ದ.ಕ. ಜಿಲ್ಲೆಯಲ್ಲಿ ಬುಧವಾರ 2ನೇ ದಿನವೂ ಕೊರೋನಾ ಸೋಂಕು ಪತ್ತೆಯಾಗಿದೆ. ಇದೇ ವೇಳೆ ಸೋಂಕಿನಿಂದ ಬಳಲುತ್ತಿದ್ದ ಬೋಳೂರಿನ 58ರ ಮಹಿಳೆ ಸಾವಿಗೀಡಾಗಿದ್ದಾರೆ.

ಮಂಗಳೂರು(ಮೇ 14): ದ.ಕ. ಜಿಲ್ಲೆಯಲ್ಲಿ ಬುಧವಾರ 2ನೇ ದಿನವೂ ಕೊರೋನಾ ಸೋಂಕು ಪತ್ತೆಯಾಗಿದೆ. ಇದೇ ವೇಳೆ ಸೋಂಕಿನಿಂದ ಬಳಲುತ್ತಿದ್ದ ಬೋಳೂರಿನ 58ರ ಮಹಿಳೆ ಸಾವಿಗೀಡಾಗಿದ್ದಾರೆ.

ಉಳ್ಳಾಲ ಸೋಮೇಶ್ವರದ ಪಿಲಾರಿನ 38ರ ಹರೆಯದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಈಕೆ ತನ್ನ ಪುತ್ರಿಗೆ ಪಡೀಲಿನ ಫಸ್ಟ್‌ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಪುತ್ರಿಗೆ ನೆಗೆಟಿವ್‌ ಬಂದಿದ್ದು, ತಾಯಿಗೆ ಪಾಸಿಟಿವ್‌ ಬಂದಿದೆ.

ಕೊರೋನಾಕ್ಕೆ ಬೆಚ್ಚಿ ಬಿದ್ದ ಜನ ಈಗ ಡೆಂಘೀ ಜ್ವರಕ್ಕೆ ತತ್ತರ..!

ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಪ್ರಕರಣ 34ಕ್ಕೆ ಏರಿಕೆಯಾಗಿದೆ. ಮೃತಪಟ್ಟವರೆಲ್ಲ ಮಹಿಳೆಯರೇ ಆಗಿದ್ದಾರೆ. ಸಕ್ರಿಯ 17 ಪ್ರಕರಣಗಳಿದ್ದು, 14 ಮಂದಿ ಗುಣಮುಖರಾಗಿದ್ದಾರೆ. ಮೃತರ ಸಂಖ್ಯೆ 4ಕ್ಕೆ ಏರಿದೆ. 16 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಫಸ್ಟ್‌ ನ್ಯೂರೋ ಆಸ್ಪತ್ರೆ ಸಂಪರ್ಕದಿಂದ ಸೋಂಕಿತರಾದವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.

ಫಸ್ಟ್‌ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾಜ್‌ರ್‍ ಆಗಿದ್ದ ಬೋಳೂರಿನ 58 ವರ್ಷದ ಮಹಿಳೆಗೆ ಏ.30ರಂದು ಕೊರೋನಾ ಪಾಸಿಟಿವ್‌ ಕಂಡುಬಂದಿತ್ತು. ತಕ್ಷಣ ಅವರನ್ನು ಕೋವಿಡ್‌ ಆಸ್ಪತ್ರೆಯಾದ ವೆನ್ಲಾಕ್‌ಗೆ ದಾಖಲಿಸಲಾಗಿತ್ತು. ಆದರೆ ಮೆದುಳಿನ ಸಮಸ್ಯೆ ಹಾಗೂ ಕ್ಷಯ ರೋಗದಿಂದ ಅವರು ಬಳಲುತ್ತಿದ್ದು, ದೇಹ ಸ್ಥಿತಿ ದಿನೇ ದಿನೇ ಬಿಗಡಾಯಿಸಿತ್ತು. ವೆನ್ಲಾಕ್‌ ಆಸ್ಪತ್ರೆಯ ಐಸಿಯುವಿನಲ್ಲಿ ವೆಂಟಿಲೇಟರ್‌ ಅಳವಡಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದ ಒಂದು ವಾರದಿಂದ ಇದೇ ರೀತಿಯಲ್ಲಿ ಚಿಕಿತ್ಸೆ ಮುಂದುವರಿದಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಬುಧವಾರ ಮೃತಪಟ್ಟಿದ್ದಾರೆ. ಕೋವಿಡ್‌ಗೆ ಈಗಾಗಲೇ ಬಂಟ್ವಾಳ ಕಸಬಾ ಗ್ರಾಮದ ಮೂರು ಮಂದಿ ಈಗಾಗಲೇ ಬಲಿಯಾಗಿದ್ದಾರೆ.

ಕೊರೋನಾ ಮಧ್ಯೆ ಬಳ್ಳಾರಿ ಜಿಲ್ಲೆಯಲ್ಲಿ ಡೆಂಘೀ ಜ್ವರ ತಾಂಡವ: ಆತಂಕದಲ್ಲಿ ಜನತೆ..!

ಕೊರೋನಾ ಸೋಂಕಿನಿಂದ ಕೋವಿಡ್‌ ಆಸ್ಪತ್ರೆಯಲ್ಲಿರುವ ಕುಲಶೇಖರದ 80ರ ವೃದ್ಧೆಯ ಆರೋಗ್ಯ ಸ್ಥಿತಿ ಕೂಡ ಗಂಭೀರವಾಗಿದ್ದು, ಅವರಿಗೂ ವೆಂಟಿಲೇಟರ್‌ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸೋಮೇಶ್ವರ ಮಹಿಳೆಗೆ ಕೊರೋನಾ

ನಗರದ ಪಡೀಲ್‌ನ ಫಸ್ಟ್‌ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಉಳ್ಳಾಲ ಸಮೀಪದ ಸೋಮೇಶ್ವರ ಪಿಲಾರಿನ ದಾರಂದಬಾಗಿಲು ನಿವಾಸಿ 38 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಈಕೆಯ ಪುತ್ರಿ ಕೈಕಾಲಿನ ಸ್ವಾಧೀನತೆ ಕಳಕೊಂಡ ಕಾರಣ ಆಕೆಯನ್ನು ಚಿಕಿತ್ಸೆಗಾಗಿ ಫಸ್ಟ್‌ ನ್ಯೂರೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಏ.10ರಿಂದ 17ರ ವರೆಗೆ ಈಕೆಯ ಪುತ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆಗ ಅವರ ಪಕ್ಕದ ಬೆಡ್‌ನಲ್ಲಿದ್ದ ಕುಲಶೇಖರದ 80 ವರ್ಷದ ವೃದ್ಧೆಯ ಸಂಪರ್ಕದಿಂದ ಪುತ್ರಿಯ ತಾಯಿಗೆ ಸೋಂಕು ತಗಲಿದೆ ಎಂದು ಜಿಲ್ಲಾ​ಧಿಕಾರಿ ತಿಳಿಸಿದ್ದಾರೆ. ಇದೀಗ ತಾಯಿಯನ್ನು ಕೋವಿಡ್‌ ಆಸ್ಪತ್ರೆಗೆ ಸೇರಿಸಲಾಗಿದೆ. ಪುತ್ರಿ ಹಾಗೂ ಕುಟುಂಬದ ಐವರ ಗಂಟಲು ದ್ರವ ಸ್ಯಾಂಪಲ್‌ನ್ನು ಪಡೆಯಲಾಗಿದೆ. ಪಿಲಾರು ಪರಿಸರವನ್ನು ಸೀಲ್‌ಡೌನ್‌ಗೆ ಒಳಪಡಿಸಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಪುತ್ರಿಯೊಂದಿಗೆ ತಾಯಿ ಮತ್ತು ಸಹೋದರನನ್ನು ಹೋಂಕ್ವಾರಂಟೈನ್‌ ಮಾಡಲಾಗಿದೆ.

ದಾರಂದ ಬಾಗಿಲು ಸೀಲ್‌ಡೌನ್‌: ಕೊರೋನಾ ಸೋಂಕು ಧೃಡಪಡುತ್ತಿದ್ದಂತೆ ಸೋಮೇಶ್ವರ ಪುರಸಭಾ ಮುಖ್ಯಾಧಿಕಾರಿ ವಾಣಿ ಆಳ್ವ ಮಾರ್ಗದರ್ಶನದಲ್ಲಿ ಪುರಸಭಾ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ದಾರಂದಬಾಗಿಲು ವ್ಯಾಪ್ತಿಯನ್ಬು ಕಂಟೋನ್ಮೆಂಟ್‌ ವಲಯ ಎಂದು ಘೋಷಿಸಿದ್ದು ಸೋಂಕಿತ ಮಹಿಳೆಯ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ. ಉಳ್ಳಾಲ ಪೊಲೀಸ್‌ ಠಾಣಾ ಇಸ್ಸ್‌ಪೆಕ್ಟರ್‌ ಅನಿಲ್‌ ಕುಮಾರ್‌ ಮಾರ್ಗದರ್ಶನದಲ್ಲಿ ಪೊಲೀಸ್‌ ಬಂದೋಬಸ್‌್ತ ನಡೆಸಲಾಯಿತು. ಶಾಸಕ ಯು.ಟಿ. ಖಾದರ್‌ ಭೇಟಿ ನೀಡಿ ಸೀಲ್‌ಡೌನ್‌ ಆಗಿರುವ ಪ್ರದೇಶದ ಜನರಿಗೆ ಆಹಾರ ದಿನಸಿ ವಸ್ತುಗಳ ವ್ಯವಸ್ಥೆಗೆ ತಂಡ ರಚನೆಗೆ ಮಾರ್ಗದರ್ಶನ ನೀಡಿದರು. ಸೋಂಕಿತ ಮಹಿಳೆ ತಾಯಿ, ಇಬ್ಬರು ಮಕ್ಕಳು, ಇಬ್ಬರು ಸಹೋದರರು ಸೇರಿದಂತೆ ಒಟ್ಟು ಆರು ಮಂದಿಯನ್ನು ನಗರದ ಇಎಸ್‌ ಐ ಆಸ್ಪತ್ರೆಗೆ ಕ್ವಾರಂಟೈನ್‌ಗೆ ಕಳುಹಿಸಲಾಯಿತು.

ದ.ಕ. 13-05-2020

ಒಟ್ಟು ಸೋಂಕಿತ ಪ್ರಕರಣ- 34

ಗುಣಮುಖರಾದವರು- 14

ಚಿಕಿತ್ಸೆ ಪಡೆಯುತ್ತಿರುವವರು- 16

ಮೃತಪಟ್ಟವರು- 04