Uttara Karnataka: ಬರೋಬ್ಬರಿ 23 ವರ್ಷಗಳ ಹೋರಾಟಕ್ಕೆ ಕೊನೆಗೂ ರೈತರಿಗೆ ಸಿಕ್ಕಿತು ಪ್ರತಿಫಲ
ಗ್ರಾಮದ ರೈತರ ಭೂಮಿಯನ್ನು ಸರ್ಕಾರ ಕೈಗಾರಿಕಾ ಪ್ರದೇಶಕ್ಕಾಗಿ ಭೂಸ್ವಾಧೀನ ಮಾಡಿಕೊಂಡಿತ್ತು. ಆದರೆ, ಸೂಕ್ತ ಪರಿಹಾರ ನೀಡದ ಹಿನ್ನೆಲೆ ಗ್ರಾಮಸ್ಥರು ಹೆಚ್ಚಿನ ಪರಿಹಾರಕ್ಕಾಗಿ ಹೋರಾಟ ಮುಂದಾಗಿ ನ್ಯಾಯಾಲಯದ ಮೊರೆ ಹೋಗಿದ್ದರು.
ವರದಿ: ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್
ಕಾರವಾರ (ಮಾ.19): ಆ ಗ್ರಾಮದ ರೈತರ ಭೂಮಿಯನ್ನು ಸರ್ಕಾರ ಕೈಗಾರಿಕಾ ಪ್ರದೇಶಕ್ಕಾಗಿ ಭೂಸ್ವಾಧೀನ ಮಾಡಿಕೊಂಡಿತ್ತು. ಆದರೆ, ಸೂಕ್ತ ಪರಿಹಾರ ನೀಡದ ಹಿನ್ನೆಲೆ ಗ್ರಾಮಸ್ಥರು ಹೆಚ್ಚಿನ ಪರಿಹಾರಕ್ಕಾಗಿ ಹೋರಾಟ ಮುಂದಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ಬರೋಬ್ಬರಿ 20 ವರ್ಷಗಳ ಬಳಿಕ ರೈತರ ಹೋರಾಟದ ಫಲವಾಗಿ ಕಳೆದುಕೊಂಡ ಜಮೀನಿಗೆ ಉತ್ತಮ ಪರಿಹಾರ ಲಭಿಸಿದ್ದು, ಖುದ್ದು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಪರಿಹಾರದ ಚೆಕ್ ಅನ್ನು ಫಲಾನುಭವಿಗಳಿಗೆ ಹಸ್ತಾಂತರಿಸುವ ಮೂಲಕ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ.
ಎಕರೆಗೆ ಮೂರೂವರೆ ಲಕ್ಷದಿಂದ 50 ಲಕ್ಷ ರೂ.ಗೆ ನಿಗದಿಯಾದ ಪರಿಹಾರ:
ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮುಡಗೇರಿ ಗ್ರಾಮದಲ್ಲಿ ಸರ್ಕಾರ ಕೈಗಾರಿಕೆಗಳನ್ನು ಸ್ಥಾಪಿಸುವ ಉದ್ದೇಶದಿಂದ ಸ್ವಾಧೀನಪಡಿಸಿಕೊಂಡಿದ್ದ ಭೂಮಿಗೆ ಸೂಕ್ತ ಪರಿಹಾರ ನಿಗದಿಯಾಗದೇ ಪಾಳು ಬೀಳುವಂತಾಗಿತ್ತು. 1997ರಲ್ಲಿಯೇ ಸರ್ಕಾರ ಮುಡಗೇರಿ ಗ್ರಾಮದಲ್ಲಿ ಕೃಷಿ ಕಾರ್ಯ ಮಾಡಿಕೊಂಡಿದ್ದ ರೈತರ ಸುಮಾರು 73 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದ್ದು, ಪರಿಹಾರದ ವಿಚಾರದಲ್ಲಿ ಹೊಂದಾಣಿಕೆಯಾಗದ ಹಿನ್ನೆಲೆ ಫಲವತ್ತಾದ ಕೃಷಿಭೂಮಿ ಯಾವುದಕ್ಕೂ ಬಳಕೆಯಾಗದೇ ಪಾಳು ಬೀಳುವಂತಾಗಿತ್ತು.
ರೈತರು ಹೆಚ್ಚುವರಿ ಪರಿಹಾರಕ್ಕಾಗಿ ಆಗ್ರಹಿಸಿದ್ದ ಹಿನ್ನೆಲೆ ಕೈಗಾರಿಕೆಗಳ ಸ್ಥಾಪನೆಯೂ ಆಗದೇ, ರೈತರಿಗೆ ಪರಿಹಾರವೂ ಸಿಗದೇ ಸಂಕಷ್ಟದ ಸ್ಥಿತಿ ನಿರ್ಮಾಣವಾಗಿತ್ತು. ಅದರಂತೆ ನ್ಯಾಯಾಲಯದ ಮೊರೆ ಹೋಗಿದ್ದ ರೈತರೊಂದಿಗೆ ಕೊನೆಗೂ ಹೊಂದಾಣಿಕೆ ಮಾಡಿಕೊಂಡ ಸರ್ಕಾರ ರೈತರ ಬೇಡಿಕೆಯಂತೆ ಎಕರೆಗೆ 50 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದೆ. ಈ ನಿಟ್ಟಿನಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಖುದ್ದು ಮುಡಗೇರಿ ಗ್ರಾಮಕ್ಕೆ ಆಗಮಿಸಿ ರೈತರಿಗೆ ಪರಿಹಾರ ಚೆಕ್ ಅನ್ನು ವಿತರಿಸಿದರು.
ಬಗರ್‌ಹುಕುಂ ರೈತರಿಗೆ ಸಾಗುವಳಿ ಪತ್ರ ನೀಡಲು ಒತ್ತಾಯ
ಇನ್ನು ಕಳೆದ 23 ವರ್ಷಗಳಿಂದ ಮುಡಗೇರಿ ಭಾಗದ ರೈತರು ಪರಿಹಾರಕ್ಕಾಗಿ ಹೋರಾಟ ನಡೆಸಿಕೊಂಡು ಬಂದಿದ್ದರು. ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ ರೈತರಿಂದ ಜಮೀನು ಪಡೆಯುವಾಗ ಗುಂಟೆಗೆ 8,833 ರೂಪಾಯಿ ಹಣ ಕೊಡುವುದಾಗಿ ತಿಳಿಸಿದ್ದು, ಇದಕ್ಕೆ ರೈತರು ಒಪ್ಪಿಗೆ ನೀಡಿರಲಿಲ್ಲ. ಎರಡು ಬಾರಿ ಜಿಲ್ಲಾಡಳಿತ ರೈತರೊಂದಿಗೆ ಸಭೆ ನಡೆಸಿ ಪರಿಹಾರದ ಮಾತುಕತೆ ನಡೆಸಿತ್ತಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕಳೆದ ನವೆಂಬರ್ ತಿಂಗಳಲ್ಲಿ ಜಿಲ್ಲಾಡಳಿತ ಅಂತಿಮ ಹಂತದ ಮಾತುಕತೆ ನಡೆಸಿ ರೈತರಿಗೆ ಎಕರೆಗೆ 50 ಲಕ್ಷ ಪರಿಹಾರ ಕೊಡಲು ಸಮ್ಮತಿ ನೀಡಿದ್ದು, ಅದರಂತೆ ಇಂದು ಸಚಿವ ನಿರಾಣಿ ಸಾಂಕೇತಿಕವಾಗಿ ಚೆಕ್ ವಿತರಿಸಿದರು. ಇನ್ನು ಎರಡು ದಶಕಗಳ ಬಳಿಕ ಬೇಡಿಕೆಯಿಟ್ಟ ಪರಿಹಾರ ಲಭಿಸಿದ್ದಕ್ಕೆ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಸಚಿವರನ್ನು ಅಭಿನಂದಿಸಿದ್ದಾರೆ.
Untimely rain : ಆಲಿಕಲ್ಲು ಮಳೆಯಿಂದ ಅಪಾರ ಬೆಳೆಹಾನಿ: ಬೆಳೆಗಾರರು ಕಂಗಾಲು
ಒಟ್ಟಿನಲ್ಲಿ ಎರಡು ದಶಕಗಳಿಂದ ಪರಿಹಾರಕ್ಕಾಗಿ ಅಲೆದಾಡುತ್ತಿದ್ದ ರೈತರಿಗೆ ಕೊನೆಗೂ ತಮ್ಮ ಹಣ ಕೈಸೇರಿರುವುದು ನೆಮ್ಮದಿ ತಂದಿದೆ. ಚೆಕ್ ಪಡೆದ ರೈತರ ಕಣ್ಣಲ್ಲಿ ಕಂಡ ಆನಂದಬಾಷ್ಪ ಇದಕ್ಕೆ ಸಾಕ್ಷಿಯಾಗಿತ್ತು. ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ್ ಪ್ರಯತ್ನದ ಫಲವಾಗಿ ಪರಿಹಾರ ಲಭಿಸಿದ ಖುಷಿಯಲ್ಲಿ ರೈತರಿದ್ದು, ಆದಷ್ಟು ಬೇಗ ಉತ್ತಮ ಕೈಗಾರಿಕೆಗಳು ಸ್ಥಾಪನೆಯಾಗಲಿ ಅನ್ನೋದು ಎಲ್ಲರ ಆಶಯ.