ಒಂದೇ ಗ್ರಾಮದ 750ಕ್ಕೂ ಅಧಿಕ ಮಂದಿ ಕಾಡುತ್ತಿರುವ ಜ್ವರ 1000 ಮಂದಿ ಇರುವ ಊರಿನಲ್ಲಿ ಹರಡಿದ ಜ್ವರ ಒಂದೇ ವಾರದಲ್ಲಿ ಊರಿನಲ್ಲಿ 6 ಮಂದಿ ಸಾವು 

ಮೊಳಕಾಲ್ಮುರು (ಮೇ.20): ತಾಲೂಕಿನ ಗಡಿ ಭಾಗದ ತಳವಾರಹಳ್ಳಿ ಗ್ರಾಮದಲ್ಲಿ ವ್ಯಾಪಕವಾಗಿ ಜ್ವರ ಕಾಣಿಸಿಕೊಂಡಿದ್ದು ಒಂದೇ ವಾರದಲ್ಲಿ 6 ಮಂದಿ ಮೃತಪಟ್ಟಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಗ್ರಾಮದಲ್ಲಿ ಏಕಾಏಕಿ ಕಾಣಿಸಿಕೊಂಡಿರುವ ಬೆಳವಣಿಗೆಯಿಂದ ಭಯಭೀತರಾಗಿರುವ ಗ್ರಾಮಸ್ಥರು ಆರೋಗ್ಯ ತಪಾಸಣೆಗೂ ಸ್ಪಂದಿಸದ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಭಾಯಿಸುವುದು ಆರೋಗ್ಯ ಇಲಾಖೆಗೂ ಸವಾಲಾಗಿ ಪರಿಣಮಿಸಿದೆ.

ಸಚಿವ ಶ್ರೀರಾಮುಲು ಪ್ರತಿನಿಧಿಸುವ ಹಿರೇಕೆರೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ತಳವಾರಹಳ್ಳಿ ಗ್ರಾಮ ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿದೆ. ಕಳೆದೆರಡು ವಾರಗಳಿಂದ ಇಲ್ಲಿ ಆಬಾಲವೃದ್ಧರಾಗಿ ಎಲ್ಲ ವಯೋಮಾನದವರೂ ಮೈಕೈ ನೋವು ಸೇರಿದಂತೆ ಕೆಮ್ಮು ನೆಗಡಿ ಜ್ವರಕ್ಕೆ ಹೈರಾಣಾಗಿ ಹೋಗಿದ್ದಾರೆ. ಭೀತಿಗೊಳಗಾಗಿರುವ ಗ್ರಾಮಸ್ಥರು ಊರಿನ ಪ್ರಮುಖ ಬೀದಿಗಳಿಗೆ ಮುಳ್ಳಿನ ಬೇಲಿಗಳನ್ನು ಹಾಕಿ ಹೊರಗಿನವರು ಪ್ರವೇಶಿಸದಂತೆ ನಿರ್ಬಂಧ ವಿಧಿಸಿಕೊಂಡಿದ್ದಾರೆ.

ದ.ಕ.ದಲ್ಲಿ ಕೊರೋನಾ ಸೋಂಕಿತರಲ್ಲಿ ಡೆಂಘೀ ಜ್ವರ, ಜಿಲ್ಲಾಡಳಿತಕ್ಕೆ ತಲೆನೋವು .

ವಿಷಯ ತಿಳಿದು ಗ್ರಾಮಕ್ಕೆ 3 ಬಾರಿ ಭೇಟಿ ನೀಡಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಜ್ವರ ಬಾಧಿತರ ಪರೀಕ್ಷೆಗೊಳಪಡಿಸಲು ಪ್ರಯತ್ನಿಸಿದ್ದಾರೆ. ಆದರೆ ಕೊರೋನಾ ಪಾಸಿಟಿವ್‌ ವರದಿ ಬರುವ ಭಯದಿಂದ ಗ್ರಾಮಸ್ಥರು ಸ್ಪಂದಿಸದೆ ಗಲಾಟೆ ಮಾಡುತ್ತಾರೆ. ಸಾರ್ವಜನಿಕರ ವಿರೋಧದ ನಡುವೆಯೂ ಗ್ರಾಮದಲ್ಲಿ ಹತ್ತಾರು ಮನೆಗಳಲ್ಲಿ ಕೆಲವರನ್ನು ಪರೀಕ್ಷೆಗೊಳಪಡಿಸಲಾಗಿದ್ದು ವರದಿ ನೆಗೆಟಿವ್‌ ಬಂದಿದೆ ಎನ್ನುವುದು ಆರೋಗ್ಯ ಇಲಾಖೆ ಅಧಿಕಾರಿಗಳ ಅಭಿಪ್ರಾಯ.

ಗ್ರಾಮದಲ್ಲಿ ಯಾರೊಬ್ಬರೂ ಪರೀಕ್ಷೆ ಮಾಡಿಸಿಕೊಳ್ಳಲು ಮುಂದೆ ಬರುವುದಿಲ್ಲ. ಆರೋಗ್ಯ ವಿಚಾರಿಸಲು ಹೋದ ಆಶಾ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಾರೆ. ಗ್ರಾಮಸ್ಥರು ಸಹಕರಿಸುತ್ತಿಲ್ಲ. ಕಳೆದ ಎರಡು ದಿನಗಳಿಂದ ಜ್ವರದ ಪ್ರಮಾಣ ಕಡಿಮೆಯಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಆದರೆ ನಂಬುವುದಾದರೂ ಹೇಗೆ?

-ಡಾ.ಸುಧಾ, ತಾಲೂಕು ಆರೋಗ್ಯ ಅಧಿಕಾರಿ, ಮೊಳಕಾಲ್ಮುರು

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona