Tumakur : ಬಹುತೇಕ ಶಾಲೆಗಳಲ್ಲಿ ಪ್ರಯೋಗಾಲಯಗಳಿಲ್ಲ
ಬಹುತೇಕ ಶಾಲೆಗಳಲ್ಲಿ ಸರಿಯಾದ ಪ್ರಯೋಗಾಲಯಗಳಿಲ್ಲ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.
ತುಮಕೂರು : ಬಹುತೇಕ ಶಾಲೆಗಳಲ್ಲಿ ಸರಿಯಾದ ಪ್ರಯೋಗಾಲಯಗಳಿಲ್ಲ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.
ನಗರದ ಡಯಟ್‌ನಲ್ಲಿ ಕೆ.ಸಿ.ರೆಡ್ಡಿ ಸರೋಜಮ್ಮ ವೆಲ್ ಫೇರ್ ಫೌಂಡೇಷನ್ ವತಿಯಿಂದ ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಗಳ ಆಯ್ದ ಪ್ರೌಢಶಾಲೆಗಳ ವಿಜ್ಞಾನ ಶಿಕ್ಷಕರಿಗೆ ಕಾರ್ಯಾಗಾರ ಹಾಗೂ ವಿಜ್ಞಾನದ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮೀಣ ಭಾಗದ ಮಕ್ಕಳಿಗೆ ವಿಜ್ಞಾನವೆಂಬುದು ಕಬ್ಬಿಣದ ಕಡಲೆ. ನುರಿತ ಶಿಕ್ಷಕರಿದ್ದರೂ ಪ್ರಯೋಗಾಲಯ ಮತ್ತು ಪರಿಕರಗಳ ಕೊರತೆಯಿಂದ ಪ್ರಾಯೋಗಿಕವಾಗಿ ಮಕ್ಕಳು ಅರಿಯದ ಕಾರಣ ಅನುತ್ತೀರ್ಣ, ಇಲ್ಲವೇ ಕಡಿಮೆ ಅಂಕ ಪಡೆದುಕೊಳ್ಳುವುದನ್ನು ನೋಡುತ್ತಿದ್ದೇವೆ ಎಂದರು.
ಈ ತೊಂದರೆ ಹೋಗಲಾಡಿಸುವಲ್ಲಿ ಕೆ.ಸಿ.ರೆಡ್ಡಿ ಸರೋಜಮ್ಮ ವೆಲ್ ಫೇರ್ ಫೌಂಡೇಷನ್‌ನ ಕಾರ್ಯದರ್ಶಿ ವಸಂತ ಕವಿತಾ ರೆಡ್ಡಿ ಅವರು ತಮ್ಮತಾತನವರ ಹೆಸರಿನ ಫೌಂಡೇಷನ್ ಮೂಲಕ ಗ್ರಾಮೀಣ ಭಾಗದ ಆಯ್ಕೆ ಶಾಲೆಗಳ ವಿಜ್ಞಾನ ಶಿಕ್ಷಕರಿಗೆ, ಮಕ್ಕಳಿಗೆ ವಿಜ್ಞಾನ ವಿಷಯ ಬೋಧಿಸುವ ಕುರಿತು ಹತ್ತಾರು ಕಾರ್ಯಾಗಾರ ಏರ್ಪಡಿಸುತ್ತಿರುವುದು ಸಂತೋಷದ ವಿಚಾರ ಎಂದರು.
ಮಧುಗಿರಿ ಮತ್ತು ತುಮಕೂರು ಶೈಕ್ಷಣಿಕ ಜಿಲ್ಲೆಗಳ ತಲಾ 20 ಪ್ರೌಢಶಾಲೆಗಳ ವಿಜ್ಞಾನ ಶಿಕ್ಷಕರಿಗೆ ಕಾರ್ಯಾಗಾರದ ಮೂಲಕ ವಿಜ್ಞಾನ ವಿಷಯದ ಬೋಧನೆ ಕುರಿತು ವಿಷಯ ತಜ್ಞರ ಮೂಲಕ ಮಾಹಿತಿ ನೀಡಿದ್ದಾರೆ. ಇದು ಅತ್ಯಂತ ಶ್ಲಾಘನೀಯ ಕೆಲಸ. ರಾಜ್ಯದಾದ್ಯಂತ ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ವಿಜ್ಞಾನದ ಭೋದನೆಗೆ ಶ್ರಮಿಸುತ್ತಿರುವ ಕೆ.ಸಿ.ರೆಡ್ಡಿ ಸರೋಜಮ್ಮ ವೆಲ್ ಫೇರ್ ಫೌಂಡೇಷನ್ ಕಾರ್ಯ ಮೆಚ್ಚುವಂತದ್ದು ಎಂದರು.
ಕೆಸಿ ರೆಡ್ಡಿ ಸರೋಜಮ್ಮ ವೆಲ್‌ಫೇರ್ ಫೌಂಡೇಷನ್‌ನ ಕಾರ್ಯದರ್ಶಿ ವಸಂತ ಕವಿತಾರೆಡ್ಡಿ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಿಗೆ ನಗರದ ಶಾಲೆಗಳಲ್ಲಿ ದೊರೆಯುವಂತಹ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ರಾಜ್ಯದಾದ್ಯಂತ ಈ ಕಾರ್ಯಾಗಾರವನ್ನು ಮಾಡಲಾಗುತ್ತಿದೆ ಎಂದರು.
ಈ ವೇಳೆ ಡಯಟ್ ಪ್ರಾಂಶುಪಾಲರಾದ ಮಂಜುನಾಥ್, ಗಂಗಾಧರ್, ಡಯಟ್ ಉಪನ್ಯಾಸಕ ಶ್ರೀನಿವಾಸರೆಡ್ಡಿಹಾಗೂ ಐವತ್ತಕ್ಕೂ ಹೆಚ್ಚು ಪ್ರೌಢಶಾಲೆಗಳ ವಿಜ್ಞಾನ ಶಿಕ್ಷಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.