ಸೋಮರಡ್ಡಿ ಅಳವಂಡಿ

ಕೊಪ್ಪಳ(ನ.05): ಕೊಪ್ಪಳದಲ್ಲಿ ಶಿಕ್ಷಕರ ಖಾತೆಗಳಿಗೆ ಕನ್ನ ಹಾಕಿರುವ ನೂರಾರು ಪ್ರಕರಣಗಳು ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ನಡೆಯುತ್ತಿದೆ. ಹಲವಾರು ಶಿಕ್ಷಕರು ಯಾಮಾರಿ ತಮ್ಮ ಖಾತೆಯ ವಿವರ, ಒಟಿಪಿ ಸೇರಿದಂತೆ ಅಗತ್ಯ ಮಾಹಿತಿ ನೀಡಿ ತಮ್ಮ ಹಣ ಖಾತೆಯಿಂದ ಮಾಯವಾಗುತ್ತಿದ್ದಂತೆಯೇ ಮೋಸ ಹೋದ ಬಗ್ಗೆ ಮರುಗಿದ್ದಾರೆ. ಕೆಲ ಶಿಕ್ಷಕರು ಅನಗತ್ಯ, ಗೌಪ್ಯ ಮಾಹಿತಿ ಕೇಳುತ್ತಿದ್ದಾರೆ ಎಂಬುದು ಅರಿವಾಗುತ್ತಿದ್ದಂತೆಯೇ ಬ್ಯಾಂಕಿಗೆ ತೆರಳಿ ಹಣ ಲಪಟಾಯಿಸುವುದನ್ನು ತಡೆದಿದ್ದಾರೆ. ವಂಚನೆಯಿಂದ ಬಚಾವಾಗಿದ್ದಾರೆ. ಆದರೂ ನೂರಾರು ಶಿಕ್ಷಕರು ಹಣ ಕಳೆದುಕೊಂಡು ಒದ್ದಾಡುತ್ತಿದ್ದಾರೆ.

ಆಗಿದ್ದೇನು?:

ಮತಗಟ್ಟೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುವ ಶಿಕ್ಷಕರಿಗೆ ಪ್ರತಿ ತಿಂಗಳು 5 ಸಾವಿರವನ್ನು ತಹಸೀಲ್ದಾರ್‌ ಕಚೇರಿಯಿಂದ ನೀಡಲಾಗುತ್ತದೆ. ಇದಕ್ಕಾಗಿ ಶಿಕ್ಷಕರು ತಮ್ಮ ಕಾರ್ಯನಿರ್ವಹಿಸುವ ಶಾಲೆಯ ವ್ಯಾಪ್ತಿಯಲ್ಲಿ ಮತದಾರರ ನೋಂದಣಿ, ತಿದ್ದುಪಡಿ ಸೇರಿದಂತೆ ಮೊದಲಾದ ಕಾರ್ಯಗಳನ್ನು ಮಾಡುತ್ತಾರೆ. ಈ ಮತಗಟ್ಟೆಅಧಿಕಾರಿ ಶಿಕ್ಷಕರಿಗೆ ಮಂಗಳವಾರ, ಬುಧವಾರ ಕರೆ ಬಂದಿವೆ. ಕರೆ ಮಾಡಿ, ನಾವು ಬ್ಯಾಂಕಿನಿಂದ (ಅವರ ಖಾತೆ ಇರುವ ಬ್ಯಾಂಕಿನ ಹೆಸರು ಹೇಳಿದ್ದಾರೆ) ಕರೆ ಮಾಡುತ್ತಿದ್ದೇವೆ. ನಿಮ್ಮ ಖಾತೆಗೆ 5 ಸಾವಿರ ಜಮೆ ಮಾಡಬೇಕಾಗಿದೆ. ಇದಕ್ಕಾಗಿ ಪರಿಶೀಲನೆ ಮಾಡಲಾಗುತ್ತಿದ್ದು, ನಿಮ್ಮ ಬ್ಯಾಂಕ್‌ ಖಾತೆ ಸಂಖ್ಯೆ, ಎಟಿಎಂ ಕಾರ್ಡ್‌ ನಂಬರ್‌ ಹಾಗೂ ಸಿವಿಸಿ ನಂಬರ್‌ ಕೇಳಿದ್ದಾರೆ. ನಿಮ್ಮ ಮೊಬೈಲ್‌ಗೆ ಬರುವ ಒಟಿಪಿಯನ್ನು ಸಹ ಹೇಳಿ ಎಂದು ಕೇಳಿದ್ದಾರೆ.

ಶಿಕ್ಷಕರು ತಮ್ಮ ಶಾಲೆಯ ಹೆಸರು, ತಮ್ಮ ಹೆಸರು ಹಾಗೂ ತಮ್ಮ ಬ್ಯಾಂಕ್‌ ಖಾತೆಯ ವಿವರವನ್ನು ಹೇಳಿದ್ದರಿಂದ, ಬ್ಯಾಂಕಿನಿಂದಲೇ ದೂರವಾಣಿ ಕರೆ ಬಂದಿದೆ ಎಂದು ಕೇಳಿದ ಮಾಹಿತಿಯನ್ನೆಲ್ಲ ನೀಡಿದ್ದಾರೆ. ಬಳಿಕ ಅವರ ಖಾತೆಯಿಂದ ಹಣ ಲಪಟಾಯಿಸಲಾಗಿದೆ.

ಹಣ ಕಳಕೊಂಡವರ ಗೋಳು

ಕೊಪ್ಪಳ ತಾಲೂಕಿನ ಶಿಕ್ಷಕ ಹನುಮಂತಪ್ಪ ಹಾಸಗಲ್‌ ಅವರ ಖಾತೆಯಲ್ಲಿದ್ದ 47 ಸಾವಿರವನ್ನು ಲಪಟಾಯಿಸಲಾಗಿದ್ದು, ಶಿಕ್ಷಕ ದಿನೇಶ ಪಟಗಾರ ಅವರ ಖಾತೆಯಲ್ಲಿದ್ದ 5 ಸಾವಿರ ಐದೇ ನಿಮಿಷದಲ್ಲಿ ಸೆಳೆದಿದ್ದಾರೆ. ಬ್ಯಾಂಕಿಗೆ ಬಂದು ವಿಚಾರ ಮಾಡುತ್ತಲೇ ಖಾತೆಯಲ್ಲಿದ್ದ ಹಣ ಮಾಯವಾದ ವಿಚಾರ ತಿಳಿದು ಅವರು ಗೋಳಾಡಿದರು.

ವಿಪ್‌ ಉಲ್ಲಂಘಿಸಿ ಕಾಂಗ್ರೆಸ್‌ಗೆ ಮತ: ಬಿಜೆಪಿ ಸದಸ್ಯರ ವಿರುದ್ಧ ದೂರು

ಇನ್ನು ಶಿಕ್ಷಕ ಎಚ್‌.ಎಸ್‌. ರೆಡ್ಡಿ ಅವರ ಖಾತೆಯಲ್ಲಿ ಸರಿ ಸುಮಾರು 2 ಲಕ್ಷ ಇತ್ತು. ಅವರಿಗೂ ದೂರವಾಣಿ ಕರೆ ಬಂದಿತ್ತು. ಆದರೆ ಸಂಶಯಗೊಂಡ ಅವರು ಮಾಹಿತಿ ನೀಡದೇ ತಕ್ಷಣ ಬ್ಯಾಂಕಿಗೆ ತೆರಳಿ ವಿಷಯ ತಿಳಿಸಿದರಲ್ಲದೇ ಹಣಕಾಸಿನ ವ್ಯವಹಾರ ತಡೆಹಿಡಿಯುವಂತೆ ಕೋರಿದರು.

ಈ ರೀತಿ ಹಲವರು ಹಣ ಕಳೆದುಕೊಂಡರೆ ಮತ್ತೆ ಕೆಲವರು ಶಂಕೆಗೊಂಡು ಮಾಹಿತಿ ನೀಡಿಲ್ಲ. ಬ್ಯಾಂಕನ್ನು ಸಂಪರ್ಕಿಸಿ ತಮ್ಮ ಬ್ಯಾಂಕಿನ ಖಾತೆಯಿಂದ ಯಾವುದೇ ವಹಿವಾಟು ನಡೆಸದಂತೆ ಮನವಿ ಮಾಡಿ ಬಂದಿದ್ದಾರೆ. ಅಲ್ಲದೆ ಆನ್‌ಲೈನ್‌ ಅಕೌಂಟ್‌ ಬಂದ್‌ ಮಾಡಿಸುವಂತೆಯೂ ಹೇಳಿದ್ದಾರೆ.

ಕೊಟ್ಟಿದ್ದು ಯಾರು?:

ನಮ್ಮ ಖಾತೆಯ ಮಾಹಿತಿಯನ್ನು ಈ ಖದೀಮರಿಗೆ ನೀಡಿದ್ದು ಯಾರು? ನಾವು ಎಲ್ಲಿ ಕಾರ್ಯ ನಿರ್ವಹಿಸುತ್ತೇವೆ? ಯಾವ ಶಾಲೆ? ಮತಗಟ್ಟಿ ಅಧಿಕಾರಿಯ ಹೆಸರು, ವಿವರ ಸೇರಿದಂತೆ ಎಲ್ಲವನ್ನೂ ಆನ್‌ಲೈನ್‌ ಖದೀಮರಿಗೆ ನೀಡಿದ್ದು ಯಾರು ಎನ್ನುವುದೇ ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿದೆ.

ಇದರಿಂದ ಇಡೀ ಶಿಕ್ಷಕ ಸಮುದಾಯ ತಬ್ಬಿಬ್ಬಾಗಿದೆ. ಅಷ್ಟಕ್ಕೂ ನಮ್ಮ ನಿಖರವಾದ ಮಾಹಿತಿಯನ್ನು ಈ ಖದೀಮರ ಕೈಗೆ ಕೊಟ್ಟಿದ್ದಾದರೂ ಯಾರು ಎನ್ನುವುದೇ ಈಗ ಪ್ರಶ್ನಾರ್ಥಕ. ಬಿಎಲ್‌ಒ ಅಮೌಂಟ್‌ ಹಾಕಬೇಕಾಗಿದೆ ಮತ್ತು ನಿಮ್ಮ ಎಟಿಎಂ ಅಪ್‌ಡೇಟ್‌ ಮಾಡಬೇಕಾಗಿದೆ ಎಂದರು. ಇದಕ್ಕಾಗಿ ನಾವು ಮಾಹಿತಿ ನೀಡಿದ್ದೇವೆ. ನನ್ನ ಖಾತೆಯಲ್ಲಿದ್ದ 47 ಸಾವಿರ ಕದ್ದಿದ್ದಾರೆ. ಸೈಬರ್‌ಕ್ರೈಮ್‌ಗೆ ದೂರು ನೀಡುತ್ತೇವೆ ಎಂದು ಹಣ ಕಳೆದುಕೊಂಡ ಶಿಕ್ಷಕ ಹನುಮಂತಪ್ಪ ಹಾಸಗಲ್‌ ಹೇಳಿದ್ದಾರೆ.

ಅನೇಕ ಬಿಎಲ್‌ಒಗಳಿಗೆ ಕರೆ ಮಾಡಿ ಈ ರೀತಿ ಮೋಸ ಮಾಡಿದ್ದಾರೆ. ಒಟಿಪಿ ಹೇಳಿದವರ ಹಣ ಎತ್ತುವಳಿ ಮಾಡಿದ್ದಾರೆ. ಒಟಿಪಿ ಹೇಳದೇ ಇರುವವರ ಮೊತ್ತ ಹೋಗಿಲ್ಲ ಎಂದು ಸಿಆರ್‌ಪಿ ಬಹದ್ದೂರಬಂಡಿ ಹನುಮಂತಪ್ಪ ಕುರಿ ತಿಳಿಸಿದ್ದಾರೆ.