*  ಡಾಕ್ಟರಾಗಿ ಬರ್ತೀ ಅಂದ್ಕೊಂಡಿ​ದ್ನಲ್ಲೋ*  ನವೀನ್‌ ತಾಯಿ ಜಯ​ಲಕ್ಷ್ಮೀ ಕಣ್ಣೀರು*  ನವೀನ್‌ ತಂದೆಗೆ ಮೋದಿ ಸಾಂತ್ವನ 

ಬಸವರಾಜ ಸರೂರ

ರಾಣಿಬೆನ್ನೂರು(ಮಾ.02):  ಡಾಕ್ಟರಾಗಿ ಬರ್ತೀ ಅಂದ್ಕೊಂಡಿದ್ನಲ್ಲೋ... ಶಿವ​ರಾ​ತ್ರಿ​ಯಂದೇ ಶಿವನ ಪಾದ ಸೇರಿ​ದೆಯಾ ಮಗ​ನೇ...’ ಮಂಗಳವಾರ ಮಧ್ಯಾಹ್ನ ಉಕ್ರೇನ್‌ನಲ್ಲಿ(Ukraine) ರಷ್ಯಾ(Russia) ಸೈನಿಕರ ದಾಳಿಗೆ ತುತ್ತಾಗಿ ಅಸುನೀಗಿದ ನವೀನ್‌ ಶೇಖರಪ್ಪ ಗ್ಯಾನಗೌಡ್ರ(Naveen Shekharappa Gyanagoudar) ಅವರ ತಾಯಿ ಜಯಲಕ್ಷ್ಮೀ ಆಗಸ​ದತ್ತ ಮುಖಮಾಡಿ ಎರಡೂ ಕೈಯೆತ್ತಿ ರೋದಿಸುತ್ತಿದ್ದರೆ ಅಲ್ಲಿ ಸೇರಿದ್ದ ಬಂಧುಗಳು, ಆತ್ಮೀ​ಯರ ಕಣ್ಣಾ​ಲಿ​ಗಳೂ ಒದ್ದೆ​ಯಾ​ಗಿ​ದ್ದ​ವು. ಬೆಳೆದ ಮಗ​ನನ್ನು ಕಳೆ​ದು​ಕೊಂಡ ಹೆತ್ತೊಡಲ ಆಕ್ರಂದನಕ್ಕೆ ಇಡೀ ಊರೇ ಕಣ್ಣೀ​ರಾ​ಗಿ​ತ್ತು.

ವೈದ್ಯ ಶಿಕ್ಷಣ(Medical Education) ಪಡೆದು ವೈದ್ಯನಾಗಿ(Doctor) ಸಾವಿರಾರು ಜನರ ಜೀವ ಉಳಿಸುವ ಹಂಬಲದೊಂದಿಗೆ ದೂರದ ಉಕ್ರೇನ್‌ಗೆ ತೆರಳಿದ್ದ. ಯಾಕೋ ಅಷ್ಟು ದೂರ ಹೋಗ್ತೀ, ಇಲ್ಲೇ ಏನಾದರೂ ಓದಿಕೋ ಎಂದು ಹೇಳಿದ್ದೆ. ಇಲ್ಲಬ್ಬೆ, ನಾನು ಡಾಕ್ಟರಾಗಬೇಕು. ಜನರ ಪ್ರಾಣ ಉಳಿಸ್ಬೇಕು. ಸೇವೆ ಮಾಡ್ಬೇಕು ಎಂದಿದ್ದ. ಓದಿ​ನಲ್ಲಿ ಜಾಣ​ನಿದ್ದ ಮಗ ಡಾಕ್ಟರ್‌ ಆಗಿ ಮನೆಗೆ ಬರ್ತಾನೆ ಎಂದು ಅಂದುಕೊಂಡಿದ್ದೆ. ಈಗ ಎಲ್ಲರನ್ನೂ ಬಿಟ್ಟು ಒಬ್ಬನೇ ಹೋಗಿಬಿಟ್ಟಿದ್ದಾ​ನೆ. ನಿನ್ನ ಉಳಿಸಿಕೊಳ್ಳಲು ಯಾರಿಂದಲೂ ಸಾಧ್ಯವಾಗಲಿಲ್ಲ. ನಿನ್ನ ಮೃತದೇಹವಾದ್ರೂ ನೋಡಲು ಸಿಗುತ್ತೋ, ಇಲ್ವೋ ಗೊತ್ತಿಲ್ಲ ಎಂದು ಗೋಳಾ​ಡು​ತ್ತಿ​ದ್ದರು ಜಯಲಕ್ಷ್ಮೀ .

Russia Ukraine War: ತಿಂಡಿ ತರಲು ಹೋದ ನವೀನ್‌ ವಾಪಸ್‌ ಬರಲೇ ಇಲ್ಲ!

ಸೋದ​ರ​ನಿಗೆ ಆಘಾತ: 

ತಮ್ಮನ ಸಾವಿನಿಂದ ಆಘಾತಕ್ಕೆ ಒಳಗಾಗಿರುವ ಸಹೋದರ ಹರ್ಷ ಯಾರೊಂದಿಗೂ ಮಾತನಾಡುತ್ತಿಲ್ಲ. ಪೋಷಕರಿಗೆ ಸಾಂತ್ವನ(Condolences) ಹೇಳುತ್ತಲೇ ಕುಟುಂಬದ ಸದಸ್ಯರೂ ಕಣ್ಣೀರಿಡುತ್ತಿದ್ದರು. ಸುತ್ತಮುತ್ತಲ ಗ್ರಾಮದ ಜನ, ಸಂಬಂಧಿಕರು, ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿ ನೂರಾರು ಜನ ನವೀನ್‌ ಮನೆಗೆ ಆಗಮಿಸಿ ಸಾಂತ್ವನ ಹೇಳುತ್ತಿದ್ದಾರೆ.

ನವೀನ್‌ ತಂದೆಗೆ ಮೋದಿ ಸಾಂತ್ವನ

ಹಾವೇರಿ(Haveri): ಉಕ್ರೇನ್‌ನಲ್ಲಿ ಮೃತಪಟ್ಟ ಹಾವೇರಿ ಜಿಲ್ಲೆ ರಾಣೆಬೆನ್ನೂರು(Ranibennur) ತಾಲೂಕಿನ ಚಳಗೇರಿ ಗ್ರಾಮದ ಯುವಕ ನವೀನ್‌ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ(Narendra Modi) ಕರೆ ಮಾಡಿ ಸಾಂತ್ವನ ಹೇಳಿದರು. ನವೀನ್‌ ತಂದೆ ಶೇಖರಗೌಡ ಗ್ಯಾನಗೌಡರ್‌ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಮೋದಿ, ನವೀನ್‌ ಸಾವಿಗೆ ಸಂತಾಪ ವ್ಯಕ್ತಪಡಿಸಿ ಧೈರ್ಯ ತುಂಬಿದರು.

‘ನವೀನ್‌ ಸಾವಿಂದ ಹೆದರಿಕೆ: ಹೊರ ಹೋಗುವ ಧೈರ್ಯವೂ ಇಲ್ಲ!

ಹುಬ್ಬಳ್ಳಿ: ‘ಅಂಡರ್‌ಗ್ರೌಂಡ್‌ನಿಂದ ಹೊರಹೋಗಿ ಕುಡಿಯುವ ನೀರು ತರುವ ಧೈರ್ಯವೂ ಈಗ ಉಳಿದಿಲ್ಲ. ಎಲ್ಲಿ ನಾವಿರುವ ಸ್ಥಳ ವೈರಿಗಳಿಗೆ ಗೊತ್ತಾಗುತ್ತೊ ಎಂದು ಕೆಳ ಕೋಣೆಗಳಲ್ಲೂ ವಿದ್ಯುತ್‌ ದೀಪ ಹಾಕದಂತೆ ಸೂಚಿಸಿದ್ದಾರೆ...’
ಹೌದು, ಉಕ್ರೇನ್‌ನಲ್ಲಿ ಹಾವೇರಿಯ ನವೀನ್‌ ಗ್ಯಾನಗೌಡ್ರ ರಷ್ಯಾ ಪಡೆಗಳ ದಾಳಿಯಲ್ಲಿ ಮೃತಪಟ್ಟಬಳಿಕ ಅಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಜಂಘಾಬಲವೇ ಉಡುಗಿದೆ. ಆರಂಭದಲ್ಲಿ ಧೈರ್ಯ ತೋರಿದ್ದವರು ಈಗ ಹೇಗಾದರೂ ಮಾಡಿ ನಮ್ಮನ್ನು ಕರೆದೊಯ್ಯಿರಿ ಎಂದು ಮೊರೆ ಇಡುತ್ತಿದ್ದಾರೆ.

ಯುದ್ಧಪೀಡಿತ ಉಕ್ರೇನ್‌ನ ಖಾರ್ಕೀವ್‌ನಲ್ಲಿ ಸಿಲುಕಿರುವ ಹುಬ್ಬಳ್ಳಿಯ(Hubballi) ನಾಝಿಲ್ಲಾ ಗಾಜಿಯಾಪುರ ಮಂಗಳವಾರ ‘ಕನ್ನಡಪ್ರಭ’(Kannada Prabha) ಜೊತೆ ಮಾತನಾಡಿ ಕಣ್ಣೀರು ಹಾಕಿದರು. ನಿಮ್ಮನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುತ್ತೇವೆ ಎನ್ನುತ್ತಲೇ ಆರು ದಿನಗಳನ್ನು ಕಳೆದಿದ್ದಾರೆ. ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದಾರೆ. ನಾವು ಸುರಕ್ಷಿತವಾಗಿ ಮನೆ ಸೇರುತ್ತೇವೋ ಇಲ್ಲವೊ ಎಂಬ ಭಯ ಆವರಿಸಿದೆ ಎನ್ನುತ್ತಾ ಕಣ್ಣೀರಿಟ್ಟರು.

Russia-Ukraine War: ಬಾಂಬ್‌ಗಿಂತ ಉಕ್ರೇನ್‌ ಸೈನಿಕರೇ ಉಗ್ರ: ಕೋಲಾರದ ವಿದ್ಯಾರ್ಥಿನಿಯ ಅಳಲು

ಇಲ್ಲಿ ಕುಡಿಯಲು ನೀರು ತಂದುಕೊಳ್ಳಲು ಆಗದಷ್ಟುಭಯ ಆವರಿಸಿದೆ. ಸನಿಹವೇ ಬಾಂಬ್‌ ಸ್ಫೋಟ, ಶೆಲ್‌ಗಳ ಶಬ್ದ ಕೇಳುತ್ತದೆ. ನಮ್ಮ ರಕ್ಷಣೆ ದೃಷ್ಟಿಯಿಂದ ಹೊರಗೆ ಕರೆಂಟ್‌ ಕಾಣಬಾರದು ಎಂದು ದೀಪಗಳನ್ನು ಆರಿಸಲಾಗಿದೆ. ಮೊಬೈಲ್‌ನ ಫ್ಲ್ಯಾಶ್‌ ಲೈಟನ್ನೂ ಬಳಸದ ಸ್ಥಿತಿಯಲ್ಲಿದ್ದೇವೆ. ಇಲ್ಲಿ ನಾನು ಸೇರಿ ಕೆಲವರಿಗೆ ಎರಡು ಮೂರು ದಿನಗಳಿಂದ ನೆಗಡಿ, ಸಣ್ಣ ಜ್ವರ ಬಂದಿದೆ. ವಾಶ್‌ರೂಮಿನ ನೀರಿನ ಸಂಪರ್ಕವೂ ಕಡಿತಗೊಂಡಿದೆ. ನಾವು ಮೊದಲ ವರ್ಷದ ವಿದ್ಯಾರ್ಥಿಗಳಾದ ಕಾರಣ ಇಲ್ಲಿನ ಬಗ್ಗೆ ಹೆಚ್ಚೇನೂ ತಿಳಿಯುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಇಲ್ಲಿಂದ ಹೊರಹೋಗಿ ಪೊಲೆಂಡ್‌ಗೆ(Poland) ತೆರಳುವ ಉದ್ದೇಶದಿಂದ ಮೆಟ್ರೋ ರೈಲ್ವೆ ನಿಲ್ದಾಣ ತಲುಪಿದ ಹಲವರು ಅಲ್ಲಿಯೆ ಸಿಲುಕಿಕೊಂಡಿದ್ದಾರೆ. ಉಕ್ರೇನ್‌ ನಾಗರಿಕರಿಗೆ ಮೊದಲು ಹೊರಹೋಗಲು ಅವಕಾಶ ನೀಡಲಾಗುತ್ತಿದೆ. ನಂತರ ನಿಮಗೆ ಎಂದು ವಿದ್ಯಾರ್ಥಿಗಳನ್ನು(Students) ತಡೆಹಿಡಿಯಲಾಗಿದೆ. ರೈಲು ಹತ್ತಿ ಕುಳಿತವರು 12 ಗಂಟೆಗೂ ಹೆಚ್ಚಿನ ಸಮಯ ಕಾದಿದ್ದಾರೆ. ನಾವು ಇಲ್ಲಿನ ಎಲ್ಲ ಪರಿಸ್ಥಿತಿಯನ್ನೂ ಹೇಳಿಕೊಳ್ಳುವ ಸ್ಥಿತಿಯಲ್ಲೂ ಇಲ್ಲ. ಪಾಲಕರು ಮತ್ತಷ್ಟು ಹೆದರಿಕೊಳ್ಳುತ್ತಾರೆ ಎಂದು ಬಾಯಿ ಕಟ್ಟಿಕೊಂಡಿದ್ದೇವೆ. ಸರ್ಕಾರ ಆದಷ್ಟುಬೇಗ ನಮ್ಮನ್ನು ಈ ನರಕದಿಂದ ಪಾರು ಮಾಡಲಿ ಎಂದು ನಾಝಿಲ್ಲಾ ಅಳಲು ತೋಡಿಕೊಂಡರು.