ಶಿವಮೊಗ್ಗ(ಜು.17): ರಿಪ್ಪನ್‌ಪೇಟೆಯ ತಿಲಕ್‌ನಗರ ರಸ್ತೆ ಕಾಮಗಾರಿ ಮಾಡಿ ಒಂದೆರಡು ತಿಂಗಳಲ್ಲಿ ಒಂದೆ ಮಳೆಗೆ ಡಾಂಬರ್‌ ಕಿತ್ತು ಹೋಗಿದೆ ಎಂದು ತಿಲಕ್‌ನಗರ ನಿವಾಸಿಗಳು ದೂರಿದ್ದಾರೆ.

ಕಳಪೆಯಾಗಿ ರಸ್ತೆ ಕಾಮಗಾರಿ ನಿರ್ವಹಿಸಲಾಗಿದ್ದು, ಸಣ್ಣ ಮಳೆಗೆ ಡಾಂಬರ್‌ ರಸ್ತೆ ಬಣ್ಣ ಬಯಲಾಗಿದೆ. ರಸ್ತೆ ಅಲ್ಲಲ್ಲಿ ಕಿತ್ತು ಹೋಗುತ್ತಿದ್ದು ಇನ್ನೂ ಜಾನುವಾರು, ಎಮ್ಮೆಗಳು ಮೂತ್ರ ವಿಸರ್ಜನೆ ಮಾಡಿದರೂ ಸಾಕು ರಸ್ತೆ ಹೊಂಡ-ಗುಂಡಿ ಬೀಳುತ್ತದೆ. ಅಷ್ಟುಕಳಪೆ ಗುಣಮಟ್ಟದಲ್ಲಿ ರಸ್ತೆಗೆ ಡಾಂಬರ್‌ ಹಾಕಲಾಗಿದೆ ಎಂದು ನಿವಾಸಿಗಳು ಅಸಮಧಾನ ವ್ಯಕ್ತ ಪಡಿಸಿದ್ದಾರೆ.

ಗ್ರಾಮ ಪಂಚಾಯ್ತಿ ಹಿಂಭಾಗದ ಈ ರಸ್ತೆಯಲ್ಲಿರುವ ಜಿಲ್ಲಾ ಸಹಕಾರ ಬ್ಯಾಂಕ್‌, ಸರ್ಕಾರಿ ಹಿರಿಯ ಪ್ರಾಥಮಿಕ ಮಾದರಿ ಪಾಠಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಬಿಎಸ್‌ಎನ್‌ಎಲ್‌ ಕಚೇರಿ, ಜನಸ್ನೇಹಿ ಕೇಂದ್ರ, ಜಂಬಳ್ಳಿ ವೃತ್ತದ ನ್ಯಾಯಬೆಲೆ ಅಂಗಡಿ, ವಿಎಸ್‌ಎಸ್‌ಎನ್‌ಬಿಯ ನ್ಯಾಯಬೆಲೆ ಅಂಗಡಿಗೆ ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಜನರು ಓಡಾಡುತ್ತಾರೆ. ಈ ಕಳಪೆ ರಸ್ತೆ ಕಾಮಗಾರಿ ಕಂಡು ಹಿಡಿ ಶಾಪ ಹಾಕುತ್ತಿದ್ದಾರೆ.

ಗುಣಮಟ್ಟದ ಬಗ್ಗೆ ಸೂಚನೆ ಕೊಟ್ಟರೂ, ಕಳಪೆ ಕಾಮಗಾರಿ:

ಶಾಸಕ ಹರತಾಳು ಹಾಲಪ್ಪನವರು ಈ ಡಾಂಬರ್‌ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಗುಣಮಟ್ಟದ ರಸ್ತೆ ನಿರ್ಮಿಸುವಂತೆ ಬಹಿರಂಗ ಸಭೆಯಲ್ಲಿ ಗುತ್ತಿಗೆದಾರರಿಗೆ ಸೂಚಿಸಿದರೂ ಕೂಡಾ ಅವರ ಮಾತಿಗೆ ಬೆಲೆಯೆ ಇಲ್ಲದಂತೆ ಇಂತಹ ಕಳಪೆ ರಸ್ತೆ ಮಾಡಿರುವುದು ತೀವ್ರ ಅಸಮಧಾನಕ್ಕೆ ಕಾರಣವಾಗಿದೆ. ಇನ್ನಾದರೂ ಈ ರಸ್ತೆ ಕಾಮಗಾರಿಯನ್ನು ದುರಸ್ತಿ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬನ್ನಿ, ಕಳಪೆ ಕಾಮಗಾರಿ ಪರಿಶೀಲನೆ ಮಾಡಿ ಸಚಿವರೇ