ಬೆಂಗಳೂರು[ಸೆ. 15]  ಬೆಂಗಳೂರು ಮಹಾನಗರ ಮತ್ತು ನಿವಾಸಿಗಳ ಹಿತ ಕಾಪಾಡುವಲ್ಲಿ ಸದಾ ದನಿ ಎತ್ತುವ ಸಂಸದ ರಾಜೀವ್ ಚಂದ್ರಶೇಖರ್ ನಾಗರಿಕರಲ್ಲಿ ಒಂದು ಮನವಿ ಮಾಡಿಕೊಂಡಿದ್ದಾರೆ. ನಾಗರಿಕರು ಮತ್ತು ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳು (RWA) ತಮ್ಮ ಪ್ರದೇಶದಲ್ಲಿ ಅಕ್ರಮ ಚಟುವಟಿಕೆ ಕಂಡುಬಂದರೆ ವಲಯ ಜಂಟಿ ಆಯುಕ್ತರಿಗೆ, ಪೊಲೀಸ್ ಠಾಣೆಗಳಿಗೆ ಲಿಖಿತ ದೂರು ಸಲ್ಲಿಸಿ ಅದರ ಪ್ರತಿಯನ್ನು ಬಿಬಿಎಂಪಿ ಆಯುಕ್ತರಿಗೂ ಸಲ್ಲಿಸಬೇಕು ಎಂದು ಕೋರಿದ್ದಾರೆ.

ಅಕ್ರಮ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿರುವುದು ಕಂಡುಬಂದರೆ, ಕಾನೂನುಬದ್ಧ ವಾಣಿಜ್ಯ ಸಂಸ್ಥೆಯಾಗಿದ್ದರೂ ಕಸದ ಸಮಸ್ಯೆ, ಶಬ್ದಮಾಲಿನ್ಯ ಹಾಗು ಕಾನೂನು ಸುವ್ಯವಸ್ಥೆಯನ್ನು ಉಲ್ಲಂಘಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದರೆ ಅಂಥವುಗಳನ್ನು ಗಮನಕ್ಕೆ ತನ್ನಿ ಎಂದು ಕೋರಿದ್ದಾರೆ. ಅಕ್ರಮ ಬಾರ್, ಪಬ್‌ಗಳು, ಪಾರ್ಲರ್‌ಗಳ ವಿರುದ್ಧ ಬಿಬಿಎಂಪಿಗೆ ದೂರು ಸಲ್ಲಿಸಿ ಎಂದು ಮನವಿ ಮಾಡಿದ್ದಾರೆ.

ಬೆಂಗಳೂರು ಅಭಿವೃದ್ಧಿ; ಸಿಎಂಗೆ ಸಲಹೆ ಕೊಟ್ಟ ರಾಜೀವ್ ಚಂದ್ರಶೇಖರ್

ಬಿಬಿಎಂಪಿ ಕ್ರಮಕೈಗೊಳ್ಳಲು ವಿಫಲವಾದರೆ ಬಿಜೆಪಿ ಸಂಸತ್ ಸದಸ್ಯರು ಮತ್ತು ಶಾಸಕರು ಮಧ್ಯಪ್ರವೇಶ ಮಾಡಲಿದ್ದಾರೆ. ಜಂಟಿ ಆಯುಕ್ತರು ಅಂತಹ ದೂರುಗಳ ಕುರಿತು 7 ದಿನಗಳ ಒಳಗಾಗಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ದೂರಿನ ಪ್ರತಿಯನ್ನು ನನ್ನ ಕಚೇರಿ ಈ-ಮೇಲ್ ಗೆ NewBengaluru@rajeev.in ಕಳುಹಿಸಬಹುದು. ನಾನು ಮತ್ತು ಸಂಸದ ಪಿ.ಸಿ.ಮೋಹನ್ ಈ ಬಗ್ಗೆ ದನಿ ಎತ್ತುವ ಮೂಲಕ ಸದಾ ಕಾರ್ಯೋನ್ಮುಖರಾಗಲಿದ್ದೇವೆ ಎಂದು ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.

ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಹಾಗಾದಾಗ ನಾವೆಲ್ಲರೂ ಒಂದಾಗಿ ಬೆಂಗಳೂರನ್ನು ಶಾಂತಿಯುತ ಮತ್ತು ಕಾನೂನನ್ನು ಗೌರವಿಸುವ ಉತ್ತಮ ನಗರವನ್ನಾಗಿ ಮಾಡಬಹುದು ಎಂದು ರಾಜೀವ್ ಚಂದ್ರಶೇಖರ್ ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ‘ನಗರದ ಭವಿಷ್ಯ ನಾಗರಿಕರು ನಿರ್ಧರಿಸಬೇಕು’ ಮತ್ತು ‘ಸ್ವಚ್ಛತೆಯೇ ಸೇವೆ’ ಧ್ಯೇಯೋದ್ದೇಶಕ್ಕೆ ಅನುಗುಣವಾಗಿ ಎಲ್ಲರೂ ಸ್ಪಂದಿಸಬೇಕು. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇತ್ತೀಚೆಗೆ ನಡೆಸಿದ ಸಭೆಯಲ್ಲಿ ಡಿಸಿಎಎಂ ಡಾ. ಅಶ್ವಥ್ ನಾರಾಯಣ್, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಮತ್ತು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಉಪಸ್ಥಿತರಿದ್ದು, ನಗರದಲ್ಲಿ ವ್ಯಾಪಕವಾಗಿರುವ ಅಕ್ರಮ ವಾಣಿಜ್ಯ ಚಟುವಟಿಕೆಗಳ ಕುರಿತು ಗಮನ ಸೆಳೆದಿದ್ದೇವೆ ಎಂದು ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.