ ಹೊರ ವಲಯದಲ್ಲಿ ಅನೇಕ ದಿನಗಳ ಹಿಂದೆ ವಿಜಯಪುರ ರಸ್ತೆಯಲ್ಲಿ ಲಕ್ಷಾಂತರ ಹಣವನ್ನು ಖರ್ಚು ಮಾಡಿ ವೃತ್ತದ ನಿರ್ಮಾಣ ಕಾರ್ಯ ಸಾಗಿತ್ತು ರಾತೋರಾತ್ರಿ ತಾಲೂಕಾಡಳಿತ ಪಂಚಮಸಾಲಿ ಸಮಾಜದ ಮುಖಂಡರೊಂದಿಗೆ ಚರ್ಚಿಸದೆ ಯಾವುದೇ ಮಾಹಿತಿ ನೀಡದೆ ವೃತ್ತವನ್ನು ನೆಲಸಮ ಮಾಡಿತ್ತು. ಮರುದಿನವೆ ಅದೇ ಜಾಗದಲ್ಲಿ ಮರು ವೃತ್ತ ನಿರ್ಮಾಣ ಮಾಡಿ ಪೂಜೆ ನೆರವೇರಿಸಲಾಗಿತ್ತು. ಅದನ್ನು ತಾಲೂಕಾಡಳಿತ ರಾತ್ರಿ ತೆರವು ಗೊಳಿಸಿತ್ತು. ಇದರಿಂದ ಆಕ್ರೋಶಗೊಂಡ ತಾಲೂಕು ಪಂಚಮಸಾಲಿ ಸಮುದಾಯ ಸೇರಿದಂತೆ ಅನೇಕ ಸಂಘಟನೆಗಳು ಜಿಲ್ಲಾದ್ಯಂತ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿ ವೃತ್ತದ ತೆರವು ಕಾರ್ಯ ರಾಜಕೀಯ ಪ್ರೇರಿತವಾಗಿದೆ ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಸಿಂದಗಿಯಲ್ಲಿ ಕೋಮು ಗಲಭೆ ಸೃಷ್ಟಿಸಬೇಕು ಎಂದು ಪಿತೂರಿ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದವು. ಇದಕ್ಕೆ ಇತಿಶ್ರೀ ಹಾಡುವಂತೆ ಸಮುದಾಯ ಹಲವು ಬಾರಿ ಸಭೆಗಳನ್ನು ಮಾಡಿ ಸ್ವಂತ ಜಾಗದಲ್ಲಿ ವೃತ್ತ ನಿರ್ಮಾಣದ ಕಾರ್ಯ ನಡೆಯಬೇಕು ಎಂಬ ನಿರ್ಧಾರಕ್ಕೆ ಬಂದ ಮೇಲೆ ವಿಜಯಪುರ ರಸ್ತೆಗೆ ಹೊಂದಿಕೊಂಡಿರುವ ಆಲಮೇಲದ ಪಟ್ಟಣದ ವ್ಯಕ್ತಿ ಶೌಕತ್ತಲಿ ಸುಂಬಂಡ ಎಂಬಾತರು ತಮ್ಮ ಸ್ವಂತ ಜಾಗ ದಾನ ಮಾಡುವ ಮೂಲಕ ವೃತ್ತ ನಿರ್ಮಾಣಕ್ಕೆ ಸಹಕರಿಸಿದ್ದಾರೆ. ಸೋಮವಾರ ಕಿತ್ತೂರ ಚನ್ನಮ್ಮ ಅಭಿಮಾನಿ ಬಳಗ ಅನೇಕ ಸಂಘಟನೆಗಳು ಹಾಗೂ ಪಂಚಮಸಾಲಿ ಸಮುದಾಯ ಸೇರಿದಂತೆ ವಿವಿಧ ಸಮಾಜದ ಸಹಕಾರದಿಂದ ವೃತ್ತದ ಭೂಮಿ ಪೂಜೆ ಹಾಗೂ ಧ್ವಜಾರೋಹಣ ನೆರವೇರಲಿದೆ.
ಪಟ್ಟಣದಲ್ಲಿ ಚನ್ನಮ್ಮ ವೃತ್ತವನ್ನು ಪುರಸಭೆಯ ಠರಾವಿನ ಮೂಲಕ ಕಾನೂನಾತ್ಮಕವಾಗಿ ನಿರ್ಮಿಸಿದ್ದರೂ ರಾಜಕೀಯ ಪಿತೂರಿಯಿಂದ ಕಾಣದ ಕೈಗಳು ಅಧಿಕಾರಿಗಳ ಮೇಲೆ ಒತ್ತಡ ಹಾಕಿರುವ ಪರಿಣಾಮ ವೃತ್ತವನ್ನು ತಾಲೂಕಾಡಳಿತ ತೆರವು ಮಾಡಿತ್ತು. ಇದಕ್ಕೆ ಯೋಗ್ಯ ಉತ್ತರವೆಂಬಂತೆ ಮುಸ್ಲಿಂ ಯುವಕ ತನ್ನ ಅಭಿಮಾನದಿಂದ ನೀಡಿದ ಸ್ವಂತ ಜಾಗದಲ್ಲಿ ಅಚ್ಚುಕಟ್ಟಾಗಿ ಮುಂದಿನ ದಿನಮಾನಗಳಲ್ಲಿ ವೃತ್ತ ನಿರ್ಮಿಸಿ ರಾಣಿ ಚನ್ನಮ್ಮಳ ಹೋರಾಟಕ್ಕೆ ಮತ್ತು ಅವಳ ದಿಟ್ಟನಿಲುವಿಗೆ ಗೌರವ ಸಲ್ಲಿಸಲು ಎಲ್ಲ ಸಮುದಾಯದವರು ನಿಂತಿದ್ದಾರೆ. ಇದಕ್ಕೆ ಸಹಕರಿಸಿದ ಯುವ ಮುಖಂಡ ಅಶೋಕ ಮನಗೂಳಿ, ಶೌಕತ್ತಲಿ ಸುಂಬಂಡ ಸೇರಿದಂತೆ ಅನೇಕರಿಗೆ ಅಭಿನಂದನೆಗಳು ಎಂದು ಸಿಂದಗಿ ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಎಂ.ಎಂ. ಹಂಗರಗಿ ಅವರು ತಿಳಿಸಿದ್ದಾರೆ.
ನಮ್ಮ ತಾಲೂಕು ಸೌಹಾರ್ದತೆಯಿಂದ ಇರಬೇಕು. ಹಿಂದೂ ಮುಸ್ಲಿಂ ಸೇರಿದಂತೆ ಎಲ್ಲ ಧರ್ಮಗಳು ಒಂದೆ ನಮ್ಮಲ್ಲಿ ಹಂಚಿ ತಿನ್ನುವ ಪ್ರವೃತ್ತಿ ಬರಬೇಕು. ಚನ್ನಮ್ಮ ಒಂದು ಸಮಾಜಕ್ಕೆ ಸೀಮಿತರಾದವರು ಅಲ್ಲ. ಈ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ನೀಡಿದವರು. ಅವರ ಹೆಸರಿನ ವೃತ್ತಕ್ಕೆ ಜಾಗ ಅಷ್ಟೇ ಅಲ್ಲ ನಮ್ಮ ಸರ್ವಸ್ವ ನೀಡಿದರೂ ತಪ್ಪಲ್ಲ. ಇದು ನನ್ನ ಅಲ್ಪ ಸೇವೆ ಅಷ್ಟೇ. ವೃತ್ತ ನಿಮಾಣವಾಗುತ್ತಿರುವುದು ಸಂತಸವಾಗುತ್ತಿದೆ ಎಂದು ಆಲಮೇಲದ ವೃತ್ತಕ್ಕೆ ಜಾಗ ದಾನ ನೀಡಿದ ದಾನಿ ಶೌಕತ್ತಲಿ ಸುಂಬಂಡ ಅವರು ಹೇಳಿದ್ದಾರೆ.