Asianet Suvarna News Asianet Suvarna News

Dharwad; ಮುಂಗಾರು ಮಳೆ 89 ಸಾವಿರ ಹೆಕ್ಟೇರ್ ಕೃಷಿ ಬೆಳೆ ಹಾನಿ

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ಸುಮಾರು 89,148 ಹೆಕ್ಟೇರ್ ಪ್ರದೇಶದ ಕೃಷಿಬೆಳೆಗಳು ಹಾನಿಯಾಗಿವೆ‌‌. ಹೆಸರು,ಉದ್ದು ಕೊಯ್ಲು ಮಾಡಲು ಸಾಧ್ಯವಾಗದೇ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ.

Monsoon rains damaged 89 thousand hectares of agricultural crops in dharwad gow
Author
Bengaluru, First Published Aug 9, 2022, 8:02 PM IST

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಧಾರವಾಡ (ಆ.9): ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಸುಮಾರು 89,148 ಹೆಕ್ಟೇರ್ ಪ್ರದೇಶದ ಕೃಷಿಬೆಳೆಗಳು ಹಾನಿಯಾಗಿವೆ‌‌. ಹೆಸರು,ಉದ್ದು ಕೊಯ್ಲು ಮಾಡಲು ಸಾಧ್ಯವಾಗದೇ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಜಂಟಿ ಸಮೀಕ್ಷೆ ಸಮರ್ಪಕವಾಗಿ ಕೈಗೊಂಡು ಹಾನಿಯ ನಿಖರ ಮಾಹಿತಿ ದಾಖಲಿಸಬೇಕು‌. ಬೆಳೆ ವಿಮಾ ಕಂಪೆನಿಗಳ ಪ್ರತಿನಿಧಿಗಳು ಸ್ಥಳೀಯವಾಗಿ ಲಭ್ಯ ಇರಬೇಕು. ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಿ ರೈತರಿಗೆ ಸ್ಪಂದಿಸಬೇಕು ಎಂದು ಕೃಷಿ ಸಚಿವ ಬಿ.ಸಿ‌.ಪಾಟೀಲ ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಪ್ರವಾಹ ಪರಿಸ್ಥಿತಿ ಮತ್ತು ಬೆಳೆಹಾನಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು . ಬೆಳೆವಿಮಾ ಕಂಪೆನಿಗಳ ಪ್ರತಿನಿಧಿಗಳು ಸ್ಥಳೀಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಲಭ್ಯ ಇರಬೇಕು. ಎಸ್‌ಡಿಆರ್‌ಎಫ್, ಎನ್‌ಡಿಆರ್ ಎಫ್ ಮಾರ್ಗಸೂಚಿಗಳನ್ವಯ ಪರಿಹಾರಕ್ಕೆ ಜಂಟಿ ಸಮೀಕ್ಷೆ ಸಮರ್ಪಕವಾಗಿ ನಡೆಯಬೇಕು. ಈ ವರ್ಷ ಅಧಿಕ ಮಳೆಯಿಂದ ತುರ್ತು ಪರಿಸ್ಥಿತಿಯ ಸನ್ನಿವೇಶ ಸೃಷ್ಟಿಯಾಗಿದೆ. ಅಧಿಕಾರಿಗಳು ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸಿ,ರೈತರಿಗೆ ಸಕಾಲದಲ್ಲಿ ಸ್ಪಂದಿಸಬೇಕು.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್,ಕರ್ನಾಟಕ ರೈತ ಸುರಕ್ಷಾ ಫಸಲ್ ವಿಮಾ  ಯೋಜನೆಯಡಿ ನೋಂದಾಯಿಸಿಕೊಂಡಿರುವ ರೈತರು ಇ-ಕೆವೈಸಿಮಾಡಿಕೊಳ್ಳಬೇಕು.ರಾಜ್ಯದಲ್ಲಿಯೇ ಧಾರವಾಡ ಜಿಲ್ಲೆಯಲ್ಲಿ ಅತಿಹೆಚ್ಚು ಅಂದರೆ 30 ಸಾವಿರ ಲೀಟರ್ ನ್ಯಾನೋ ಯೂರಿಯಾ ಬಳಸಿದ್ದಾರೆ.ಜಾಗತಿಕ ತಾಪಮಾನ ನಿಯಂತ್ರಣ ಹಾಗೂ ಭೂಮಿಯ ಫಲವತ್ತತೆ ಹೆಚ್ಚಳಕ್ಕೆ ಇದು ಪೂರಕವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯ ಪ್ರಶಂಸನೀಯ ಎಂದರು.

Chitradurga; ಜಿಟಿ ಜಿಟಿ ಮಳೆಗೆ ಅಡಿಕೆ, ಈರುಳ್ಳಿ ಬೆಳೆ ಸಂಪೂರ್ಣ ನಾಶ

ಶಾಸಕ ಅಮೃತ ದೇಸಾಯಿ ಮಾತನಾಡಿ,ಈ ಬಾರಿ ಉತ್ತಮ ಬೆಳೆ ಬಂದಿತ್ತು ಅತಿವೃಷ್ಟಿಯಿಂದಾಗಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಬೆಳೆವಿಮಾ ಕಂಪೆನಿಗಳ ಬಗ್ಗೆ ರೈತರು ಅಸಮಾಧಾನ ಹೊಂದಿದ್ದಾರೆ. ಕಂಪೆನಿಗಳು ರೈತಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು ಎಂದರು. ಜಂಟಿ ಕೃಷಿ ನಿರ್ದೇಶಕ ರಾಜಶೇಖರ ಐ.ಬಿ.ಮಾತನಾಡಿ, ಜೂನ್ ಹಾಗೂ ಜುಲೈ ತಿಂಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಜಿಲ್ಲೆಯಲ್ಲಿ ಸುಮಾರು 89 ಸಾವಿರ ಹೆಕ್ಟೇರ್‌ಗೂ ಅಧಿಕ ಕೃಷಿ ಬೆಳೆ ಹಾನಿಯಾಗಿದೆ. ಇದರಲ್ಲಿ ಹೆಸರು ಬೆಳೆ ಹಾನಿಯ ಪ್ರಮಾಣವೇ 61 ಸಾವಿರ ಹೆಕ್ಟೇರಿನಷ್ಟಿದೆ.

ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರ ಕಾಟಾಚಾರದ ಮಳೆ ಹಾನಿ ವಿಸಿಟ್!

ಹೆಚ್ಚಿನ ಮಳೆಯಿಂದ ಹೆಸರು ಮತ್ತು ಉದ್ದು ಬೆಳೆಯ ಕೋಯ್ಲು ಕಷ್ಟಸಾಧ್ಯವಾಗಿದೆ. ಅಧಿಕ ತೇವಾಂಶದಿಂದ ಶೇಂಗಾ ಕೊಳೆಯುವ ಹಂತದಲ್ಲಿದೆ. ಹತ್ತಿ,ಮೆಕ್ಕೆಜೋಳ ಬೆಳೆಗಳ ಬೆಳವಣಿಗೆ ಕುಂಠಿತವಾಗಿದೆ. 1,48,166 ರೈತರು ಬೆಳೆವಿಮೆ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ.ಜಿಲ್ಲೆಯಲ್ಲಿ ಬೀಜ,ರಸಗೊಬ್ಬರ ಪೂರೈಕೆ ಸಮರ್ಪಕವಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಉಪವಿಭಾಗಾಧಿಕಾರಿ ಅಶೋಕ ತೇಲಿ ಮತ್ತಿತರರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Follow Us:
Download App:
  • android
  • ios