ಧಾರವಾಡ(ಸೆ.30): ಭಾರತೀಯ ಜನತಾ ಪಕ್ಷದಿಂದ ತಮಗೂ 30 ಕೋಟಿ ಆಮಿಷ ಒಡ್ಡಲಾಗಿತ್ತು. ಸಚಿವ ಸ್ಥಾನದ ಭರವಸೆಯನ್ನೂ ನೀಡಲಾಗಿತ್ತು ಎಂಬ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಹೇಳಿಕೆಗೆ ಧಾರವಾಡ ಸಂಸದ ಪ್ರಹ್ಲಾದ ಜೋಶಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದು, ಹೆಬ್ಬಾಳ್ಕರ್ ಅವರಿಗೆ ಪ್ರಚಾರದ ಗೀಳು. ಆ ರೀತಿ ಯಾರಾದರೂ ಆಮಿಷ ಒಡ್ಡಿದ್ದರೆ ಇಷ್ಟು ದಿನ ಸುಮ್ಮನೇಕೆ ಇದ್ದರು,  30 ಕೋಟಿ ಬಂದರೆ ಬರಲಿ ಎಂದು ಸುಮ್ಮನಿದ್ದರಾ. ಸರ್ಕಾರ ಉಳಿಯೋದು, ಬೀಳೋದು ನಡೆಯುತ್ತಿರುವಾಗಲೇ ಯಾರು ಆಮಿಷ ಒಡ್ಡಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕಿತ್ತೆಂದು ಹೇಳಿದ್ದಾರೆ. 

ಧಾರವಾಡದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹೆಬ್ಬಾಳಕರ ಅವರಿಗೆ ದುಡ್ಡು ಕೊಡುತ್ತೇವೆಂದು, ಯಾರು, ಯಾವಾಗ ಹೇಳಿದ್ದರು? ಅದಕ್ಕೆ ಸಾಕ್ಷಿಗಳು ಇವೆಯೇ? ದಾಖಲೆಗಳಿವೆಯೇ ಎಂದು ಪ್ರಶ್ನಿಸಿದರು. ಈ ಕುರಿತು ಕಾಲ್ ರೆಕಾರ್ಡ್ ಇದ್ದರೆ ಬಹಿರಂಗಪಡಿಸಲಿ. ಆಮಿಷ ಒಡ್ಡಿದ್ದರೂ ಇಷ್ಟು
ದಿನ ಸುಮ್ಮನೆ ಇದ್ದಿದ್ದು ಯಾಕೆ ಎಂದು ಪ್ರಶ್ನಿಸಿದರಲ್ಲದೇ ಅವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಅದಕ್ಕೆ ಮಾನ್ಯತೆ ನೀಡಬೇಕಾದ ಅಗತ್ಯವಿಲ್ಲ ಎಂದರು. ಮೂವತ್ತು ಕೋಟಿ ಎಂದಾಕ್ಷಣ ಪೇಪರಲ್ಲಿ, ಟೀವಿಲಿ ಬರ್ತೀನಿ ಎಂದು ಹೆಬ್ಬಾಳ್ಕರ ಹೀಗೆ ಮಾಡಿರಬಹುದು ಎಂದರು.