ಶಿವಮೊಗ್ಗ, [ಮೇ.26]: ಪೂಜಾ ಕಾರ್ಯಕ್ರಮದಲ್ಲಿ ಆಹಾರ ಸೇವನೆ ಮಾಡಿದ ಪರಿಣಾಮ 35ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿ‌ ಅಸ್ಪತ್ರೆಗೆ ದಾಖಲಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಅಣ್ಣಾಪುರ ಗ್ರಾಮದ ಗಣೇಶ್ ಶೆಟ್ರು ಮನೆಯಲ್ಲಿ ಸತ್ಯನಾರಾಯಣ ಪೂಜೆ ಇತ್ತು. ಈ ಪೂಜೆಯಲ್ಲಿ ಪ್ರಸಾದ ಸ್ವೀಕರಿಸಿದ ಪರಿಣಾಮ 35ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ.

ಮತ್ತೊಂದು ಪ್ರಸಾದ ದುರಂತ : ಓರ್ವ ಸಾವು, 20ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಶಿಕಾರಿಪುರ ಆಸ್ಪತ್ರೆಯಲ್ಲಿ 29 ಜನ , ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ 3 , ರಿಪ್ಪನ್ ಪೇಟೆ ಆಸ್ಪತ್ರೆಯಲ್ಲಿ 3 ಜನರು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿದು ಅಣ್ಣಾಪುರ ಗ್ರಾಮಕ್ಕೆ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಬೇಟಿ ನೀಡಿ, ಪ್ರಸಾದಕ್ಕೆ ಮಾಡಿದ್ದ ಆಹಾರವನ್ನು ಪರಿಶೀಲಿಸಿದರು.

ಶುಂಠಿ ಕಳೆನಾಶಕ ತುಂಬಿಟ್ಟಿದ್ದ ಡ್ರಮ್ ನಲ್ಲಿ ನೀರು ತುಂಬಿಸಿದ್ದು, ಆ ನೀರನ್ನು ಅಡಿಗೆ ಮಾಡಲು ಬಳಸಿದ್ದೇ ಆಹಾರ ಕಲುಷಿತವಾಗಲು ಕಾರಣ ಎಂದು ತಿಳಿದುಬಂದಿದೆ. ಶಿಕಾರಿಪುರ ಅಸ್ಪತ್ರೆ ಗೆ ಜಿಲ್ಲಾಧಿಕಾರಿ ದಯಾನಂದ ಭೇಟಿ ನೀಡಿ, ಅಸ್ವಸ್ಥರಿಗೆ ಧೈರ್ಯ ತುಂಬಿದರು. 

ಮೊನ್ನೇ ಮೇ.22ರಂದು ತುಮಕೂರು ಜಿಲ್ಲೆಯಲ್ಲಿ ಹರಿಸೇವೆ ಪ್ರಸಾದ ಸೇವಿಸಿ ಓರ್ವ ಬಾಲಕ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು.  ಇನ್ನು ಕೆಲ ತಿಂಗಳು ಹಿಂದೆ ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಗ್ರಾಮದಲ್ಲಿ ದೇವಸ್ಥಾನ ಪ್ರಸಾದ ಸೇವಿಸಿ 17 ಜನರು ಸಾವನ್ನಪ್ಪಿದ್ದರು. ಇಂತಹ ಘಟನೆಗಳು ಮಾಸುವ ಮುನ್ನವೇ ಇದೀಗ ಶಿವಮೊಗ್ಗದಲ್ಲಿ ನಡೆದಿದೆ.