ಬೆಂಗಳೂರು(ಜು.16): ದೇಶದ ಪ್ರತಿಷ್ಠಿತ ಆಹಾರ ಪದಾರ್ಥ ತಯಾರಿಕಾ ಸಂಸ್ಥೆಯಾದ ‘ಎಂಟಿಆರ್‌’ ಕಂಪನಿಯ ಸಿಬ್ಬಂದಿಗೂ ಕೊರೋನಾ ಸೋಂಕು ತಟ್ಟಿದೆ. ಬೊಮ್ಮಸಂದ್ರದಲ್ಲಿ ಇರುವ ಘಟಕದ 30 ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಒಂದು ವಾರ ಕಾಲ ಘಟಕ ಸೀಲ್‌ಡೌನ್‌ ಮಾಡಲಾಗಿದೆ.

ಘಟಕದಲ್ಲಿ ಕೆಲಸ ಮಾಡಲು ಬೆಂಗಳೂರು ನಗರ ಸೇರಿದಂತೆ ಸುತ್ತಮುತ್ತಲ ಭಾಗಗಳಿಂದ ನೂರಾರು ಜನ ಬರುತ್ತಾರೆ. ಅವರಿಂದ ಸೋಂಕು ಹರಡಿದೆ. ವಿಷಯ ತಿಳಿದ ತಕ್ಷಣ ಎಲ್ಲ ಸಿಬ್ಬಂದಿಯನ್ನು ವಾಪಸ್‌ ಕಳುಹಿಸಲಾಗಿದ್ದು, ಉತ್ಪಾದನೆಯನ್ನು ಸ್ಥಗಿತ ಮಾಡಲಾಗಿದೆ ಎಂದು ಸಂಸ್ಥೆಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಬೆಂಗ್ಳೂರಿನಲ್ಲಿ ಒಂದೇ ದಿನ 1975 ಕೇಸ್‌, 60 ಸಾವು!

ಕಳೆದ ಒಂದು ವಾರದ ಹಿಂದೆ ಸಂಸ್ಥೆಯ ಕಿಚನ್‌ನಲ್ಲಿ ಕೆಲಸ ಮಾಡುವ ಒಬ್ಬ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿತ್ತು. ಬಳಿಕ ಹಂತಹಂತವಾಗಿ ಹರಡಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ, ಸೋಂಕು ಕಾಣಿಸಿಕೊಂಡಿರುವ ಎಲ್ಲ ಸಿಬ್ಬಂದಿಯನ್ನು ಕ್ವಾರಂಟೈನ್‌ನಲ್ಲಿರುವಂತೆ ಸೂಚನೆ ನೀಡಲಾಗಿದೆ ಎಂದು ಅವರು ‘ಕನ್ನಡಪ್ರಭ’ಕ್ಕೆ ವಿವರಿಸಿದರು.

ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿಗೇ ಕೊರೋನಾ

ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವಿಕ್ಟೋರಿಯಾ ಆಸ್ಪತ್ರೆಯ ಸಿಬ್ಬಂದಿಗೆ ದೊಡ್ಡ ಸಂಖ್ಯೆಯಲ್ಲಿ ಕೊರೋನಾ ಸೋಂಕು ತಗುಲಿದೆ. ಕಳೆದ ವಾರವಷ್ಟೇ 12 ಸಿಬ್ಬಂದಿಗೆ ಕೊರೋನಾ ಕಾಣಿಸಿಕೊಂಡಿತ್ತು. ಇದೀಗ ವೈದ್ಯರು, ಇತರೆ ಸಿಬ್ಬಂದಿ ಸೇರಿದಂತೆ ಒಟ್ಟು 56 ಮಂದಿಗೆ ಕೊರೋನಾ ಸೋಂಕು ದೃಢ ಪಟ್ಟಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಸಿಬ್ಬಂದಿಯನ್ನು ಹೋಮ್‌ ಕ್ವಾರಂಟೈನ್‌ಗೆ ಕಳುಹಿಸಿರುವುದಾಗಿ ಆಸ್ಪತ್ರೆಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಸಂಜಯ್‌ ಗಾಂಧಿ ಆಸ್ಪತ್ರೆ ಸಿಬ್ಬಂದಿಗೂ ಪಾಸಿಟಿವ್‌

ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಸಂಜಯ್‌ ಗಾಂಧಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಸೇರಿದಂತೆ 17 ಜನರಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಪರದಾಡುವಂತಾಗಿದೆ.

ಗ್ರೇಟ್ ನ್ಯೂಸ್ ಕೊಟ್ಟ ಅಧ್ಯಕ್ಷ, ಕೊರೋನಾಕ್ಕೆ ಟ್ರಂಪ್ ಚುಚ್ಚುಮದ್ದು!

ಐದು ಜನ ವೈದ್ಯರು ಮತ್ತು 12 ಜನ ಇತರೆ ಆರೋಗ್ಯ ಸಿಬ್ಬಂದಿಗೆ ಕೊರೋನಾ ಪಾಸಿಟಿವ್‌ ಕಾಣಿಸಿಕೊಂಡಿದೆ. ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಸೋಂಕು ಹರಡಿದ್ದು, ಕೆಲವರನ್ನು ಹೋಮ್‌ ಕ್ವಾರಂಟೈನ್‌ಗೆ ಸೂಚಿಸಲಾಗಿದೆ. ಮತ್ತೆ ಕೆಲವರನ್ನು ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದಾಗಿ ಇತರೆ ರೋಗಿಗಳಿಗೆ ಚಿಕಿತ್ಸೆ ಪಡೆಯಲು ಪರದಾಡುವಂತಾಗಿದೆ. ವೈದ್ಯರ ಕೊರತೆಯಿಂದ ರಾಜೀವ್‌ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೆಲ ರೋಗಿಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಆಸ್ಪತ್ರೆಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.