ಕೊರೋನಾ ಕಾಟ: ಮುಂಡಗೋಡ ಟಿಬೇಟಿಯನ್ ಕಾಲನಿ 15 ದಿನ ಲಾಕ್‌ಡೌನ್
ನಿಯಂತ್ರಣಕ್ಕೆ ಬಾರದ ಕೊರೋನಾ, ಮುಖಂಡರ ತೀರ್ಮಾನ| ಟಿಬೇಟಿಯನ್ ಕಾಲನಿಯಲ್ಲಿ ಈ ವರೆಗೆ 3500ಕ್ಕೂ ಅಧಿಕ ಜನರಿಗೆ ಕೋವಿಡ್ ಪರೀಕ್ಷೆ, 370 ಸೋಂಕಿತರು ಪತ್ತೆ, ಇದರಲ್ಲಿ 211 ಜನ ಬಿಡುಗಡೆ, 159 ಸಕ್ರಿಯ ಪ್ರಕರಣ|
ಮುಂಡಗೋಡ(ಅ.15): ಇಲ್ಲಿಯ ಟಿಬೇಟಿಯನ್ ಕಾಲನಿಯಲ್ಲಿ ದಿನೇ ದಿನೇ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 15 ದಿನಗಳ ಕಾಲ ಸ್ವಯಂಪ್ರೇರಿತವಾಗಿ ಕಾಲನಿಯನ್ನು ಲಾಕ್‌ಡೌನ್ ಮಾಡಲು ನಿರ್ಧರಿಸಲಾಗಿದೆ.
ಕೋವಿಡ್ ಪರೀಕ್ಷೆ ಹೆಚ್ಚಿಸಿದಂತೆ ಸೋಂಕಿತರ ಸಂಖ್ಯೆ ಕೂಡ ಹೆಚ್ಚಾಗುತ್ತಿರುವುದರಿಂದ ತೀವ್ರ ಆತಂಕಗೊಂಡಿರುವ ಟಿಬೇಟಿಯನ್ ಮುಖ್ಯಸ್ಥರು ಈ ಬಗ್ಗೆ ಎಲ್ಲ ಟಿಬೇಟಿಯನ್ ಕ್ಯಾಂಪ್ ಗಳ ಮುಖ್ಯಸ್ಥರ ಸಭೆ ಕರೆದು ಕೋವಿಡ್ ನಿಯಂತ್ರಣಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ. ಇದಕ್ಕೆ ಲಾಕ್‌ಡೌನ್ ಮಾಡುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಗಿದೆ.
ಅ. 15ರಿಂದ 30ರವರೆಗೆ ಟಿಬೇಟಿಯನ್ ಕಾಲನಿಯೊಳಗೆ ಯಾರೂ ಪ್ರವೇಶಿಸುವಂತಿಲ್ಲ ಹಾಗೂ ಟಿಬೇಟಿಯನ್ನರೂ ತಮ್ಮ ನಿವಾಸದಿಂದ ಹೊರಗೆ ಹೋಗಲು ನಿರ್ಬಂಧಿಸಲಾಗಿದೆ. ಮೈಸೂರು, ಬೆಂಗಳೂರು, ಕುಶಾಲನಗರ (ಬೈಲಕುಪ್ಪೆ ) ದೆಹಲಿ, ಹಿಮಾಚಲ ಪ್ರದೇಶ, ಅರುಣಾಚಲ ಪ್ರದೇಶ ಸೇರಿದಂತೆ ವಿವಿಧ ಕಡೆ ನೆಲೆಸಿರುವ ಟಿಬೇಟಿಯನ್ನರಿಗೂ ಲಾಕ್‌ಡೌನ್ ಇರುವುದರಿಂದ ಸದ್ಯ ಯಾರೂ ಇಲ್ಲಿಗೆ ಬರದಂತೆ ಸೂಚನೆ ನೀಡಲಾಗಿದೆ.
ಮುಂಡಗೋಡಕ್ಕೂ ಚೀನಾ ಹಣ: ಆಂತರಿಕ ವಿಚಾರಣೆ ಆರಂಭ
ಟಿಬೇಟಿಯನ್ ಕಾಲನಿಯಲ್ಲಿ ಈ ವರೆಗೆ 3500ಕ್ಕೂ ಅಧಿಕ ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, 370 ಸೋಂಕಿತರು ಪತ್ತೆಯಾಗಿದ್ದಾರೆ. ಇದರಲ್ಲಿ 211 ಜನ ಬಿಡುಗಡೆಯಾಗಿದ್ದು, 159 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇವಲ ಒಂದು ತಿಂಗಳ ಅವಧಿಯಲ್ಲಿ 300ಕ್ಕೂ ಅಧಿಕ ಜನರಲ್ಲಿ ಸೋಂಕು ಕಾಣಿಸಿಕೊಂಡಿರುವುದು ಮತ್ತಷ್ಟುಆತಂಕಕ್ಕೆ ಕಾರಣವಾಗಿದ್ದು, ಇಡೀ ಸಮುದಾಯಕ್ಕೆ ಹರಡಿ ಅಪಾಯದ ಹಂತ ತಲುಪುವುದನ್ನು ತಡೆಯುವ ದೃಷ್ಟಿಯಿಂದ ಮುಂಜಾಗ್ರತೆ ವಹಿಸಿ ಸ್ವಯಂಪ್ರೇರಿತವಾಗಿ ಲಾಕ್‌ಡೌನ್ ತೀರ್ಮಾನ ಕೈಗೊಳ್ಳಲಾಗಿದೆ.
ಲಾಕ್‌ಡೌನ್ ಸಡಿಲಗೊಂಡ ಬಳಿಕ ಬೇರೆ ಕಡೆಯಿಂದ ಟೆಬೇಟಿಯನ್ನರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಸಾಮಾಜಿಕ ಅಂತರ ಪಾಲಿಸದೇ ಪ್ರಾರ್ಥನೆಗೆ ಗುಂಪು ಗುಂಪಾಗಿ ಸೇರಿದ್ದರಿಂದಲೇ ಏಕಾಏಕಿ ಇಷ್ಟೊಂದು ಪ್ರಕರಣಗಳು ಹೆಚ್ಚಲು ಕಾರಣ. ಕೋವಿಡ್ ನಿಯಂತ್ರಣವಾಗಬೇಕಾದರೆ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕು ಎಂದು ತಾಲೂಕು ಆಡಳಿತ ವೈದ್ಯಾಧಿಕಾರಿ ಎಚ್.ಎಫ್. ಇಂಗಳೆ ಅವರು ತಿಳಿಸಿದ್ದಾರೆ.
ಕಾಲನಿಯಲ್ಲಿ ನಿತ್ಯ 20-30 ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ. ನಿಯಂತ್ರಣ ಮಾಡಬೇಕಾದರೆ ಲಾಕ್‌ಡೌನ್ ಬಿಟ್ಟು ಬೇರೆ ದಾರಿ ಇಲ್ಲ. ಹಾಗಾಗಿ ಎಲ್ಲರನ್ನೂ ಒಂದು ಕಡೆ ತಡೆದು ತಪಾಸಣೆ ನಡೆಸಿ ಚಿಕಿತ್ಸೆ ನೀಡುವ ಮೂಲಕ ಕೋವಿಡ್ ಹೆಚ್ಚುವುದನ್ನು ತಡೆಯುವುದಕ್ಕಾಗಿ ಸಭೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಟಿಬೇಟಿಯನ್ ಸೆಟ್ಲಮೆಂಟ್ ಚೇರ್‌ಮನ್ ಲಾಖ್ಪಾ ಸಿರಿಂಗ್ ಹೇಳಿದ್ದಾರೆ.