ಮಂಗಳೂರು(ಆ.30): ಇನ್ನು ಮುಂದೆ ದ.ಕ.ಜಿಲ್ಲೆಯಲ್ಲಿ ನಡೆಯುವ ಸಭೆ, ಸಮಾರಂಭ ಎಂದು ನನ್ನನ್ನು ಕರೆಯಬೇಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ಹೇಳಿದರು.

ಮಂಗಳೂರಿನಲ್ಲಿ ತವರು ಜಿಲ್ಲೆಯ ಪಕ್ಷದ ಕಾರ್ಯಕರ್ತರ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿ, ರಾಜ್ಯಾಧ್ಯಕ್ಷನ ಹೊಣೆಗಾರಿಕೆ ಇರುವುದರಿಂದ ಹಿಂದಿನಂತೆ ನೇಮ, ಕೋಲ, ಕಂಬಳ ಎಂದು ಎಲ್ಲ ಕಡೆ ಕರೆದಲ್ಲಿಗೆ ಬರಲು ಅಸಾಧ್ಯವಾಗಬಹುದು. ಇದಕ್ಕೆ ಕಾರ್ಯಕರ್ತರು ಬೇಸರಪಟ್ಟುಕೊಳ್ಳಬಾರದು. ರಾಜ್ಯಾದ್ಯಂತ ಪಕ್ಷವನ್ನು ಬೇರುಮಟ್ಟದಿಂದಲೇ ಗಟ್ಟಿಗೊಳಿಸಿ ದ.ಕ.ಜಿಲ್ಲೆಯವರ ಸಂಘಟನಾ ಸಮರ್ಥ್ಯ ಏನೆಂಬುದನ್ನು ತೋರಿಸಿಕೊಡುತ್ತೇನೆ ಎಂದರು.

ಜನರ ಸಹಕಾರ ಮರೆಯಲ್ಲ:

ಇಲ್ಲಿನ ಕಾರ್ಯಕರ್ತರೇ ನನ್ನ ದೇವರು. ಸಾಮಾನ್ಯ ಕಾರ್ಯಕರ್ತನಾದ ನನ್ನನ್ನು ಇಷ್ಟುಎತ್ತರಕ್ಕೆ ಬೆಳೆಸಿದ್ದಾರೆ. ಆದರೂ ನಾನೊಬ್ಬ ಆರ್‌ಎಸ್‌ಎಸ್‌ ಸಾಮಾನ್ಯ ಕಾರ್ಯಕರ್ತ. ತವರು ಜಿಲ್ಲೆಯ ಜನತೆಯ ಸಹಕಾರವನ್ನು ಎಂದಿಗೂ ಮರೆಯುವುದಿಲ್ಲ. ಇಲ್ಲಿನ ಜನತೆಯ ಆಶಯಕ್ಕೆ ಪೂರಕವಾಗಿ ಸ್ಪಂದಿಸುತ್ತೇನೆ ಎಂದು ಅವರು ವಾಗ್ದಾನ ನೀಡಿದರು.

ಅಂಗಾರ ಅವರು ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ ಅವರು ಅಹಂಕಾರ ತೋರಿಲ್ಲ. ಗುಂಪುಗಾರಿಕೆ ಮಾಡಿಲ್ಲ, ಯಾರ ಮನೆ ಬಾಗಿಲಿಗೂ ಸೀಟಿಗಾಗಿ ಅಲೆದಾಡಿಲ್ಲ. ನಾನು ಕೂಡಾ ರಾಜ್ಯಾಧ್ಯಕ್ಷ ಸ್ಥಾನವನ್ನು ಬಯಸಿಲ್ಲ. ಶೈಕ್ಷಣಿಕವಾಗಿ ನಾನು ಯಾವುದೇ ವಿ.ವಿ. ಪದವಿಯನ್ನು ಪಡೆಯದಿದ್ದರೂ, ಸಂಘದ ಕಾರ್ಯದಲ್ಲಿ ನನ್ನನ್ನು ತೊಡಗಿಸಿಕೊಂಡು ಸಮಾಜದ ಅಧ್ಯಯನಕ್ಕಾಗಿ ನನಗೆ ನೀಡಿದ ಡಾಕ್ಟರೇಟ್‌ ಪದವಿ ಇದು ಎಂದು ತಿಳಿದಿದ್ದೇನೆ ಎಂದರು.

ಬಿಜೆಪಿ ವಿಭಾಗ ಸಹ ಪ್ರಭಾರಿ ಪ್ರತಾಪ್‌ ಸಿಂಹ ನಾಯಕ್‌, ಶಾಸಕ ಅಂಗಾರ, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌, ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ನಳಿನ್‌ ಕುಮಾರ್‌ ಅವರನ್ನು ಅಭಿನಂದಿಸಿ ಮಾತನಾಡಿದರು. ಅಭಿನಂದನೆ ಸ್ವೀಕರಿಸುವ ಮೊದಲು ತನ್ನ ಸಂಘಟನಾ ಗುರು ಬಿ.ಕೆ. ರಮೇಶ್‌ ಅವರ ಕಾಲಿಗೆ ನಮಸ್ಕರಿಸಿದ ನಳಿನ್‌ ಕುಮಾರ್‌, ಬಳಿಕ ಅವರನ್ನು ವೇದಿಕೆಯಲ್ಲಿ ಅಭಿನಂದಿಸಿದರು.

ಮಂಗಳೂರು: ರಾಜಕೀಯ ಪ್ರವೇಶದ ಗುಟ್ಟು ಬಿಚ್ಚಿಟ್ರು ನಳಿನ್‌ ..!

ಶಾಸಕರಾದ ವೇದವ್ಯಾಸ ಕಾಮತ್‌, ಡಾ. ಭರತ್‌ ಶೆಟ್ಟಿ, ಉಮಾನಾಥ ಕೋಟ್ಯಾನ್‌, ಹಾಲಾಡಿ ಶ್ರೀನಿವಾಸ ಪೂಜಾರಿ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಾಜಿ ಶಾಸಕರಾದ ಯೋಗೀಶ್‌ ಭಟ್‌, ಕೃಷ್ಣ ಪಾಲೆಮಾರ್‌, ಪ್ರಭಾಕರ ಬಂಗೇರ, ಮಲ್ಲಿಕಾ ಪ್ರಸಾದ್‌, ಜಯರಾಮ ಶೆಟ್ಟಿ, ಪದ್ಮನಾಭ ಕೊಟ್ಟಾರಿ, ಮುಖಂಡರಾದ ಸುದರ್ಶನ್‌, ಉದಯ ಕುಮಾರ್‌ ಶೆಟ್ಟಿ, ಕಿಶೋರ್‌ ರೈ, ಕ್ಯಾ. ಬೃಜೇಶ್‌ ಚೌಟ ಇದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಮಾರಂಭದಲ್ಲಿ ಹೂ ಹಾರಕ್ಕೆ ವ್ಯಯಿಸುವ ಮೊತ್ತವನ್ನು ನೆರೆ ಸಂತ್ರಸ್ತರ ಹುಂಡಿಗೆ ಹಾಕುವಂತೆ ನಳಿನ್‌ ಕುಮಾರ್‌ ಕಟೀಲ್‌ ಕಾರ್ಯಕರ್ತರಲ್ಲಿ ವಿನಂತಿ ಮಾಡಿದರು.