ಇನ್ನೂ 2 ಕ್ಷೇತ್ರಗಳು ಸೂಕ್ಷ್ಮ ಎಂದು ಪರಿಗಣಿಸಲು ಆಯೋಗಕ್ಕೆ ಪ್ರಸ್ತಾವನೆ, ಚುನಾವಣೆಯಲ್ಲಿ ನಡೆಯುವ ಅಕ್ರಮಗಳ ತಡೆಗೆ ಕ್ರಮ, ಆರ್‌ಒ-ಎಆರ್‌ಒ, ಲೆಕ್ಕಾಧಿಕಾರಿಗಳ ತಂಡ ರಚನೆ: ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್
ಬೆಂಗಳೂರು(ಮಾ.30): ನಗರ ಜಿಲ್ಲಾ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಪೈಕಿ 19 ವಿಧಾನಸಭಾ ಕ್ಷೇತ್ರಗಳನ್ನು ‘ಖರ್ಚು ವೆಚ್ಚ ಸೂಕ್ಷ್ಮ ಕ್ಷೇತ್ರಗಳು’ ಎಂದು ಪರಿಗಣಿಸಲಾಗಿದ್ದು, ಈ ಕ್ಷೇತ್ರದಲ್ಲಿ ನಡೆಯುವ ಚುನಾವಣಾ ಖರ್ಚು ವೆಚ್ಚಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ತಿಳಿಸಿದರು.
ಬುಧವಾರ ವಿಧಾನಸಭಾ ಚುನಾವಣೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ನಡೆಯುವ ಅಕ್ರಮಗಳ ತಡೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಪ್ರಮುಖವಾಗಿ ಚುನಾವಣಾ ವೆಚ್ಚದ ಮೇಲೆ ನಿಗಾವಹಿಸಲಾಗುತ್ತಿದೆ. ‘ಖರ್ಚು-ವೆಚ್ಚದ ಸೂಕ್ಷ್ಮ ಕ್ಷೇತ್ರ’ಗಳ ವ್ಯಾಪ್ತಿಯಲ್ಲಿನ ಚುನಾವಣಾ ಖರ್ಚು-ವೆಚ್ಚದ ಮೇಲೆ ನಿಗಾವಹಿಸಲು ಸಹಾಯಕ ಚುನಾವಣಾಧಿಕಾರಿ, ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿ, ಲೆಕ್ಕಾಧಿಕಾರಿಗಳ ತಂಡವನ್ನು ರಚಿಸಲಾಗಿದೆ ಎಂದು ವಿವರಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಕ್ಷಣ ಬಿಬಿಎಂಪಿ ಚುನಾವಣೆ: ಸಿದ್ದರಾಮಯ್ಯ
ಖರ್ಚು-ವೆಚ್ಚದ ಸೂಕ್ಷ್ಮ ಕ್ಷೇತ್ರಗಳು
ಯಶವಂತಪುರ, ದಾಸರಹಳ್ಳಿ, ಮಹದೇವಪುರ, ಬೆಂಗಳೂರು ದಕ್ಷಿಣ, ಆನೇಕಲ್, ಕೆ.ಆರ್.ಪುರ, ಮಲ್ಲೇಶ್ವರ, ಹೆಬ್ಬಾಳ, ಸರ್ವಜ್ಞನಗರ, ಸಿ.ವಿ.ರಾಮನ್ ನಗರ, ರಾಜರಾಜೇಶ್ವರಿ ನಗರ, ಶಿವಾಜಿ ನಗರ, ಶಾಂತಿ ನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಪದ್ಮನಾಭ ನಗರ, ಬಿಟಿಎಂ ಲೇಔಟ್, ಜಯ ನಗರ ಹಾಗೂ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಗಳನ್ನು ಖರ್ಚು-ವೆಚ್ಚ ಸೂಕ್ಷ್ಮ ಕ್ಷೇತ್ರಗಳು ಎಂದು ಗುರುತಿಸಲಾಗಿದೆ. ಇದರ ಜೊತೆಗೆ ಇನ್ನೂ ಎರಡು ವಿಧಾನಸಭಾ ಕ್ಷೇತ್ರಗಳನ್ನು ಖರ್ಚು-ವೆಚ್ಚ ಸೂಕ್ಷ್ಮ ಕ್ಷೇತ್ರಗಳು ಎಂದು ಪರಿಗಣಿಸುವಂತೆ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಆರ್‌ಒ-ಎಆರ್‌ಒ ಹೊಣೆ
ಚುನಾವಣೆ ಅಕ್ರಮ ತಡೆಗೆ ವಿವಿಧ ತಂಡಗಳನ್ನು ರಚನೆ ಮಾಡಲಾಗಿದ್ದರೂ ವಿಧಾನಸಭಾ ಕ್ಷೇತ್ರವಾರು ನೇಮಕ ಮಾಡಲಾದ ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳು ಹೆಚ್ಚಿನ ನಿಗಾ ವಹಿಸಬೇಕು. ಅಕ್ರಮಗಳು ನಡೆಯುವುದು ಕಂಡು ಬಂದರೆ ಆರ್‌ಒ ಮತ್ತು ಎಆರ್‌ಒ ಅವರನ್ನು ಹೊಣೆ ಮಾಡಲಾಗುವುದು ಎಂದು ತುಷಾರ್ ಎಚ್ಚರಿಕೆ ನೀಡಿದ್ದಾರೆ.
2,217 ಸೂಕ್ಷ್ಮ ಮತಗಟ್ಟೆ
ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 8,615 ಮತಗಟ್ಟೆಗಳಿದ್ದು, ಈ ಪೈಕಿ ಕಳೆದ ಚುನಾವಣೆಯಲ್ಲಿ ಶೇಕಡ 90ರಷ್ಟುಮತದಾನವಾಗಿ ಅದರಲ್ಲಿ ಶೇ.75ರಷ್ಟುಮತ ಒಂದೇ ಅಭ್ಯರ್ಥಿಗೆ ಹಾಕಲಾದ ಹಾಗೂ ಕುಟುಂಬ ಇಲ್ಲದೇ ಏಕ ವ್ಯಕ್ತಿ ಮತದಾರರು ಹೆಚ್ಚಾಗಿರುವ ಸೇರಿದಂತೆ ವಿವಿಧ ಅಂಶಗಳನ್ನು ಗಮನಿಸಿ 2,217 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ಜತೆಗೆ ಪೊಲೀಸ್ ಇಲಾಖೆಯು ಗಲಭೆ ಸೇರಿದಂತೆ ಇನ್ನಿತರೆ ಅಂಶಗಳನ್ನು ಗುರುತಿಸಿ 3,693 ಮತಗಟ್ಟೆಗಳನ್ನು ಸೂಕ್ಷ್ಮ ಎಂದು ಪರಿಗಣಿಸಿದೆ ಎಂದು ತುಷಾರ್ ಗಿರಿನಾಥ್ ವಿವರಿಸಿದರು.
95 ಲಕ್ಷ ಮತದಾರರು
ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರದಲ್ಲಿ 95 ಲಕ್ಷ ಮತದಾರರಿದ್ದಾರೆ. ಈ ಪೈಕಿ 49,26,270 ಪುರುಷ, 45,85,824 ಮಹಿಳಾ, 1736 ತೃತೀಯ ಲಿಂಗಿ ಮತದಾರರಿದ್ದಾರೆ. 18ರಿಂದ 19 ವಯಸ್ಸಿನ 1,08,494 ಮತದಾರರು ಸೇರ್ಪಡೆಯಾಗಿದ್ದಾರೆ. 80 ವರ್ಷ ಮೇಲ್ಪಟ್ಟ2,36,719 ಮತದಾರರು ಇದ್ದಾರೆ. ನಾಮಪತ್ರ ಸಲ್ಲಿಕೆಯ ಕೊನೆಯ ದಿನದವರೆಗೆ ಮತದಾರರ ಪಟ್ಟಿಹೆಸರು ಸೇರ್ಪಡೆಗೆ ಅವಕಾಶ ಇವೆ. ಪಟ್ಟಿಯಿಂದ ಹೆಸರು ತೆಗೆದು ಹಾಕಲು ಮತ್ತು ಸ್ಥಳ ಬದಲಾವಣೆಗೆ ಅವಕಾಶ ಇರುವುದಿಲ್ಲ ಎಂದು ತುಷಾರ್ ಸ್ಪಷ್ಟಪಡಿಸಿದರು.
ವಾಹನ ನಿಲುಗಡೆ ವ್ಯವಸ್ಥೆ
ಮತದಾರರನ್ನು ಆಕರ್ಷಿಸಲು ಒಂದೇ ಕಡೆ ಐದಕ್ಕಿಂತ ಹೆಚ್ಚಿರುವ ಮತಗಟ್ಟೆಗಳನ್ನು ಕ್ಲಸ್ಟರ್ ಮತಗಟ್ಟೆಗಳೆಂದು ಗುರುತಿಸಲಾಗುತ್ತಿದೆ. ಇಂತಹ ಮತಗಟ್ಟೆಗಳಿಗೆ ಹೆಚ್ಚಿನ ಮತದಾರರು ಬರುವ ಹಿನ್ನೆಲೆಯಲ್ಲಿ ಮೈದಾನ ಅಥವಾ ಖಾಲಿ ಸ್ಥಳವನ್ನು ಗುರುತಿಸಿ ವಾಹನ ನಿಲುಗಡೆಗೆ ಅವಕಾಶ ನೀಡಲಾಗುವುದು.
1.91 ಕೋಟಿ ವಸ್ತುಗಳು ಜಪ್ತಿ
ನೀತಿ ಸಂಹಿತೆ ಜಾರಿಗೂ ಮುನ್ನ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಮತದಾರರಿಗೆ ಹಂಚಲು ಸಂಗ್ರಹಿಸಲಾದ ಸುಮಾರು .1.91 ಕೋಟಿ ಮೌಲ್ಯದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. .55.49 ಲಕ್ಷ ನಗದು ಹಾಗೂ .29.22 ಲಕ್ಷ ಮೌಲ್ಯದ ಮದ್ಯ ವಶಕ್ಕೆ ಪಡೆಯಲಾಗಿದೆ. ಒಟ್ಟು 99 ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದರು.
ಚೆಕ್ ಪೋಸ್ಟ್ ನಿರ್ಮಾಣ
ಚುನಾವಣೆ ಹಿನ್ನೆಲೆಯಲ್ಲಿ ತಮಿಳುನಾಡಿನಿಂದ ರಾಜ್ಯ ಪ್ರವೇಶಿಸುವ ಎಂಟು ಸ್ಥಳದಲ್ಲಿ ಅಂತರ್ ರಾಜ್ಯ ಚಕ್‌ಪೋಸ್ಟ್ ನಿರ್ಮಿಸಲಾಗಿದೆ. ಅದಲ್ಲದೇ ವಿವಿಧ ಜಿಲ್ಲೆಗಳಿಂದ ಬೆಂಗಳೂರು ನಗರ ಜಿಲ್ಲೆ ಸಂಪರ್ಕಿಸುವ ಸ್ಥಳದಲ್ಲಿ 11 ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಇದಲ್ಲದೇ, ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರದಿಂದ ಮತ್ತೊಂದು ವಿಧಾನಸಭಾ ಕ್ಷೇತ್ರಗಳ ಸಂಪರ್ಕಿಸುವ ಸ್ಥಳದಲ್ಲಿ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು.
42 ಸಾವಿರ ಸಿಬ್ಬಂದಿ ಅಗತ್
ಬಿಬಿಎಂಪಿ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಉಜ್ವಲ್ ಕುಮಾರ್ ಘೋಷ್ ಮಾತನಾಡಿ, ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಚುನಾವಣೆ ಪ್ರಕ್ರಿಯೆಗೆ ಒಟ್ಟು 42 ಸಾವಿರ ಅಧಿಕಾರಿ ಸಿಬ್ಬಂದಿಯ ಅಗತ್ಯವಿದೆ. ಈ ಪೈಕಿ 37ರಿಂದ 38 ಸಾವಿರ ಸಿಬ್ಬಂದಿ 8,615 ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಉಳಿದವರನ್ನು ಮೀಸಲು ಸಿಬ್ಬಂದಿಯಾಗಿ ಬಳಕೆ ಮಾಡಲಾಗುವುದು. ಈಗಾಗಲೇ ಕೇಂದ್ರ, ರಾಜ್ಯ ಸರ್ಕಾರ, ಬ್ಯಾಂಕ್ ಸೇರಿದಂತೆ ವಿವಿಧ ಇಲಾಖೆಯಿಂದ 62 ಸಾವಿರ ಅಧಿಕಾರಿ ಸಿಬ್ಬಂದಿಯ ಮಾಹಿತಿ ಪಡೆಯಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಅಗತ್ಯವಿರುವ ವಿವಿ ಪ್ಯಾಟ್, ಕಂಟ್ರೋಲ್ ಯುನಿಟ್ ಹಾಗೂ ಬ್ಯಾಲೆಟ್ ಯುನಿಟ್‌ಗಳನ್ನು ಸಂಗ್ರಹಿಸಲಾಗಿದೆ. ಹೆಚ್ಚುವರಿಯಾಗಿ ಶೇ.20ರಿಂದ 35ರಷ್ಟುಇಟ್ಟುಕೊಳ್ಳಲಾಗಿದೆ. ಮತದಾರರಿಗೆ ಜಾಗೃತಿ ಮೂಡಿಸಲು ಪ್ರತ್ಯೇಕವಾಗಿ ಶೇ.5ರಷ್ಟುಯಂತ್ರಗಳನ್ನು ಮೀಸಲಿಡಲಾಗಿದೆ ಎಂದು ತಿಳಿಸಿದರು.
ಅನಧಿಕೃತ ಫ್ಲೆಕ್ಸ್, ಬ್ಯಾನರ್ ತೆರವು
ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಳವಡಿಕೆ ಮಾಡಲಾದ ಸುಮಾರು ಎಂಟು ಸಾವಿರ ಸ್ಥಳದಲ್ಲಿನ ಫ್ಲೆಕ್ಸ್-ಬ್ಯಾನರ್‌ಗಳನ್ನು ತೆರವು ಮಾಡಲಾಗಿದೆ. ಶೇ.95ರಷ್ಟುಫ್ಲೆಕ್ಸ್, ಬ್ಯಾನರ್ ತೆರವುಗೊಳಿಸಲಾಗಿದೆ. ಈ ಸಂಬಂಧ 27 ಪ್ರಕರಣ ದಾಖಲು ಮಾಡಲಾಗಿದೆ ಎಂದು ಉಜ್ವಲ್ ಕುಮಾರ್ ಘೋಷ್ ತಿಳಿಸಿದರು.
ಬೆಂಗಳೂರಿನಲ್ಲಿ ನಿತ್ಯ 6 ಸಾವಿರ ಕೊರೋನಾ ಪರೀಕ್ಷೆ ಗುರಿ: ತುಷಾರ್ ಗಿರಿನಾಥ್
ಈ ವೇಳೆ ಅಪರ ಜಿಲ್ಲಾ ಚುನಾವಣಾ ಅಧಿಕಾರಿಗಳಾದ ಡಾ. ದಯಾನಂದ್, ಲಿಂಗಮೂರ್ತಿ, ಡಾ. ಜಗದೀಶ್ ಕೆ.ನಾಯ್ಕ್ ಉಪಸ್ಥಿತರಿದ್ದರು.
ಮತಗಟ್ಟೆಗಳ ವಿವರ
ಜಿಲ್ಲೆಗಳು ಒಟ್ಟು ಮತಗಟ್ಟೆ ಸೂಕ್ಷ್ಮ ಮತಗಟ್ಟೆ ಒಟ್ಟು ಮತದಾರರು
ಬಿಬಿಎಂಪಿ ಕೇಂದ್ರ 1,654 405 17,69,134
ಬಿಬಿಎಂಪಿ ಉತ್ತರ 1,981 508 21,58,056
ಬಿಬಿಎಂಪಿ ದಕ್ಷಿಣ 1,897 429 20,12,734
ಬೆಂಗಳೂರು ನಗರ 3,083 875 35,73,906
ಒಟ್ಟು 8,615 2,217 95,13,830
ಮತದಾರರ ವಿವರ
ಒಟ್ಟು ಮತದಾರರು 95,13,830
ಪುರುಷ ಮತದಾರರು 49,26,270
ಮಹಿಳಾ ಮತದಾರರು 45,85,824
ಇತರೆ ಮತದಾರು 1,736
18ರಿಂದ 19 ವರ್ಷದ ಮತದಾರರು 1,08,494
ಅಂಗವಿಕಲ ಮತದಾರರು 24,754
80 ವರ್ಷ ಮೇಲ್ಪಟ್ಟಮತದಾರರು 2,36,719
ಮತಗಟ್ಟೆಯಲ್ಲಿನ ರಶ್ ಬಗ್ಗೆ ಆ್ಯಪ್ ಮಾಹಿತಿ
ಇದೇ ಮೊದಲ ಬಾರಿ ಮತಗಟ್ಟೆಗಳಲ್ಲಿ ಸರತಿ ಸಾಲಿನ ವಿವರ, ಎಷ್ಟುಜನ ಮತದಾನ ಮಾಡಲು ಕಾಯುತ್ತಿದ್ದಾರೆ ಹಾಗೂ ವಾಹನ ನಿಲುಗಡೆಗೆ ಸ್ಥಳಾವಕಾಶವಿದೆಯೇ ಎಂಬ ಮಾಹಿತಿ ತಿಳಿಸಲು ಪ್ರತ್ಯೇಕ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗುತ್ತಿದೆ. ಆ ಆ್ಯಪ್ ಗಮನಿಸಿ ಮತದಾರರು ಮತದಾನ ಮಾಡಲು ಬರಬಹುದಾಗಿದೆ. ಹಾಗೆಯೇ, ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ದೂರು ನೀಡಲು ಸಿ-ವಿಜಿಲ್ ಆ್ಯಪ್ ಬಳಸಬಹುದಾಗಿದೆ. ಅಲ್ಲಿ ಬರುವ ದೂರನ್ನು ಗಮನಿಸಿ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು.
