ಕೆ.ಎಂ. ಮಂಜುನಾಥ್‌

ಬಳ್ಳಾರಿ(ಏ.24): ಕೊರೋನಾ ವೈರಸ್‌ ಭೀತಿಯ ನಡುವೆ ಜಿಲ್ಲೆಯಲ್ಲಿ ಡೆಂಘೀ ಜೀವದಾತಂಕ ಶುರುವಾಗಿದೆ ಕೊರೋನಾ ವೈರಾಣುಗಿಂತಲೂ ವೇಗವಾಗಿ ಜಿಲ್ಲೆಯಲ್ಲಿ ಡೆಂಘೀ ಜ್ವರ ಹಬ್ಬುತ್ತಿದ್ದು, ಡೆಂಘಿ ಜ್ವರದಿಂದ ಇಬ್ಬರು ಮೃತಪಟ್ಟಿರುವುದು ಮತ್ತಷ್ಟು ಆತಂಕಕ್ಕೀಡು ಮಾಡಿದೆ.

ಒಂದಷ್ಟು ಜ್ವರ ಬಂದರೂ ಡೆಂಘಿ ಅಥವಾ ಕೊರೋನಾ ಇರಬಹುದೇ? ಎಂಬ ಶಂಕೆ ಮೂಡಲಾರಂಭಿಸಿದ್ದು ವೈದ್ಯಕೀಯ ಚಿಕಿತ್ಸೆಯ ನೆರವು ಸಿಗದೆ ಗ್ರಾಮೀಣರು ಒದ್ದಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಡೆಂಘಿ ಪ್ರಕರಣಗಳು ಹೊಸದಲ್ಲ. ಆದರೆ, ಈ ಬಾರಿ ಜಿಲ್ಲೆಯಲ್ಲಿ ಏರಿಕೆಯಾಗುತ್ತಿರುವ ಪ್ರಕರಣಗಳು ದಂಗು ಬಡಿಸಿವೆ. ಬೇಸಿಗೆಯಲ್ಲಿ ಡೆಂಘಿ ಜ್ವರ ಕಾಣಿಸಿಕೊಳ್ಳುತ್ತಿರಲಿಲ್ಲ. ಅಲ್ಲಲ್ಲಿ ಕೆಲವು ಪ್ರಕರಣಗಳು ಬೆಳಕಿಗೆ ಬಂದರೂ ಏರಿಕೆಯ ಪ್ರಮಾಣ ಆತಂಕದ ಮಟ್ಟತಲುಪುತ್ತಿರಲಿಲ್ಲ. ಆದರೆ, ಈ ಬಾರಿ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಆವರಿಸಿಕೊಂಡಿರುವುದು ಕಂಡು ಬರುತ್ತಿದೆ.

ಇಡೀ ಜಗತ್ತಿಗೆ ಕೊರೋನಾ ಆತಂಕವಾದ್ರೆ ಬಳ್ಳಾರಿಗೆ ಡೆಂಗ್ಯೂ ಕಾಟ: ಆತಂಕದಲ್ಲಿ ಜನತೆ

ಜಿಲ್ಲೆಯಲ್ಲಿ 110 ಪ್ರಕರಣಗಳು ಬೆಳಕಿಗೆ...

ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ ಜಿಲ್ಲೆಯಲ್ಲಿ 110 ಪ್ರಕರಣಗಳು ಇವೆ. ಬಳ್ಳಾರಿ ತಾಲೂಕಿನಲ್ಲಿ 63, ಸಂಡೂರು 15, ಕೂಡ್ಲಿಗಿ 10, ಹರಪನಹಳ್ಳಿ 12, ಹೊಸಪೇಟೆ 6, ಹಗರಿಬೊಮ್ಮನಹಳ್ಳಿ, ಸಿರುಗುಪ್ಪ, ಕಂಪ್ಲಿ, ಕುರುಗೋಡು ತಲಾ ಒಂದು ಪ್ರಕರಣಗಳು ಕಂಡು ಬಂದಿವೆ. ಜಿಲ್ಲೆಯ ಸಂಡೂರು ತಾಲೂಕಿನ ಬಂಡ್ರಿ ಗ್ರಾಮದಲ್ಲಿ ಇಬ್ಬರು ಶಂಕಿತ ಡೆಂಘೀ ಜ್ವರದಿಂದ ಮೃತಪಟ್ಟಿರುವುದರಿಂದ ಸುತ್ತಮುತ್ತಲ ಪ್ರದೇಶಗಳಲ್ಲಿ ಮನೆ ಮನೆ ಜ್ವರ ಪರೀಕ್ಷೆ ಕಾರ್ಯ ಚುರುಕಿನಿಂದ ನಡೆದಿದೆ. ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಹಿಂದೆ ಆಯುಷ್‌ ವೈದ್ಯರಿದ್ದರು. ಡೆಂಘೀ ಜ್ವರ ಏರಿಕೆಯಾಗಿರುವುದರಿಂದ ಎಂಬಿಬಿಎಸ್‌ ವೈದ್ಯರನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ. ಡೆಂಘೀ ಹೆಚ್ಚಿನ ಪ್ರಮಾಣದಲ್ಲಿ ಬೆಳಕಿಗೆ ಬಂದಿರುವ ತಾಲೂಕುಗಳಲ್ಲಿ ಲಾರ್ವಾ ಸರ್ವೆ ನಡೆಸಲಾಗಿದೆ. ಕೆರೆಗಳಿಗೆ ಮೀನು ಬಿಡಲಾಗುತ್ತಿದ್ದು, ಸೊಳ್ಳೆಮರಿಗಳು ಬೆಳವಣಿಗೆಯಾಗದಂತೆ ನೋಡಿಕೊಳ್ಳಲು ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಿದೆ.

ಖಾಸಗಿ ಆಸ್ಪತ್ರೆಗಳು ಭರ್ತಿ...

ಜಿಲ್ಲೆಯಲ್ಲಿ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಭರ್ತಿಯಾಗುತ್ತಿವೆ. ಜಿಲ್ಲೆಯಲ್ಲಿ ಕಂಡು ಬಂದಿರುವ 110 ಸೋಂಕಿತ ಪ್ರಕರಣಗಳಲ್ಲಿ ಪುಟ್ಟ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿವೆ. ಇದು ಪೋಷಕರಲ್ಲಿ ಭೀತಿ ಮೂಡಿಸಿದೆ. ಶುದ್ಧ ನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆಯಿಂದ ಡೆಂಘಿಘೀ ಕಾಣಿಸಿಕೊಳ್ಳುತ್ತಿರುವುದರಿಂದ ಮನೆಗಳ ಸುತ್ತಮುತ್ತ ನೀರು ನಿಲ್ಲದಂತೆ ಕ್ರಮ ಕೈಗೊಳ್ಳುವುದರಿಂದ ಡೆಂಘೀ ನಿಯಂತ್ರಣ ಮಾಡಲು ಸಾಧ್ಯವಿದೆ ಎನ್ನುತ್ತಾರೆ ಜಿಲ್ಲಾ ವೈದ್ಯಾಧಿಕಾರಿಗಳು.

ಡೆಂಘೀ ಜ್ವರ ನಿಯಂತ್ರಣಕ್ಕೆ ಲಾರ್ವಾ ಸರ್ವೆ ಮಾಡಿಸುತ್ತಿದ್ದೇವೆ. ಹೆಚ್ಚು ಪ್ರಕರಣಗಳು ಕಂಡು ಬಂದಿರುವ ಕಡೆ ವಿಶೇಷ ನಿಗಾ ವಹಿಸಿ ಕಾರ್ಯೋನ್ಮುಖರಾಗಿದ್ದೇವೆ. ನೀರು ನಿಲ್ಲದಂತೆ ಜನರು ನೋಡಿಕೊಳ್ಳಬೇಕು. ಆಗ ಮಾತ್ರ ಇದರ ನಿಯಂತ್ರಣ ಸಾಧ್ಯ ಎಂದು ಬಳ್ಳಾರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಲ್‌. ಜನಾರ್ದನ ಹೇಳಿದ್ದಾರೆ.