ಉಡುಪಿ(ಫೆ.15): ಕೇವಲ 2,500 ರು. ಸಾಲ ಹಿಂತಿರುಗಿಸಿಲ್ಲ ಎಂಬ ಕಾರಣಕ್ಕೆ ಸ್ನೇಹಿತನನ್ನೇ ಬಾವಿ ದೂಡಿ ಹಾಕಿ ಕೊಂದ ಘಟನೆ ಬ್ರಹ್ಮಾವರ ತಾಲೂಕಿನ ನಿರ್ಜಡ್ಡು ಎಂಬಲ್ಲಿ ಶುಕ್ರವಾರ ನಡೆದಿದೆ. ಬಸವ ನಾಯ್ಕ್ ರಾಧಾ ಬಾಯಿ ಅವರ ಮಗ ಮನೋಜ್‌ (21) ಮೃತ ಯುವಕ. ಕೊಲೆ ಮಾಡಿದ ಆರೋಪಿ ಸ್ಥಳೀಯ ನಿವಾಸಿ ಸುನಿಲ್‌ ಶೆಟ್ಟಿ(25).

ಮನೋಜ್‌ ಕೆಲವು ತಿಂಗಳ ಹಿಂದೆ ಸುನಿಲ್‌ನಿಂದ 2,500 ರು. ಸಾಲ ಪಡೆದಿದ್ದು, ಹಿಂದಕ್ಕೆ ನೀಡಿರಲಿಲ್ಲ. ಸುನಿಲ್‌, ಶುಕ್ರವಾರ ಮುಂಜಾನೆ ಮನೋಜ್‌ ಮನೆ ಬಳಿ ಬಂದು, ಆತನ ತಾಯಿ ಬಳಿ ಕೂಗಾಡಿದ್ದಾನೆ. ಆಗ ಹೊರಗೆ ಬಂದ ಮನೋಜ್‌ ಬ್ಯಾಂಕ್‌ನಿಂದ ಹಣ ತಂದು ಕೊಡುತ್ತೇನೆ ಎಂದು ಹೇಳಿ ಹಲ್ಲುಜ್ಜಲು ಬಾವಿ ಬಳಿ ಹೋಗಿದ್ದ.

ಕ್ಯೂಆರ್‌ ಕೋಡ್‌ನಿಂದ 200 ಜನರಿಗೆ ನಾಮ ಹಾಕಿದ ಸೈಬರ್ ಕಳ್ಳರು

ಆತನ ಹಿಂದೆ ಹೋದ ಸುನಿಲ್‌ ಒಂದೆರಡು ನಿಮಿಷಗಳಲ್ಲಿ ಹಿಂದಕ್ಕೆ ಬಂದು, ಮನೋಜ್‌ ಬಾವಿಗೆ ಬಿದ್ದ ಎಂದು ಆತನ ತಾಯಿಯ ಬಳಿ ಹೇಳಿ ಅಲ್ಲಿಂದ ಓಡಿ ಹೋಗಿದ್ದಾನೆ. ತಾಯಿ ಮತ್ತು ಮನೆಯವರು ಹೋಗಿ ಬಾವಿಯಿಂದ ಮನೋಜ್‌ನನ್ನು ಮೇಲೆತ್ತಿದಾಗ ಆತ ಮೃತಪಟ್ಟಿದ್ದ. ಈ ಬಗ್ಗೆ ಮನೋಜ್‌ ತಾಯಿ ರಾಧಾ ಬಾಯಿ ಬ್ರಹ್ಮಾವರ ಠಾಣೆಗೆ ದೂರು ನೀಡಿ, ತನ್ನ ಮಗನನ್ನು ಸುನಿಲ್‌ ಬಾವಿಗೆ ದೂಡಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಆರೋಪಿಸಿದ್ದಾರೆ.