ಗುಮ್ಮಟನಗರಿಯಲ್ಲಿ ಪೊಲೀಸ್ ಹುತಾತ್ಮ ದಿನ ಆಚರಣೆ, ವಿಜಯಪುರ ಪೊಲೀಸರನ್ನ ಹೊಗಳಿದ ಡಿಸಿ!
ವಿಜಯಪುರ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ ಹುತಾತ್ಮರಿಗೆ ಪೊಲೀಸ್ ಸ್ಮಾರಕಕ್ಕೆ ಪುಷ್ಪಗುಚ್ಛವಿರಿಸಿ, ಗೌರವ ನಮನ ಸಲ್ಲಿಸಿದರು
ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಅ.21): ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಮಾಡುತ್ತಾ ಸಮಾಜದ ಭದ್ರತೆ ಹಾಗೂ ಸುರಕ್ಷತೆಗಾಗಿ ಪ್ರಾಣ ಮುಡುಪಾಗಿಟ್ಟ ಪೊಲೀಸ್ ಸಿಬ್ಬಂದಿ ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ ಅವರು ಹೇಳಿದರು. ಜಿಲ್ಲಾ ಪೊಲೀಸ್ ವತಿಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮರಿಗೆ ಪೊಲೀಸ್ ಸ್ಮಾರಕಕ್ಕೆ ಪುಷ್ಪಗುಚ್ಛವಿರಿಸಿ, ಗೌರವ ನಮನ ಸಲ್ಲಿಸಿ, ಮಾತನಾಡಿದ ಅವರು, ಸಾರ್ವಜನಿಕರು ಸಹ ಕಾನೂನು ಪಾಲಿಸುವ ಮೂಲಕ ಪೊಲೀಸರ ಕಾರ್ಯಕ್ಕೆ ಸಹಕರಿಸಬೇಕು ಎಂದು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು. ವಿಜಯಪುರ ಜಿಲ್ಲೆಯ ಪೊಲೀಸ್ ಹಲವಾರು ಪ್ರಮುಖ ಪ್ರಕರಣಗಳನ್ನು ಬೇಧಿಸಿ, ಸಾರ್ವಜನಿಕರಿಗೆ ಅದರಲ್ಲೂ ರೈತರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಣೆಯಿಂದ ಮೆಚ್ಚುಗೆ ಪಡೆದಿದೆ. ಸಮಾಜದಲ್ಲಿ ಸಂಘರ್ಷವಾದಾಗ ಮೊದಲಿಗೆ ನೆನಪಿಗೆ ಬರುವುದೇ ಪೊಲೀಸರು, ಜನರ ಸಂಧಿಗ್ಧ ಹಾಗೂ ಕಷ್ಟಕಾಲದ ಪರಿಸ್ಥಿತಿಯಲ್ಲಿ ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಪೊಲೀಸರು ಕಾರ್ಯ ನಿರ್ವಹಿಸುತ್ತಾರೆ. ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಕರ್ತವ್ಯ ನಿರ್ವಹಿಸುತ್ತಾ ಹುತಾತ್ಮರಾದ ಪೊಲೀಸರ ಸ್ಮರಣೆ ಮಾಡಿದರು.
ದೇಶದಲ್ಲಿ ಕಳೆದು ಒಂದು ವರ್ಷದಲ್ಲಿ 264 ಜನ ಪೊಲೀಸರು ಹುತಾತ್ಮರಾಗಿದ್ದು, ನಮ್ಮ ರಾಜ್ಯದ 11 ಜನ ಪೊಲೀಸರು ಹುತಾತ್ಮರಾಗಿದ್ದಾರೆ. ಪೊಲೀಸರ ಕರ್ತವ್ಯ ನಿಷ್ಠೆಯಿಂದ ಸಮಾಜದಲ್ಲಿ ಪ್ರತಿಯೊಬ್ಬರು ಶಾಂತಿ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗಿದೆ. ಹಬ್ಬ ಹರಿದಿನಗಳಲ್ಲಿ ಅಹಿತಕರ ಘಟನೆ ಘಟಿಸದಂತೆ ಕಾನೂನು ಮತ್ತು ಸುವ್ಯವಸ್ಥೆ ಜೊತೆಗೆ ಅಪರಾಧಗಳ ತಡೆಗಟ್ಟುವುದು ಮತ್ತು ಅಪರಾಧಗಳನ್ನು ಪತ್ತೆ ಹಚ್ಚುವ ಕೆಲಸ ಮಾಡುವ ಮೂಲಕ ಜನಸಾಮಾನ್ಯರ ಆಸ್ತಿ-ಪಾಸ್ತಿ ಜೀವನ ರಕ್ಷಣೆಗೆ ಪೊಲೀಸ್ ಇಲಾಖೆ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು.
ಕೋವಿಡ್ ಕರ್ತವ್ಯದಲ್ಲಿ ನಿಧನರಾದವರು ಹುತಾತ್ಮರೇ!
ವಿಜಯಪುರ ಜಿಲ್ಲೆಯು ಗಡಿ ಭಾಗದ ಜಿಲ್ಲೆಯಾಗಿದೆ. ಜಿಲ್ಲೆಯ ಓರ್ವ ಪಿಎಸ್‍ಐ ಇಬ್ಬರು ಪೊಲೀಸ್ ಪೇದೆ ಕೋವಿಡ್ ಕಾರ್ಯನಿರ್ವಹಣೆಯಲ್ಲಿ ಹುತಾತ್ಮರಾಗಿದ್ದಾರೆ ಎಂದು ಅವರು ಹೇಳಿದರು. 2019 ಹಾಗೂ 2020ರಲ್ಲಿ ಜಿಲ್ಲೆಯಲ್ಲಿ ಕೃಷ್ಣಾ ಹಾಗೂ ಭೀಮಾ ನದಿಯ ನೆರೆ ಪ್ರವಾಹ ಉಂಟಾದ ಸಂದರ್ಭದಲ್ಲಿ ಜನರ ರಕ್ಷಣೆ ಮತ್ತು ಪರಿಹಾರ ಕಾರ್ಯದಲ್ಲಿ ಪೊಲೀಸ್ ಇಲಾಖೆ ತೊಡಗಿಸಿಕೊಂಡು ಜನ ಜಾನುವಾರಗಳ ರಕ್ಷಣೆ ಹೊಣೆ ಹೊತ್ತು ಕಾರ್ಯ ನಿರ್ವಹಿಸಿ, ಇಲಾಖೆಯು ಸಾರ್ವಜನಿಕರಿಗೆ ಅಚ್ಚುಮೆಚ್ಚಿನ ಇಲಾಖೆಯಾಗಿದೆ. ಶಿಸ್ತು, ಸಮಯ ಪ್ರಜ್ಞೆ, ಪ್ರಾಮಾಣಿಕತನ ಇವೆಲ್ಲವೂ ಕರ್ನಾಟಕ ಪೊಲೀಸಿನ ವಿಶೇಷ ಗೌರವವಿದೆ. ಜಿಲ್ಲೆಯ ಪೊಲೀಸ್ ಇಲಾಖೆ ತನ್ನ ಕಾರ್ಯವೈಖರಿಯಿಂದ ಮೆಚ್ಚುಗೆ ಪಡೆದಿದೆ. ಯಶಸ್ವಿ ಪೊಲೀಸ್ ಕಾರ್ಯವೈಖರಿಯಿಂದ ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ನೆಲೆಸಿದೆ. ತಮ್ಮ ಜೀವದ ಹಂಗು ಲೆಕ್ಕಿಸದೇ ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿ ಸ್ಥಾಪಿಸಿದಂತಹ ಪೊಲೀಸರ ತ್ಯಾಗ ಮತ್ತು ಬಲಿದಾನ ಮಾಡಿದ ಪೊಲೀಸ ಹುತಾತ್ಮರಿಗೆ ನಮನಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಜಿಲ್ಲೆಯಲ್ಲಿ 72 ವಸತಿ ಗೃಹ ನಿರ್ಮಾಣ ಶೀಘ್ರದಲ್ಲೆ ಪೂರ್ಣ
ಪೋಲಿಸ್ ಇಲಾಖೆಯ ಶ್ರೆಯೋಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದು ಅನುಷ್ಟಾನ ಮಾಡುವ ಮೂಲಕ ಪೊಲೀಸರ ಕಲ್ಯಾಣಕ್ಕಾಗಿ ಶ್ರಮಿಸುತ್ತಿವೆ. ಜಿಲ್ಲೆಯಲ್ಲಿ 72 ಪೊಲೀಸ್ ವಸತಿಗೃಹ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಪೊಲೀಸ್ ಇಲಾಖೆಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಹೈಟೆಕ್ ಸಿಸಿಟಿವಿ ಶೀಘ್ರದಲ್ಲೆ ಲೋಕಾರ್ಪಣೆ
ಮಹಾನಗರ ಪಾಲಿಕೆ ವತಿಯಿಂದ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ -ಸಿಸಿಟಿವಿ ಅಳವಡಿಸುವಂತಹ ಕಾಮಗಾರಿ ಆರಂಭಗೊಂಡಿದ್ದು, ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಹೇಳಿದರು.
ಪೊಲೀಸರ ಬಗ್ಗೆ ಸಿಇಓ ಹೆಮ್ಮೆಯ ಮಾತು
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಸಿಂಧೆ ಅವರು ಮಾತನಾಡಿ, ಸಮಾಜದಲ್ಲಿ ಶಾಂತಿ ನೆಮ್ಮದಿಗಾಗಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಹುತಾತ್ಮರಾದ ಪೊಲೀಸ್ ಸಿಬ್ಬಂದಿ ಕಾರ್ಯ ಅನನ್ಯವಾಗಿದೆ. ಪೊಲೀಸರ ಯಶಸ್ವಿ ಕಾರ್ಯ ನಿರ್ವಹಣೆಯಿಂದ ಸಮಾಜದಲ್ಲಿ ಶಾಂತಿ ನೆಲೆಸಿದ್ದು, ಈ ಸಂದರ್ಭದಲ್ಲಿ ಅವರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.
Bengaluru: ನಿಯಮ ಮೀರಿದರೆ ಕ್ಯಾಮೆರಾ ಜೊತೆ ಸ್ಪೀಕರ್‌ನಲ್ಲೇ ಎಚ್ಚರಿಕೆ
ಶಾಂತಿ ಕಾಪಾಡಲು ಪೊಲೀಸರು ಪ್ರಾಣ ಅರ್ಪಿಸಿದ್ದಾರೆ : ಎಸ್ಪಿ ಆನಂದಕುಮಾರ್
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಡಿ ಆನಂದ್ ಕುಮಾರ್ ಮಾತನಾಡಿ, 1959ರ ಚೀನಾ ಯುದ್ಧದಲ್ಲಿ ವೀರಮರಣ ಹೊಂದಿದ ಧೀರೋದಾತ್ತ ಯೋಧರ ಸ್ಮರಣಾರ್ಥ ಪ್ರತಿ ವರ್ಷ ಅ.21ರಂದು ಪೊಲೀಸ್ ಹುತಾತ್ಮರ ದಿನ ಎಂದು ಆಚರಿಸಲಾಗುತ್ತಿದೆ. ಪೊಲೀಸರು ದೇಶದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ರಕ್ಷಣೆ ಸಂದರ್ಭದಲ್ಲಿ ಕಾರ್ಯ ನಿರ್ವಹಣೆಯಲ್ಲಿ ಹೋರಾಡಿ ಸಮರ್ಪಿತ ಪೊಲೀಸ್ ಸಿಬ್ಬಂದಿಯವರಿಗೆ ಗೌರವ ಸಲ್ಲಿಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ದೀಪಾವಳಿಗೆ ಇಸ್ಪೀಟ್ ಆಡುವವರೇ ಎಚ್ಚರ; ಪೊಲೀಸರು ನಿಮ್ಮ ಬೆನ್ನು ಬೀಳ್ತಾರೆ!
ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡ ಪೊಲೀಸ ಹುತಾತ್ಮರ ದಿನಾಚರಣೆ ಅಂಗವಾಗಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಮ್ ಅರಸಿದ್ಧಿ, ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಅನಿತಾ ಹದ್ದಣ್ಣವರ್, ಸೈನಿಕ ಶಾಲೆಯ ಪ್ರಾಂಶುಪಾಲರು ಸೇರಿದಂತೆ ಪೊಲೀಸ್ ಇಲಾಖೆಯ ವಿವಿಧ ಅಧಿಕಾರಿಗಳು,ಸಿಬ್ಬಂದಿಗಳು, ಹುತಾತ್ಮ ಪೊಲೀಸ ಕುಟುಂಬಸ್ಥರು ಹಾಗೂ ಪತ್ರಕರ್ತರು ಹುತಾತ್ಮ ಪೊಲೀಸ್ ಸ್ಮಾರಕಕ್ಕೆ ಹೂಗುಚ್ಛ ಅರ್ಪಿಸಿ ಗೌರವ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಪೊಲೀಸ್ ತುಕಡಿಗಳು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಪೊಲೀಸ್ ಹುತಾತ್ಮರಿಗೆ ಗೌರವ ನಮನ ಅರ್ಪಿಸಿದರು. ಪೋಲಿಸ್ ಬ್ಯಾಂಡ್ ಮೂಲಕ ಗೀತೆ ಹಾಗೂ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು. ಕವಾಯತ ತಂಡದ ನಿರ್ಗಮನದ ನಂತರ ಕಾರ್ಯಕ್ರಮ ಮುಕ್ತಾಯಗೊಂಡಿತು.