ಹರಪನಹಳ್ಳಿ(ಮಾ.01): ತಾಲೂಕಿನಲ್ಲಿ ಸಾರ್ವಜನಿಕ ರಸ್ತೆ, ಸ್ಥಳಗಳಲ್ಲಿ ಹಾಗೂ ಉದ್ಯಾನಗಳಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಿರುವ ಬನ್ನಿಕಟ್ಟೆ, ನಾಗಪ್ಪ, ಗ್ರಾಮದೇವಸ್ಥಾನಗಳನ್ನು ಪುರಸಭೆ ಅಧಿಕಾರಿಗಳು ಬಿಗಿ ಪೊಲೀಸ್‌ ಬಂದೋಬಸ್ತ್‌ನಲ್ಲಿ ಶನಿವಾರ ತೆರವುಗೊಳಿಸಿದ್ದಾರೆ.

ಉಪವಿಭಾಗಾಧಿಕಾರಿ ವಿ.ಕೆ. ಪ್ರಸನ್ನಕುಮಾರ, ತಹಸೀಲ್ದಾರ್‌ ಈಶ್ವರ ಖಂಡೋ, ಸಿಪಿಐ ಸುರೇಶ ನೇತೃತ್ವದಲ್ಲಿ ಸೂರ್ಯೋದಯಕ್ಕೂ ಮುಂಚೆ ಕಾರ್ಯಾಚರಣೆ ಆರಂಭಿಸಲಾಯಿತು. ಜೆಸಿಬಿಗಳು ಗರ್ಜಿಸಲಾರಂಭಿಸಿದವು, ಕಟ್ಟಡಗಳು ನೆಲಕ್ಕುರುಳಿದವು. ಐಬಿ ವೃತ್ತದ ನಾಗಪ್ಪ ಕಟ್ಟೆ ಹಾಗೂ ಬನ್ನಿ ಕಟ್ಟಿ, ಅಲ್ಲಿಂದ ಸುಣಗಾರಕೇರಿಯ ನಾಗಪ್ಪ ಕಟ್ಟೆ, ಕೊಟ್ಟೂರು ರಸ್ತೆಯ ಪಿಎಲ್‌ಡಿ ಬ್ಯಾಂಕ್‌ ಮುಂದಿನ ಗ್ರಾಮ ದೇವಸ್ಥಾನ, ಭಾರತಿ ನಗರದ ನಾಗಪ್ಪ ಹಾಗೂ ಬನ್ನಿಕಟ್ಟಿ, 1ನೇ ವಾರ್ಡ್‌ ಆಚಾರ್ಯ ಲೇಔಟ್‌ನ ನಾಗಪ್ಪ ಹಾಗೂ ಬನ್ನಿಕಟ್ಟಿಗಳನ್ನು ನೆಲಸಮ ಮಾಡಲಾಯಿತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಾ. 30ರೊಳಗೆ ಇಡೀ ರಾಜ್ಯಾದ್ಯಂತ ಸಾರ್ವಜನಿಕ ಸ್ಥಳ ಹಾಗೂ ಪಾರ್ಕ್‌ಗಳಲ್ಲಿ ಗಿಡಮರಗಳನ್ನು ಹೊರತುಪಡಿಸಿ ಯಾವುದೇ ಮಂದಿರ, ಮಸೀದಿ, ಚರ್ಚ್ ಹಾಗೂ ಇತರ ಕಟ್ಟಡಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್‌ ಹೊರಡಿಸಿದ ಆದೇಶದ ಹಿನ್ನೆಲೆಯಲ್ಲಿ ಈ ತೆರವು ಕಾರ್ಯ ಜರುಗಿತು.

ಇದೆರಲ್ಲದರ ಮಧ್ಯೆ ಹೊಸಪೇಟೆ ರಾಜ್ಯ ಹೆದ್ದಾರಿಯಲ್ಲಿದ್ದ ಮಲಿಯಮ್ಮ ದೇವಿ ದೇವಸ್ಥಾನ ತೆರವಿಗೆ ಯಾರು ಮುಂದೆ ಬಾರದಿರುವುದು ಅಧಿಕಾರಿಗಳಿಗೆ ತಲೆನೋವು ಉಂಟುಮಾಡಿತು. ಮಲಿಯಮ್ಮ ದೇವಿ ಮಹಾನ್‌ ಶಕ್ತಿದೇವತೆ, ಗರ್ಭಗುಡಿ ತೆರವಿಗೆ ಮುಂದಾದವರಿಗೆ ಅನಾಹುತ ತಪ್ಪಿದ್ದಲ್ಲ ಎನ್ನುವ ನಂಬಿಕೆ ಇಲ್ಲಿಯ ಜನರಿಗೆ ಇದೆ. ಹೀಗಾಗಿ ಜೆಸಿಬಿ ಚಾಲಕರೂ ಹಿಂಜರಿದು ಹೊರಟು ಹೋಗಿದ್ದರು. ಮಧ್ಯಾಹ್ನ ಮೂರರ ಆನಂತರ ಬೇರೆ ವ್ಯಕ್ತಿಗಳನ್ನು ಕರೆಸಿ ಇಲಾಖೆ ದೇವಸ್ಥಾನ ತೆರವುಗೊಳಿಸಿತು. ಪಕ್ಕದಲ್ಲಿರುವ ಹೊಲದ ಮರದ ಕೆಳಗೆ ಮಲಿಯಮ್ಮ ದೇವಿಗೆ ಆಶ್ರಯ ನೀಡಲಾಗಿದೆ.

ವಿಶ್ವ ಹಿಂದೂ ಪರಿಷತ್‌ ಅಸಮಾಧಾನ:

ತಾಲೂಕಿನಲ್ಲಿ ಸುಪ್ರೀಂ ಕೋರ್ಟ್‌ ಆದೇಶದ ಮೇರೆಗೆ ರಸ್ತೆ ಹಾಗೂ ಇತರೆಡೆ ನಿರ್ಮಿಸಿರುವ ದೇವಸ್ಥಾನ, ನಾಗಪ್ಪ ಕಟ್ಟೆ, ಉಚ್ಚಂಗೆಮ್ಮ ಪಾದಗಟ್ಟಿ, ಮಲಿಯಮ್ಮ ದೇವಸ್ಥಾನ, ಆದಿ ದುರುಗಮ್ಮ ದೇವಸ್ಥಾನ, ಇನ್ನೂ ಹಲವು ಕಡೆ ಬರೀ ಹಿಂದೂ ಶ್ರದ್ಧಾ-ಕೇಂದ್ರಗಳನ್ನು ಮಾತ್ರ ತೆರವುಗೊಳಿಸುತ್ತಿದ್ದಾರೆ. ಅನ್ಯ ಧರ್ಮೀಯರ ಯಾವುದೇ ಸ್ಥಳಗಳನ್ನು ಗುರುತಿಸಿ ತೆರವುಗೊಳಿಸುತ್ತಿಲ್ಲ. ಕೋರ್ಟ್‌ ಆದೇಶದಂತೆ ತೆರವುಗೊಳಿಸುತ್ತಿರುವುದು ಸರಿ, ಆದರೆ ಈ ಕ್ರಮದಿಂದ ಹಿಂದೂ ಧರ್ಮದ ಜನಾಂಗದ ಧಾರ್ಮಿಕ ಆಚರಣೆಗೆ ಧಕ್ಕೆ ಉಂಟಾಗುತ್ತದೆ. ಕೋರ್ಟ್‌ ಆದೇಶ ಈ ದೇಶದ ಎಲ್ಲ ಧರ್ಮದವರಿಗೆ ಅನ್ವಯವಾಗುವಂತೆ ಕ್ರಮ ಜರುಗಿಸಬೇಕು ಎಂದು ವಿಎಚ್‌ಪಿ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಮುಸ್ಲಿಮರ ಅನಧಿಕೃತ ಧ್ವಜ ಕಟ್ಟೆ, ದರ್ಗಾ, ಮಸೀದಿಗಳು, ಚರ್ಚ್‌ಗಳನ್ನು ಸಹ ಗುರುತಿಸಿ ಶೀಘ್ರ ತೆರವುಗೊಳಿಸಬೇಕು. ಪಟ್ಟಣ ಹಾಗೂ ತಾಲೂಕಿನ ಕೆಲವು ಪ್ರದೇಶಗಳಲ್ಲಿ ಮುಸ್ಲಿಮರು ಹಾಗೂ ಕ್ರೈಸ್ತರು ಒತ್ತುವರಿ ಹಾಗೂ ಅಕ್ರಮ ದರ್ಗಾ, ಧ್ವಜಕಟ್ಟೆಗಳನ್ನು ಗುರುತಿಸಿ ಮಾಹಿತಿ ನೀಡಿದ್ದಾರೆ. ಕೂಡಲೇ ಕ್ರಮ ಜರುಗಿಸದಿದ್ದರೆ ಉಗ್ರ ಹೋರಾಟವನ್ನು ಆರಂಭಿಸುತ್ತೇವೆ ಎಂದು ವಿಎಚ್‌ಪಿ ತಾಲೂಕು ಅಧ್ಯಕ್ಷ ಎಚ್‌.ಎಂ. ಜಗದೀಶ್‌, ಅಶೋಕ ಹಿಂದುಸ್ತಾನಿ, ಸುರೇಶ್‌, ಭರತ್‌, ರವಿ, ಸಂಗಮೇಶ್‌, ಪ್ರದೀಪ, ಅಜಯ್ಯ, ವೀರೇಶ್‌ ಎಚ್ಚರಿಸಿದ್ದಾರೆ.