ಚಿಕ್ಕಮಗಳೂರು(ಜು.06): ಜಿಲ್ಲೆಯ ಮಲೆನಾಡಿನಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಶನಿವಾರ ರಾತ್ರಿಯಿಂದ ಭಾನುವಾರ ಬೆಳಗ್ಗೆವರೆಗೆ ಮಲೆನಾಡಿನ ಹಲವೆಡೆ ನಿರಂತರ ಮಳೆ ಸುರಿದಿದೆ. ಕಳೆದ ಹದಿನೈದು ದಿನಗಳಿಂದ ಜಿಲ್ಲೆಯ ಅಲ್ಲಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ರೈತರಲ್ಲಿ ಸಂತಸ ಮೂಡಿಸಿತ್ತು. ಆದರೆ, ಶನಿವಾರ ಸಂಜೆಯಿಂದ ಒಂದೇ ಸಮನೆ ಮಳೆ ಸುರಿಯುತ್ತಿರುವುದರಿಂದ ಮಲೆನಾಡಿಗರು ಆತಂಕಕ್ಕೀಡಾಗಿದ್ದಾರೆ.

ಜಿಲ್ಲೆಯ ಶೃಂಗೇರಿ, ಕೊಪ್ಪ, ಎನ್‌.ಆರ್‌.ಪುರ ಹಾಗೂ ಮೂಡಿಗೆರೆ ಭಾಗದಲ್ಲಿ ಧಾರಕಾರ ಮಳೆಯಾಗುತ್ತಿದೆ. ಚಿಕ್ಕಮಗಳೂರು ನಗರದಲ್ಲೂ ಬೆಳಗ್ಗೆ ಮಳೆ ಇದ್ದು, ಮಧ್ಯಾಹ್ನದ ಬಳಿಕ ಬಿಸುಲಿನ ದರ್ಶನವಾಯಿತು. ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಜೀವ ನದಿಗಳಾದ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳ ಹರಿವಿನಲ್ಲೂ ಹೆಚ್ಚಳವಾಗಿದೆ. ಜಿಲ್ಲೆಯ ಘಟ್ಟಪ್ರದೇಶಗಳಲ್ಲಿ ಉತ್ತಮ ಮಳೆ ಸುರಿಯುತ್ತಿದ್ದು ಕೆರೆ-ಕಟ್ಟೆಗಳಿಗೂ ನೀರಾಗಿದೆ. ಜಿಲ್ಲೆಯ ಮಲೆನಾಡಿನಲ್ಲಿ ಈ ವರ್ಷವೂ ಭಾರಿ ಮಳೆಯಾದರೆ, ನಮ್ಮ ಬದುಕೇನೆಂದು ಮಲೆನಾಡಿಗರು ಕಂಗಾಲಾಗಿದ್ದಾರೆ. ಕಳೆದ ವರ್ಷ ಆದ ಅನಾಹುತಗಳಿಂದ ಜನ ಇನ್ನೂ ಹೊರಬಂದಿಲ್ಲ. ಇದರ ನಡುವೆಯೇ ಇದೀಗ ಮಳೆಗಾಲ ಶುರುವಾಗಿರುವುದು ಮತ್ತಷ್ಟುಭೀತಿಗೆ ಕಾರಣವಾಗಿದೆ.

ಬಾಳೆಹೊನ್ನೂರಲ್ಲಿ ಬಿರುಸು:

ಬಾಳೆಹೊನ್ನೂರು ಹಾಗೂ ಖಾಂಡ್ಯ ಹೋಬಳಿಯ ವ್ಯಾಪ್ತಿಯಲ್ಲಿ ಮುಂಗಾರು ಮಳೆ ಬಿರುಸುಗೊಂಡಿದ್ದು, ಶನಿವಾರ ಸಂಜೆಯಿಂದ ಬೆಳಗ್ಗೆವರೆಗೆ ಧಾರಕಾರವಾಗಿ ಸುರಿದ ಮಳೆ ಬೆಳಗ್ಗೆ ಕೊಂಚ ಬಿಡುವು ಪಡೆದು ಮಧ್ಯಾಹ್ನ ಮತ್ತೆ ಬಿರುಸುಗೊಂಡಿದೆ. ಇದರಿಂದಾಗಿ ಕೃಷಿ ಚಟುವಟಿಕೆಗಳು ಸಹ ಭರದಿಂದ ಸಾಗಿದ್ದು, ಬತ್ತದ ಗದ್ದೆಗಳ ಉಳುಮೆ, ಸಸಿಮಡಿಗಳ ತಯಾರಿಕೆಗೆ ಕೆಲಸ ಕಾರ್ಯವನ್ನು ನಡೆಸುತ್ತಿದ್ದಾರೆ.

ಶಾಲೆಗೆ ನಿತ್ಯ 24 ಕಿ.ಮೀ. ಸೈಕಲ್‌ ತುಳಿದಾಕೆ ಟಾಪರ್‌!

ಸೋಮವಾರದಿಂದ ಪುನರ್ವಸು ಮಳೆ ನಕ್ಷತ್ರ ಆರಂಭವಾಗಲಿದ್ದು, ಯಾವ ಪ್ರಮಾಣದಲ್ಲಿರಲಿದೆ ಎಂಬ ನಿರೀಕ್ಷೆಯಲ್ಲಿ ಕೃಷಿಕರು ಕಾಯುತ್ತಿದ್ದಾರೆ. ಆರಿದ್ರಾ ನರ್ತನಕ್ಕೆ ಪಟ್ಟಣದ ಭದ್ರಾನದಿಯಲ್ಲಿ ನೀರಿನ ಹರಿನ ಮಟ್ಟಏರಿಕೆಯಾಗಿದ್ದು, ಹಳ್ಳಕೊಳ್ಳಗಳಲ್ಲೂ ನೀರಿನ ಪ್ರಮಾಣ ಏರಿಕೆಯಾಗಿದೆ.

ಕೊಪ್ಪದಲ್ಲಿ 1.10 ಇಂಚು ಮಳೆ:

ಕೊಪ್ಪ ತಾಲೂಕಿನ ಜಯಪುರ, ಹರಿಹರಪುರ, ಭಂಡಿಗಡಿ, ಕುದ್ರೆಗುಂಡಿ, ಸಿದ್ಧರಮಠ ಮುಂತಾದೆಡೆಗಳಲ್ಲಿ ರಾತ್ರಿಯಿಂದಲೇ ನಿಧಾನಗತಿಯಲ್ಲಿ ಮಳೆ ಸುರಿದು ಕೊಪ್ಪದಲ್ಲಿ 1.10 ಇಂಚು ಮಳೆ ಪ್ರಮಾಣ ದಾಖಲಾಯಿತು. ಕೊಪ್ಪದಲ್ಲಿ ಭಾನುವಾರ ಮುಂಜಾನೆಯಿಂದಲೇ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮಧ್ಯಾಹ್ನ 3 ಗಂಟೆಯ ನಂತರ ಸ್ವಲ್ಪ ಬಿಡುವು ನೀಡಿದೆ. ಮೋಡದ ವಾತಾವರಣ ಮುಂದುವರೆದಿದೆ. ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.