Asianet Suvarna News Asianet Suvarna News

ಲಾಕ್‌ಡೌನ್‌ ಎಫೆಕ್ಟ್‌: ಕಿಸಾನ್‌ ಸಮ್ಮಾನ ಯೋಜನೆ, ರೈತರ ಖಾತೆಗೆ ಹಣ ಜಮೆ

ಈಗಾಗಲೇ 1.8 ಲಕ್ಷ ರೈತರ ಖಾತೆಗಳಿಗೆ ಹಣ ಜಮೆ, 21.76 ಕೋಟಿ ಜಮೆ| ಕೇಂದ್ರ ಸರ್ಕಾರ ಕಿಸಾನ್‌ ಸಮ್ಮಾನ ಯೋಜನೆಯ ಮೊದಲನೆಯ ಕಂತನ್ನು ಈಗಾಗಲೇ ಜಮೆ ಮಾಡಲು ಶುರು ಮಾಡಿದೆ| ಧಾರವಾಡ ಜಿಲ್ಲೆಯಲ್ಲಿ 1.08 ಲಕ್ಷ ರೈತರಿಗೆ ಈ ಹಣ ಜಮೆ| 

Money Credit to Farmers Account for Kissan Samman Project
Author
Bengaluru, First Published Apr 26, 2020, 7:12 AM IST

ಶಿವಾನಂದ ಗೊಂಬಿ

ಹುಬ್ಬಳ್ಳಿ(ಏ.26): ಲಾಕ್‌ಡೌನ್‌ ವೇಳೆ ರೈತರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ಕಿಸಾನ್‌ ಸಮ್ಮಾನ ಯೋಜನೆಯ ಮೊದಲನೆಯ ಕಂತನ್ನು ಈಗಾಗಲೇ ಜಮೆ ಮಾಡಲು ಶುರು ಮಾಡಿದೆ. ಧಾರವಾಡ ಜಿಲ್ಲೆಯಲ್ಲಿ 1.08 ಲಕ್ಷ ರೈತರಿಗೆ ಈ ಹಣ ಜಮೆಯಾಗಿದೆ. ರಾಜ್ಯ ಸರ್ಕಾರವು ಕೂಡ ಬೇಗನೆ ತನ್ನ ಪಾಲಿನ ಹಣ ಜಮೆ ಮಾಡಬೇಕೆಂಬುದು ರೈತರ ಆಗ್ರಹವಾಗಿದೆ.

ಸಮ್ಮಾನ ಯೋಜನೆಯಡಿ ಪ್ರತಿ ವರ್ಷ 6 ಸಾವಿರ ಹಣ ನೀಡುವುದಾಗಿ ಘೋಷಿಸಿತ್ತು. ಪ್ರತಿ ನಾಲ್ಕು ತಿಂಗಳಿಗೊಮ್ಮೆ   ಸಾವಿರಗಳಂತೆ ರೈತರ ಖಾತೆಗೆ ನೇರವಾಗಿ ಹಣ ಜಮೆಯಾಗುತ್ತದೆ. ಅದರಲ್ಲಿ ಕಳೆದ ವರ್ಷದ ಮೂರು ಕಂತುಗಳು ಜಮೆಯಾಗಿವೆ. ಇನ್ನೂ ಈ ವರ್ಷದ ಅಂದರೆ ಏಪ್ರಿಲ್‌- ಜುಲೈ ಈ ನಾಲ್ಕು ತಿಂಗಳದ ಮೊದಲನೆಯ ಕಂತನ್ನು ಈಗಾಗಲೇ ಜಮೆ ಮಾಡಲಾಗಿದೆ.

ಅಜ್ಜಿ ಮನೆಗೆ ಬಂದು ಕೊರೋನಾ ಸೋಂಕು ಅಂಟಿಸಿಕೊಂಡ ಬಾಲಕಿ

ಫಲಾನುಭವಿಗಳು ಎಷ್ಟು?

ಧಾರವಾಡ ಜಿಲ್ಲೆಯಲ್ಲಿ 1.47 ಲಕ್ಷ ರೈತರಿದ್ದಾರೆ. ಇದರಲ್ಲಿ 1.27 ಲಕ್ಷ ರೈತರು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಕೆಲವೊಂದಿಷ್ಟುಆಧಾರ್‌ ಕಾರ್ಡ್‌ಗಳಲ್ಲಿ ಹೆಸರು ಸರಿಯಾಗಿ ತಾಳೆ ಯಾಗದ ಕಾರಣ ಸಿಗುತ್ತಿಲ್ಲ. ಆದರೆ ಕಳೆದ ವರ್ಷ ಮೊದಲನೆಯ ಕಂತು 1.22 ಲಕ್ಷ ಜನರಿಗೆ 24.42 ಕೋಟಿ, 2ನೆಯ ಕಂತು 1.20 ಲಕ್ಷ ರೈತರಿಗೆ 24.14 ಕೋಟಿ, 3ನೆಯ ಕಂತು 1.10 ಲಕ್ಷ ರೈತರಿಗೆ 22.05 ಕೋಟಿ ಜಮೆಯಾಗಿತ್ತು. ಇದೀಗ ಏಪ್ರಿಲ್‌ನಿಂದ ಜುಲೈವರೆಗೆ ರೈತರಿಗೆ 2 ಸಾವಿರ ಜಮೆಯಾಗಬೇಕಿತ್ತು. ಅದನ್ನು ಏಪ್ರಿಲ್‌ನಿಂದ ಜುಲೈವರೆಗೂ ಯಾವಾಗಾದರೂ ಜಮೆ ಮಾಡಬಹುದು. ಆದರೆ ಕೇಂದ್ರ ಸರ್ಕಾರ ಲಾಕ್‌ಡೌನ್‌ ಇರುವ ಕಾರಣ ಏಪ್ರಿಲ್‌ ತಿಂಗಳಲ್ಲಿ ಜಮೆ ಮಾಡುತ್ತಿದೆ. ಈವರೆಗೂ 1.08 ಲಕ್ಷ ರೈತರಿಗೆ ಈಗಾಗಲೇ ತಲಾ 2 ಸಾವಿರ ನಂತೆ 21.76 ಕೋಟಿ ಆಗಲೇ ಜಮೆಯಾಗಿದೆ. ಉಳಿದ ಹಣವೂ ಈ ವಾರದೊಳಗೆ ಜಮೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮೂಲಗಳು ತಿಳಿಸುತ್ತವೆ.

ರೈತರು ಖುಷಿ:

ಈ ಸಲ ಏಪ್ರಿಲ್‌ ಮಾಹೆಯಲ್ಲೇ ಕೇಂದ್ರ ಸರ್ಕಾರ ಹಣ ಜಮೆ ಮಾಡುತ್ತಿರುವುದಕ್ಕೆ ರೈತರು ಖುಷಿಯಾಗಿದ್ದಾರೆ. ಇನ್ನು ಕಳೆದ ವರ್ಷದ 2 ಹಾಗೂ 3ನೆಯ ಕಂತನಲ್ಲೂ ಕೆಲವೊಂದಿಷ್ಟುರೈತರಿಗೆ ಹಣ ಜಮೆಯಾಗಬೇಕಿತ್ತು. ಆದರೆ ಆ ಹಣ ಜಮೆಯಾಗಿಲ್ಲ. ಅದನ್ನು ಶೀಘ್ರದಲ್ಲೇ ಜಮೆ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ಕೇಂದ್ರ ಸರ್ಕಾರ ಕಿಸಾನ ಸಮ್ಮಾನ ಯೋಜನೆಯಡಿ ರೈತರಿಗೆ ಈ ವರ್ಷ ಬೇಗನೆ ಹಣ ಜಮೆ ಮಾಡುತ್ತಿರುವುದು ರೈತರಲ್ಲಿ ಸಂತಸವನ್ನುಂಟು ಮಾಡಿರುವುದು ಸತ್ಯ.

ರಾಜ್ಯ ಸರ್ಕಾರ ಮಾಡಿಲ್ಲ:

ಇನ್ನು ರಾಜ್ಯದ ಬಿಜೆಪಿ ಸರ್ಕಾರವೂ ಅಧಿಕಾರಕ್ಕೆ ಬರುತ್ತಿದ್ದಂತೆ ಕೇಂದ್ರದ 6 ಸಾವಿರ ಸೇರಿ ತಾನೂ 4 ಸೇರಿಸಿ ಒಟ್ಟು 10 ಸಾವಿರ ಕೊಡುವುದಾಗಿ ಭರವಸೆ ನೀಡಿತ್ತು. ಆದರೆ ರಾಜ್ಯ ಸರ್ಕಾರ ಈವರೆಗೆ ಬರೀ 1.08 ಲಕ್ಷ ರೈತರಿಗೆ 21.78 ಕೋಟಿ ಮಾತ್ರ ನೀಡಿದೆ. ಆದ ಕಾರಣ ಬಾಕಿಯುಳಿದಿರುವ ಹಣವನ್ನು ರಾಜ್ಯ ಸರ್ಕಾರವೂ ಜಮೆ ಮಾಡಬೇಕು ಎಂಬುದು ರೈತರ ಆಗ್ರಹ.

ಈವರೆಗೆ 1.08 ಲಕ್ಷಕ್ಕೂ ಅಧಿಕ ರೈತರಿಗೆ ಏಪ್ರಿಲ್‌ 11ರವರೆಗೆ 21.76 ಕೋಟಿ ಹಣ ಜಮೆಯಾಗಿದೆ. ಉಳಿದ ರೈತರ ಖಾತೆಗಳಿಗೂ ಶೀಘ್ರದಲ್ಲೇ ಹಣ ಜಮೆಯಾಗಲಿದೆ ಎಂದು ಧಾರವಾಡ  ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಐ.ಬಿ ಅವರು ಹೇಳಿದ್ದಾರೆ.

ಕಳೆದ ವರ್ಷ ಹಣ ಜಮೆಯಾಗಲು ತಡವಾಗಿತ್ತು. ಆದರೆ ಈ ವರ್ಷ ಏಪ್ರಿಲ್‌ ತಿಂಗಳಿನಲ್ಲೇ ಹಣ ಜಮೆಯಾಗಿದೆ. ಇದು ಸಂತಸಕರ. ಇದರೊಂದಿಗೆ ಕಳೆದ ಸಲ ಕೆಲವೊಂದಿಷ್ಟು ರೈತರ ಖಾತೆಗಳಿಗೆ ಜಮೆಯಾಗಿಲ್ಲ. ಆ ದುಡ್ಡನ್ನು ಜಮೆ ಮಾಡಬೇಕು ಎಂದು ರೈತ ಕಲ್ಲಪ್ಪ ಹುಲ್ಲತ್ತಿ ತಿಳಿಸಿದ್ದಾರೆ.
 

Follow Us:
Download App:
  • android
  • ios