ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಿಂದಾಗಿ ವ್ಯಾಪಕ ಹಾನಿ ಉಂಟಾಗಿದೆ. ಪ್ರವಾಹ, ಭೂಕುಸಿತಗಳಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಸಾವುನೋವುಗಳು ಸಂಭವಿಸಿವೆ.
ದೆಹಲಿ: ಕಳೆದ ಕೆಲ ದಿನಗಳಿಂದ ಉತ್ತರ, ಪೂರ್ವ ಮತ್ತು ಪಶ್ಚಿಮದ ರಾಜ್ಯಗಳಲ್ಲಿ ಭಾರೀ ಅನಾಹುತ ಸೃಷ್ಟಿಸಿರುವ ಮಳೆ ಬುಧವಾರವೂ ತನ್ನ ಪ್ರತಾಪ ಮುಂದುವರೆದಿದೆ. ಒಟ್ಟು 10 ರಾಜ್ಯಗಳಲ್ಲಿ ಮಳೆ ಅಬ್ಬರ ತೋರಿಸಿದ್ದು ಒಂದೇ ದಿನ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ. ಭಾರೀ ಮಳೆಯಿಂದಾಗಿ ಹಲವು ರಾಜ್ಯಗಳಲ್ಲಿ ಭಾರೀ ಪ್ರಮಾಣದ ಭೂಕುಸಿತ, ಪ್ರವಾಹದಂಥ ಘಟನೆಗಳು ಸಂಭವಿಸಿದ್ದು, ರೈಲು, ವಿಮಾನ, ವಾಹನಗಳ ಸಂಚಾರಕ್ಕೆ ಅಡ್ಡಿ ಮಾಡಿದೆ. ಭಾರೀ ಮಳೆಯಿಂದಾಗಿ ಸಾಮಾನ್ಯ ಜನಜೀವನದಲ್ಲಿ ವ್ಯತ್ಯಯವಾಗಿದ್ದು, ಸುರಕ್ಷತಾ ದೃಷ್ಟಿಯಿಂದ ಹಲವು ರಾಜ್ಯಗಳಲ್ಲಿ ಶಾಲಾಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ದೆಹಲಿ: ದೆಹಲಿಯಲ್ಲಿ ಬುಧವಾರವೂ ಮಳೆ ಮುಂದುವರೆದಿದ್ದು ಹಳೆ ರೈಲ್ವೆ ಸೇತುವೆ ಪ್ರದೇಶದಲ್ಲಿ ಯಮುನಾ ನದಿಯ ನೀರಿನ ಮಟ್ಟ 207 ಮೀಟರ್ ದಾಟಿದೆ. ಯಮುನಾ ನದಿ ಈ ಮಟ್ಟ ತಲುಪಿರುವುದು ಕಳೆದ 63 ವರ್ಷಗಳಲ್ಲಿ ಇದು ಮೂರನೇ ಬಾರಿ. ಭಾರೀ ಮಳೆಯ ಪ್ರಮಾಣ ಹಲವು ಸ್ಮಶಾನಗಳಿಗೂ ನೀರು ನುಗ್ಗಿದ್ದು ಅಲ್ಲಿ ಅಂತ್ಯಸಂಸ್ಕಾರ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ತಗ್ಗುಪ್ರದೇಶಗಳಲ್ಲಿ ಇನ್ನೂ 7500 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
ಮಾಲಿನ್ಯ ಇಳಿಕೆ: ಕಳೆದ ಕೆಲ ದಿನಗಳ ಭಾರೀ ಮಳೆ ಇಳಿಕೆ ಪರಿಣಾಮ ನವದೆಹಲಿಯ ಹಲವು ಪ್ರದೇಶಗಳಲ್ಲಿ ವಾಯುಗುಣಮಟ್ಟ ಸೂಚ್ಯಂಕ 52ಕ್ಕೆ ಇಳಿದಿತ್ತು. ಇದು ತೃಪ್ತಿದಾಯಕ ಮಟ್ಟವಾಗಿದೆ.
ಕಾಶ್ಮೀರ: ರಾಜ್ಯದಲ್ಲಿ ಮಳೆ ಮುಂದುವರೆದಿದ್ದು ಅಕ್ನೂರ್ ಗ್ರಾಮದಲ್ಲಿ ಮಳೆ ಸಂಬಂಧಿ ಘಟನೆಗೆ ಇಬ್ಬರು ಬಲಿಯಾಗಿದ್ದಾರೆ. ಇನ್ನೊಂದೆಡೆ ಪ್ರವಾಹ ಪೀಡಿತ ಗ್ರಾಮದಲ್ಲಿ ಸಿಕ್ಕಿಬಿದ್ದಿದ್ದ ಅಲೆಮಾರಿ ಸಮುದಾಯಕ್ಕೆ ಸೇರಿದ 40 ಜನರನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ. ರಾಜ್ಯದ ಬಹುತೇಕ ನದಿಗಳು ಹಲವು ಸ್ಥಳಗಳಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಜಮ್ಮುವಿನಲ್ಲಿ ವೈಷ್ಣೋದೇವಿ ಮಾರ್ಗದಲ್ಲಿ ಬುಧವಾರ ಮತ್ತೆ ಭೂಕುಸಿತ ಸಂಭವಿಸಿದೆ. ಆದರೆ ಈಗಾಗಲೇ ಯಾತ್ರೆ ಸ್ಥಗಿತಗೊಳಿಸಿದ ಕಾರಣ ಯಾವುದೇ ಸಾವು ನೋವು ಸಂಭವಿಸಿಲ್ಲ. ಈಗಾಗಲೇ ಈ ಸ್ಥಳದಿಂದ ಅಧಿಕಾರಿಗಳನ್ನು ಕೂಡಾ ತೆರವುಗೊಳಿಸಲಾಗಿದೆ. ಆದರೆ ದೇಗುಲದಲ್ಲಿ ಅರ್ಚಕರು ಎಂದಿನಂತೆ ಪೂಜಾ ವಿಧಿ ವಿಧಾನ ಮುಂದುವರೆಸಿದ್ದಾರೆ.
ಹಿಮಾಚಲ ಪ್ರದೇಶ: ರಾಜ್ಯದಲ್ಲಿ ಬುಧವಾರವೂ ಭಾರೀ ಮಳೆಯಿಂದ ಹಲವು ಕಡೆ ಭೂಕುಸಿತ ಸಂಭವಿಸಿದೆ. ಈ ನಡುವೆ ಮಂಡಿ ಜಿಲ್ಲೆಯಲ್ಲಿ ಮಂಗಳವಾರ ಭೂಕುಸಿತ ಸಂಭವಿಸಿದ್ದ ಪ್ರದೇಶದಲ್ಲಿ ಇನ್ನೂ 4 ಶವ ಪತ್ತೆಯಾಗಿದೆ. ಹೀಗಾಗಿ ಮಂಗಳವಾರದ ಘಟನೆಗೆ ಬಲಿಯಾದವರ ಸಂಖ್ಯೆ 7ಕ್ಕೆ ಏರಿದೆ. ಸದ್ಯ ರಾಜ್ಯದಲ್ಲಿ 1162 ರಸ್ತೆಗಳನ್ನು ಸಂಚಾರಕ್ಕೆ ನಿರ್ಬಂಧಿಸಲಾಗಿದೆ. ರಾಜ್ಯದಲ್ಲಿ ಮುಂಗಾರು ಆರಂಭದ ಬಳಿಕ 95 ದಿಢೀರ್ ಪ್ರವಾಹ, 45 ಮೇಘಸ್ಫೋಟ, 122 ದೊಡ್ಡ ಭೂಕುಸಿತ ಘಟನೆ ನಡೆದಿದ್ದು ಮಳೆ ಸಂಬಂಧಿತ ಘಟನೆಗಳು ಮತ್ತು ರಸ್ತೆ ಅಪಘಾತಕ್ಕೆ 341 ಜನರು ಬಲಿಯಾಗಿದ್ದಾರೆ. ಅಂದಾಜು 3525 ಕೋಟಿ ರು.ಮೌಲ್ಯದ ಆಸ್ತಿಪಾಸ್ತಿಗೆ ಹಾನಿಯಾಗಿದೆ.
ಇದನ್ನೂ ಓದಿ: ಸೇನೆಯಿಂದ 4 ದಿನಗಳಿಂದ ಪ್ರವಾಹಪೀಡಿತ ಸ್ಥಳದಲ್ಲಿ ಸಿಲುಕಿದ್ದ ಬಾಣಂತಿ, 15 ದಿನಗಳ ಮಗುವಿನ ರಕ್ಷಣೆ
ಪಂಜಾಬ್: ಕಳೆದ 4-5 ದಶಕಗಳಲ್ಲೇ ಭೀಕರ ಪ್ರವಾಹಕ್ಕೆ ತುತ್ತಾಗಿರುವ ಪಂಜಾಬ್‌ನಲ್ಲಿ ಬುಧವಾರ ಇನ್ನೊಂದು ಸುತ್ತಿನಲ್ಲಿ ಭಾರೀ ಮಳೆ ಸುರಿದಿದ್ದು, ಉಕ್ಕೇರಿ ಹರಿಯುತ್ತಿರುವ ಹಲವು ನದಿಗಳು ಜನವಸತಿ ಮತ್ತು ಕೃಷಿ ಪ್ರದೇಶಗಳಿಗೆ ನುಗ್ಗಿ ಭಾರೀ ಹಾನಿ ಉಂಟು ಮಾಡಿದೆ. ರಾಜ್ಯದಲ್ಲಿ 1650ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿವೆ. ಮಳೆ ಸಂಬಂಧಿ ಘಟನೆಗಳು ಕಳೆದ ಒಂದು ತಿಂಗಳಲ್ಲಿ ರಾಜ್ಯದಲ್ಲಿ 39 ಜನರನ್ನು ಬಲಿಪಡೆದಿದ್ದು, 3.5 ಲಕ್ಷಕ್ಕೂ ಹೆಚ್ಚು ಜನರನ್ನು ಬಾಧಿಸಿವೆ.
ಛತ್ತೀಸ್‌ಗಢ: ರಾಜ್ಯದ ಬಲರಾಂಪುರ ಜಿಲ್ಲೆಯಲ್ಲಿನ ಸಣ್ಣ ಅಣೆಕಟ್ಟೆಯೊಂದು ಒಡೆದು ಸಮೀಪದ ಪ್ರದೇಶಗಳಿಗೆ ನೀರು ನುಗ್ಗಿದ ಕಾರಣ ನಾಲ್ವರು ಸಾವನ್ನಪ್ಪಿ, ಇತರೆ ಮೂವರು ನಾಪತ್ತೆಯಾದ ಘಟನೆ ನಡೆದಿದೆ.
ಹರ್ಯಾಣ: ರಾಜ್ಯದಲ್ಲಿ ಕುರುಕ್ಷೇತ್ರದ ಅಮರ್‌ವಿಹಾರ್ ಕಾಲೋನಿಯಲ್ಲಿ ಮನೆ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ. ಉಳಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ.
ಇದನ್ನೂ ಓದಿ: ಭಾರಿ ಮಳೆ ಪ್ರವಾಹಕ್ಕೆ ತತ್ತರ, ಸೆ.7ರ ವರೆಗೆ ಎರಡು ರಾಜ್ಯಗಳ ಶಾಲಾ ಕಾಲೇಜಿಗೆ ರಜೆ
ವಿವಿಧೆಡೆ ಮಳೆ: ರಾಜಸ್ಥಾನದಲ್ಲಿ ಬುಧವಾರ ಭಾರೀ ಮಳೆ ಮುಂದುವರೆದಿದ್ದು ಜೊತೆಗೆ ರಸ್ತೆ, ವಿಮಾನ, ರೈಲು ಸಂಚಾರ ವ್ಯತ್ಯಯಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಒಡಿಶಾದಲ್ಲೂ ಭಾರೀ ಮಳೆ ಸುರಿದ್ದು ಜನಜೀವನಕ್ಕೆ ಅಡ್ಡಿಯಾಗಿದೆ.
- ಭಾರೀ ಮಳೆಗೆ ಭೂಕುಸಿತ, ಪ್ರವಾಹ
- ರೈಲು, ವಿಮಾನ, ವಾಹನ ಸಂಚಾರ ಅಸ್ತವ್ಯಸ್ತ
- ದೆಹಲಿಯಲ್ಲಿ ಉಕ್ಕೇರಿದ ಯಮುನಾ ನದಿ
- ಕಳೆದ 63 ವರ್ಷಗಳಲ್ಲೇ 3ನೇ ಬಾರಿ ಗರಿಷ್ಠ
