ಬ್ಯಾಡಗಿ(ಜ.16):  ಬ್ಲಾಕ್‌ಮೇಲ್‌ ಮಾಡಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವಂತಹ ರಾಜಕಾರಣಿ ನಾನಲ್ಲ, ಸೀಡಿ ವಿಚಾರ ನನಗೆ ಗೊತ್ತಿಲ್ಲ. ಬ್ಲಾಕ್‌ಮೇಲ್‌ಗೆ ಮಂತ್ರಿ ಸ್ಥಾನಗಳನ್ನು ಕೊಡುವಂತಹ ಪಕ್ಷವಲ್ಲ. ಅದನ್ನೇನಿದ್ದರೂ ವಿಶ್ವನಾಥ್‌ ಅವರಿಂದಲೇ ಪ್ರತಿಕ್ರಿಯೆ ಪಡೆಯಿರಿ ಎಂದು ನೂತನ ಸಚಿವ ಎಂಟಿಬಿ ನಾಗರಾಜ್‌ ಹೇಳಿದ್ದಾರೆ.

ಕಾಗಿನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್‌.ವಿಶ್ವನಾಥ್‌ ಹಿರಿಯ ರಾಜಕಾರಣಿ. ಇಂತಹ ವಿಚಾರಗಳನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕಾಗಿತ್ತು. ಆದರೆ, ಸಾರ್ವಜನಿಕವಾಗಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಅವರಿಂದಲೇ ಪ್ರತಿಕ್ರಿಯೆ ಪಡೆದುಕೊಳ್ಳಿ ಎಂದು ಹೇಳಿದ್ದಾರೆ.  

'ಬ್ಲಾಕ್‌ಮೇಲ್‌ ಅಂದ್ರೇನೆ ಸಿದ್ದ​ರಾ​ಮ​ಯ್ಯ'

ಎಚ್‌.ವಿಶ್ವನಾಥ್‌ ಅವರಿಗೆ ಸಚಿವ ಸ್ಥಾನ ತಪ್ಪಿರುವ ಹಿಂದೆ ಯಾವುದೇ ರಾಜಕಾರಣವಿಲ್ಲ. ಆದರೆ, ಕಾನೂನು ತೊಡಕಿರುವುದರಿಂದ ಬಹುಶಃ ಬಿಜೆಪಿ ಹೈಕಮಾಂಡ್‌ ಕೈಬಿಟ್ಟಿರಬಹುದು. ಮುಂದಿನ ದಿನಗಳಲ್ಲಿ ಅವರಿಗೂ ಅವಕಾಶ ಸಿಗಲಿವೆ. ಅದೇ ರೀತಿ ಮುನಿರತ್ನ ವಿಚಾರದಲ್ಲಿಯೂ ಸಹ ಅವರ ವಿರುದ್ಧ ದೂರುಗಳಿವೆ. ಹೀಗಾಗಿ ಸಚಿವ ಸ್ಥಾನ ನೀಡಲಾಗಿಲ್ಲ ಎಂದರು.