ಕೋಟೆನಾಡಿಗೆ ಮೆಡಿಕಲ್ ಕಾಲೇಜ್ ಬಂದ್ರೆ 200 ವಿದ್ಯಾರ್ಥಿಗಳಷ್ಟೇ ಹೆಲ್ಪ್ ಆಗೋದು: ಮುರುಗ ಶರಣರು
* ಇನ್ನೂ ಶುರುವಾಗದ ಚಿತ್ರದುರ್ಗ ಮೆಡಿಕಲ್ ಕಾಲೇಜು
* ಮಾತ್ರ ನೆನೆಗುದಿಗೆ ಬಿದ್ದ ಮೆಡಿಕಲ್ ಕಾಲೇಜು ಶಂಕುಸ್ಥಾಪನೆ
* ಕೋಟೆನಾಡಿಗೆ ಮೆಡಿಕಲ್ ಕಾಲೇಜ್ ಬಂದ್ರೆ 200 ವಿದ್ಯಾರ್ಥಿಗಳಷ್ಟೇ ಹೆಲ್ಪ್ ಆಗೋದು ಎಂದ ಮುರುಘಾ ಶರಣರು
ಚಿತ್ರದುರ್ಗ, (ಜೂನ್.14): ಕೋಟೆನಾಡಿಗೆ ಸರ್ಕಾರಿ ಮೆಡಿಕಲ್ ಕಾಲೇಜು ಬೇಕು ಬೇಕು ಎಂದು ಅನೇಕ ಹೋರಾಟಗಾರರು ಹಾಗೂ ಜನಪ್ರತಿನಿಧಿಗಳು ಪಟ್ಟು ಹಿಡಿದಿದ್ರು. ಇದೆಲ್ಲರ ಪರಿಣಾಮವಾಗಿ ಈ ಬಾರಿಯ ಬಜೆಟ್ ನಲ್ಲಿ ಸಿಎಂ ಬೊಮ್ಮಾಯಿ ಅವರು ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಘೋಷಣೆ ಮಾಡಿದ್ದರು. ಆದ್ರೆ ಕಾಮಗಾರಿಗೆ ಶಂಕುಸ್ಥಾಪನೆ ಮಾತ್ರ ನೆನೆಗುದಿಗೆ ಬಿದ್ದಿರೋದು ಎಲ್ಲೋ ಒಂದು ಕಡೆ ಹೋರಾಟಗಾರರಿಗೆ ಅನುಮಾನ ಮೂಡಿಸಿದೆ.
ಹೌದು... ಚಿತ್ರದುರ್ಗ ಜಿಲ್ಲೆಯ ಜನರ ಬಹು ದಿನಗಳ ಕನಸಿನ ಯೋಜನೆ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರು ಮಾಡಿಸುವುದು. ಇದಕ್ಕೆ ಜಿಲ್ಲೆಯ ಅನೇಕ ಹೋರಾಟಗಾರರು, ಜನಪ್ರತಿನಿಧಿಗಳು ಪಕ್ಷ ಬೇದ ಹಾಗೂ ಸಂಘಟನೆ ಯಾವುದು ಎಂಬುದನ್ನು ಲೆಕ್ಕಿಸದೇ ಸರ್ಕಾರಿ ಮೆಡಿಕಲ್ ಕಾಲೇಜು ಬೇಕು ಎಂದು ಪ್ರತಿಭಟನೆ ನಡೆಸಿದ್ದರು. ಇದನ್ನೆಲ್ಲಾ ಮನಗಂಡ ರಾಜ್ಯ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರು ಮಾಡಿದ್ದಲ್ಲದೇ 60 ಕೋಟಿ ಅನುದಾನವನ್ನು ಮೀಸಲಿಟ್ಟಿದ್ದರು.
ತಳಕು ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವಂತೆ ಬೀದಿಗಿಳಿದ ಗ್ರಾಮಸ್ಥರು
ಆದ್ರೆ ಸುಮಾರು 3 ತಿಂಗಳುಗಳು ಕಳೆದ್ರು ಅದರ ಕಾಮಗಾರಿ ಹಾಗೂ ಭೂಮಿ ಪೂಜೆ ಕುರಿತು ಯಾರೊಬ್ಬರು ಚಕಾರ ಎತ್ತದೇ ಇರುವುದು ಹೋರಾಟಗಾರರ ಅನುಮಾನಕ್ಕೆ ಎಡೆಮಾಡಿ ಕೊಟ್ಟಿದ್ದವು. ಇದಕ್ಕೆಲ್ಲಾ ಪುಷ್ಟಿ ನೀಡುವಂತೆ ಮುರುಘಾ ಶರಣರು ಪತ್ರಿಕಾಗೋಷ್ಠಿಯೊಂದರಲ್ಲಿ, ಕೆಲವರು ಜಿಲ್ಲೆಗೆ ಮೆಡಿಕಲ್ ಕಾಲೇಜು ಬಂದ್ರೆ ಸಾಕು ಜಿಲ್ಲೆಯ ಎಲ್ಲಾ ಸಮಸ್ಯೆಗಳು ಬಗೆಹರಿಯತ್ತವೆ ಎಂಬ ಭ್ರಮೆಯಲ್ಲಿ ಇದ್ದಾರೆ. ಮೊದಲು ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿರುವ ಸಮಸ್ಯೆಯನ್ನು ಬಗೆಹರಿಸಿ. ಇರುವಂತಹ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಬಗ್ಗೆ ಯಾರೂ ಗಮನ ಹರಿಸಿಲ್ಲ. ಅಂತದ್ರಲ್ಲಿ ಬೇರೆ ಕಾಲೇಜು ತರ್ತೀವಿ ಎಂದ್ರೆ, ಅದರದ್ದೂ ಇದೇ ಪರಿಸ್ಥಿತಿ ಆಗಲಿದೆ. ಕಾಲೇಜು ಜಿಲ್ಲೆಗೆ ಬರಲಿ ಬಂದ್ರೆ ಕೇವಲ ಇನ್ನೂರು ವಿಧ್ಯಾರ್ಥಿಗಳಿಗೆ ಅನುಕೂಲ ಆಗುತ್ತೆ ಅಷ್ಟೆ ಅದನ್ನು ಬಿಟ್ರೆ ಬೇರೆನೂ ಆಗುವುದಿಲ್ಲ. ಎನ್ನುವ ಮೂಲಕ ಪರೋಕ್ಷವಾಗಿ ಮೆಡಿಕಲ್ ಕಾಲೇಜು ಹೋರಾಟಗಾರರಿಗೆ ಟಾಂಗ್ ಕೊಟ್ಟರು.
ಇನ್ನೂ ಸ್ವಾಮೀಜಿಗಳ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮೆಡಿಕಲ್ ಕಾಲೇಜು ಹೋರಾಟ ಸಮಿತಿಯ ಅಧ್ಯಕ್ಷರನ್ನೇ ಕೇಳಿದ್ರೆ, ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಿಸಬೇಕು ಎಂದು ಹಲವರು ಹೋರಾಟ ಮಾಡಿದ್ದೀವಿ. ಅದಕ್ಕೆ ಸಿಎಂ ಬೊಮ್ಮಾಯಿ ಅವರು ಸ್ಪಂದಿಸಿ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರು ಮಾಡಿದ್ದಾರೆ.
ಆದ್ರೆ ಕಾಮಗಾರಿ ಶುರು ಮಾಡೋದಕ್ಕೆ ತಡವಾಗ್ತಿರೋದಕ್ಕೆ ನಮಗೆ ಮೊದಲಿನಿಂದಲೂ ಮುರುಘಾ ಶರಣರ ಮೇಲೆ ಅನುಮಾನ ವ್ಯಕ್ತವಾಗ್ತಿತ್ತು. ಯಾಕಪ್ಪ ಅಂದ್ರೆ ಈಗಾಗಲೇ ಜಿಲ್ಲೆಯಲ್ಲಿರುವ ಖಾಸಗಿ ಮೆಡಿಕಲ್ ಕಾಲೇಜು ಮುರುಘಾ ಮಠದ್ದಾಗಿದೆ. ಜೊತೆಗೆ ರಾಜ್ಯದಲ್ಲಿ ಸಿಎಂ ಕೂಡ ಅವರದೇ ಸಮುದಾಯದವರು ಆಗಿರುವ ಕಾರಣ ಶಂಕುಸ್ಥಾಪನೆ ತಡವಾಗ್ತಿರೋದಕ್ಕೆ ಇವರೇ ಕಾರಣರಾ ಎಂಬ ಅನುಮಾನ ಶುರುವಾಗಿದೆ. ಜೊತೆಗೆ ಶ್ರೀಗಳು ಬಸವ ಅನುಯಾಯಿಗಳು, ಶೂನ್ಯ ಪೀಠದ ಅಧ್ಯಕ್ಷರು ಆಗಿ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರು ಆಗಿರೋದಕ್ಕೆ ಇಷ್ಟು ಕೀಳಾಗಿ ಮಾತನಾಡಿರೋದು ಖಂಡನೀಯ.
ಎಲ್ಲೋ ಒಂದ್ಕಡೆ ಅವರಿಗೆ ನಮ್ಮ ಖಾಸಗಿ ಮೆಡಿಕಲ್ ಕಾಲೇಜಿನ ಮೇಲೆ ಎಲ್ಲಿ ಪ್ರಭಾವ ಬೀರುತ್ತೋ ಎನ್ನುವ ಆತಂಕದಲ್ಲಿ ಇದ್ದಾರೆ ಅನ್ನಿಸುತ್ತದೆ. ಅವರಲ್ಲಿ ಕೈ ಮುಗಿದು ಬೇಡಿಕೊಳ್ಳೋದೇನೆಂದ್ರೆ ಸರ್ಕಾರಿ ಮೆಡಿಕಲ್ ಕಾಲೇಜಿನಿಂದ ನಿಮ್ಮ ಖಾಸಗಿ ಕಾಲೇಜಿಗೆ ಯಾವುದೇ ತೊಂದರೆ ಆಗಲ್ಲ. ಈ ಬಗ್ಗೆ ಯಾವುದೇ ಹುನ್ನಾರ ಮಾಡದೇ, ಕೂಡಲೇ ಸಿಎಂ ಕರೆಸಿ ಕಾಮಗಾರಿಗೆ ನಿಮ್ಮ ಸಾನಿಧ್ಯದಲ್ಲೇ ಕಾರ್ಯಕ್ರಮ ನಡೆಯಲಿ ಎಂದು ಒತ್ತಾಯಿಸಿದರು.