ಮೈಸೂರು(ಜೂ.28): ನಗರದ ತುಳಸಿದಾಸಪ್ಪ ಆಸ್ಪತ್ರೆ ಆವರಣದಲ್ಲಿ ಕೇಂದ್ರ ಸರ್ಕಾರದ ಅನುದಾನದಲ್ಲಿ ನಿರ್ಮಿಸುತ್ತಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಕೋವಿಡ್‌ ಚಿಕಿತ್ಸೆಗೆ ಬಳಸಿಕೊಳ್ಳಲಾಗುವುದು ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.

ಶನಿವಾರ ಸ್ಥಳ ಪರಿಶೀಲಿಸಿ ಮಾತನಾಡಿದ ಅವರು, ತುಳಸಿದಾಸ ಆಸ್ಪತ್ರೆ ಆವರಣದಲ್ಲಿ ಕೇಂದ್ರ ಸರ್ಕಾರದ ಅನುದಾನದಡಿ ನಿರ್ಮಿಸುತ್ತಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಾಮಗಾರಿ ಪೂರ್ಣಗೊಳ್ಳುತ್ತಿರುವುದರಿಂದ ಪರಿಶೀಲನೆಗೆ ಬಂದಿದ್ದೇನೆ. ನಿನ್ನೆ ದಿಶಾ ಕಮಿಟಿ ಸಭೆಯಲ್ಲಿ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಚರ್ಚೆಯಾಗಿದೆ. 2017ರಲ್ಲಿ ನರೇಂದ್ರ ಮೋದಿ ಸರ್ಕಾರವು 20 ಕೋಟಿ ವೆಚ್ಚದಲ್ಲಿ ಮೈಸೂರಿನಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮತ್ತು, ಹುಣಸೂರಿಗೆ 18 ಕೋಟಿ ವೆಚ್ಚದ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ನೀಡಿತು. ಈಗ ಕಾಮಗಾರಿ ಉತ್ತಮವಾಗಿ ನಡೆದಿದೆ ಎಂದರು.

ಹೋಂ ಕ್ವಾರಂಟೈನ್‌; ಊಟಕ್ಕೂ ಪರ​ದಾಟ

ಈ ನಡುವೆ ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಆಸ್ಪತ್ರೆಯ ಜೊತೆಗೆ ಬೆಡ್‌ ಮತ್ತು ವೆಂಟಿಲೇಟರ್‌ ಸಮಸ್ಯೆ ಇದೆ. ಆದ್ದರಿಂದ ಈ ಆಸ್ಪತ್ರೆಯನ್ನು ಎರಡನೇ ಕೋವಿಡ್‌ ಆಸ್ಪತ್ರೆಯಾಗಿ ಬಳಸಿಕೊಳ್ಳಲಾಗುವುದು. ಇಲ್ಲಿ 100 ಬೆಡ್‌ ಇದೆ ಎಂದರು.

ಜಿಲ್ಲಾಸ್ಪತ್ರೆಯನ್ನು ಉದ್ಘಾಟಿಸುವಾಗ ಕೋವಿಡ್‌ ಬರುತ್ತದೆ ಎಂದು ತಿಳಿದಿರಲಿಲ್ಲ. ಅದನ್ನು ಉದ್ಘಾಟಿಸಿದ್ದರ ಫಲವಾಗಿ ಕೋವಿಡ್‌ ಬಳಕೆಯಾಯಿತು. ಅಂತೆಯೇ ಇಲ್ಲಿನ ಹಳೇಯ ಆಸ್ಪತ್ರೆ ಬಳಕೆಯಾಗುತ್ತಿಲ್ಲ. ಆದ್ದರಿಂದ ಇಲ್ಲಿಯೇ ಕೊರೋನಾ ಪೀಡಿತರಿಗೆ ಚಿಕಿತ್ಸೆ ಕೊಡಿಸುವುದು ಒಳಿತು. ಸೋಂಕಿತರನ್ನು ಬೇರೆ ದೃಷ್ಟಿಯಿಂದ ನೋಡಬಾರದು. ವೈರಸ್‌ ಗಾಳಿಗೆ ಹಾರಿಕೊಂಡು ಬರುವುದಿಲ್ಲ. ದೆಹಲಿ, ಮುಂಬೈ ಮತ್ತು ಬೆಂಗಳೂರಿನಂತ ನಗರದಲ್ಲಿಯೂ ಹೃದಯ ಭಾಗದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು. ಈ ವೇಳೆ ಡಿಎಚ್‌ಒ ಡಾ. ವೆಂಕಟೇಶ್‌ ಮತ್ತಿತರ ಅಧಿಕಾರಿಗಳು ಇದ್ದರು.