Vijayapura: ಭೀಮಾತೀರದ ಜನರಿಗೆ ಉರಗ ಭಯ: ನಿರಂತರ ಮಳೆಗೆ ಶುರುವಾಗಿದೆ ಸರ್ಪಗಳ ಕಾಟ!
ಜಿಲ್ಲೆಯಾದ್ಯಂತ ಕಂಡು ಕೇಳರಿಯದ ಮಳೆಯಾಗ್ತಿದೆ. ಅತಿವೃಷ್ಟಿಯಿಂದ ಜನ ಕಂಗಾಲಾಗಿದ್ದಾರೆ. ಈ ನಿರಂತರ ಮಳೆಯ ನಡುವೆ ಹೊಸದೊಂದು ಭಯ ಜಿಲ್ಲೆಯ ಇಂಡಿ, ಚಡಚಣ ತಾಲೂಕಿನ ತೋಟದ ವಸ್ತಿಯ ಜನರಿಗೆ ಎದುರಾಗಿದೆ.
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಅ.22): ಜಿಲ್ಲೆಯಾದ್ಯಂತ ಕಂಡು ಕೇಳರಿಯದ ಮಳೆಯಾಗ್ತಿದೆ. ಅತಿವೃಷ್ಟಿಯಿಂದ ಜನ ಕಂಗಾಲಾಗಿದ್ದಾರೆ. ಈ ನಿರಂತರ ಮಳೆಯ ನಡುವೆ ಹೊಸದೊಂದು ಭಯ ಜಿಲ್ಲೆಯ ಇಂಡಿ, ಚಡಚಣ ತಾಲೂಕಿನ ತೋಟದ ವಸ್ತಿಯ ಜನರಿಗೆ ಎದುರಾಗಿದೆ. ಮಳೆಯಿಂದಾಗಿ ಸರ್ಪಗಳು ಮನೆಗಳಿಗೆ ನುಗ್ತಿದ್ದು ಜನ ಬೆಚ್ಚಿಬಿದ್ದಿದ್ದಾರೆ. ಹಾವಿನ ಭಯಕ್ಕೆ ಈ ಭಾಗದ ಜನರು ಮಾಡ್ತಿರೋದನ್ನ ಕೇಳಿದ್ರೆ ನೀವು ಖಂಡಿತ ಶಾಕ್ ಆಗ್ತಿರೀ.
ಹಾವಿನ ಭಯಕ್ಕೆ ಮನೆಗೆ ಬೆಂಕಿ: ಮಳೆಯಿಂದಾಗಿ ಹಾವುಗಳು ತಮ್ಮ ರಕ್ಷಣೆಗಾಗಿ ಗುಡಿಸಲು, ಮನೆ, ತೋಟವಸ್ತಿಗಳಲ್ಲಿ ಸೇರಿಕೊಳ್ತಿವೆ. ಇದ್ದಕ್ಕಿದ್ದಂತೆ ಮನೆಗಳಲ್ಲಿ ಹಾವುಗಳನ್ನ ಕಂಡು ಜನರು ಭಯ ಬೀಳ್ತಿದ್ದಾರೆ. ಆದ್ರೆ ಅಚ್ಚರಿಯ ವಿಚಾರ ಅಂದ್ರೆ ಮನೆಗೆ ಹಾವು ಹೊಕ್ಕಿದ್ದಕ್ಕೆ ಕೆಲವರು ಮನೆಗಳಿಗೆ ಬೆಂಕಿ ಇಡ್ತಿದ್ದಾರೆ. ಇನ್ನು ಕೆಲವರು ಮನೆಗಳನ್ನ ಜೆಸಿಬಿ ಮೂಲಕ ಕೆಡವಿ ಹಾಕ್ತಿದ್ದಾರೆ. ಚಡಚಣ ತಾಲೂಕಿನ ಸಾವಳಸಂಗ ಹಾಗೂ ಹಾಲಳ್ಳಿಯಲ್ಲಿ ಮನೆಗೆ ಹಾವು ನುಗ್ಗಿದ್ದರಿಂದ ಹೆದರಿ ಎರಡು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ.
ಗುಮ್ಮಟನಗರಿಯಲ್ಲಿ ಪೊಲೀಸ್ ಹುತಾತ್ಮ ದಿನ ಆಚರಣೆ, ವಿಜಯಪುರ ಪೊಲೀಸರನ್ನ ಹೊಗಳಿದ ಡಿಸಿ!
ಹಾವಿಗೆ ಹೆದರಿ ಮನೆ ಕೆಡವಿದ ಕುಟುಂಬ: ಚಡಚಣ ತಾಲೂಕಿನ ಇಂಚಗೇರಿ ಗ್ರಾಮದಲ್ಲಿ ಮನೆಯೊಂದರಲ್ಲಿ ನಾಗರ ಹಾವು ಹೊಕ್ಕಿತ್ತು. ಇದರಿಂದ ಹೆದರಿದ ಕುಟುಂಬದವರು ಹಾವು ಹಿಡಿಯುವವರನ್ನ ಕರೆಯಿಸಿದ್ದಾರೆ. ಆದ್ರೆ ಹಾವು ಮಾತ್ರ ಸಿಕ್ಕಿಲ್ಲ. ಬಳಿಕ ಅದೆ ಕುಟುಂಬದ ಬಾಲಕಿಗೆ ಹಾವು ಕಚ್ಚಿದೆ, ಪರಿಣಾಮ ಬಾಲಕಿ ಸಾವನ್ನಪ್ಪಿದ್ದಾಳೆ. ಹೀಗಾಗಿ ಕುಟುಂಬಸ್ಥರು ಜೆಸಿಬಿ ಮೂಲಕ ಮನೆಯನ್ನೆ ಧ್ವಂಸಗೊಳಿಸಿದ್ದಾರೆ ಎನ್ನಲಾಗಿದೆ. ಇದರಿಂದ ತೋಟದ ವಸ್ತಿಯ ಜನರಲ್ಲಿ ಹಾವಿನ ಭಯ ಕಾಡ್ತಿದ್ದು, ಮನೆಗಳನ್ನ ಕೆಡವಿ, ಬೆಂಕಿ ಇಡುತ್ತಿದ್ದಾರೆ.
ಹಾವು ಹೊಕ್ಕರೆ ಬೆಂಕಿ ಯಾಕೆ? ಮನೆ ಕೆಡುವುದ್ಯಾಕೆ: ಹಾವುಗಳು ಗುಡಿಸಲ ಒಳಗೆ ಹೊಕ್ಕ ಮೇಲೆ ಹಿಡಿಯಲು ಯತ್ನಿಸಿದಾಗ ಕೈಗೆ ಸಿಗದ ಜಾಗವನ್ನ ಸೇರಿ ಬಿಡ್ತಿವೆ. ಹೀಗಾಗಿ ಮನೆಯಲ್ಲಿ ಇರೋದಕ್ಕೆ ಹೆದರಿ ಹೀಗೆ ಬೆಂಕಿ ಹಚ್ಚುತ್ತಿದ್ದಾರೆ. ಕೆಲವೆಡೆ ಮನೆಗಳನ್ನ ಕೆಡವಿದ್ದಾರೆ ಎನ್ನಲಾಗಿದೆ. ಚಡಚಣ ಭಾಗದಲ್ಲಿ ಹಲವಡೆ ಹಾವುಗಳು ಮನೆಯನ್ನ ಹೊಕ್ಕು ಕಚ್ಚಿದ ಪ್ರಕರಣಗಳು ಕಂಡು ಬಂದಿವೆ. ಹೀಗಾಗಿ ಹೆದರಿರುವ ವಸ್ತಿ ಜನರು ಅನಾಹುತಗಳಾಗಬಹುದು ಎಂದು ಹೆದರಿ ಹೀಗೆ ಮನೆಗಳಿಗೆ ಬೆಂಕಿ ಇಡ್ತಿದ್ದಾರೆ, ಜೆಸಿಬಿ ಮೂಲಕ ಮನೆಗಳನ್ನೆ ಕೆಡವಿ ಹಾಕ್ತಿದ್ದಾರೆ.
ಮನೆಗೆ ಹೊಕ್ಕ ಹಾವುಗಳ ರಕ್ಷಣೆ: ಕೆಲವೆಡೆ ಮನೆಗಳಿಗೆ ಹಾವುಗಳು ಹೊಕ್ಕಾಗ ಹಾವುಗಳ ಸಮೇತವಾಗಿ ಗುಡಿಸಲಿಗೆ ಬೆಂಕಿ ಇಟ್ಟ ಘಟನೆಗಳು ನಡೆದಿವೆ. ಘಟನೆಯಲ್ಲಿ ಹಾವು ಕೂಡ ಸುಟ್ಟು ಕರಕಲಾಗಿವೆ. ಇದು ಉರಗ ಪ್ರಿಯರಲ್ಲಿ ನೋವುಂಟು ಮಾಡಿದೆ. ಎಲ್ಲಿಯೆ ಹಾವು ಕಂಡರು ಸ್ಥಳೀಯ ಅರಣ್ಯಾಧಿಕಾರಿಗಳಿ, ಹಾವು ರಕ್ಷಕರಿಗೆ ಕರೆ ಮಾಡುವಂತೆ ಉರಗ ಪ್ರಿಯರು ಮನವಿ ಮಾಡಿದ್ದಾರೆ.
ಕೊಲ್ಲಬೇಡಿ ಎಲ್ಲ ಹಾವುಗಳು ಡೆಂಜರ್ ಅಲ್ಲ: ತೋಟದ ವಸ್ತಿಗಳಲ್ಲಿ ಕಂಡು ಬರುವ ಎಲ್ಲ ಹಾವುಗಳು ಡೆಂಜರ್ ಅಲ್ಲ. ಬದಲಿಗೆ ಬಹುತೇಕ ಹಾವುಗಳಲ್ಲಿ ವಿಷ ಇರೋದಿಲ್ಲ. ಜನರು ಗಾಬರಿಗೊಳಗಾಗಿ ಎಲ್ಲ ಹಾವುಗಳನ್ನು ವಿಷಕಾರಿ ಎಂದು ಕೊಂದು ಹಾಕಿದ ಉದಾಹರಣೆ ಇವೆ. ಹೀಗಾಗಿ ಉರಗ ರಕ್ಷಕರಿಗೆ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಾವು ರಕ್ಷಣೆ ಸವಾಲಾಗಿದೆ
ಉರಗ ರಕ್ಷಕ ಸಿದ್ದು ಪೂಜಾರಿ: ಚಡಚಣ ಭಾಗದಲ್ಲಿ ಸಿದ್ದು ಪೂಜಾರಿ ಎನ್ನುವ ಉರಗಪ್ರೇಮಿ ಯುವಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾನೆ. ಯಾವ ಹಾವು ವಿಷಕಾರಿ ಹಾಗೂ ಯಾವ ಹಾವಿನಲ್ಲಿ ವಿಷವಿದೆ ಎನ್ನುವ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾನೆ. ಚಡಚಣ ತಾಲೂಕಿನಲ್ಲಿ ಹಾವುಗಳು ಕಾಣಿಸಿಕೊಂಡಲ್ಲಿ ತನಗೆ ಕರೆ ಮಾಡುವಂತೆ ಮನವಿ ಮಾಡಿಕೊಳ್ತಿದ್ದಾರೆ. ಜೊತೆಗೆ ಅರಣ್ಯ ಇಲಾಖೆಗು ಸಹಕಾರ ನೀಡುತ್ತಿದ್ದಾನೆ.
ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ: ಬಿಜೆಪಿ, ಕಾಂಗ್ರೆಸ್‌ಗೆ ಬಿಸಿ ತುಪ್ಪವಾದ ಬಂಡಾಯ ಅಭ್ಯರ್ಥಿಗಳು..!
ಮನೆ, ತೋಟ, ಬಾವಿಗಳಲ್ಲಿದ್ದ ಹಾವುಗಳ ರಕ್ಷಣೆ: ಈವರೆಗು ಸಿದ್ದು ಪೂಜಾರಿ ಸಾವಿರಾರು ಹಾವುಗಳನ್ನ ಹಿಡಿದು ರಕ್ಷಣೆ ಮಾಡಿದ್ದಾನೆ. ಅವುಗಳನ್ನ ಸುರಕ್ಷಿತ ಸ್ಥಳಗಳಿಗೆ, ಅರಣ್ಯ ಪ್ರದೇಶಗಳಿಗೆ ಬಿಟ್ಟು ಬಂದಿದ್ದಾನೆ. ತನ್ನ ಪ್ರಾಣವನ್ನ ಪಣಕ್ಕಿಟ್ಟು ಹಾವುಗಳನ್ನ ರಕ್ಷಣೆ ಮಾಡ್ತಿದ್ದಾನೆ. ಮನೆಗಳಲ್ಲಿ, ಗುಡಿಸಲು, ತೋಟ ವಸ್ತಿಗಳು, ಬಾವಿಗಳಲ್ಲಿ ಕಾಣಿಸಿಕೊಂಡ ಹಾವುಗಳನ್ನ ಹಿಡಿದು ರಕ್ಷಣೆ ಮಾಡಿದ್ದಾನೆ. ಗ್ರಾಮಗಳಿಂದ ಹಾವುಗಳಿರುವ ಬಗ್ಗೆ ಕರೆ ಬಂದರೆ ರಕ್ಷಣೆಗೆ ದಾವಿಸುತ್ತಿದ್ದಾನೆ. ಜೊತೆಗೆ ಹಾವುಗಳಿಗೆ ಯಾವುದೇ ಹಾನಿ ಮಾಡದಂತೆ ಮನವಿ ಸಹ ಮಾಡಿಕೊಳ್ತಿದ್ದಾನೆ. ಈತನಿಗೆ ಅರಣ್ಯಾಧಿಕಾರಿಗಳು, ಸಿಬ್ಬಂದಿಗಳು ರಕ್ಷಣಾ ಕಾರ್ಯಕ್ಕೆ ಸಹಕಾರ ನೀಡಬೇಕಿದೆ.