ಹಾಸನ (ಡಿ.01):  ಇದುವರೆಗೂ ಹಾಸನ ಕ್ಷೇತ್ರದಲ್ಲಿ ನಡೆದ ಯಾವ ಗ್ರಾಪಂ ಚುನಾವಣೆಯಲ್ಲೂ ಜೆಡಿಎಸ್‌ ಸೋಲು ಅನುಭವಿಸಿಲ್ಲ ಎಂದು ಸಂಸದ ಪ್ರಜ್ವಲ್‌ ರೇವಣ್ಣ ತಿಳಿಸಿದರು.

ಹಾಸನ ತಾಲೂಕಿನ ತೇಜೂರು ಗ್ರಾಮದಲ್ಲಿ ಸೋಮವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈಗಾಗಲೇ ಗ್ರಾವå ಪಂಚಾಯಿತಿ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಘೋಷಣೆ ಮಾಡಿದ್ದು, ಈಗಾಗಲೇ ಪಕ್ಷದಿಂದ ಚುನಾವಣೆ ತಯಾರಿ ಮಾಡಿಕೊಂಡಿದ್ದು, ಪಂಚಾಯಿತಿಯಲ್ಲಿ ಸಭೆ ಕರೆದು ಚರ್ಚಿಸಿ ಧೈರ್ಯ ತುಂಬುವ ಕೆಲಸ ಮಾಡಲಾಗಿದೆ. ಹಾಸನದಲ್ಲಿ ಯಾವ ಚುನಾವಣೆಯಲ್ಲೂ ಕೂಡ ನಾವು ಇಲ್ಲಿವರೆಗೂ ಸೋಲು ಅನುಭವಿಸಿಲ್ಲ. ಕೋ-ಆಪರೇಟಿವ್‌ ಚುನಾವಣೆಯಲ್ಲೆ ಒಂದು ಸ್ಥಾನ ಪಡೆಯಲು ಬಿಜೆಪಿಗೆ ಸಾಧ್ಯವಾಗಿಲ್ಲ. ನಾನು ಚುನಾವಣೆ ಮುಗಿದು ಫಲಿತಾಂಶ ಹೊರಬಂದ ಮೇಲೆ ಇದಕ್ಕೆ ತಕ್ಕ ಉತ್ತರ ಕೊಡುತ್ತೇನೆ ಎಂದರು.

ಸೋಮಶೇಖರ್‌ಗೆ ಹಿಂದುತ್ವ ಗೊತ್ತಿಲ್ಲ:  ಸಚಿವ ಸೋಮಶೇಖರ್‌ ಅವರು ನಿಂಬೆ ಹಣ್ಣು ಬಗ್ಗೆ ಮಾತನಾಡಿದ್ದು, ನಾನು ಮಾತನಾಡಿದರೆ ಅವರಿಗೆ ಮುಜುಗರವಾಗಬಹುದು ಎಂದು ಸುಮ್ಮನಾಗಿದ್ದೆ. ಯಾವುದೇ ಕಾರ್ಯಕ್ರಮದಲ್ಲಿ ಪ್ರತಿ ಗ್ರಾಮಕ್ಕೆ ಹೋದಾಗ ಮತ್ತು ದೇವಸ್ಥಾನಕ್ಕೆ ಹೋದರು ಮೊದಲು ನಿಂಬೆಹಣ್ಣು ಕೊಡುತ್ತಾರೆ ಎಂದರೇ ನಿಂಬೆ ಹಣ್ಣು ಕೊಟ್ಟವರೆಲ್ಲಾ ಮಾಟ ಮಂತ್ರ ಮಾಡಿಸಿ ಕೊಡುತ್ತಾರಾ? ರಾಜನಾಥ್‌ ಸಿಂಗ್‌ ರವರು ರೆಫಲ್‌ ಅಡಿಯಲ್ಲಿ ನಿಂಬೆಹಣ್ಣು ಇಟ್ಟು ಪೂಜೆ ಮಾಡಿದರೇ ಕೇಳಲ್ಲ. ನಾವಿಟ್ರೆ ಅದು ಮಾಟ ಮಂತ್ರನಾ? ಅವರಿಗೆ ಹಿಂದುತ್ವದ ಬಗ್ಗೆ ಇನ್ನು ತಿಳಿವಳಿಕೆ ಇಲ್ಲ. ಮೊದಲು ಹಿಂದು ಧರ್ಮದ ಬಗ್ಗೆ ತಿಳಿದುಕೊಂಡು ಮಾತನಾಡಲಿ ಎಂದು ಸಚಿವರಿಗೆ ಟಾಂಗ್‌ ನೀಡಿದರು.

ಅವರು ನಂಗೆ ಬುದ್ದಿ ಹೇಳೋದು ಬೇಡ : ಅದನ್ನ ಹೇಳೋಕೆ ರೇವಣ್ಣ ಇದ್ದಾರೆ

ನಮ್ಮ ಬಗ್ಗೆ ಮಾತನಾಡುವ ಬದಲು ಅವರ ತಂದೆ ಸ್ಥಾನವನ್ನು ಉಳಿಸಿಕೊಳ್ಳಲು ವಿಜಯೇಂದ್ರ ಹೋರಾಟ ಮಾಡಲಿ. ಹಾಸನದ ಬೇಲೂರಿನಲ್ಲಿ ಕಳೆದ ಎರಡು ದಿನಗಳ ಹಿಂದೆ ನಡೆದ ಕಾರ್ಯಕ್ರಮದಲ್ಲಿ ಉಪಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡುತ್ತ ಪರೋಕ್ಷವಾಗಿ ಜೆಡಿಎಸ್‌ ಪಕ್ಷವನ್ನು ಟೀಕಿಸಿದ್ದ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಳೆದ 50 ವರ್ಷದಿಂದ ನಮ್ಮ ಕುಟುಂಬ ರಾಜಕೀಯ ಮಾಡಿಕೊಂಡು ಬಂದಿದೆ. ನಾನು ಹತ್ತು ವರ್ಷದಿಂದ ರಾಜಕಾರಣ ಮಾಡುತ್ತಿದ್ದೇನೆ. ಇಲ್ಲಿ ಗೆಲುವು ಸೋಲು ಶಾಶ್ವತವಲ್ಲ. ದರ್ಪತನ ಬಿಟ್ಟು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡರೆ ಶಾಶ್ವತ ರಾಜಕಾರಣ ಮಾಡಬಹುದು. ಇಲ್ಲವಾದರೆ ಏನಾಗುತ್ತಾರೆ ಎಂಬುದನ್ನು ರಾಜ್ಯದಲ್ಲಿ ಬಹಳಷ್ಟುಜನರನ್ನು ನೋಡಿದ್ದೇವೆ.

ಬಿಜೆಪಿ ಜೆಡಿಎಸ್‌ ಹೊಂದಾಣಿಕೆ ಮಾಡಿಕೊಂಡಿವೆ ಎಂಬ ಸಿದ್ಧರಾಮಯ್ಯ ಹೇಳಿಕೆ ವಿಚಾರಕ್ಕೆ ಉತ್ತರಿಸಿದ ಅವರು, ನಾವು ಯಾರ ಜೊತೆಯೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಹಾಗಿದ್ದರೆ ಬಿಜೆಪಿಯವರು ಹಾಸನಕ್ಕೆ ಬಂದು ನಮ್ಮನ್ನು ಯಾಕೆ ಬೈದು ಹೋಗುತ್ತಾರೆ. ಉಪ ಚುನಾವಣೆಯಲ್ಲಿ ಎರಡು ಪಕ್ಷದವರೂ ಕೋಟ್ಯಂತರ ರು. ಖರ್ಚು ಮಾಡಿದ್ದಾರೆ. ಅವರ ಮಧ್ಯೆ ನಮ್ಮ ಬಡ ಅಭ್ಯರ್ಥಿ ಏನು ಮಾಡಲು ಆಗುತ್ತದೆ ಎಂದು ಪ್ರಶ್ನಿಸಿದರು