ಉಡುಪಿ(ಫೆ.15): ಮುಂಬೈಯ ಬಾರ್‌ ಉದ್ಯಮಿ ವಸಿಷ್ಠ ಸತ್ಯನಾರಾಯಣ ಯಾದವ್‌ನನ್ನು ಜೀವಕ್ಕಿಂತ ಹೆಚ್ಚು ನಂಬಿದ್ದ ಗೆಳೆಯನೇ ಉಡುಪಿಗೆ ಕರೆಸಿ ಕೊಲೆ ಮಾಡಿಸಿದ್ದು ಇದೀಗ ತನಿಖೆಯಿಂದ ಸ್ಪಷ್ಟವಾಗಿದೆ.

ಭಾನುವಾರ ರಾತ್ರಿ ಹಿರಿಯಡ್ಕ ಪೊಲೀಸ್‌ ಠಾಣಾ ವ್ಯಾಪ್ತಿಯ ಬೆಳ್ಳೆಂಪಳ್ಳಿ ಎಂಬಲ್ಲಿ ಈ ಕೊಲೆ ನಡೆದಿದ್ದು, 24 ಗಂಟೆಯೊಳಗೆ ಪೊಲೀಸರು 4 ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಈ ಕೊಲೆಯ ಸಂಚು ರೂಪಿಸಿದ್ದ, ವಸಿಷ್ಠನ ಆಪ್ತ ಗೆಳೆಯ ಉಡುಪಿಯ ಬಸ್‌ ಮಾಲಕ ಸೈಫು ಯಾನೆ ಸೈಫುದ್ದೀನ್‌ ಆತ್ರಾಡಿಯನ್ನು ಗುರುವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ.

2,500 ರೂಪಾಯಿಗಾಗಿ ಸ್ನೇಹಿತನನ್ನೇ ಕೊಂದ..!

ಈಗಾಗಲೇ ಮೂರು ಕೊಲೆ ಪ್ರಕರಣಗಳಲ್ಲಿ ಜೈಲು ಕಂಡು ಬಿಡುಗಡೆಯಾಗಿರುವ ಸೈಫುನನ್ನು ಪೊಲೀಸರು ಮಲ್ಪೆ ಕೊಡವೂರಿನಲ್ಲಿರುವ ಆತನ ಮನೆಯಲ್ಲಿ ಬಂಧಿಸಿದ್ದಾರೆ. ಕೊಲೆಯ ಮುಖ್ಯ ಆರೋಪಿ ಸುಮಿತ್‌ ಮಿಶ್ರ (23), ಅವಿನಾಶ್‌ ಕರ್ಕೆರ (25), ಅಬ್ದುಲ್‌ ಶುಕೂರ್‌ ಯಾನೆ ಅದ್ದು (35) ಮತ್ತು ಮೊಹಮ್ಮದ್‌ ಶರೀಫ್‌ (32) ಅವರನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯ ಅವರನ್ನು ಪೊಲೀಸ್‌ ಕಸ್ಟಡಿಗೆ ನೀಡಿತ್ತು.

ಅವರ ವಿಚಾರಣೆಯ ಸಂದರ್ಭದಲ್ಲಿ ಅವರು ಸೈಫುನ ಹೆಸರು ಹೇಳಿದ್ದು, ಅದರಂತೆ ಕೊಲೆಯ ರೂವಾರಿ ಸೈಫುನನ್ನು ಪೊಲೀಸರು ಬಂಧಿಸಿದ್ದಾರೆ. ಅಚ್ಚರಿ ಎಂದರೆ, ವಸಿಷ್ಠ ಯಾದವ್‌ ತನ್ನ ಫೇಸ್‌ಬುಕ್‌ನಲ್ಲಿ ಸೈಫು ಮತ್ತು ಅಕ್ರಂ ಎಂಬವರೊಂದಿಗೆ ಇರುವ ತನ್ನ ಫೋಟೋ ಶೇರ್‌ ಮಾಡಿ ‘ತೇರೆ ಜೈಸಾ ಯಾರ್‌ ಕಹಾಂ’ ಎಂದು ತಮ್ಮ ಗಾಢ ಗೆಳೆತನವನ್ನು ಹೇಳಿಕೊಂಡಿದ್ದ.

ವಸಿಷ್ಠ ನವಿಮುಂಬೈನಲ್ಲಿ ನಡೆಸುತ್ತಿದ್ದ ಮಾಯಾ ಎಂಬ ಲೇಡಿಸ್‌ ಬಾರ್‌ಗೆ ಸೈಫು ಆಗಾಗ್ಗೆ ಹೋಗುತ್ತಿದ್ದ. ಅಲ್ಲಿ ಬಾರ್‌ ಮ್ಯಾನೇಜರ್‌ ಸುಮಿತ್‌ ಮಿಶ್ರಾನ ಗೆಳತವಾಗಿತ್ತು. ಇತ್ತೀಚೆಗೆ ವಸಿಷ್ಠ ಮತ್ತು ಮಿಶ್ರಾ ಮಧ್ಯೆ ಜಗಳವಾಗಿ, ಅವಮಾನಿತನಾದ ಮಿಶ್ರಾ ಸೈಫುನ ಸಹಾಯ ಕೇಳಿದ್ದ.

ಪ್ರೇಮಿಗಳ ದಿನದಂದೇ ಹಾರಂಗಿಗೆ ಹಾರಿದ ಪ್ರೇಮಿಗಳು...!

ಅದರಂತೆ ಸೈಫು ತನ್ನ ಬಸ್ಸಿನ ಮ್ಯಾನೇಜರ್‌ ಅವಿನಾಶ್‌ ಕರ್ಕೇರನ ತಂಗಿಯ ಸೀಮಂತಕ್ಕೆಂದು ವಸಿಷ್ಠನನ್ನು ಉಡುಪಿಗೆ ಕರೆಸಿ, ಬಾಡಿಗೆ ಕಾರಿನಲ್ಲಿ ಕರೆದುಕೊಂಡು ಬೆಳ್ಳಂಪಳ್ಳಿಯಲ್ಲಿ ತನ್ನ ಬಸ್ಸಿನ ಸಿಬ್ಬಂದಿಯಿಂದಲೇ ಕೊಲೆ ಮಾಡಿಸಿದ್ದಾನೆ. ಈ ಎಲ್ಲಾ ಪ್ಲಾನ್‌ ಸೈಫು ಹೆಣೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.