ಹಸುಗೂಸನ್ನು ಒಲೆಗೆ ಹಾಕಿ ಕೊಂದ ಮಹಾತಾಯಿ: ಸುಟ್ಟು ಕರಕಲಾದ ಕಂದಮ್ಮ!
ನೀರು ಕಾಯಿಸುವ ಒಲೆಯೊಳಗೆ ಮಗು ಹಾಕಿ ಮಾಡಿದ ತಾಯಿ| ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ತಾಲೂಕಿನ ಸೇವಾನಗರದಲ್ಲಿ ನಡೆದ ಘಟನೆ| ಆರೋಪಿ ಸಂಗೀತಾ ವಶಕ್ಕೆ ಪಡೆದ ಪೊಲೀಸರು|
ಕಡೂರು(ಮಾ.27): ಹುಟ್ಟಿ 23 ದಿನಗಳಾಗಿರುವ ಹಸುಗೂಸನ್ನೇ ಸ್ವತಃ ತಾಯಿಯೇ ನೀರು ಕಾಯಿಸುವ ಒಲೆಯೊಳಗೆ ಹಾಕಿ ಕೊಲೆ ಮಾಡಿರುವ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸೇವಾನಗರದಲ್ಲಿ ಬುಧವಾರ ನಡೆದಿದೆ.
ತನಗೆ ಹುಟ್ಟಿದ ಹೆಣ್ಣು ಮಗುವನ್ನು ಸ್ವತಃ ತಾಯಿ ಸಂಗೀತಾ (22) ತನ್ನ ಕೈಯಾರೆ ಒಲೆಗೆ ಹಾಕಿ ಸುಟ್ಟಿರುವ ಆರೋಪಿ. ಸೇವಾನಗರದ ರಮೇಶ್ ನಾಯ್ಕ ಅವರ ಮಗಳು ಸಂಗೀತಾ 5 ವರ್ಷದ ಹಿಂದೆ ಉತ್ತರ ಪ್ರದೇಶದ ಅಮಿತ್ (27) ಎಂಬವರೊಂದಿಗೆ ಮದುವೆಯಾಗಿದ್ದಳು. 2 ವರ್ಷದ ಹಿಂದೆ ಗಂಡನೊಂದಿಗೆ ಬಂದು ತವರು ಮನೆಯಲ್ಲಿ ವಾಸವಾಗಿದ್ದಳು.
ಹೆತ್ತ ಮಕ್ಕಳನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಪಾಪಿ ತಂದೆ: ಕಾರಣ?
ಮಾ.2ರಂದು ಕಡೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಸಂಗೀತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಬುಧವಾರ ಸಂಜೆ ಮಗುವನ್ನು ನಾಯಿ ಕಚ್ಚಿಕೊಂಡು ಹೋಗಿದೆ ಎಂದು ಸಂಗೀತಾ ಕೂಗಾಡುತ್ತಿದ್ದಳು. ಅವಳ ರೋದನೆಗೆ ಸ್ಪಂದಿಸಿದ ಗ್ರಾಮಸ್ಥರು ಮಗುವಿಗೆ ಊರೆಲ್ಲ ಹುಡುಕಾಡಿದ್ದಾರೆ. ಆನಂತರದಲ್ಲಿ ಸಂಗೀತಾಳ ಗಂಡ ಅಮಿತ್ ಸಹ ಬಂದು ಹುಡುಕಿದ್ದಾರೆ.
ಮನೆಯೊಳಗೂ ಹುಡುಕಾಡಲು ಶುರುಮಾಡಿದಾಗ ಬಚ್ಚಲು ಮನೆಯಲ್ಲಿ ದುರ್ವಾಸನೆ ಬರುತ್ತಿದ್ದು ಅಮಿತ್ ಗುರುತಿಸಿದ್ದಾರೆ. ನೀರು ಕಾಯಿಸುವ ಒಲೆಯೊಳಗೆ ನೋಡಿದಾಗ ಅಲ್ಲಿ ತನ್ನ ಹೆಣ್ಣುಮಗು ಸುಟ್ಟಿರುವುದು ಕಂಡುಬಂದಿತು. ಮಗು ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು.
ಹೆಣ್ಣುಮಗು ಜನಿಸಿತು ಎಂಬ ಕಾರಣಕ್ಕೋ ಅಥವಾ ಇನ್ಯಾವುದೋ ಕಾರಣಕ್ಕೋ ಹೆತ್ತ ಕೂಸನ್ನೇ ಸಂಗೀತಾ ಕೊಲೆ ಮಾಡಿದ್ದಾರೆ ಎಂದು ಶಂಕಿಸಿ ಅದೇ ಗ್ರಾಮದ ತಾಲೂಕು ಪಂಚಾಯಿತಿ ಸದಸ್ಯ ದೇವರಾಜ ನಾಯ್ಕ ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಸಂಗೀತಾ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.