ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆದ ಮೇಲೆಯೇ ರಾಜ್ಯದಲ್ಲಿ ಅಭಿವೃದ್ಧಿಗೆ ವೇಗ ಸಿಕ್ಕಿದ್ದು, ಅಭಿವೃದ್ಧಿಗೆ ಕೋಟಿ ಕೋಟಿ ಅನುದಾನ ನೋಡಿದ್ದೇ ಅವರ ಅಧಿಕಾರಾವಧಿಯಲ್ಲಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಹೊನ್ನಾಳಿ (ಏ.26): ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆದ ಮೇಲೆಯೇ ರಾಜ್ಯದಲ್ಲಿ ಅಭಿವೃದ್ಧಿಗೆ ವೇಗ ಸಿಕ್ಕಿದ್ದು, ಅಭಿವೃದ್ಧಿಗೆ ಕೋಟಿ ಕೋಟಿ ಅನುದಾನ ನೋಡಿದ್ದೇ ಅವರ ಅಧಿಕಾರಾವಧಿಯಲ್ಲಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

Add Asianetnews Kannada as a Preferred SourcegooglePreferred

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಜೀವನಕ್ಕೆ 50 ವರ್ಷ ತುಂಬಿದ ಹಿನ್ನೆಲೆ ಚಿತ್ರದುರ್ಗದಲ್ಲಿ ಮೇ 9ರಂದು ನಡೆಯುವ ಬಿ.ಎಸ್‌.ವೈ. ಅಭಿಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಹೊನ್ನಾಳಿ ಪಟ್ಟಣದಲ್ಲಿ ಮುಖಂಡರು, ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಆಡಳಿತ ಪಕ್ಷ ಅಥವಾ ವಿಪಕ್ಷ ಎನ್ನದೇ ಎಲ್ಲರಿಗೂ ಅಭಿವೃದ್ಧಿಗೆ ಹಣ ನೀಡಿ ರಾಜ್ಯದ ಅಭಿವೃದ್ಧಿಗೆ ಸಾಥ್ ನೀಡಿದ ಏಕೈಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಇಂತಹ ಮುಖ್ಯಮಂತ್ರಿ ಜತೆ ಸಹ ಮಂತ್ರಿಯಾಗಿ ಕೆಲಸ ಮಾಡಿದ್ದು ನನ್ನ ಸೌಭಾಗ್ಯ. ಅವರ ಸ್ವಕ್ಷೇತ್ರ ಶಿಕಾರಿಪುರಕ್ಕೆ ಎಷ್ಟು ಮಹತ್ವ ನೀಡುತ್ತಿದ್ದರೋ, ನಮ್ಮ ಕ್ಷೇತ್ರ ಹೊನ್ನಾಳಿ ಕ್ಷೇತ್ರ ಅಭಿವೃದ್ಧಿಗೂ ಅಷ್ಟೇ ಅನುದಾನ ನೀಡಿದ್ದಾರೆ ಎಂದು ಶ್ಲಾಘಿಸಿದರು.

ಶಿಕಾರಿಪುರದಲ್ಲಿ ತಮ್ಮ ರಾಜಕೀಯ ಚಟುವಟಿಕೆ ಆರಂಭಿಸಿದ ಬಿಎಸ್‌ವೈ ಅವರು ಪ್ರಾರಂಭದಲ್ಲಿ ಆರ್‌ಎಸ್‌ಎಸ್‌ನ ತಾಲೂಕು ಕಾರ್ಯವಾಹರಾಗಿ, ನಂತರ ಪುರಸಭೆ ಅಧ್ಯಕ್ಷ, ಶಾಸಕ, ವಿಪಕ್ಷ ನಾಯಕ, ಸಂಸದರಾಗಿ ದುಡಿದಿದ್ದಾರೆ. ಅದಕ್ಕೂ ಪೂರ್ವದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿ, ರಾಜ್ಯಾಧ್ಯಕ್ಷರಾಗಿ, ರಾಷ್ಟ್ರೀಯ ಮಂಡಳಿ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆ, ರೈತರ ಸಾಲ ಮನ್ನಾ, ಬಗರ್‌ಹುಕುಂ ಹೋರಾಟ ಹಾಗೂ ಪಾದಯಾತ್ರೆಗಳು ಇವರ ನೇತೃತ್ವದಲ್ಲಿ ಸಾಮಾನ್ಯವಾಗಿತ್ತು. ವಿಧಾನಸೌಧದಲ್ಲಿ ರೈತರ ಪರವಾಗಿ ಮಾತನಾಡಲು ಎದ್ದು ನಿಂತರೆ ಸಾಕು ವಿಧಾನಸೌಧವೇ ನಡುಗುತಿತ್ತು ಎಂದು ಇಂದಿಗೂ ವಿಪಕ್ಷದವರೇ ಮಾತನಾಡುತ್ತಾರೆ ಎಂದು ಹೇಳಿದರು.

10 ಲಕ್ಷ ಅಭಿಮಾನಿಗಳು ಬರುವ ನಿರೀಕ್ಷೆ

ಮೇ 9ರಂದು ಚಿತ್ರದುರ್ಗದಲ್ಲಿ ನಡೆಯುವ ಬಿಎಸ್‌ವೈ ಅಭಿಮಾನೋತ್ಸವಕ್ಕೆ ಇಡೀ ರಾಜ್ಯದಿಂದ 10 ಲಕ್ಷಕ್ಕೂ ಹೆಚ್ಚು ಜನ ಆಗಮಿಸಲಿದ್ದಾರೆ. ಹೊನ್ನಾಳಿ, ನ್ಯಾಮತಿ ತಾಲೂಕಿನಿಂದಲೇ 10 ಸಾವಿರ ಕಾರ್ಯಕರ್ತರು ಚಿತ್ರದುರ್ಗದಲ್ಲಿ ನಡೆಯುವ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು.