ಅವರು ನಂಗೆ ಬುದ್ದಿ ಹೇಳೋದು ಬೇಡ. ಅವರ್ಯಾರು ನನಗೆ ಬುದ್ದಿ ಹೇಳಲು. ಅದನ್ನ ಹೇಳಲು ರೇವಣ್ಣ ಇದ್ದಾರೆ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
ಹಾಸನ (ಡಿ.01): ಯಾವಾಗಲೂ ದೇವೇಗೌಡರ ಹೆಸರು ಹೇಳಿಕೊಂಡು ಸಂಸದರಾಗಿರುವುದು ಎಂದು ಶಾಸಕ ಪ್ರೀತಂ ಗೌಡರು ಹೇಳುತ್ತಿರುತ್ತಾರೆ. ಹೌದು ನಾನು ದೇವೇಗೌಡರ ಹೆಸರು ಹೇಳಿಕೊಂಡೇ ಎಂಪಿ ಆಗಿರೋದು. ಇದನ್ನು ಗಟ್ಟಿಧ್ವನಿಯಲ್ಲಿ ಹೇಳುತ್ತೇನೆ ಎಂದು ಸಂಸದ ಪ್ರಜ್ವಲ್ ರೇವಣ್ಣರವರು ಹಾಸನ ಕ್ಷೇತ್ರದ ಶಾಸಕರ ವಿರುದ್ಧ ಮಾತಿನ ವಾಗ್ದಾಳಿ ನಡೆಸಿದರು.
ತಾಲೂಕಿನ ತೇಜೂರು ಗ್ರಾಮದಲ್ಲಿ ಸಾಲಗಾಮೆ ರಸ್ತೆಯಿಂದ ಗ್ಯಾರಹಳ್ಳಿ, ರಾಚೇನಹಳ್ಳಿ, ತೇಜೂರು, ಆಚಗೋಡನಹಳ್ಳಿ ಮಾರ್ಗವಾಗಿ ಬೇಲೂರು ರಸ್ತೆ ಸಂಪರ್ಕಿಸುವ ಎರಡೂವರೆ ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಸೋಮವಾರ ಗುದ್ದಲಿ ಪೂಜೆ ನಡೆಸಿದ ಬಳಿಕ ಬಹಿರಂಗ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ತಂದಿರುವ ಅನುದಾನಕ್ಕೆ ಹಾಸನದ ಶಾಸಕ ಪ್ರೀತಂ ಜೆ. ಗೌಡ ಗುದ್ದಲಿ ಪೂಜೆ ಮಾಡುತ್ತಿದ್ದಾರೆ. ಎಂಪಿ ಅನುದಾನದಲ್ಲಿ ನನ್ನ ಸಹಿ ಇಲ್ಲದೆ ರಸ್ತೆ ಮಂಜೂರಾತಿ ಆಗುವುದಿಲ್ಲ ಎಂಬುದು ಅವರಿಗೆ ಗೊತ್ತಿಲ್ಲವೇ? ಅವರು ತಂದ ಅನುದಾನವನ್ನು ನಾವೇನು ಹೋಗಿ ಗುದ್ದಲಿಪೂಜೆ ಮಾಡಲ್ಲ. ನಾವು ತಂದಿರುವ ಅನುದಾನದಲ್ಲಿ ಈಗಾಗಲೇ ಒಂದು ಬದಿಯಿಂದ ಅರ್ಧ ಕೆಲಸ ಆಗಿದೆ. ಆದರೆ ಅಂತಹ ಕಾಮಗಾರಿಗೆ ಮತ್ತೊಂದು ಬದಿಯಿಂದ ಶಾಸಕ ಪ್ರೀತಂಗೌಡ ಪೂಜೆ ಮಾಡುತ್ತಿರುವ ಪರಿಸ್ಥಿತಿ ಹಾಸನ ತಾಲೂಕಿಗೆ ಬಂದಿರೋದು ನಮ್ಮ ದುರಾದೃಷ್ಟಕರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಧಿಕಾರ ದುರುಪಯೋಗಪಡಿಸಿಕೊಂಡು ಬೇರೆಯವರ ಮೇಲೆ ಕೇಸ್ ಹಾಕಿಸಿ, ಕಾರ್ಯಕರ್ತರ ನಡುವೆ ಹೊಡೆದಾಡಿಸುವ ಕೆಲಸ ಮಾಡುತ್ತಿದ್ದಾರೆ. ಅದು ಅವರನ್ನು ಸದಾಕಾಲ ಕಾಪಾಡುವುದಿಲ್ಲ. ಅವರು ನನಗೆ ಬುದ್ಧಿವಾದ ಹೇಳುವುದು ಬೇಡ. ನನಗೆ ಬುದ್ಧಿವಾದ ಹೇಳಲು 50 ವರ್ಷ ರಾಜಕಾರಣ ಮಾಡಿದ ದೇವೇಗೌಡರು, ರೇವಣ್ಣನವರು ಇದ್ದಾರೆ ಎಂದು ಪ್ರೀತಂಗೌಡರತ್ತ ಚಾಟಿ ಬೀಸಿದರು.
ಜಿಟಿಡಿ ನಮ್ಮಿಂದ ಹಣ ಪಡೆದು ಬಿಜೆಪಿ ಪರ ಕೆಲಸ ಮಾಡಿದರು: ಹೊಸ ಬಾಂಬ್ ...
ಪ್ರೀತಂಗೌಡರು ತಂದಿರುವ ಅನುದಾನವೆಷ್ಟು?: ಯಡಿಯೂರಪ್ಪ ಅವರ ಮಗ ನನ್ನ ಜೊತೆ ಚೆನ್ನಾಗಿದ್ದಾರೆ ಎಂದು ಶಾಸಕರು ಕೊಚ್ಚಿಕೊಳ್ಳುತ್ತಾರೆ. ಆದರೆ ಹಾಸನ ಕ್ಷೇತ್ರಕ್ಕೆ ಅವರು ಎಷ್ಟುಅನುದಾನ ತಂದಿದ್ದಾರೆ. ಅವರ ಬಿಜೆಪಿ ಸರ್ಕಾರ ಲೂಟಿ ಹೊಡೆಯುತ್ತಿದೆ. ನಾವು ಸುಮ್ಮನೆ ಕುಳಿತಿದ್ದೇವೆ ಎಂದರೆ ನಮಗೆ ಮತನಾಡಲು ಬರುವುದಿಲ್ಲ ಅಂತಲ್ಲ. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಹಾಸನ ತಾಲೂಕಿನಲ್ಲಿ ಹೊಸದಾಗಿ ಶಾಸಕರಾಗಿದ್ದಾರೆ. ಅವರಿಗೆ ಸ್ವಲ್ಪ ತಿಳಿವಳಿಕೆ ಕಡಿಮೆ ಇದೆ. ಚುನಾವಣೆ ಅಂದ್ರೆ ಏನು ಎಂದು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತೋರಿಸುತ್ತೇವೆ. ಶಿರಾ ಚುನಾವಣೆ ಸಂಬಂಧ ಮಂತ್ರಕ್ಕೆ ಮಾವಿನಕಾಯಿ ಉದುರಲ್ಲ ಎಂಬ ಪ್ರೀತಂಗೌಡ ಹೇಳಿಕೆಗೆ ಮಾತನಾಡಿದ ಅವರು, ನಾವು ಶಿರಾಗೆ ಮಾವಿನಕಾಯಿ ಉದುರಿಸಲು ಹೋಗಿದ್ದೆ ಅಂತಾ ಹೇಳಿದ್ನಾ. ಶಿರಾದಲ್ಲಿ ದುಡ್ಡು ಹಂಚಿಕೆ ಮಾಡಿ ಮತ ಹಾಕಿಸಿಕೊಂಡಿದ್ದಾರೆ. ಯಡಿಯೂರಪ್ಪ ಕೆಜೆಪಿ ಮಾಡಿ 10 ಸೀಟು ತಗೊಂಡ್ರು. ಹಾಗಾದ್ರೆ ಯಡಿಯೂರಪ್ಪ ಸೋತಿಲ್ವಾ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಮತ್ತೊಮ್ಮೆ ವಿಧಾನಸೌಧದಲ್ಲಿ ಧ್ವಜ ಹಾರಿಸುವ ಕೆಲಸ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೆ ವೇಳೆ ಜಿಪಂ ಉಪಾಧ್ಯಕ್ಷ ಹೆಚ್.ಪಿ. ಸ್ವರೂಪ್, ಗ್ರಾಮಸ್ಥರು ಉಪಸ್ಥಿತರಿದ್ದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 1, 2020, 1:17 PM IST