ಹಾಸನ [ಜ.15]:  ತಾಲೂಕಿನ ಸಾಲಗಾಮೆ ಹೋಬಳಿ ಬೈಲಹಳ್ಳಿ ಗ್ರಾಪಂಗೆ ಬರುವ ಉಗನೆ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ನಾಮಪತ್ರ ಹಿಂದಕ್ಕೆ ಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಕ್ವಾಲಿಟಿ ಬಾರ್‌ ಮಾಲೀಕ ಶರತ್‌ ಸೇರಿದಂತೆ ಅನೇಕರ ಮೇಲೆ ಪೊಲೀಸರು ಎಫ್‌ಆರ್‌ಆರ್‌ ದಾಖಲು ಮಾಡಿದ್ದಾರೆ.

ಪೊಲೀಸರ ಎಫ್‌ಐಆರ್‌ ಪ್ರತಿಯಲ್ಲಿ ದಾಖಲಾಗಿರುವಂತೆ ಹಾಸನ ನಗರದ ಕ್ವಾಲಿಟಿ ಬಾರ್‌ ಮಾಲೀಕ ಶರತ್‌, ಉದ್ದೂರು ಕೊಪ್ಪಲು ಗ್ರಾಮದ ಪುರುಷೋತ್ತಮ್‌, ದಾಸರಕೊಪ್ಪಲು ಗ್ರಾಮದ ಶರತ್‌ ಸೇರಿದಂತೆ 50 ಮಂದಿ ಮೇಲೆ ದೂರು ದಾಖಲಾಗಿದೆ.

ಜ.12ರಂದು ಪತ್ತಿನ ಸಹಕಾರ ಸಂಘದ ಚುನಾವಣೆಗೆ ನಾಮಪತ್ರ ಹಿಂತೆಗೆಯಲು ಕಡೆ ದಿನಾಂಕವಾಗಿತ್ತು. ಅಂದು ಕ್ವಾಲಿಟಿ ಬಾರ್‌ ಮಾಲೀಕ ಶರತ್‌ ಅವರು 50 ಮಂದಿಯೊಂದಿಗೆ ಬಂದು ಚುನಾವಣೆ ಪ್ರಕ್ರಿಯೆಗೆ ಅಡ್ಡಿಪಡಿಸಿ, ಈ ವೇಳೆ ನಾಮಪತ್ರ ಸಲ್ಲಿಸಿದ್ದ ಪರಿಶಿಷ್ಟಪಂಗಡ ಕುಮಾರ್‌ ಎಂಬುವರಿಂದ ನಾಮಪತ್ರ ವಾಪಸ್‌ ಪಡೆಯಲು ಬಲವಂತವಾಗಿ ಯತ್ನಿಸಿದರು.

ಜೆಡಿಎಸ್ ಅಭ್ಯರ್ಥಿಗೆ ಕೊಲೆ ಬೆದರಿಕೆ : ಚುನಾವಣೆಗೆ ಸ್ಪರ್ಧಿಸದಂತೆ ವಾರ್ನಿಂಗ್...

ಇದನ್ನು ತಾವು ಪ್ರಶ್ನಿಸಲು ಹೋದಾಗ ಹಲ್ಲೆ ನಡೆಸಿ, ದೌರ್ಜನ್ಯ ಎಸಗಿದರು ಎಂದು ಮಾರನಹಳ್ಳಿ ಗ್ರಾಮದ ವಸಂತ, ದೊಡ್ಡಗದ್ದವಳ್ಳಿ ಕುಮಾರ, ಛತ್ರನಹಳ್ಳಿ ಪ್ರದೀಪ ಮತ್ತು ಗೌಡಗೆರೆ ಪ್ರಕಾಶ್‌ ಎಂಬುವರು ಪೊಲೀಸರಿಗೆ ಲಿಖಿತ ದೂರು ನೀಡಿದ್ದರು. ಇದರ ಅಧಾರದ ಮೇಲೆ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ದೂರು ದಾಖಲು ಮಾಡಿಕೊಂಡು ಎಫ್‌ಐಆರ್‌ ಹಾಕಿದ್ದಾರೆ.

ನಾಮಪತ್ರ ಸಲ್ಲಿಸಿದ್ದ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ ಕುಮಾರ್‌ ಮೇಲೆ ಹಲ್ಲೆ ಮಾಡಿ, ಕೊಲೆ ಬೆದರಿಕೆ ಒಡ್ಡುವಮೂಲಕ ನಾಮಪತ್ರ ಹಿಂಪಡೆಯುವಂತೆ ಸ್ಥಳೀಯ ಶಾಸಕರ ಬೆಂಬಲಿಗರು ಮಾಡಿದ್ದಾರೆ ಎಂದು ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಎಚ್‌.ಪಿ ಸ್ವರೂಪ್‌ ಆರೋಪ ಮಾಡಿದ್ದರು.