Asianet Suvarna News Asianet Suvarna News

ಮಂಗಳೂರು: ಕಡಬ, ಪುತ್ತೂರಿನಲ್ಲಿ 95 ಡೆಂಘೀ ಪ್ರಕರಣ..!

ಪುತ್ತೂರು, ಕಡಬ ಸೇರಿದಂತೆ ಮಂಗಳೂರಿನಲ್ಲಿ ಒಟ್ಟು 95ಕ್ಕೂ ಹೆಚ್ಚು ಡೆಂಘೀ ಪ್ರಕರಣಗಳು ಪತ್ತೆಯಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಗುತ್ತಿಗೆದಾರರಾಗಿ ನೇಮಕ ಮಾಡಿದ ಲ್ಯಾಬ್‌ ಟೆಕ್ನೀಷಿಯನ್‌ಗಳ ಗುತ್ತಿಗೆ ಅವಧಿ ಮುಗಿದಿದೆ. ಲ್ಯಾಬ್‌ ಟೆಕ್ನೀಷಿಯನ್‌ಗಳ ಕೊರತೆಯಿಂದ ರಕ್ತ ಪರೀಕ್ಷಾ ಕಾರ್ಯಕ್ಕೆ ತೊಂದರೆಯಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

More than ninety Dengue cases found in Mangalore
Author
Bangalore, First Published Aug 29, 2019, 2:20 PM IST

ಮಂಗಳೂರು(ಆ.29: ನೂತನ ಕಡಬ ತಾಲೂಕು ಸೇರಿದಂತೆ ಪುತ್ತೂರು ತಾಲೂಕಿನಲ್ಲಿ ಇಲ್ಲಿಯವರೆಗೆ 95 ಡೆಂಘೀ ಪ್ರಕರಣಗಳು ದಾಖಲಾಗಿದ್ದರೂ ಎಲ್ಲರೂ ಗುಣ ಮುಖರಾಗಿದ್ದಾರೆ. ಹೊಸ ಪ್ರಕರಣಗಳು ವರದಿಯಾಗಿಲ್ಲ.

ಡೆಂಘೀ ನಿಯಂತ್ರಣ ಕುರಿತು ಪುತ್ತೂರು ತಾಲೂಕಿನಲ್ಲಿ ಆರೋಗ್ಯ ಇಲಾಖೆ, ಗ್ರಾಮ ಪಂಚಾಯಿತಿಗಳು ಮತ್ತು ನಗರಸಭೆ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಪುತ್ತೂರು ಸಹಾಯಕ ಕಮಿಷನರ್‌ ಎಚ್‌.ಕೆ. ಕೃಷ್ಣಮೂರ್ತಿ ಹೇಳಿದರು. ಮಂಗಳವಾರ ಸಹಾಯಕ ಕಮಿಷನರ್‌ ಕಚೇರಿಯ ಕೋರ್ಟ್‌ ಸಭಾಂಗಣದಲ್ಲಿ ಆರೋಗ್ಯ ಇಲಾಖೆ, ಗ್ರಾಮ ಪಂಚಾಯಿತಿಗಳು ಮತ್ತು ನಗರಸಭೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಒಟ್ಟು 95 ಪ್ರಕರಣ:

ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್‌ ಕುಮಾರ್‌ ರೈ ಮಾತನಾಡಿ, ತಾಲೂಕಿನಲ್ಲಿ ಒಟ್ಟು 95 ಪ್ರಕರಣಗಳು ವರದಿಯಾಗಿವೆ. ಎಲ್ಲ ರೋಗಿಗಳು ಗುಣಮುಖ ಹೊಂದಿದ್ದಾರೆ. ಕಡಬ ಮತ್ತು ಕೋಡಿಂಬಾಳ ಸೇರಿ ಒಟ್ಟು 46 ಪ್ರಕರಣಗಳು ವರದಿಯಾಗಿವೆ. ಉಳಿದಂತೆ ಕಾಣಿಯೂರಿನಲ್ಲಿ 2, ಕೊೖಲದಲ್ಲಿ 9, ನೆಲ್ಯಾಡಿಯಲ್ಲಿ 9, ಪಾಣಾಜೆಯಲ್ಲಿ 9, ಸರ್ವೆಯಲ್ಲಿ 5, ಶಿರಾಡಿಯಲ್ಲಿ 5, ತಿಂಗಳಾಡಿಯಲ್ಲಿ 7, ಉಪ್ಪಿನಂಗಡಿಯಲ್ಲಿ 3, ಪಾಲ್ತಾಡಿಯಲ್ಲಿ 1, ಪುತ್ತೂರಿನಲ್ಲಿ 4 ಪ್ರಕರಣಗಳು ವರದಿಯಾಗಿದೆ ಎಂದರು.

ಮಂಗಳೂರು: ಡೆಂಘೀ ಜ್ವರಕ್ಕೆ ಯುವಕ ಬಲಿ

ಇಲ್ಲಿನ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಕೆ. ಆಶಾಜ್ಯೋತಿ ಪುತ್ತೂರಾಯ, ಸಹಾಯಕ ಕಮಿಷನರ್‌ ಎಚ್‌.ಕೆ. ಕೃಷ್ಣಮೂರ್ತಿ, ನಗರಸಭಾ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ, ಪುತ್ತೂರು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್‌ ಕುಮಾರ್‌ ಭಂಡಾರಿ, ಜಿ.ಪಂ. ಕಾರ್ಯನಿರ್ವಾಹಕ ಇಂಜಿನಿಯರ್‌ ಸತ್ಯೇಂದ್ರ ಸಾಲಿಯಾನ್‌, ಪುತ್ತೂರು ತಹಸೀಲ್ದಾರ್‌ ಅನಂತ ಶಂಕರ, ಸಹಾಯಕ ಕಮಿಷನರ್‌ ಕಚೇರಿ ವ್ಯವಸ್ಥಾಪಕ ಬಾಬು ನಾಯ್ಕ, ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

ಲ್ಯಾಬ್‌ ಟೆಕ್ನೀಷಿಯನ್‌ಗಳ ಗುತ್ತಿಗೆ ಅವಧಿ ಮುಕ್ತಾಯ:

ಸರ್ಕಾರಿ ಆಸ್ಪತ್ರೆಗಳಲ್ಲಿ ಗುತ್ತಿಗೆದಾರರಾಗಿ ನೇಮಕ ಮಾಡಿದ ಲ್ಯಾಬ್‌ ಟೆಕ್ನೀಷಿಯನ್‌ಗಳ ಗುತ್ತಿಗೆ ಅವಧಿ ಮುಗಿದಿದೆ. ಲ್ಯಾಬ್‌ ಟೆಕ್ನೀಷಿಯನ್‌ಗಳ ಕೊರತೆಯಿಂದ ರಕ್ತ ಪರೀಕ್ಷಾ ಕಾರ್ಯಕ್ಕೆ ತೊಂದರೆಯಾಗುತ್ತಿದೆ ಎಂದು ವೈದ್ಯರು ಸಹಾಯಕ ಕಮಿಷನರ್‌ ಅವರ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಸಹಾಯಕ ಕಮಿಷನರ್‌ ಈ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಎದುರಾದರೆ ಕೂಡಲೇ ತನ್ನ ಗಮನಕ್ಕೆ ತರುವಂತೆ ವೈದ್ಯಾಧಿಕಾರಿಗಳಲ್ಲಿ ವಿನಂತಿಸಿದರು.

Follow Us:
Download App:
  • android
  • ios