ಹಾಸನ [ಜ.14]:  ತಾಲೂಕಿನ ಉಗನೆ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ವೇಳೆ ನಾಮಪತ್ರ ಸಲ್ಲಿಸಿದ್ದ ಜೆಡಿಎಸ್ ಅಭ್ಯರ್ಥಿ ಕುಮಾರ್ ಮೇಲೆ ಹಲ್ಲೆ ಮಾಡಿ, ಕೊಲೆ ಬೆದರಿಕೆ ಒಡ್ಡುವ ಮೂಲಕ ನಾಮಪತ್ರ ಹಿಂಪಡೆಯುವಂತೆ ಸ್ಥಳೀಯ ಶಾಸಕರ ಬೆಂಬಲಿಗರು ಮಾಡಿದ್ದಾರೆ ಎಂದು ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಎಚ್.ಪಿ. ಸ್ವರೂಪ್ ಆರೋಪಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ರೌಡಿ ಶೀಟರ್‌ಗಳ ಹಾವಳಿ ಹೆಚ್ಚಾಗಿದ್ದು, ಅವರನ್ನು ತಡೆಯುವಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ತಟಸ್ಥ ಧೋರಣೆ ತೋರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉಗನೆ ಕೃಷಿಪತಿನ ಸಹಕಾರ ಸಂಘದ ಚುನಾವಣೆಯು ಜ. 10ರಂದು ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿತ್ತು. ಈ ವೇಳೆ ಜೆಡಿಎಸ್ ಅಭ್ಯರ್ಥಿ ಯಾಗಿ ಪರಿಶಿಷ್ಟ ಪಂಗಡದ ಕುಮಾರ್ ಎಂಬುವವರು ಸ್ಪರ್ಧಿಸಿದ್ದರು. ನಾಮಪತ್ರ ವಾಪಸ್ ಪಡೆಯುವಂತೆ ಒತ್ತಾಯಿಸಿ ಕ್ವಾಲಿಟಿ ಬಾರ್ ಶರತ್ ಎಂಬುವವರು ತಮ್ಮ ಜೊತೆ 100 ಜನ ಹಾಗೂ ಕೆಲವು ಮಂದಿ ಗೂಂಡಾಗಳನ್ನು ಕರೆದುಕೊಂಡು ಬಂದು ಏಕಾಏಕಿ ಕಚೇರಿ ಒಳಗೆ ನುಗ್ಗಿ ನಮ್ಮ ಅಭ್ಯರ್ಥಿಯನ್ನು ಹಿಡಿದು ಬಲವಂತವಾಗಿ ನಾಮಪತ್ರ ವಾಪಸ್ ಪಡೆಯುವಂತೆ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿದರು. ಈ ವೇಳೆ ಪ್ರಶ್ನೆ ಮಾಡಲು ಸಂಘದ ಷೇರುದಾರ ಮೇಲೂ ಮಾರಣಾಂತಿಕ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಉಗ್ರ ಹೋರಾಟ: ಈ ಎಲ್ಲ ಘಟನೆಗಳು ಚುನಾವಣಾ ಅಧಿಕಾರಿಗಳ ಎದುರೇ ನಡೆದರೂ ಅವರು ಯಾವುದೇ ಕ್ರಮ ಕೈಗೊಳ್ಳದೆ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡದೆ ಚುನಾವಣಾ ಪ್ರಕ್ರಿಯೆ ಮುಗಿಸಿದ್ದಾರೆ. ಇದರಲ್ಲಿ ಚುನಾವಣಾಧಿಕಾರಿಗಳೂ ಶಾಮೀಲಾಗಿದ್ದು, ಕೂಡಲೇ ಇದರಲ್ಲಿ ಭಾಗಿ ಆಗಿರುವ ಚುನಾವಣಾಧಿಕಾರಿಗಳನ್ನು ಅಮಾನತು ಮಾಡಿ ಹಲ್ಲೆಯಲ್ಲಿ ಭಾಗಿಯಾಗಿದ್ದವರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. 

12 ಸ್ಥಾನದಲ್ಲಿ 12ರಲ್ಲೂ ಜೆಡಿಎಸ್‌ಗೆ ಜಯ : ದಳ ತೆಕ್ಕೆಗೆ ಆಡಳಿತ...

ಉಗನೆ ಕೃಷಿಪತ್ತಿನ ಸಹಕಾರ ಸಂಘ ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿ ಇದ್ದು,1447 ಜನ ಷೇರುದಾರರನ್ನು ಹೊಂದಿದೆ. ರೈತರಿಗೆ 30 ಕೋಟಿ ರು. ಸಾಲ ನೀಡಲಾಗಿದೆ. ಸುಮಾರು 20 ಕೋಟಿ ರು. ಆಭರಣಗಳಿಗೆ ಸಾಲ ನೀಡಲಾಗಿದೆ. ದೊಡ್ಡ ಮಟ್ಟದ ಹಣದ ವಹಿವಾಟು ನಡೆಯುತ್ತಿದೆ. ಹಣವನ್ನು ಲೂಟಿ ಮಾಡುವ ಉದ್ದೇಶದಿಂದ ಈ ರೀತಿ ಕೃತ್ಯ ಎಸಗಲಾಗಿದ್ದು, ಈ ಹಿಂದೆ ಯಾರ ಕೈವಾಡವಿದೆ ಎಂಬುದು ತಿಳಿಯಬೇಕಾಗಿದೆ ಎಂದು ಶಂಕೆ ವ್ಯಕ್ತಪಡಿಸಿದರು. 

ಜಿಪಂನ ವಿ.ಕೆ ಶಿವನಂಜಪ್ಪ ಮಾತನಾಡಿ, ಚುನಾವಣಾ ಚಟುವಟಿಕೆಗಳು ನಡೆಯುತ್ತಿದ್ದರೂ ಯಾವುದೇ ಸೂಕ್ತ ಬಂದೋ ಬಸ್ತ್ ಮಾಡಿಕೊಳ್ಳದಿರುವುದು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನಿರ್ಲಕ್ಷ್ಯ ಸೂಚಿಸುತ್ತದೆ ಎಂದು ಟೀಕಿಸಿದರು.

ಸಾಲಗಾಮೆ ಹೋಬಳಿಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು, ಜನರು ಭಯದಿಂದ ಬದುಕುವಂತಾಗಿದೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದ ಮೇಲೆ ನಿರಂತರ ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಿದ್ದಾರೆ. ಇದೇನು ಗೂಂಡಾ ರಾಜ್ಯಾನಾ ಎಂದು ಪ್ರಶ್ನಿಸಿದರು.

ಉಗನೆ ಕೃಷಿಪತ್ತಿನ ಸಹಕಾರ ಸಂಘಕ್ಕೂ ಹಾಸನಕ್ಕೂ ಯಾವುದೇ ಸಂಬಂಧವಿಲ್ಲ. ಆದರೂ ಹಾಸನದಿಂದ ಗೂಂಡಾಗಳು ಬಂದು ಉಗನೆಯಲ್ಲಿ ಅಧಿಕಾರ ಚಲಾಯಿಸಿವುದು ಹಾಗೂ ಹಲ್ಲೆ ಮಾಡುವುದು ಸರಿಯಲ್ಲ. ಹಲ್ಲೆ ಮಾಡಲು ಮುಂದಾದಾಗ ಪ್ರಶ್ನಿಸಲು ಹೋದ ಸಂಘದ ಸದಸ್ಯರಿಗೆ ಕೊಲೆ ಬೆದರಿಕೆ ಹಾಕುತ್ತಿರುವುದು ಖಂಡನೀಯ ಈ ಬಗ್ಗೆ ಪೊಲೀಸ್ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಉಗನೆ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕುಮಾರ್ ಗದುವಳ್ಳಿ, ಜೆಡಿಎಸ್ ಮುಖಂಡ ಅಗಿಲೆ ಯೋಗೀಶ್, ಅಭ್ಯರ್ಥಿಗಳಾದ ಬೈಲಹಳ್ಳಿ ಯೋಗೀಶ್, ರಾಜೇಶ್, ಬಿ.ಸಿ ಕೇಶವ ಇತರರು ಇದ್ದರು.