ಮುಡಾ 50:50 ಹಗರಣ ಪ್ರಕರಣದಲ್ಲಿ ಲೋಕಾಯುಕ್ತ ಸಲ್ಲಿಸಿದ್ದ ‘ಬಿ ರಿಪೋರ್ಟ್’ ಅನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಂಗೀಕರಿಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು 'ಸತ್ಯಮೇವ ಜಯತೆ' ಎಂದು ವಿಜಯೋತ್ಸವ ಆಚರಿಸಿದರು.
ಮೈಸೂರು: ಮುಡಾ 50:50 ಹಗರಣ ಪ್ರಕರಣದಲ್ಲಿ ಲೋಕಾಯುಕ್ತ ಸಲ್ಲಿಸಿದ್ದ ‘ಬಿ ರಿಪೋರ್ಟ್’ ಅನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಂಗೀಕರಿಸಿರುವ ವಿಚಾರ ಮೈಸೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಲೋಕಾಯುಕ್ತ ಕಚೇರಿ ಮುಂದೆ “ಸತ್ಯಮೇವ ಜಯತೆ” ಎಂಬ ಪ್ಲೇ ಕಾರ್ಡ್ ಪ್ರದರ್ಶಿಸಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಭಾಗವಹಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕುತಂತ್ರ ನಡೆಸಿದ ಕಿಡಿಗೇಡಿಗಳಿಗೆ ದಿಕ್ಕಾರ ಎಂದು ಘೋಷಣೆಗಳನ್ನು ಕೂಗಿದರು.
ಈ ಬಗ್ಗೆ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, “ಸಿದ್ದರಾಮಯ್ಯ ಅವರ ವಿರುದ್ಧ ಕೆಲವರು ಉದ್ದೇಶಪೂರ್ವಕವಾಗಿ ಕುತಂತ್ರ ರೂಪಿಸಿದರು. ಸಿದ್ದರಾಮಯ್ಯ ಅವರ ಕುಟುಂಬ ಜಮೀನು ಕಳೆದುಕೊಂಡ ಹಿನ್ನೆಲೆಯಲ್ಲಿ ಮುಡಾದಿಂದ ಸೈಟ್ ಪಡೆದಿದ್ದರು. ಇದನ್ನು ಅಕ್ರಮ ಎಂದು ತೋರಿಸಲು ಸ್ನೇಹಮಯಿ ಕೃಷ್ಣ ಹಾಗೂ ಅಬ್ರಹಾಂ ಅವರು ಪ್ರಕರಣ ದಾಖಲಿಸಿದ್ದರು. ರಾಜ್ಯಪಾಲರಿಂದ ಅನುಮತಿ ಪಡೆದು ಪ್ರಕರಣ ದಾಖಲಿಸಲಾಗಿತ್ತು. ಈ ವೇಳೆ ಸ್ನೇಹಮಯಿ ಕೃಷ್ಣ ಅವರಿಗೆ ಇಡೀ ಬಿಜೆಪಿ ಬೆಂಬಲ ನೀಡಿತ್ತು” ಎಂದು ಆರೋಪಿಸಿದರು.
ಲೋಕಾಯುಕ್ತದಲ್ಲಿ ಈ ಕುರಿತು ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಅದರಂತೆ ಲೋಕಾಯುಕ್ತವು ಸಂಪೂರ್ಣ ತನಿಖೆ ನಡೆಸಿ ‘ಬಿ ರಿಪೋರ್ಟ್’ ಸಲ್ಲಿಸಿತ್ತು. ಈ ವರದಿಯಲ್ಲಿ ಸಿದ್ದರಾಮಯ್ಯ ಅವರ ಪ್ರಭಾವ ಇಲ್ಲ, ಸಿದ್ದರಾಮಯ್ಯ ಕುಟುಂಬ ಯಾವುದೇ ತಪ್ಪು ಮಾಡಿಲ್ಲ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಎಂ. ಲಕ್ಷ್ಮಣ್ ಹೇಳಿದರು.
ಸಿದ್ದರಾಮಯ್ಯ ಕುಟುಂಬ ಯಾವುದೇ ಅಕ್ರಮ ಮಾಡಿಲ್ಲ
ಸಿದ್ದರಾಮಯ್ಯ ಅವರನ್ನು ಸಿಲುಕಿಸಲು ಕೆಲವರು ಕುತಂತ್ರ ನಡೆಸಿದ್ದರು. ಆದರೆ ಲೋಕಾಯುಕ್ತ ತನಿಖೆಯಲ್ಲೇ ಸಿದ್ದರಾಮಯ್ಯ ಅವರ ತಪ್ಪಿಲ್ಲ ಎಂಬುದು ಸಾಬೀತಾಗಿದೆ. ಆದರೂ ಸ್ನೇಹಮಯಿ ಕೃಷ್ಣ ಅವರು ಈ ವರದಿಯನ್ನು ಪ್ರಶ್ನಿಸಿ ಜನಪ್ರತಿನಿಧಿಗಳ ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ನಿನ್ನೆ ಜನಪ್ರತಿನಿಧಿಗಳ ನ್ಯಾಯಾಲಯವೂ ಲೋಕಾಯುಕ್ತದ ‘ಬಿ ರಿಪೋರ್ಟ್’ ಅನ್ನು ಅಂಗೀಕರಿಸಿದ್ದು, ಮುಡಾದಲ್ಲಿ ಸಿದ್ದರಾಮಯ್ಯ ಕುಟುಂಬ ಯಾವುದೇ ಅಕ್ರಮ ಮಾಡಿಲ್ಲ ಎಂಬುದು ಮತ್ತೊಮ್ಮೆ ದೃಢಪಟ್ಟಿದೆ ಎಂದು ಅವರು ಹೇಳಿದರು.
“ಸಾವಿರಾರು ಕೋಟಿ ಹಗರಣ ನಡೆದಿದೆ ಎಂದು ಸುಳ್ಳು ಆರೋಪ ಮಾಡಲಾಗಿತ್ತು. ಆದರೆ ಈಗ ಸತ್ಯ ಹೊರಬಂದಿದೆ. ‘ಸತ್ಯಮೇವ ಜಯತೆ’ ಎಂದರೆ ಸತ್ಯಕ್ಕೆ ಜಯ ಸಿಗುತ್ತದೆ ಎಂಬುದನ್ನು ಸಿದ್ದರಾಮಯ್ಯ ಅವರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ” ಎಂದು ಎಂ. ಲಕ್ಷ್ಮಣ್ ಹೇಳಿದರು. ಜೊತೆಗೆ ಸ್ನೇಹಮಯಿ ಕೃಷ್ಣ ಅವರ ವಿರುದ್ಧ ಕಿಡಿಕಾರಿದ ಅವರು, ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಯಿಂದ ಸುಳ್ಳು ಆರೋಪಗಳನ್ನು ಮಾಡಿಸಲಾಯಿತು ಎಂದು ಆರೋಪಿಸಿದರು.
ಸಂಸದ ಯದುವೀರ್ ವಿರುದ್ಧವೂ ಎಂ.ಲಕ್ಷ್ಮಣ್ ಕಿಡಿ
ಈ ಸಂದರ್ಭದಲ್ಲಿ ಮೈಸೂರು ಸಂಸದ ಯದುವೀರ್ ವಿರುದ್ಧವೂ ಎಂ. ಲಕ್ಷ್ಮಣ್ ತೀವ್ರ ವಾಗ್ದಾಳಿ ನಡೆಸಿದರು. “ನಮ್ಮ ಮೈಸೂರು ಸಂಸದರು ಕಳೆದ ಎರಡು ವರ್ಷಗಳಲ್ಲಿ ಒಂದೇ ಒಂದು ಅಭಿವೃದ್ಧಿ ಯೋಜನೆಯನ್ನೂ ಕ್ಷೇತ್ರಕ್ಕೆ ತಂದಿಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ನೆನಪಿಸಿಕೊಂಡು ಜನರು ಅವರಿಗೆ ಮತ ಹಾಕಿದರು. ಕುಶಾಲನಗರಕ್ಕೆ ರೈಲ್ವೆ ತರುತ್ತೇನೆ ಎಂದು ಹೇಳಿದ್ದರು, ಆದರೆ ಏನೂ ತರಲಿಲ್ಲ. ಪ್ರಶ್ನಿಸಿದರೆ ರಾಜ್ಯ ಸರ್ಕಾರ ಸಹಕಾರ ನೀಡಲಿಲ್ಲ ಎಂದು ಸುಳ್ಳು ಹೇಳುತ್ತಾರೆ” ಎಂದು ಟೀಕಿಸಿದರು.
ಚಾಮುಂಡಿಬೆಟ್ಟದ ಪ್ರಸಾದ ಯೋಜನೆಯೂ ಕೇಂದ್ರ ಸರ್ಕಾರದ ಯೋಜನೆಯೇ ಆಗಿದ್ದರೂ, ಅದಕ್ಕೂ ಕ್ರೆಡಿಟ್ ಪಡೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. “ಇನ್ನಾದರೂ ಯದುವೀರ್ ಕೆಲಸ ಮಾಡಲಿ” ಎಂದು ಎಚ್ಚರಿಕೆ ನೀಡಿದರು.
ಹಿಂದಿನ ಸಂಸದ ಪ್ರತಾಪ್ ಸಿಂಹ ಅವರನ್ನು ಉಲ್ಲೇಖಿಸಿದ ಎಂ. ಲಕ್ಷ್ಮಣ್, “ಪ್ರತಾಪ್ ಸಿಂಹ ದಿನಬೆಳಗ್ಗೆ ಸುಳ್ಳು ಹೇಳುತ್ತಿದ್ದ ಸಂಸದ. ಈಗ ಅವರು ಕೆಲಸವಿಲ್ಲದೆ ನಿರುದ್ಯೋಗಿಯಾಗಿದ್ದಾರೆ. ಇದೀಗ ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಲು ಓಡಾಟ ನಡೆಸುತ್ತಿದ್ದಾರೆ. ಇಂತಹವರು ಬಿಜೆಪಿಯಲ್ಲಿ ಹೆಚ್ಚಾಗಿದ್ದಾರೆ. ಇನ್ನಾದರೂ ಬಿಜೆಪಿ ನಾಯಕರು ತಮ್ಮ ಹುಚ್ಚಾಟ ನಿಲ್ಲಿಸಬೇಕು” ಎಂದು ಕಿಡಿಕಾರಿದರು. ಈ ಹೇಳಿಕೆಗಳು ಮೈಸೂರಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ.


