ದೊಡ್ಡ ನಗರಗಳಲ್ಲಿ ಒತ್ತಡದಿಂದ ನಾವು ಯಂತ್ರಗಳಂತೆ ಕೆಲಸ ಮಾಡುತ್ತಿದ್ದೇವೆ. ವಾಯು ಮಾಲಿನ್ಯ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದು ಹಳ್ಳಿಗಳಿಗೆ ಓಡಿ ಹೋಗುವ ಕಾಲ ಬರುತ್ತದೆ ಎಂದು ಸಂಸದ ಡಾ.ಸಿ.ಎನ್‌.ಮಂಜುನಾಥ್‌ ಎಚ್ಚರಿಸಿದರು.

ಬೆಂಗಳೂರು : ದೊಡ್ಡ ನಗರಗಳಲ್ಲಿ ಒತ್ತಡದಿಂದ ನಾವು ಯಂತ್ರಗಳಂತೆ ಕೆಲಸ ಮಾಡುತ್ತಿದ್ದೇವೆ. ವಾಯು ಮಾಲಿನ್ಯ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದು ಹಳ್ಳಿಗಳಿಗೆ ಓಡಿ ಹೋಗುವ ಕಾಲ ಬರುತ್ತದೆ ಎಂದು ಸಂಸದ ಡಾ.ಸಿ.ಎನ್‌.ಮಂಜುನಾಥ್‌ ಎಚ್ಚರಿಸಿದರು.

ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಹಾಗೂ ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ಲಾಲ್‌ಬಾಗ್‌ನಲ್ಲಿ ಶನಿವಾರ ಆಯೋಜಿಸಿದ್ದ ಎರಡನೇ ರಾಷ್ಟ್ರೀಯ ಮರಗೆತ್ತನೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ದೊಡ್ಡ ನಗರಗಳಲ್ಲಿ ‘ಅಂತರ್ಜಲ’ ಕುಸಿಯುತ್ತಿದ್ದು ‘ಅಂತರ್ಜಾಲ’ ಹೆಚ್ಚಾಗುತ್ತಿದೆ. ವಾಯುಮಾಲಿನ್ಯದಿಂದಾಗಿ ಉಸಿರಾಟದ ಸಮಸ್ಯೆ, ಅಸ್ತಮಾ, ಕೆಮ್ಮು ಜಾಸ್ತಿಯಾಗುತ್ತದೆ ಎಂದು ಜನಸಾಮಾನ್ಯರು ತಿಳಿದಿದ್ದಾರೆ. ಆದರೆ ವಾಯು ಮಾಲಿನ್ಯ ಕೃತಕ ಧೂಮಪಾನವಾಗಿದ್ದು ಹೃದಯಾಘಾತ ಆಗಬಹುದು. ಗರ್ಭಪಾತ, ಜನಿಸುವ ಮಗುವಿನ ತೂಕ ಕಡಿಮೆ ಇರುವುದು ಮತ್ತಿತರ ಸಮಸ್ಯೆಗಳು ಉದ್ಭವಿಸುತ್ತವೆ. ಆದ್ದರಿಂದ ಎಚ್ಚರದಿಂದ ಇರಬೇಕು ಎಂದು ಸಲಹೆ ನೀಡಿದರು.

ಧೂಮಪಾನಕ್ಕಿಂತ ಅಧಿಕ ಸಾವು:

ವರದಿಯೊಂದರ ಪ್ರಕಾರ ಕಳೆದ ವರ್ಷ ದೇಶದಲ್ಲಿ ವಾಯ ಮಾಲಿನ್ಯದಿಂದಾಗಿ 22 ಲಕ್ಷ ಜನ ಮೃತಪಟ್ಟಿದ್ದಾರೆ. ಆದರೆ ಧೂಮಪಾನದಿಂದಾಗಿ ಮೃತಪಟ್ಟವರ ಸಂಖ್ಯೆ 14 ಲಕ್ಷ ಮಾತ್ರ. ವಾಹನಗಳ ದಟ್ಟಣೆ, ಕಟ್ಟಡಗಳ ಧೂಳು, ಬೆಂಕಿ ಹಚ್ಚುವುದು, ಕೈಗಾರಿಕೆಗಳಿಂದ ಹೊರಸೂಸುವ ಅನಿಲಗಳಿಂದಾಗಿ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ. ದೆಹಲಿಯಲ್ಲಿ ಎದುರುಗಡೆ ಇರುವ ಮನುಷ್ಯರೇ ಕಾಣಿಸುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ನಮಗೆ ಇಂದು ಶುದ್ಧ ಗಾಳಿ ಬೇಕಿದೆ.

ನಗರಕ್ಕೆ ಲಾಲ್‌ಬಾಗ್‌, ಕಬ್ಬನ್‌ ಪಾರ್ಕ್‌ ಮಾದರಿಯಲ್ಲಿ ಇನ್ನೂ ಮೂರ್ನಾಲ್ಕು ಉದ್ಯಾನವನಗಳ ಅವಶ್ಯಕತೆ ಇದೆ. ಇಲ್ಲಿ ಮರಗಳಿಂದ ಕಲಾಕೃತಿ ರಚಿಸಿರುವ ಈ ಕಲಾವಿದರೇ ನಿಜವಾದ ಪರಿಸರದ ಹಿರೋಗಳಾಗಿದ್ದಾರೆ. ನಮ್ಮ ಬದುಕಿಗೆ ನಿಜವಾದ ಫೇಸ್‌ ಮೇಕರ್‌ ಪರಿಸರವಾಗಿದ್ದು ಇದನ್ನು ನಾವು ಉಳಿಸಿ ಬೆಳೆಸಬೇಕು ಎಂದು ಕರೆ ನೀಡಿದರು.

ಮರದಿಂದ ಕೆತ್ತಿದ ಹುಲಿ, ಜೇನುಹುಳ ಮತ್ತಿತರ ಕಲಾ ಕೃತಿಗಳು ಗಮನ ಸೆಳೆದವು. ಇದೇ ಸಂದರ್ಭದಲ್ಲಿ ಮರಗೆತ್ತನೆಯಲ್ಲಿ ಪಾಲ್ಗೊಂಡ ಕಲಾವಿದರನ್ನು ಗೌರವಿಸಲಾಯಿತು. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಎಂ.ಸಿ.ರಮೇಶ್‌, ಪರಿಸರ ತಜ್ಞ ಡಾ.ಎ.ಎನ್‌.ಯಲ್ಲಪರೆಡ್ಡಿ, ತೋಟಗಾರಿಕಾ ಇಲಾಖೆ ಅಪರ ನಿರ್ದೇಶಕ ಡಾ.ಎಂ.ಜಗದೀಶ್‌ ಮತ್ತಿತರರು ಉಪಸ್ಥಿತರಿದ್ದರು.