ಬೆಂಗಳೂರು-ಮೈಸೂರು ನಡುವಿನ ಪ್ರಯಾಣದ ಅವಧಿಯನ್ನು ಕಡಿಮೆ ಮಾಡುವ ಉದ್ದೇಶದಿಂದ ಆರಂಭವಾದ ನೈಸ್ ರಸ್ತೆ ಯೋಜನೆಯು 31 ವರ್ಷಗಳಿಂದ ವಿಳಂಬವಾಗಿದೆ. ಉದ್ಯಮಿ ಅಶೋಕ್ ಖೇಣಿ ಮತ್ತು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ನಡುವಿನ ರಾಜಕೀಯ ವೈರತ್ವ ಯೋಜನೆ ನನೆಗುದಿಗೆ ಬೀಳಲು ಮುಖ್ಯ ಕಾರಣವಾಗಿದೆ.

ಬೆಂಗಳೂರು (ಅ.1): 76 ವರ್ಷದ ಅಶೋಕ್ ಖೇಣಿ ಬೆಂಗಳೂರಿನ ಹೊರವಲಯದಲ್ಲಿರುವ ತಮ್ಮ ಕಚೇರಿಯ ಮುಂದೆ, ತಾವು ನಿರ್ಮಿಸಿರುವ ಪೆರಿಫೆರಲ್ ರಿಂಗ್ ರೋಡ್‌ಅನ್ಜು ಸಾಮಾನ್ಯರಂತೆ ವೀಕ್ಷಿಸಲು ಇಷ್ಟಪಡುತ್ತಾರೆ. ಬೆಂಗಳೂರು ಮತ್ತು ಮೈಸೂರು ನಡುವಿನ 3 ಗಂಟೆಗಳ ಪ್ರಯಾಣದ ಅವಧಿಯನ್ನು ಕೇವಲ 1 ಗಂಟೆಗೆ ಇಳಿಸುವ ಉದ್ದೇಶ ಹೊಂದಿದ್ದ, ಪ್ರಸ್ತಾಪಿತ 111 ಕಿ.ಮೀ. ಎಕ್ಸ್‌ಪ್ರೆಸ್‌ವೇ ರಸ್ತೆ ಈಗ ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದೆ. ಮೈಸೂರಿನ ತನಕ ಇಂದಿಗೂ ಮುಟ್ಟದ ಈ ರಸ್ತೆ ಈಗ ಚರ್ಚೆಯ ಕೇಂದ್ರ ಬಿಂದುವಾಗಿದೆ.

ಇನ್ನು ಖೇಣಿ ಅವರ ಕಂಪನಿ ನಂದಿ ಇನ್‌ಫ್ರಾಸ್ಟ್ರಕ್ಚರ್ ಕ್ಯಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್ ಎಂದು ಹೆಸರು ಬರಲು ಕಾರಣವೂ ಇದೆ. ಅದು ಖೇಣಿ ಸಾಕಿದ್ದ ಅಮರ್‌ ಮತ್ತು ಪ್ರೇಮ್‌ ಎನ್ನುವ ಬೃಹತ್‌ ಹೋರಿಗಳು. ಇವಗಳನ್ನು ಕಸಾಯಿಖಾನೆಗೆ ಕೊಂಡೊಯ್ಯುತ್ತಿದ್ದಾಗ ಅದನ್ನು ರಕ್ಷಿಸಿ ಪ್ರಾಣಿ ರಕ್ಷಣಾ ಕೇಂದ್ರಕ್ಕೆ ದಾನ ಮಾಡಿದ್ದರು. ಆದರೆ ಅವು ಅನಾರೋಗ್ಯಕ್ಕೆ ಒಳಗಾಗಿದ್ದನ್ನು ನೋಡಿ ಮತ್ತೆ ತಾವೇ ತಂದು ಸಾಕಿದ್ದರು. ಅವರ ಈ ಕಾಳಜಿಗೆ ಕೇವಲ ಪ್ರಾಣಿದಯೆ ಮಾತ್ರ ಕಾರಣವಲ್ಲ. ಅವರ ಕಂಪನಿಯಾದ ‘ನಂದಿ ಇನ್‌ಫ್ರಾಸ್ಟ್ರಕ್ಚರ್ ಕ್ಯಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್’ (NICE) ಹೆಸರೇ ಶಿವನ ವಾಹನವಾದ ‘ನಂದಿ’ಯಿಂದ ಬಂದಿದೆ. ನಂದಿ ದೇವಾಲಯಗಳಲ್ಲಿ ಭಕ್ತರು ನಂದಿಯ ಕಿವಿಯಲ್ಲಿ ತಮ್ಮ ಸಂಕಟಗಳನ್ನು ಹೇಳಿಕೊಂಡರೆ, ಅದು ಶಿವನಿಗೆ ತಲುಪುತ್ತದೆ ಎಂಬ ನಂಬಿಕೆಯಿದೆ.

ಖೇಣಿಯವರಿಗೂ ನಂದಿಯ ಕಿವಿಯಲ್ಲಿ ಹೇಳಿಕೊಳ್ಳಲು ಸಾಕಷ್ಟು ಸಂಕಟಗಳಿವೆ! ಏಕೆಂದರೆ ಅವರ ಕಂಪನಿ ಕೈಗೆತ್ತಿಕೊಂಡ ಬೃಹತ್ ಮೂಲಸೌಕರ್ಯ ಯೋಜನೆ ಕಳೆದ 31 ವರ್ಷಗಳಿಂದ ವಿಳಂಬದ ಸುಳಿಯಲ್ಲಿ ಸಿಲುಕಿದೆ. ಮೂಲ ಪ್ರಸ್ತಾವನೆಯಂತೆ 111 ಕಿ.ಮೀ ರಸ್ತೆ, ಲಿಂಕ್ ರಸ್ತೆಗಳು, ಬೆಂಗಳೂರು ಮತ್ತು ಮೈಸೂರಿನಲ್ಲಿ ಇಂಟರ್‌ಚೇಂಜ್‌ಗಳು ಸೇರಿ 4 ಜಿಲ್ಲೆಗಳ 149 ಹಳ್ಳಿಗಳಲ್ಲಿ ಹಾದುಹೋಗುವ 20,193 ಎಕರೆ ಭೂಮಿ ಅಗತ್ಯವಿತ್ತು. ಆದರೆ ಇದುವರೆಗೆ ನಿರ್ಮಾಣವಾಗಿರುವುದು ಖೇಣಿ ನಿಂತಿರುವ 41 ಕಿ.ಮೀ. ರಿಂಗ್ ರೋಡ್, 9 ಕಿ.ಮೀ. ಲಿಂಕ್ ರೋಡ್ ಮತ್ತು ಕೇವಲ 5 ಕಿ.ಮೀ. ಎಕ್ಸ್‌ಪ್ರೆಸ್‌ವೇ ಮಾತ್ರ!

ಮಾರ್ಗದುದ್ದಕ್ಕೂ ನಿರ್ಮಿಸಲು ಯೋಜಿಸಲಾಗಿದ್ದ 5 ಕೈಗಾರಿಕಾ ಟೌನ್‌ಶಿಪ್‌ಗಳಿಗೆ ಇಂದಿಗೂ ಚಾಲನೆ ಸಿಕ್ಕಿಲ್ಲ. 1995ರಲ್ಲಿ ಕರ್ನಾಟಕ ಸರ್ಕಾರದೊಂದಿಗೆ ಒಪ್ಪಂದ (MoU) ಮಾಡಿಕೊಂಡಾಗಿನಿಂದ, ನೈಸ್ (NICE) ಕಂಪನಿಯು ವಿವಿಧ ನ್ಯಾಯಾಲಯಗಳಲ್ಲಿ ಬರೋಬ್ಬರಿ ಲೆಕ್ಕವಿಲ್ಲದಷ್ಟು ಮೊಕದ್ದಮೆಗಳನ್ನು (ನ್ಯಾಯಾಂಗ ಸಮರ) ಎದುರಿಸಿದೆ. ಇದರಲ್ಲಿ ಕನಿಷ್ಠ 6 ಕೇಸ್‌ಗಳು ಸುಪ್ರೀಂ ಕೋರ್ಟ್‌ವರೆಗೂ ಹೋಗಿವೆ.

ಈ 18 ವರ್ಷಗಳಲ್ಲಿ ಖೇಣಿ ನಟನೆಯಲ್ಲೂ ತೊಡಗಿಸಿಕೊಂಡು ಸಣ್ಣಪುಟ್ಟ ಪಾತ್ರಗಳನ್ನು ಮಾಡಿದ್ದಾರೆ. ಸಲ್ಮಾನ್ ಖಾನ್ ಜೊತೆ ಸೇರಿ ಚಿತ್ರ ನಿರ್ಮಾಣ ಹಾಗೂ ಕನ್ನಡ ಸಿನಿಮಾಗಳನ್ನೂ ನಿರ್ಮಿಸಿದ್ದಾರೆ. ಜೊತೆಗೆ ಕರ್ನಾಟಕದ ನಟರನ್ನೊಳಗೊಂಡ ಕ್ರಿಕೆಟ್ ತಂಡದ ಒಡೆತನವನ್ನೂ ಹೊಂದಿದ್ದಾರೆ. ಆದರೂ, ಖೇಣಿ ಪ್ರಸಿದ್ಧರಾಗಿರುವುದು ಹಾಗೂ ವಿವಾದಕ್ಕೆ ಈಡಾಗಿರುವುದು ಇದೇ 'ರಸ್ತೆ ಯೋಜನೆ'ಯಿಂದ.

ಖೇಣಿಯವರ ಕಳೆದ ಎರಡು ದಶಕಗಳ ಪಯಣ ಸುಲಭದ್ದಾಗಿರಲಿಲ್ಲ. ಆದರೂ ಈ ಯೋಜನೆ ಇಷ್ಟೊಂದು ವಿಳಂಬವಾಗಲು ನಿಜವಾದ ಕಾರಣ ಏನೆಂಬುದಕ್ಕೆ ಸ್ಪಷ್ಟ ಉತ್ತರ ಯಾರ ಬಳಿಯೂ ಇಲ್ಲ.

ದೇವೇಗೌಡ - ಖೇಣಿ ವೈರತ್ವ ಮತ್ತು ರಾಜಕೀಯ ಸಮರ

ಕೆಲವರ ಪ್ರಕಾರ, ಉದ್ಯಮಿ ಅಶೋಕ್ ಖೇಣಿ ಮತ್ತು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ನಡುವಿನ ಸುದೀರ್ಘ ವೈರತ್ವವೇ ಈ ವಿಳಂಬಕ್ಕೆ ಮುಖ್ಯ ಕಾರಣ. 1995ರಲ್ಲಿ ಒಪ್ಪಂದಕ್ಕೆ ಸಹಿ ಬಿದ್ದಾಗ ದೇವೇಗೌಡರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು, ನಂತರ 1996-97ರಲ್ಲಿ ದೇಶದ ಪ್ರಧಾನಿಯಾದರು.

ಪರಸ್ಪರ ವಂಚನೆ, ಕಿಕ್‌ಬ್ಯಾಕ್ ಹಾಗೂ ರಿಯಲ್ ಎಸ್ಟೇಟ್ ದುರಾಸೆಯ ಆರೋಪಗಳು ಈ ಯೋಜನೆಯನ್ನು ವರ್ಷಗಳಿಂದ ಬೆಂಬಿಡದೆ ಕಾಡುತ್ತಿವೆ. ಇಬ್ಬರೂ ಒಬ್ಬರನ್ನೊಬ್ಬರು ಆರೋಪಿಗಳನ್ನಾಗಿ ಮಾಡುತ್ತಲೇ ಬಂದಿದ್ದಾರೆ. ಆದರೆ ಈ ಆರೋಪಗಳ ವಿವರಗಳು ಗೊಂದಲಮಯವಾಗಿದ್ದು, ನ್ಯಾಯಾಲಯಗಳು ಖೇಣಿ ಮತ್ತು ಅವರ ಕಂಪನಿಗೆ ಹಲವು ಬಾರಿ ಕ್ಲೀನ್ ಚಿಟ್ ನೀಡಿವೆ.

ಆದರೂ, ರೈತ ಸಂಘಟನೆಗಳು, ಸಮಾಜ ಸೇವಕರು, ಸ್ಥಳೀಯ ರಾಜಕಾರಣಿಗಳು ಹಾಗೂ ಸ್ವತಃ ದೇವೇಗೌಡರ ನೇತೃತ್ವದಲ್ಲಿ ಎಕ್ಸ್‌ಪ್ರೆಸ್‌ವೇ ವಿರುದ್ಧ ಪ್ರತಿಭಟನೆಗಳು ಮುಂದುವರಿದಿವೆ. ಕೆಲವರು ಈ ಹೋರಾಟವನ್ನು ಲಿಂಗಾಯತ (ಖೇಣಿ) ಮತ್ತು ಒಕ್ಕಲಿಗ (ದೇವೇಗೌಡ) ಸಮುದಾಯಗಳ ನಡುವಿನ ಜಾತಿ ಸಮರ ಎಂದೂ ವಿಶ್ಲೇಷಿಸಿದ್ದಾರೆ. ಉದ್ಯಮಿಗಳು, ರಾಜಕಾರಣಿಗಳು ಮತ್ತು ಸಾರ್ವಜನಿಕರು ಈ ವಿಷಯದಲ್ಲಿ ಇಬ್ಬಾಗವಾಗಿದ್ದಾರೆ.

ಈ ವೈರತ್ವ ಖೇಣಿಯವರ ವರ್ಚಸ್ಸನ್ನು ಕುಗ್ಗಿಸಿದೆ. ತಮ್ಮ ತಾಯಿ ಮತ್ತು ಹೆಂಡತಿಯನ್ನು ಹೊರತುಪಡಿಸಿ ಎಲ್ಲರೂ ತಮ್ಮನ್ನು ಕೈಬಿಟ್ಟಿದ್ದಾರೆ ಎಂದು ಖೇಣಿ ಬೇಸರ ವ್ಯಕ್ತಪಡಿಸುತ್ತಾರೆ. ಆದರೂ ಯೋಜನೆ ಕೈಬಿಡಲು ಅವರು ಸಿದ್ಧರಿಲ್ಲ. "ಎಲ್ಲರಿಗೂ ಕಿರುಕುಳ ನೀಡಲಾಗಿದೆ. ಯೇಸು ಕ್ರಿಸ್ತನಿಗೆ ಕಿರುಕುಳವಾಯಿತು, ಮಹಾತ್ಮ ಗಾಂಧಿಗೆ ಕಿರುಕುಳವಾಯಿತು, 12ನೇ ಶತಮಾನದ ಸಾಮಾಜಿಕ ಕ್ರಾಂತಿಕಾರಿ ಬಸವಣ್ಣನವರಿಗೂ ಕಿರುಕುಳವಾಯಿತು" ಎಂದು ಖೇಣಿ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುತ್ತಾರೆ.

ಅಮೆರಿಕದಿಂದ ಭಾರತಕ್ಕೆ: ಖೇಣಿ ಹಿನ್ನೆಲೆ

1994ರಲ್ಲಿ ಖೇಣಿ ಅಮೆರಿಕದಲ್ಲಿ ಯಶಸ್ವಿ ವೃತ್ತಿಜೀವನ ನಡೆಸುತ್ತಿದ್ದರು. ಸುರತ್ಕಲ್‌ನ ಕರ್ನಾಟಕ ರೀಜನಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ (KREC) ಇಂಜಿನಿಯರಿಂಗ್ ಮುಗಿಸಿದ ಅವರು, 1969ರಲ್ಲಿ ಮ್ಯಾಸಚೂಸೆಟ್ಸ್‌ನ ವೋರ್ಚೆಸ್ಟರ್ ಪಾಲಿಟೆಕ್ನಿಕ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ 'ಪೆನ್ ಸೆಂಟ್ರಲ್' ಮತ್ತು 'ಕಾನ್‌ರೈಲ್' ರೈಲ್ವೆ ಕಂಪನಿಯಲ್ಲಿ ಉದ್ಯೋಗ ಮಾಡಿದರು. 1978ರಲ್ಲಿ 'SAB ಇಂಜಿನಿಯರಿಂಗ್' ಕಂಪನಿ ಸ್ಥಾಪಿಸಿದರು. ನ್ಯೂಯಾರ್ಕ್‌ನಿಂದ ಲಾಸ್ ಏಂಜಲೀಸ್‌ವರೆಗೆ AT&T ಕಂಪನಿಗೆ ಮೊದಲ ಫೈಬರ್ ಆಪ್ಟಿಕ್ ನೆಟ್‌ವರ್ಕ್ ಅಳವಡಿಸಲು ನೆರವಾಗಿದ್ದಾಗಿ ಖೇಣಿ ಹೇಳಿಕೊಳ್ಳುತ್ತಾರೆ.

1992ರಲ್ಲಿ ಖೇಣಿ ಇಟಾಲಿಯನ್ ಮೂಲದ ಅಮೆರಿಕನ್ ಪ್ರಜೆ ರೀಟಾ ಅವರನ್ನು ವಿವಾಹವಾದರು. ಕೆಲ ತಿಂಗಳುಗಳ ನಂತರ ಅವರ ತಂದೆ ತೀರಿಕೊಂಡರು. 1993ರಲ್ಲಿ ತಾಯಿಯನ್ನು ಕರೆದುಕೊಂಡು ಮೈಸೂರಿಗೆ ಹೋಗುತ್ತಿದ್ದಾಗ, ಆಗಿನ ಹಳೆಯ ಬೆಂಗಳೂರು-ಮೈಸೂರು ರಸ್ತೆಯ ದುರವಸ್ಥೆಯನ್ನು ನೋಡಿ ಖೇಣಿಗೆ ಈ ಎಕ್ಸ್‌ಪ್ರೆಸ್‌ವೇ ನಿರ್ಮಿಸುವ ಆಲೋಚನೆ ಬಂತು. ಬೆಂಗಳೂರಿಗೆ ಮರಳಿದ ನಂತರ ಸರ್ಕಾರಿ ಅಧಿಕಾರಿಗಳಿದ್ದ ಭೋಜನಕೂಟದಲ್ಲಿ ರಸ್ತೆಯ ಬಗ್ಗೆ ದೂಡಿದರು. ಆಗ ಅಧಿಕಾರಿಗಳು, "ವಿದೇಶಕ್ಕೆ ಹೋದವರು ಹೀಗೆ ದೂರುವುದು ಸಾಮಾನ್ಯ, ನೀವೇಕೆ ಇದನ್ನು ಸರಿಪಡಿಸಬಾರದು?" ಎಂದು ಪ್ರಶ್ನೆ ಮಾಡಿದ್ದರು.

ಎರಡು ವರ್ಷಗಳ ನಂತರ ಅಮೆರಿಕದ ಉದ್ಯಮಗಳನ್ನು ಮುಕ್ತಾಯ ಮಾಡಿ ಸ್ವದೇಶಕ್ಕೆ ಬಂದ ಖೇಣಿ, ಎಕ್ಸ್‌ಪ್ರೆಸ್‌ವೇ, ಲಿಂಕ್ ರೋಡ್ ಹಾಗೂ 7 ಟೌನ್‌ಶಿಪ್‌ಗಳ ಬೃಹತ್ ಯೋಜನೆಯೊಂದಿಗೆ ಬಂದರು. 1995ರ ಫೆಬ್ರವರಿ 20ರಂದು ಮ್ಯಾಸಚೂಸೆಟ್ಸ್ ಗವರ್ನರ್‌ ವಿಲಿಯಂ ಎಫ್. ವೆಲ್ಡ್ ಅವರು ಸಿಎಂ ದೇವೇಗೌಡರನ್ನು ಭೇಟಿಯಾದರು. ಈ ವೇಳೆ 'SAB ಇಂಜಿನಿಯರಿಂಗ್' (ಖೇಣಿ), 'ಕಲ್ಯಾಣಿ ಗ್ರೂಪ್' (ಖೇಣಿಯವರ ಭಾವ ಬಿ.ಎನ್. ಕಲ್ಯಾಣಿ) ಮತ್ತು 'ವನಾಸೆ ಹ್ಯಾಂಗೆನ್ ಬ್ರಸ್ಟ್‌ಲಿನ್' ಕಂಪನಿಗಳ ಒಕ್ಕೂಟದೊಂದಿಗೆ ಒಪ್ಪಂದ (MoU) ಸಹಿ ಬಿತ್ತು. PWD ಕಾರ್ಯದರ್ಶಿ ಸಿ.ಆರ್. ರಮೇಶ್ ಹಾಗೂ ಗವರ್ನರ್‌ ವೆಲ್ಡ್ ಮತ್ತು ದೇವೇಗೌಡರು ಇದಕ್ಕೆ ಸಾಕ್ಷಿಯಾಗಿದ್ದರು.

1996ರಲ್ಲಿ ಖೇಣಿ 'ನೈಸ್' (NICE Ltd) ಕಂಪನಿಯನ್ನು ನೋಂದಾಯಿಸಿದರು. 1997ರ ಏಪ್ರಿಲ್ 3ರಂದು ಫ್ರೇಮ್‌ವರ್ಕ್ ಒಪ್ಪಂದಕ್ಕೆ ಸಹಿ ಬಿತ್ತು. 10 ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳಬೇಕಿತ್ತು.

ಒಪ್ಪಂದದ ಸುತ್ತ ಸಾಲು ಸಾಲು ಆರೋಪಗಳು!

ಈ ಒಪ್ಪಂದವು ಸಂಪೂರ್ಣವಾಗಿ 'ನೈಸ್' ಕಂಪನಿಯ ಪರವಾಗಿದೆ ಎಂಬ ಆರೋಪ ಕೇಳಿಬಂತು. ಭೂಸ್ವಾಧೀನಕ್ಕಾಗಿ ಸರ್ಕಾರದ 'ಎಮಿನೆಂಟ್ ಡೊಮೇನ್' (ಸಾರ್ವಜನಿಕ ಉದ್ದೇಶಕ್ಕಾಗಿ ಜಮೀನು ವಶಪಡಿಸಿಕೊಳ್ಳುವ ಅಧಿಕಾರ) ಹಕ್ಕನ್ನು ಬಿಟ್ಟುಕೊಡಲಾಗಿತ್ತು ಮತ್ತು ಮಧ್ಯಸ್ಥಿಕೆದಾರರ (Arbitrators) ಕೇಂದ್ರವನ್ನು ಲಂಡನ್‌ನಲ್ಲಿ ಇಡಲಾಗಿತ್ತು.

"ಇದು ಏಕಪಕ್ಷೀಯ ಒಪ್ಪಂದ ಎನ್ನುವುದು ಸಣ್ಣ ಮಾತು, ಸರ್ಕಾರ ನೈಸ್ ಕಂಪನಿಯ ಅಧೀನದಲ್ಲಿದ್ದಂತೆ ಕಾಣುತ್ತಿತ್ತು" ಎಂದು ಹೆಸರು ಹೇಳಲಿಚ್ಛಿಸದ ನಿವೃತ್ತ ಅಧಿಕಾರಿಯೊಬ್ಬರು ಆಗಲೇ ತಿಳಿಸಿದ್ದರು. ಆದರೆ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕಿಂತಲೂ ನೈಸ್‌ಗೆ ಕಡಿಮೆ ಸೌಲಭ್ಯ ಸಿಕ್ಕಿದೆ ಎಂದು ಖೇಣಿ ಸಮರ್ಥಿಸಿಕೊಳ್ಳುತ್ತಾರೆ.

ಮತ್ತೊಂದೆಡೆ, PWD ಕಾರ್ಯದರ್ಶಿಯಾಗಿ ಒಪ್ಪಂದಕ್ಕೆ ಸಹಿ ಹಾಕಿದ್ದ ಸಿ.ಆರ್. ರಮೇಶ್ ಅವರು ನಿವೃತ್ತಿಯ ನಂತರ ನೈಸ್ ಕಂಪನಿಗೆ ಸಲಹೆಗಾರರಾಗಿ (Consultant) ಸೇರಿಕೊಂಡಿದ್ದು ದೊಡ್ಡ ವಿವಾದಕ್ಕೀಡಾಯಿತು. ಮಾಜಿ ಸಿಎಂ ಜಿ.ಹೆಚ್. ಪಟೇಲ್ ಅವರ ಸಲಹೆಯಂತೆ ಸರ್ಕಾರದೊಂದಿಗೆ ವ್ಯವಹರಿಸಲು ರಮೇಶ್ ಅವರನ್ನು ನೇಮಿಸಿಕೊಳ್ಳಲಾಗಿತ್ತು ಎಂದು ನೈಸ್ ವಕ್ತಾರರು ಸ್ಪಷ್ಟಪಡಿಸಿದ್ದಾರೆ. 2005ರಲ್ಲಿ ನ್ಯಾಯಾಲಯವೂ ರಮೇಶ್ ಅವರನ್ನು ದೋಷಮುಕ್ತಗೊಳಿಸಿತ್ತು.

ದೇವೇಗೌಡರ ವಿರುದ್ಧ ಆರೋಪ ಮಾಡುವ ಖೇಣಿ, "ದೇವೇಗೌಡರು ರಸ್ತೆ ಮಾರ್ಗ ಬದಲಾಯಿಸಲು ಒತ್ತಡ ಹೇರಿದ್ದರು. 1,100 ಎಕರೆ ಜಮೀನನ್ನು ಬಿಟ್ಟುಕೊಟ್ಟರೆ, ಬೇರೆಡೆ 5,000 ಎಕರೆ ಕೊಡುವುದಾಗಿ ಹೇಳಿದ್ದರು. ನಾನು ಒಪ್ಪದಿದ್ದಾಗ 'ನಿನಗೆ ಪಾಠ ಕಲಿಸುತ್ತೇನೆ' ಎಂದು ಬೆದರಿಕೆ ಹಾಕಿದ್ದರು" ಎಂದು ಹೇಳಿದ್ದಾರೆ.

ದೇವೇಗೌಡರ ತಿರುಗೇಟು: "ಇದು ಬೃಹತ್ ಲೂಟಿ!"

ಹೆಚ್.ಡಿ. ದೇವೇಗೌಡರ ಪುತ್ರ ಹೆಚ್.ಡಿ. ರೇವಣ್ಣ ಅವರ ಮನೆಯಲ್ಲಿ ಇಂದಿಗೂ "ಅಶೋಕ್ ಖೇಣಿ" ಎಂಬ ಹೆಸರು ಪದೇ ಪದೇ ಕೇಳಿಬರುತ್ತದೆ. ದೇವೇಗೌಡರು ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸುತ್ತಾರೆ.

"ಇದು ಶೋಷಣೆ ಮತ್ತು ಲೂಟಿ. ಅವರು ಮೊದಲ ಹಂತವನ್ನೂ ಪೂರ್ಣಗೊಳಿಸಿಲ್ಲ. ಬೆಂಗಳೂರಿನ ಸುತ್ತಲೂ 2,000ಕ್ಕೂ ಹೆಚ್ಚು ಎಕರೆ ಭೂಮಿ ವಶಪಡಿಸಿಕೊಂಡು ರಿಯಲ್ ಎಸ್ಟೇಟ್ ದಂಧೆ ಮಾಡುತ್ತಿದ್ದಾರೆ" ಎಂದು ದೇವೇಗೌಡರು ಕಿಡಿಕಾರುತ್ತಾರೆ. ತಮ್ಮ ಕುಟುಂಬದ ಹೆಸರಲ್ಲಿ ಬೆಂಗಳೂರು-ಮೈಸೂರು ಮಾರ್ಗದಲ್ಲಿ ಒಂದು ಗುಂಟೆ 'ಬೆನಾಮಿ' ಜಮೀನಿದ್ದರೂ ಸರ್ಕಾರ ಇಂದೇ ವಶಪಡಿಸಿಕೊಳ್ಳಲಿ ಎಂದು ಆಗಲೇ ಸವಾಲು ಹಾಕಿದ್ದರು.

1996ರಲ್ಲಿ ಪ್ರಧಾನಿಯಾದ ನಂತರ ದೇವೇಗೌಡರು ಈ ಯೋಜನೆಯ ಕಟ್ಟರ್ ವಿರೋಧಿಯಾದರು. ಧರಣಿ, ರೈತರ ಪ್ರತಿಭಟನೆ, ಅಂದಿನ ಪ್ರಧಾನಿ ಮನ್‌ಮೋಹನ್ ಸಿಂಗ್‌ಗೆ ಪತ್ರ ಹಾಗೂ ಪುಸ್ತಕ ಪ್ರಕಟಿಸುವ ಮೂಲಕ ನೈಸ್ ಯೋಜನೆ ವಿರುದ್ಧ ನಿರಂತರ ಹೋರಾಟ ನಡೆಸಿದ್ದರು.

ಜನರ ಅಭಿಪ್ರಾಯ: ಖೇಣಿ ಹೀರೋನಾ? ವಿಲನ್?

ರಿಂಗ್ ರೋಡ್ ಬದಿಯ ಗ್ರಾಮಸ್ಥರಿಗೆ ಖೇಣಿ ಕೆಲವರಿಗೆ ದೇವರೆನಿಸಿದರೆ, ಇನ್ನು ಕೆಲವರಿಗೆ ವಿಲನ್! ಟೋಲ್ ಬೂತ್‌ಗಳಲ್ಲಿ ಕೆಲಸ ಸಿಕ್ಕವರು ಖೇಣಿಯನ್ನು ಹೊಗಳುತ್ತಾರೆ. ಜಮೀನು ಕಳೆದುಕೊಂಡವರು, "ಇದು ರಸ್ತೆ ಯೋಜನೆಯಲ್ಲ, ರಿಯಲ್ ಎಸ್ಟೇಟ್ ದಂಧೆ" ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಆದರೆ, ಐಐಎಂ (IIM) ಸಂಶೋಧಕ ಅಶ್ವಿನ್ ಮಹೇಶ್ ಹಾಗೂ ಮಣಿಪಾಲ್ ಗ್ರೂಪ್‌ನ ಮೋಹನ್‌ದಾಸ್ ಪೈ ಅವರಂತಹ ಉದ್ಯಮಿಗಳು ನೈಸ್ ರಸ್ತೆಯ ಕೊಡುಗೆಯನ್ನು ಸ್ಮರಿಸುತ್ತಾರೆ. "ಹೊಸೂರು ರಸ್ತೆಯ ದಟ್ಟಣೆ ಕಡಿಮೆ ಮಾಡಲು ಹಾಗೂ ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸಲು ನೈಸ್ ರಸ್ತೆ ಕೋಟ್ಯಂತರ ಜನರಿಗೆ ನೆರವಾಗಿದೆ. ರಾಜಕೀಯ ಕಾರಣಕ್ಕೆ ಖೇಣಿಗೆ ಕಿರುಕುಳ ನೀಡಲಾಗುತ್ತಿದೆ" ಎಂದು ಮೋಹನ್‌ದಾಸ್‌ ಪೈ ಹಿಂದೊಮ್ಮೆ ಅಭಿಪ್ರಾಯಪಟ್ಟಿದ್ದರು.

ಬೀದರ್ ಜಿಲ್ಲೆಯ ಕರಂಜಾ ಅಣೆಕಟ್ಟು ಸಂತ್ರಸ್ತ ರೈತರಿಗೆ ಖೇಣಿ ಆಪತ್ಬಾಂಧವರಾಗಿ ನೆರವಾಗಿದ್ದಾರೆ. ಕಾನೂನು ಹೋರಾಟಕ್ಕೆ ಹಣಕಾಸಿನ ನೆರವು ನೀಡಿದ್ದಾರೆ.

ಖೇಣಿ ಸಾಮ್ರಾಜ್ಯ ಮತ್ತು ಭವಿಷ್ಯದ ಕನಸುಗಳು

ಬೀದರ್‌ನ ಶ್ರೀಮಂತ ಮನೆತನದಲ್ಲಿ ಜನಿಸಿದ ಖೇಣಿ, ಕಲ್ಯಾಣಿ ಗ್ರೂಪ್‌ನ ಬಾಬಾಸಾಹೇಬ್ ಕಲ್ಯಾಣಿ ಅವರ ಸಂಬಂಧಿ. ನೈಸ್ ಕಂಪನಿಯಲ್ಲಿ 'ಬಿಎಫ್ ಯುಟಿಲಿಟೀಸ್' ಶೇ. 74.82 ಪಾಲು ಹೊಂದಿದ್ದರೆ, ಖೇಣಿ ಶೇ. 19.81 ಪಾಲು ಹೊಂದಿದ್ದಾರೆ.

ಇದರ ಜೊತೆಗೆ ಖೇಣಿ, ಎಲ್‌ಎಕ್ಸ್‌ವೈ ಹೋಮ್ಸ್, ಪ್ರೀಮಿಯರ್ ಅಪಾರ್ಟ್‌ಮೆಂಟ್ಸ್, ಬೋನಿಕ್ ಡೆವಲಪರ್ಸ್, ನಂದಿ ಹೈವೇ ಡೆವಲಪರ್ಸ್ ಮುಂತಾದ ಹತ್ತಾರು ಕಂಪನಿಗಳ ನಿರ್ದೇಶಕರಾಗಿದ್ದಾರೆ. ಸಿನಿಮಾ ನಿರ್ಮಾಣ ಸಂಸ್ಥೆ ಎಕೆಕೆ ಎಂಟರ್‌ಟೈನ್‌ಮೆಂಟ್ಸ್, ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ನಲ್ಲಿ ಪಾಲು ಹಾಗೂ 'ಕರ್ನಾಟಕ ಬುಲ್ಡೋಜರ್ಸ್' ಕ್ರಿಕೆಟ್ ತಂಡದ ಒಡೆಯರೂ ಆಗಿದ್ದಾರೆ.

ತಮ್ಮ ಸುತ್ತಲೂ ಭದ್ರತಾ ಸಿಬ್ಬಂದಿಯನ್ನಿಟ್ಟುಕೊಂಡು ಓಡಾಡುವ ಖೇಣಿ, ಎಷ್ಟೇ ವಿರೋಧ ಬಂದರೂ ಯೋಜನೆಯಿಂದ ಹಿಂದೆ ಸರಿಯುವುದಿಲ್ಲ ಎನ್ನುತ್ತಾರೆ. ನಂದಿ ಎತ್ತಿನ ಆಕಾರದ ಹೊಸ ಕಚೇರಿ, 300 ಎಕರೆ ಫಿಲ್ಮ್ ಸಿಟಿ, ಮೋನೋರೈಲ್ ಹಾಗೂ ಮೇಲ್ಛಾವಣಿ ಮುಚ್ಚಬಹುದಾದ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸುವ ಬೃಹತ್ ಕನಸುಗಳನ್ನು ಖೇಣಿ ಇಂದಿಗೂ ಕಾಣುತ್ತಿದ್ದಾರೆ.

ಖೇಣಿಯವರ ಸೋದರಸಂಬಂಧಿ ಅನಿಲ್ ಖೇಣಿ ಹೇಳುವಂತೆ: "ಅಶೋಕ್ ಒಬ್ಬ ಛಲಗಾರ. ಒಂದು ಕೆಲಸ ಮಾಡಲು ತೀರ್ಮಾನಿಸಿದರೆ, ಅದನ್ನು ಮಾಡಿ ಮುಗಿಸುವವರೆಗೆ ಬಿಡುವುದಿಲ್ಲ!"