Asianet Suvarna News Asianet Suvarna News

National youth Festival 2023: ದೇಶಾದ್ಯಂತ ವ್ಯಾಪಕ ಬೆಂಬಲ, 15 ಸಾವಿರಕ್ಕೂ ಅಧಿಕ ಮಂದಿ  ನೋಂದಣಿ

ಧಾರವಾಡದಲ್ಲಿ ಜನವರಿ 12 ರಿಂದ 16 ರ ವರೆಗೆ ನಡೆಯಲಿರುವ 26 ನೇ ರಾಷ್ಟ್ರೀಯ ಯುವ ಜನೋತ್ಸವಕ್ಕೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಯುವ ಜನೋತ್ಸವದಲ್ಲಿ ಪಾಲ್ಗೊಳ್ಳಲು ಯುವ ಪ್ರತಿನಿಧಿಗಳು ನಿರೀಕ್ಷೆಗೂ ಮೀರಿ ಆಸಕ್ತಿ ತೋರಿದ್ದಾರೆ. ಈಗಾಗಲೇ 15 ಸಾವಿರಕ್ಕೂ ಅಧಿಕ ಮಂದಿ  ನೋಂದಣಿ ಮಾಡಿಕೊಂಡಿದ್ದಾರೆ. 

more than 15 thousand people registered for National youth Festival 2023 gow
Author
First Published Jan 9, 2023, 5:21 PM IST

ವರದಿ: ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಧಾರವಾಡ(ಜ.9): ಧಾರವಾಡದಲ್ಲಿ ಜನವರಿ 12 ರಿಂದ 16 ರ ವರೆಗೆ ನಡೆಯಲಿರುವ 26 ನೇ ರಾಷ್ಟ್ರೀಯ ಯುವ ಜನೋತ್ಸವಕ್ಕೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಯುವ ಜನೋತ್ಸವದಲ್ಲಿ ಪಾಲ್ಗೊಳ್ಳಲು ಯುವ ಪ್ರತಿನಿಧಿಗಳು ನಿರೀಕ್ಷೆಗೂ ಮೀರಿ ಆಸಕ್ತಿ ತೋರಿದ್ದಾರೆ. “ಶಕ್ತಿಯೆಲ್ಲ ನಿಮ್ಮೊಳಗೇ ಇದೆ ,ನೀವು ಏನು ಬೇಕಾದರೂ ಮಾಡಬಲ್ಲಿರಿ, ಎಲ್ಲವನ್ನೂ ಮಾಡಬಲ್ಲಿರಿ” ಎಂಬ ಸ್ವಾಮಿ ವಿವೇಕಾನಂದರ ಯುವ ವಾಣಿಯನ್ನು ಸಾಕಾರಗೊಳಿಸಲು ಅವಳಿ ನಗರ ಸಜ್ಜಾಗಿದೆ. ಐದು ದಿನಗಳ ಯುವ ಜನೋತ್ಸವದಲ್ಲಿ ಭಾಗಿಯಾಗಲು ಸನ್ಮಾನ್ಯ ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಶ‍್ರೀ ಪ್ರಹ್ಲಾದ್ ಜೋಶಿ ಅವರು ಇತ್ತೀಚೆಗೆ https://nyfhubballidharwad2023.in/ ವೆಬ್ ಸೈಟ್ ಉದ್ಘಾಟಿಸಿದ್ದರು.

ಜನವರಿ 12 ರಂದು ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಉಧ್ಘಾಟಿತಗೊಳಲಿರುವ ರಾಷ್ಟ್ರೀಯ ಯುವ ಜನೋತ್ಸವ ವೀಕ್ಷಿಸಲು ಈಗಾಗಲೇ 15 ಸಾವಿರ ಮಂದಿ ನೋಂದಣಿಯಾಗಿದ್ದಾರೆ. ಒಟ್ಟು 7,500 ಮಂದಿ ಯುವ ಪ್ರತಿನಿಧಿಗಳು ಪಾಲ್ಗೊಳ್ಳಲು ಅವಕಾಶವಿದ್ದು, 75,000 ಪ್ರೇಕ್ಷಕರನ್ನು ಗುರಿಯಾಗಿಟ್ಟುಕೊಂಡು ರಾಷ್ಟ್ರೀಯ ಯುವ ಜನೋತ್ಸವವನ್ನು ಆಯೋಜಿಸಲಾಗುತ್ತಿದೆ. 

ಯುವ ಜನೋತ್ಸವದಲ್ಲಿ ಪಾಲ್ಗೊಳ್ಳಲು ನೋಂದಣಿ ಕಡ್ಡಾಯ. ದೇಶಾದ್ಯಂತ ನೊಂದಣಿಗೆ ಅನುಕೂಲ ಕಲ್ಪಿಸಲು ಜಿಲ್ಲಾಡಳಿತ ವೆಬ್ಸೈಟ್ ನ್ನು ರಚಿಸಿದೆ. ವೆಬ್ ಸೈಟ್ ಲೋಕಾರ್ಪಣೆ ಮಾಡಿದ ಕೆಲವೇ ಸಮಯದಲ್ಲಿ 5,203 ಮಂದಿ ನೋಂದಣಿಯಾಗಿದ್ದಾರೆ. ಇಡೀ ದೇಶದಲ್ಲಿ ಕರ್ನಾಟಕದಿಂದ ಹೆಚ್ಚು ಮಂದಿ ನೋಂದಣಿಯಾಗಿದ್ದು, 875 ಯುವ ಪ್ರತಿನಿಧಿಗಳು ಭಾಗವಹಿಸಲು ಆಸಕ್ತಿ ತೋರಿದ್ದಾರೆ. ಕರ್ನಾಟಕ ರಾಜ್ಯ ಸಂಘಟನೆಯಿಂದ 164, ಎನ್.ಎಸ್.ಎಸ್ ನಿಂದ 118, ಎನ್.ವೈ.ಕೆ.ಎಸ್ ನಿಂದ 443, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ವಿಭಾಗದಿಂದ 150 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ನಂತರದ ಸ್ಥಾನಗಳಲ್ಲಿ ತಮಿಳು ನಾಡು [346], ಆಂಧ್ರಪ್ರದೇಶ [323]ವಿದೆ. ನೋಂದಣಿ ಸಂಪೂರ್ಣ ಉಚಿತವಾಗಿದೆ.

ಯುವ ಜನೋತ್ಸವದಲ್ಲಿ ಭಾಗಿಯಾಗಲು ಎಲ್ಲರಿಗೂ ಅವಕಾಶವಿಲ್ಲ. ರಾಜ್ಯ ಎನ್.ವೈ.ಕೆ.ಎಸ್ ಮತ್ತು ರಾಜ್ಯ ಎನ್.ಎಸ್.ಎಸ್. ಸಂಘಟನೆಗಳಿಂದ ಪಾಲ್ಗೊಳ್ಳುವವರನ್ನು ರಾಜ್ಯ ಯುವ ಇಲಾಖೆ ಆಯ್ಕೆ ಮಾಡುತ್ತದೆ. ಪ್ರತಿಯೊಂದು ರಾಜ್ಯಕ್ಕೆ ಆಯಾ ಕೇಂದ್ರ ಸಂಸ್ಥೆಯಿಂದ ನಿರ್ದಿಷ್ಟ ಕೋಟಾ ನಿಗದಿ ಮಾಡಲಾಗುತ್ತದೆ. ಮುಂದಾಗಿಯೇ ನೋಂದಣಿ ಮಾಡಿಕೊಂಡರೆ ರಾಷ್ಟ್ರೀಯ ಯುವ ಜನೋತ್ಸವವನ್ನು ಅತ್ಯಂತ ಪರಿಣಾಮಕಾರಿಯಾಗಿ ಆಯೋಜಿಸಲು ಮತ್ತು ಸೂಕ್ತ ಯೋಜನೆ ರೂಪಿಸಲು ಸಾಧ್ಯವಾಗಲಿದೆ. 60 ಕ್ಕೂ ಹೆಚ್ಚು ಹೆಸರಾಂತ ತಜ್ಞರು ವಿಶೇಷ ಯುವ ಶೃಂಗಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ, ಜಿ20 ಮತ್ತು ವೈ20 ಕಾರ್ಯಕ್ರಮಗಳ ಕುರಿತು ಐದು ವಿಷಯಗಳ ಬಗ್ಗೆ ಸಮಗ್ರ ಚರ್ಚೆಗಳು ನಡೆಯಲಿವೆ.

"ಕೆಲಸದ ಭವಿಷ್ಯ, ಉದ್ಯಮ, ನಾವೀನ್ಯ ಮತ್ತು 21 ನೇ ಶತಮಾನದ ಕೌಶಲ್ಯಗಳು", "ಹವಾಮಾನ ಬದಲಾವಣೆ ಮತ್ತು ವಿಪತ್ತು ಅಪಾಯ ಕಡಿತ", "ಶಾಂತಿ ನಿರ್ಮಾಣ ಮತ್ತು ಸಮನ್ವಯ", "ಪ್ರಜಾಪ್ರಭುತ್ವ ಮತ್ತು ಆಡಳಿತದಲ್ಲಿ ಯುವಕರ ಭವಿಷ್ಯದ ಹಂಚಿಕೆ" ಹಾಗೂ "ಆರೋಗ್ಯ ಮತ್ತು ಯೋಗಕ್ಷೇಮ" ಕುರಿತು ವಿಷಯ ತಜ್ಞರು ಬೆಳಕು ಚೆಲ್ಲಲಿದ್ದಾರೆ. ಹೀಗಾಗಿ ಎಷ್ಟು ಜನ ಪಾಲ್ಗೊಳ್ಳಲಿದ್ದಾರೆ ಎಂಬ ಆಧಾರದ ಮೇಲೆ ಗೋಷ್ಠಿಗಳ ಆಯೋಜನೆ, ವಿಷಯ ತಜ್ಞರನ್ನು ನಿಯೋಜಿಸಲು, ಸಾರಿಗೆ, ವಸತಿ, ಊಟ ಮತ್ತಿತರ ಸೌಲಭ್ಯ ಕಲ್ಪಿಸಲು ಸಹಕಾರಿಯಾಗಲಿದೆ ಅಂತಿಮವಾಗಿ ಪ್ರತಿಯೊಬ್ಬರಿಗೂ ಕ್ಯೂ ಆರ್ ಕೋಡ್ ಇರುವ ವೈಯಕ್ತಿಕ ಗುರುತಿನ ಚೀಟಿ ಸಿದ್ಧಪಡಿಸಲು ಮತ್ತು ವೇದಿಕೆಗೆ ಆಗಮಿಸಿದಾಗ ನೋಂದಣಿ ಪ್ರಕ್ರಿಯೆ ತ್ವರಿತ ಮತ್ತು ಸುಗಮಗೊಳಿಸಬಹುದಾಗಿದೆ.

ಪ್ರತಿಯೊಬ್ಬ ಪ್ರತಿನಿಧಿಗೆ ಅವರ ವರ್ಗವನ್ನು ಆಧರಿಸಿ ವೆಬ್ ಸೈಟ್ ನಲ್ಲಿ ವೈಯಕ್ತಿಕ ಸಹಾಯ ವಿಭಾಗವಿದೆ. ಪ್ರಮುಖ ಸೂಚನೆಗಳು, ನೋಡೆಲ್ ಅಧಿಕಾರಿ ವಿವರಗಳು, ಸ್ಥಳ ನಕ್ಷೆ ಸೇರಿ ಎಲ್ಲಾ ಮಾಹಿತಿ ವೆಬ್ ಸೈಟ್ ನಲ್ಲಿ ಇರಲಿದೆ. ತಮ್ಮ ದೂರವಾಣಿ ಸಂಖ್ಯೆ ಬಳಸಿಕೊಂಡು ವಸತಿ ಮತ್ತಿತರ ಸೌಲಭ್ಯಗಳ ವಿವರಗಳನ್ನು ಪಡೆಯಬಹುದಾಗಿದೆ.

National Youth Festival 2023: ಯುವಜನೋತ್ಸವದ ನೆಪದಲ್ಲಿ ಹಣ ವಸೂಲಿ ಆರೋಪ

ವೆಬ್ ಸೈಟ್ ಸ್ಥಿತ ಸ್ಥಾಪಕ ಕ್ಲೌಡ್ ವ್ಯವಸ್ಥೆಯಾಗಿದ್ದು, ಏಕ ಕಾಲದಲ್ಲಿ ಸಹಸ್ರಾರು ಬಳಕೆದಾರರನ್ನು ನಿಭಾಯಿಸಲಿದೆ. ವೆಬ್ ಸೈಟ್ ನಲ್ಲಿ ಎಲ್ಲಾ ವೇದಿಕೆಗಳು, ಕಾರ್ಯಕ್ರಮಗಳು, ಸಮಯ ಮತ್ತಿತರ ಅಗತ್ಯ ಮಾಹಿತಿ ಒದಗಿಸಲಾಗುತ್ತದೆ. ಸೂಚನಾ ಫಲಕದಲ್ಲಿರುವ ಮಾಹಿತಿಯೂ ಇಲ್ಲಿ ಲಭ್ಯ ವಿರಲಿದೆ. ಪ್ರತಿಯೊಂದು ಚಟುವಟಿಕೆಗಳಿಗೆ ನೊಡೆಲ್ ಅಧಿಕಾರಿಗಳು ಜವಾಬ್ದಾರರಾಗಲಿದ್ದಾರೆ.  ಪ್ರವಾಸಿ ವಿವರಗಳ ಜೊತೆಗೆ ಕಾರ್ಯಕ್ರಮದ ಪಟ್ಟಿ, ಕ್ಷಣ ಕ್ಷಣಕ್ಕೂ ಅಪ್ ಲೋಡ್ ಮಾಡುವ ಸಕಾಲಿಕ ಮಾಹಿತಿ ಲಭ್ಯವಾಗಲಿದೆ.

 

National Youth Festival 2023: ವಿಶೇಷ ನೋಂದಣಿ ಕಿಟ್ ಜೊತೆ ಗಣ್ಯರ ಸ್ವಾಗತಕ್ಕೆ ಭರ್ಜರಿ ಸಿದ್ಧತೆ

ರಾಷ್ಟ್ರೀಯ ಯುವ ಜನೋತ್ಸವವನ್ನು ಗೌರವಾನ್ವಿತ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಜ. 12 ರಂದು ಉದ್ಘಾಟಿಸಲಿದ್ದು, ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಈ ಉತ್ಸವ ಯುವಜನರಿಗಾಗಿ, ಯುವ ಸಮೂಹವೇ ಪಾಲ್ಗೊಳ್ಳಲಿ ಎನ್ನುವ ಉದ್ದೇಶದಿಂದ ನೋಂದಣಿಗೆ ಅವಕಾಶ ಮಾಡಿಕೊಟ್ಟಿದ್ದು, ಈಗಾಗಲೇ 15 ಸಾವಿರ ಯುವ ಜನರು  ನೋಂದಾಯಿಸಿಕೊಂಡಿದ್ದಾರೆ. ಇನ್ನು ಕೆಲವೇ ಕೆಲವು ಅವಕಾಶಗಳು ಉಳಿದಿದ್ದು, ಆಸಕ್ತ ಯುವಕ – ಯುವತಿಯರು ನೋಂದಣಿ ಮೂಲಕ ನೇರವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

Follow Us:
Download App:
  • android
  • ios