ಬೆಂಗಳೂರು [ಅ.02]: ತನ್ನ ಪತ್ನಿ ಜತೆ ಅನೈತಿಕ ಸಂಬಂಧ ಹೊಂದಿದ್ದ ಲಾರಿ ಚಾಲಕ ನಾಗೇನಹಳ್ಳಿ ಸೆ.29ರಂದು ಉಸಿರುಗಟ್ಟಿಸಿ ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ. ನಾಗೇನಹಳ್ಳಿ ನಿವಾಸಿ ಅಂಜಿನಪ್ಪ (40) ಬಂಧಿತ.

ಕ್ಯಾಬ್‌ ಚಾಲಕನಾಗಿರುವ ಅಂಜಿನಪ್ಪ ಮೊದಲನೇ ಪತ್ನಿ ಮೃತಪಟ್ಟಿದ್ದು, ಕಳೆದ ವರ್ಷ ಖಾಸಗಿ ಕಂಪನಿಯಲ್ಲಿ ಹೌಸ್‌ ಕಿಪಿಂಗ್‌ ಕೆಲಸ ಮಾಡುವ ಮಹಿಳೆಯನ್ನು ಪರಿಚಯ ಮಾಡಿಕೊಂಡು ಪ್ರೀತಿಸಿ 2ನೇ ಮದುವೆಯಾಗಿದ್ದರು. ನಾಗೇನಹಳ್ಳಿಯಲ್ಲಿ ದಂಪತಿ ವಾಸವಾಗಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅದೇ ಪ್ರದೇಶದಲ್ಲಿ ವಾಸವಾಗಿದ್ದ ಮುನಿರಾಜು ಆರು ತಿಂಗಳ ಹಿಂದೆ ಅಂಜಿನಪ್ಪ 2ನೇ ಪತ್ನಿಯನ್ನು ಪರಿಚಯ ಮಾಡಿಕೊಂಡು ಆಕೆ ಜತೆ ಅನೈತಿಕ ಸಂಬಂಧ ಹೊಂದಿದ್ದ. ಈ ವಿಚಾರ ತಿಳಿದು ಅಂಜಿನಪ್ಪ, ಮುನಿರಾಜುಗೆ ಸಾಕಷ್ಟುಬಾರಿ ಬುದ್ಧಿ ಹೇಳಿದ್ದ. ಆದರೂ ಆತ ಸರಿ ಹೋಗಿರಲಿಲ್ಲ. ಅದರಿಂದ ಕುಪಿತಗೊಂಡ ಆರೋಪಿ ಸೆ.29ರಂದು ಕಾರ್ಯನಿಮಿತ್ತ ಹೊರಗಡೆ ಹೋಗುತ್ತಿದ್ದ ಮುನಿರಾಜುನನ್ನು ಪುಸಲಾಯಿಸಿ ಬಾಗಲೂರು ಮುಖ್ಯರಸ್ತೆಯಲ್ಲಿರುವ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕಂಠಪೂರ್ತಿ ಮದ್ಯ ಕುಡಿಸಿ, ಕುತ್ತಿಗೆ ಹಿಸುಕಿ ಕೊಲೆಗೈದು ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.