Asianet Suvarna News Asianet Suvarna News

Bengaluru: ಸಿಲಿಕಾನ್ ಸಿಟಿಯಲ್ಲಿ 18 ಸಾವಿರಕ್ಕೂ ಹೆಚ್ಚು ರಸ್ತೆ ಗುಂಡಿಗಳು

ನಗರದಲ್ಲಿ ಪ್ರತಿ ಮಳೆ ಬಂದಾಗಲೂ ರಸ್ತೆ ಗುಂಡಿಗಳ ಸಮಸ್ಯೆ ಹೆಚ್ಚುತ್ತಿದೆ. ಮಳೆ ನಿಂತ ಕೂಡಲೇ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸವನ್ನು ಬಿಬಿಎಂಪಿ ಮಾಡುತ್ತಿದ್ದರೂ ಮತ್ತೆ ಮಳೆ ಬಂದಾಗ ಮುಚ್ಚಿದ ಗುಂಡಿಗಳು ಬಾಯ್ತೆರೆಯುತ್ತಿದ್ದು, ಪಾಲಿಕೆಯು ಗುಣಮಟ್ಟದ ಕೆಲಸ ಮಾಡುತ್ತಿದೆಯೋ ಇಲ್ಲವೋ ಎಂಬುದು ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ. 

More than 18 thousand road potholes in Bengaluru gvd
Author
First Published Oct 21, 2022, 1:46 PM IST

ಸಂಪತ್‌ ತರೀಕೆರೆ

ಬೆಂಗಳೂರು (ಅ.21): ನಗರದಲ್ಲಿ ಪ್ರತಿ ಮಳೆ ಬಂದಾಗಲೂ ರಸ್ತೆ ಗುಂಡಿಗಳ ಸಮಸ್ಯೆ ಹೆಚ್ಚುತ್ತಿದೆ. ಮಳೆ ನಿಂತ ಕೂಡಲೇ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸವನ್ನು ಬಿಬಿಎಂಪಿ ಮಾಡುತ್ತಿದ್ದರೂ ಮತ್ತೆ ಮಳೆ ಬಂದಾಗ ಮುಚ್ಚಿದ ಗುಂಡಿಗಳು ಬಾಯ್ತೆರೆಯುತ್ತಿದ್ದು, ಪಾಲಿಕೆಯು ಗುಣಮಟ್ಟದ ಕೆಲಸ ಮಾಡುತ್ತಿದೆಯೋ ಇಲ್ಲವೋ ಎಂಬುದು ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ. ಜೊತೆಗೆ ಮಳೆ ನಿಲ್ಲದೆ ರಸ್ತೆ ಗುಂಡಿಗಳಿಗೆ ಮುಕ್ತಿ ಕೊಡಲು ಅಸಾಧ್ಯವೆಂಬುದು ಎಂದು ಪಾಲಿಕೆ ಮೂಲಗಳು ತಿಳಿಸಿವೆ.

ರಸ್ತೆ ಗುಂಡಿಗಳ ಮುಚ್ಚುವ ವಿಚಾರದಲ್ಲಿ ಬಿಬಿಎಂಪಿಯನ್ನು ರಾಜ್ಯ ಹೈಕೋರ್ಟ್‌ ತೀವ್ರ ತರಾಟೆಗೆ ತೆಗೆದುಕೊಂಡಿದ್ದರ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿದ್ದ ಪಾಲಿಕೆಯು ಮೇ ತಿಂಗಳಿನಿಂದ ಈವರೆಗೆ ಸುಮಾರು 27,200ಕ್ಕೂ ಹೆಚ್ಚು ಗುಂಡಿಗಳನ್ನು ಗುರುತಿಸಿತ್ತು. ಈ ಪೈಕಿ ಈಗಾಗಲೇ 20 ಸಾವಿರಕ್ಕೂ ಹೆಚ್ಚು ಗುಂಡಿಗಳನ್ನು ಮುಚ್ಚಿರುವ ಲೆಕ್ಕಾಚಾರ ಬಿಬಿಎಂಪಿಯದ್ದು. ಪಾಲಿಕೆಯ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಅಧಿಕಾರಿಗಳ ಪ್ರಕಾರ ಆಗಸ್ಟ್‌ ತಿಂಗಳಲ್ಲಿ ರಸ್ತೆ ಗುಂಡಿಗಳ ಸಂಖ್ಯೆ 7 ಸಾವಿರಕ್ಕಿಂತಲೂ ಕಡಿಮೆಯಿತ್ತು.

Bengaluru: ವೆಸ್ಟ್‌ ಆಫ್‌ ಕಾರ್ಡ್‌ ಸವೀರ್ಸ್‌ ರಸ್ತೆಯಲ್ಲಿ ಹೆಜ್ಜೆಹೆಜ್ಜೆಗೂ ಗುಂಡಿ!

ಆದರೆ, ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ನಿರಂತರವಾಗಿ ಮಳೆ ಸುರಿದ ಪರಿಣಾಮ ನಗರದಲ್ಲಿ ಮತ್ತೆ ಮುಚ್ಚಿದ್ದ ಗುಂಡಿಗಳು ಸಹ ಬಾಯ್ತೆರೆದಿದ್ದು, ಪ್ರಸ್ತುತ 18 ಸಾವಿರಕ್ಕೂ ಅಧಿಕ ಗುಂಡಿಗಳಾಗಿವೆ. ಸಂಚಾರಿ ಪೊಲೀಸರು ಸಹ ಗುಂಡಿಗಳ ಪತ್ತೆ ಕಾರ್ಯದಲ್ಲಿ ನಿರತರಾಗಿದ್ದು, ಬರೋಬ್ಬರಿ 4700ಕ್ಕಿಂತ ಹೆಚ್ಚು ಗುಂಡಿಗಳನ್ನು ನಗರದ ವಿವಿಧ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಇರುವುದನ್ನು ಮುಚ್ಚುವಂತೆ ಪಾಲಿಕೆಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. ಹೀಗಾಗಿ ರಸ್ತೆ ಗುಂಡಿಗಳು ಪಾಲಿಕೆ ಅಧಿಕಾರಿಗಳನ್ನು ಬಿಡದಂತೆ ಕಾಡುತ್ತಿದ್ದು, ವಾಹನ ಸವಾರರಿಗೆ ನರಕದ ದರ್ಶನ ಮಾಡಿಸುತ್ತಿವೆ.

ಕಮರ್ಷಿಯಲ್‌ ಸ್ಟ್ರೀಟ್‌, ಪ್ಯಾಲೇಸ್‌ ಗುಟ್ಟಹಳ್ಳಿ, ಶಿವಾಜಿನಗರ, ಐಟಿಐ ಲೇಔಟ್‌, ನಾಗರಬಾವಿ, ಪಟ್ಟೇಗಾರಪಾಳ್ಯ, ಉಲ್ಲಾಳ ಉಪನಗರ, ಓಕಳೀಪುರಂ, ಬಿನ್ನಿಮಿಲ್‌ ರಸ್ತೆ, ಚಾಮರಾಜಪೇಟೆ, ರಾಯನ್‌ ಸರ್ಕಲ್‌, ಶ್ರೀನಗರ, ಸಂಜಯನಗರ ಮುಖ್ಯ ರಸ್ತೆ, ಭದ್ರಪ್ಪ ಲೇಔಟ್‌ ಮುಖ್ಯರಸ್ತೆ, ಮುಖ್ಯಮಂತ್ರಿಯವರ ನಿವಾಸ ಸಮೀಪದ ವಿಂಡ್ಸರ್‌ಮ್ಯಾನರ್‌ ವೃತ್ತದಲ್ಲಿ ರಸ್ತೆ ಗುಂಡಿಗಳು ಸುಗಮ ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿವೆ. ಈ ಪ್ರದೇಶಗಳಲ್ಲಿ ಬಿಬಿಎಂಪಿ ಈಗಾಗಲೇ ರಸ್ತೆ ಗುಂಡಿಗಳನ್ನು ಮುಚ್ಚಿದ್ದರೂ ಮತ್ತೆ ಗುಂಡಿಗಳಾಗಿವೆ. ಬಳ್ಳಾರಿ ರಸ್ತೆಯ ವೀರಶೈವ ಮಹಾಸಭಾ ಭವನದ ಸಮೀಪದಲ್ಲಿ ಮ್ಯಾನ್‌ವೋಲ್‌ ಸುತ್ತಮುತ್ತ ಒಂದು ಅಡಿಯಷ್ಟುಆಳದ ಗುಂಡಿಬಿದ್ದದ್ದು, ಸ್ವಲ್ಪ ಕಣ್ತಪ್ಪಿದರೂ ಅಪಘಾತ ಸಂಭವಿಸುವ ಪರಿಸ್ಥಿತಿ ಇದೆ.

ಸುಗಮ ಸಂಚಾರಕ್ಕೆ ಅಡ್ಡಿ: ಅದೇ ರೀತಿಯಲ್ಲಿ ಶಿವಾನಂದ ವೃತ್ತದಲ್ಲಿ ಉಕ್ಕಿನ ಮೇಲ್ಸೇತುವೆ ಕಾಮಗಾರಿ ಶೇ.90ರಷ್ಟುಪೂರ್ಣಗೊಂಡಿದೆ. ಆದರೆ, ರೇಸ್‌ಕೋರ್ಸ್‌ ರಸ್ತೆ ಮಾರ್ಗವಾಗಿ ಶೇಷಾದ್ರಿಪುರಂ ಕಡೆಗೆ ಹೋಗುವಾಗ ಸಿಗುವ ರೈಲ್ವೆ ಅಂಡರ್‌ ಪಾಸ್‌ ಬಳಿ ರಸ್ತೆ ಗುಂಡಿಗಳನ್ನು ತಪ್ಪಿಸಿಕೊಂಡು ಮುನ್ನಡೆಯುವುದು ವಾಹನ ಸವಾರರಿಗೆ ಸವಾಲೇ ಸರಿ. ಒಂದೆಡೆ ಮೇಲ್ಸೇತುವೆ ಇಳಿಯುವ ವಾಹನಗಳು, ಸವೀರ್‍ಸ್‌ ರಸ್ತೆಯಿಂದ ಬಂದ ವಾಹನಗಳು ಬೆಂಗಳೂರು ಕೆಫೆ ಸಮೀಪದಲ್ಲಿ ದಟೈಸಿ, ಸುಗಮ ಸಂಚಾರಕ್ಕೆ ಅಡ್ಡಿಯುಂಟು ಮಾಡಿದ್ದರೆ, ಮತ್ತೊಂದೆಡೆ ಈ ರಸ್ತೆ ಗುಂಡಿಗಳು ವಾಹನ ಸವಾರರ ತಾಳ್ಮೆಗೆ ಪರೀಕ್ಷೆಗೊಡ್ಡುತ್ತಿವೆ.

Bengaluru: 3 ಸಚಿವರ ಮನೆ ಹಾದಿಯೇ ಕೆಸರು ಗದ್ದೆ!

ಮಳೆ ನಿಂತ ಕೂಡಲೇ ಗುಂಡಿಗಳಿಗೆ ಮುಕ್ತಿ: ಈ ಬಾರಿ ಮಳೆಗಾಲ ಹೆಚ್ಚಾಗಿದ್ದರಿಂದ ರಸ್ತೆ ಗುಂಡಿಗಳ ಸಂಖ್ಯೆಯೂ ಹೆಚ್ಚಾಗಿದೆ. ನಿರಂತರವಾಗಿ ರಸ್ತೆ ಗುಂಡಿ ಮುಚ್ಚಲಾಗುತ್ತಿದೆ. ಸದ್ಯ ಮಳೆಯಿರುವ ಕಾರಣ ಗುಂಡಿ ಮುಚ್ಚಲು ಸಾಧ್ಯವಾಗಿಲ್ಲ. ಶೀಘ್ರದಲ್ಲಿ ಗುಂಡಿಗಳನ್ನು ಮುಚ್ಚುತ್ತೇವೆ. ರಸ್ತೆ ಗುಂಡಿಗಳನ್ನು ಗುರುತಿಸಲು ಸಂಚಾರಿ ಪೊಲೀಸರು ಸಹಕಾರ ನೀಡುತ್ತಿದ್ದಾರೆ. ಹಾಗೆಯೇ ಬಿಬಿಎಂಪಿ ಅಧಿಕಾರಿಗಳೂ ರಸ್ತೆ ಗುಂಡಿ ಪತ್ತೆ ಮಾಡುತ್ತಿದ್ದು, ಮಳೆ ಕಡಿಮೆಯಾದ ಕೂಡಲೇ ಆರ್ಟಿರಿಯಲ್‌, ಸಬ್‌ಆರ್ಟಿರಿಯಲ್‌ ರಸ್ತೆಗಳ ಗುಂಡಿ ಮುಚ್ಚಲು ಮೊದಲು ಆದ್ಯತೆ ಕೊಡಲಾಗುವುದು. ಜೊತೆಗೆ ವಾರ್ಡ್‌ ರಸ್ತೆಗಳ ಗುಂಡಿಯನ್ನು ಮುಚ್ಚಲು ಕ್ರಮಕೈಗೊಳ್ಳುತ್ತೇವೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

Follow Us:
Download App:
  • android
  • ios