ಕಲಬುರಗಿ: ಕಲ್ಯಾಣ ಕರ್ನಾಟಕಕ್ಕೆ ಮತ್ತೊಂದು ರೇಲ್ವೆ ದೋಖಾ..!
ಡಿ.7ರಿಂದ ಪಥ ಬದಲಿಸಲಿರುವ ನಾಗರ್ ಕೋಯೀಲ್| ರಾಜಕೀಯ ಇಚ್ಛಾಶಕ್ತಿ ಕೊರತೆ| ಮುಂದುವರಿದ ರೇಲ್ವೆ ಅನ್ಯಾಯ| ಸಾಮಾನ್ಯ ಜನರಿಗೆ ರೈಲು ಸಾರಿಗೆಯೇ ಗತಿ ಇರುವಾಗ ಇರುವ ರೈಲುಗಳೂ ಕೈ ತಪ್ಪಿ ಹೋದರೆ ಮುಂದೇನು ಗತಿ ಎಂಬ ಪ್ರಶ್ನೆ|
ಕಲಬುರಗಿ(ನ.29): ಮುಂಬೈಯಿಂದ ಕಲಬುರಗಿ, ಯಾದಗಿರಿ, ರಾಯಚೂರು ಮಾರ್ಗದಲ್ಲಿ ಸಾಗಿ ಬೆಂಗಳೂರು ತಲುಪಿ ಅಲ್ಲಿಂದ ನಾಗರ ಕೋಯಿಲ್‌ಗೆ ತೆರಳುತ್ತಿದ್ದ ಜನ ಮನ್ನಣೆ ಪಡೆದಿದ್ದ ಮುಂಬೈ- ನಾಗರ್ ಕೋಯಿಲ್ ಎಕ್ಸಪ್ರೆಸ್ ರೈಲು ಡಿ.7ರಿಂದ ತನ್ನ ಪಥ ಬದಲಿಸಲಿದೆ. ಇದರಿಂದಾಗಿ ಕಲಬುರಗಿ ಸೇರಿದಂತೆ ಕಲ್ಯಾಣ ನಾಡಿನ ಜಿಲ್ಲೆಗಳಿಂದ ರಾಜಧಾನಿ ಬೆಂಗಳೂರಿಗೆ ಹೋಗುವ ಪ್ರಯಾಣಿಕರಿಗೆ ಇದ್ದಂತಹ ಮಹತ್ವದ ರೈಲಿನ ಸೌಲಭ್ಯವೊಂದು ಕೈ ತಪ್ಪಿದಂತಾಗಿದೆ.
ಕಲಬುರಗಿ ಕೇಂದ್ರವಾಗಿರುವಂತೆ ರೇಲ್ವೆ ವಿಭಾಗೀಯ ಕಚೇರಿ ಸ್ಥಾಪನೆ ವಿಚಾರ, ಕಲಬುರಗಿಯಿಂದ ಬೆಂಗಳೂರಿಗೆ ಹೊಸ ರೈಲು ಓಡಿಸಬೇಕೆಂಬ ಬೇಡಿಕೆಗಳು ನೆನೆಗುದಿಗೆ ಬಿದ್ದಿರುವಾಗಲೇ ನಾಗರಕೋಯೀಲ್ ಎಕ್ಸಪ್ರೆಸ್ ಸಹ ರಾಜಧಾನಿಗೆ ಹೋಗುವ ತನ್ನ ಮಾರ್ಗ ಬದಲಿಸುತ್ತಿರೋದು ಈ ಭಾಗದ ರೇಲ್ವೆ ಬಳಕೆದಾರರ ದುರಾದೃಷ್ಟವೆಂದೇ ಹೇಳಬೇಕು. ಕೋವಿಡ್- 19 ತೊಂದರೆ ಬಳಿಕ ಈ ರೈಲು ಡಿ.7ರಿಂದ ಆರಂಭವಾಗುತ್ತಿದೆಯಾದರೂ ಬೆಂಗಳೂರಿನ ತನ್ನ ಮೊದಲ ಮಾರ್ಗ ಬದಲಿಸುತ್ತಿದೆ.
ವಾರದಲ್ಲಿ 4 ದಿನ ಸಂಚಾರ:
ಸೆಂಟ್ರಲ್ ರೇಲ್ವೆಯವರು ಹೊರಡಿಸಿರುವ ವೇಳಾಪಟ್ಟಿಯಂತೆ ವಾರದಲ್ಲಿ 4 ದಿನ ಚಲಿಸುವ ಈ ರೈಲು (06339/40) ಡಿ.7ರಿಂದ ಬೆಂಗಳೂರಿನ ಕೆಆರ್ ಪುರಂ ಮೂಲಕ ಚಲಿಸೋದಿಲ್ಲ, ರಾತ್ರಿ 10.30ರ ಬದಲು ನಸುಕಿನ 5.30 ಗಂಟೆಗೆ ಮುಂಬೈನಿಂದ ಕಲಬುರಗಿಗೆ ಬರಲಿದೆ. ಯಾದಗಿರಿ, ರಾಯಚೂರು, ಮಂತ್ರಾಲಯ ರೋಡ್, ಆದೋನಿ, ಗುಂತಕಲ್, ಅನಂತಪುರ, ಧರ್ಮಾವರಮ್, ಪೆನುಗೊಂಡ, ಹಿಂದೂಪುರ, ಗೌರಿಬಿದನೂರ್, ಮೂಲಕ ಬೆಂಗಳೂರಿನ ಕೆಆರ್ ಪುರಮ್‌ಗೆ ತಲುಪುತ್ತಿದ್ದ ರೈಲು ಇದೀಗ ಧರ್ಮಾವರಮ್‌ನಿಂದಲೇ ಪಥ ಬದಲಿಸಿ ಕದಿರಿ, ಮದನಪಲ್ಲಿ, ರೋಡ್, ಪಾಕಳಾ, ಚಿತ್ತೂರ, ಸೇಲಂ, ನಾಮಕಲ್, ತಿರುನಲ್ವೇಲಿ ಮೂಲಕ ನಾಗರಕೋಯೀಲ್ ತಲುಪಲಿದೆ.
'ನನ್ನ ಮಗಳ ನಿಶ್ಚಿತಾರ್ಥ ದಿನವೇ ನೋಟಿಸ್, ನನ್ನೊಬ್ಬನಿಗೆ ಏಕೆ ತೊಂದ್ರೆ'?
ಹೆಚ್ಚಿದ ಫಜೀತಿ:
ರೈಲಿನ ಪಥ ಬದಲಾವಣೆಯಿಂದಾಗಿ ಬೆಂಗಳೂರಿಗೆ ತಡರಾತ್ರಿ ಕೆಲಸ ಮುಗಿಸಿಕೊಂಡು ಹೋಗಲು ಇದ್ದಂತಹ ಉತ್ತಮ ರೇಲ್ವೆ ಸವಲತ್ತೂ ಸಹ ಕಲ್ಯಾಣ ನಾಡಿನ ಜನರ ಕೈ ಬಿಟ್ಟು ಹೋದಂತಾಗಿದೆ. ನಾಗರಕೋಯೀಲ್ ರೈಲು ಅತ್ಯಂತ ಹಳೆಯ ರೈಲಾಗಿದ್ದು ಬಸವ ಎಕ್ಸಪ್ರೆಸ್ ನಂತರ ಬೆಂಗಳೂರಿಗೆ ತೆರಳುವ ಕೊನೆಯ ರೈಲೆಂದು ಹೆಚ್ಚು ಜನಮನ್ನಣೆ ಗಳಿಸಿತ್ತು. ಇದೀಗ ಬೆಂಗಳೂರಿಗೆ ಸಂಪರ್ಕ ಕಲ್ಪಿಸದೆ ಅನ್ಯ ಮಾರ್ಗ ಈ ರೈಲು ಹಿಡಿಯೋದರಿಂದ ಕಲ್ಯಾಣ ನಾಡಿನ ಕಲಬುರಗಿ, ರಾಯಚೂರು, ಯಾದಗಿರಿ ರೇಲ್ವೆ ಬಳಕೆಯಾದರಿರೆಗ ತುಂಬ ಅನಾನುಕೂಲವಾಗೋದು ನಿಶ್ಚಿತ. ಸೊಲ್ಲಾಪುರ- ಹಾಸನ ರೈಲಿಗೆ ಟಿಕೆಟ್ ಸಿಗದವರು, ಬಸವ ರೈಲು ತಪ್ಪಿದವರೆಲ್ಲರೂ ನಾಗರ ಕೋಯಿಲ್ ರೈಲನ್ನೆ ಬಳಸುತ್ತಿದ್ದರು. ಇದೀಗ ಸದರಿ ರೈಲಿನ ಪಥ ಬದಲಾಗುತ್ತಿರೋದರಿಂದ ಈ ಸವಲತ್ತಿಗೂ ಕೊಕ್ಕೆ ಬಿದ್ದಂತಾಗಿದೆ.
ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ
ಕೊರೋನಾ ಲಾಕ್ಡೌನ್ ನಂತರ ಈ ಮಾರ್ಗದಿಂದ ರೈಲುಗಳೇ ಆರಂಭವಾಗಿಲ್ಲ, ಉದ್ಯಾನ ಬಿಟ್ಟರೆ ಬೆಂಗಳೂರಿಗೆ ಹೋಗಲು ರೈಲುಗಳೇ ಇಲ್ಲ. ಹಾಸನ-ಸೊಲ್ಲಾಪುರ ಇನ್ನೂ ಶುರುವಾಗಿಲ್ಲ. ಈ ರೈಲನ್ನೇ ಕಲಬುರಗಿಯಿಂದ ಶುರು ಮಾಡಬೇಕೆಂಬ ಬೇಡಿಕೆ ಇದ್ದರೂ ಅದರತ್ತ ಕ್ಯಾರೆ ಎನ್ನದ ರೇಲ್ವೆಯವರು ಇದೀಗ ನಮ್ಮ ಸವಲತ್ತು ಕಸಿಯಲು ಎಂಬಂತೆ ಇದ್ದ ರೈಲಿನ ಪಥ ಬದಲಿಸಿ ಕೊಕ್ಕೆ ಹಾಕುತ್ತಿದ್ದಾರೆಂದು ಈ ಭಾಗದ ರೇಲ್ವೆ ಬಳಕೆದಾರರು ಆಕ್ರೋಶ ಹೊರಹಾಕುತ್ತಿದ್ದಾರೆ. ಸೊಲ್ಲಾಪುರ- ಹಾಸನ ರೈಲು ಶುರುವಾಗಿಲ್ಲ, ಈಗ ನಾಗರಕೋಯೀಲ್ ರೈಲಿನ ಪಥ ಬದಲಾಯಿಸಿದರೆ ಬೆಂಗಳೂರಿಗೆ ಹೋಗುವ ಪ್ರಯಾಣಿಕರು ಅದೇನು ಮಾಡಬೇಕು? ಎಂದು ರೇಲ್ವೆ ಬಳಕೆದಾರರ ಸಂಘದ ಹೋರಾಟಗಾರ ಸುನೀಲ ಕುಲಕರ್ಣಿ ಪ್ರಶ್ನಿಸುತ್ತಾರೆ. ಈ ಭಾಗದ ರಾಜಕೀಯ ಇಚ್ಛಾಶಕ್ತಿ ಕೊರತೆಯೇ ಇಂತಹ ಅನಾಹುತಗಳಿಗೆ ಕಾರಣವಾಗುತ್ತಿದೆ. ಸಂಸದರು, ಶಾಸಕರಿಗೆ ರೈಲು ಬಳಕೆದಾರರ ಗೋಳು ಅರ್ಥವಾಗುತ್ತಿಲ್ಲ. ಸಾಮಾನ್ಯ ಜನರಿಗೆ ರೈಲು ಸಾರಿಗೆಯೇ ಗತಿ ಇರುವಾಗ ಇರುವ ರೈಲುಗಳೂ ಕೈ ತಪ್ಪಿ ಹೋದರೆ ಮುಂದೇನು ಗತಿ ಎಂಬ ಪ್ರಶ್ನೆಗೆ ಜನನಾಯಕರೇ ಉತ್ತರಿಸಬೇಕಷ್ಟೆ.