Asianet Suvarna News Asianet Suvarna News

ನರೇಗಾ ಅನುಷ್ಠಾನದಲ್ಲಿ ಕರ್ನಾಟಕ ದೇಶಕ್ಕೆ ಮಾದರಿ: ಸಚಿವ ಈಶ್ವರಪ್ಪ

*   ನರೇಗಾ ಅಡಿಯಲ್ಲಿ ಬಾಕಿ ಇರುವ ಹಣ ಬಿಡುಗಡೆ ಮಾಡುವಂತೆ ಮನವಿ
*   ಪ್ರತಿ ಮನೆಗೆ ನಲ್ಲಿಗಳ ಮೂಲಕ ಕುಡಿಯುವ ನೀರು ಪೂರೈಕೆ
*   ರಾಜ್ಯದಲ್ಲಿರುವ 28 ಸಾವಿರ ಕೆರೆಗಳ ಅಭಿವೃದ್ಧಿ 
 

Model for Karnataka Country in Narega Implementation Says KS Eshwarappa grg
Author
Bengaluru, First Published Sep 13, 2021, 3:40 PM IST

ಬಳ್ಳಾರಿ(ಸೆ.13):  ನರೇಗಾ (ಉದ್ಯೋಗ ಖಾತ್ರಿ) ಯೋಜನೆಯಡಿ ಕಳೆದ ವರ್ಷ 15 ಕೋಟಿ ಮಾನವ ದಿನಗಳನ್ನು ಸೃಜನೆ ಮಾಡುವ ಮೂಲಕ ಪರಿಣಾಮಕಾರಿ ಅನುಷ್ಠಾನದಲ್ಲಿ ಕರ್ನಾಟಕ ರಾಜ್ಯ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದ್ದಾರೆ. 

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ 13 ಕೋಟಿ ಮಾನವ ದಿನಗಳ ಸೃಜನೆ ಮಾಡಲು ಗುರಿ ನಿಗದಿ ಪಡಿಸಲಾಗಿತ್ತು. ಗುರಿಗೂ ಮೀರಿ 15 ಕೋಟಿ ಮಾನವ ದಿನಗಳನ್ನು ಸೃಜನೆ ಮಾಡಿ, ಇಡೀ ದೇಶದಲ್ಲಿ ಅತಿ ಹೆಚ್ಚು ಮಾನವ ದಿನಗಳ ಸೃಜನೆ ಮಾಡಿದ ರಾಜ್ಯವಾಗಿ ಕರ್ನಾಟಕ ಗುರುತಿಸಿಕೊಂಡಿದೆ. ಪ್ರಸಕ್ತ ವರ್ಷಕ್ಕೆ 13 ಕೋಟಿ ಮಾನವ ದಿನ ನಿಗದಿಪಡಿಸಿದ್ದು, ಸೆಪ್ಟೆಂಬರ್‌11ಕ್ಕೆ 9 ಕೋಟಿ ಗುರಿ ಸಾಧಿಸಿದ್ದೇವೆ. ಈ ವರ್ಷವೂ ಅತಿ ಹೆಚ್ಚು ಮಾನವ ದಿನಗಳನ್ನು ಸೃಜನೆ ಮಾಡಿ ದೇಶಕ್ಕೆ ಮಾದರಿಯಾಗುವ ವಿಶ್ವಾಸವಿದೆ ಎಂದು ಹೇಳಿದರು.

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾದ ಗಿರಿರಾಜ ಸಿಂಗ್‌ಅವರನ್ನು ಇತ್ತೀಚೆಗೆ ಭೇಟಿ ಮಾಡಿ ನರೇಗಾ ಅಡಿಯಲ್ಲಿ ಬಾಕಿ ಇರುವ ಹಣವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೆ. ಬಾಕಿ 959 ಕೋಟಿ ಸೇರಿದಂತೆ ಹೆಚ್ಚುವರಿಯಾಗಿ 117 ಕೋಟಿ ಕೇಂದ್ರದಿಂದ ಬಿಡುಗಡೆ ಮಾಡಿದ್ದಾರೆ ಎಂದು ತಿಳಿಸಿದರು.

ಮೃತಪಟ್ಟವರ ಖಾತೆಗೂ ಕೂಡ ನರೇಗಾ ಹಣ ಪಾವತಿ!

28 ಸಾವಿರ ಕೆರೆಗಳ ಅಭಿವೃದ್ಧಿ:

ರಾಜ್ಯದಲ್ಲಿರುವ 28 ಸಾವಿರ ಕೆರೆಗಳನ್ನು ಮುಂದಿನ ಒಂದೂವರೆ ವರ್ಷದಲ್ಲಿ ಜೀರ್ಣೋದ್ಧಾರ ಮಾಡುವ ಗುರಿ ಇದೆ. ಈಗಾಗಲೇ ಈ ಕಾರ್ಯ ಶುರುವಾಗಿದ್ದು, ಜಿಪಂ ವ್ಯಾಪ್ತಿಯ ಕೆರೆಗಳನ್ನು ಗ್ರಾಪಂಗೆ ವಹಿಸಲಾಗಿದೆ. ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಇದರ ಬಗ್ಗೆ ಹೆಚ್ಚಿನ ಗಮನ ಹರಿಸಿ, ಸಂಘ-ಸಂಸ್ಥೆಗಳ ನೆರವಿನೊಂದಿಗೆ ಕೆರೆಗಳ ಜೀರ್ಣೋದ್ಧಾರ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ನರೇಗಾ ಯೋಜನೆಯಡಿ ಸಣ್ಣ ರೈತರು, ಕೂಲಿ ಕಾರ್ಮಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅವರ ಜಮೀನಿನ ವ್ಯಾಪ್ತಿಯಲ್ಲಿ ಬದು ನಿರ್ಮಾಣ ಕಾರ್ಯ ಮಾಡಲಾಗುತ್ತಿದೆ. ಇದರಿಂದ ಮಳೆ ನೀರಿನ ಹರಿಯವಿಕೆ ತಡೆಯುತ್ತದೆ. ಕೆರೆ, ಕಲ್ಯಾಣಿ, ಗೋಕಟ್ಟೆಗಳ ನಿರ್ಮಿಸಲಾಗುತ್ತಿದೆ. ಹಳೆಯ ಕಾಲದ ಬಾವಿಗಳಿಗೆ ಹೊಸ ರೂಪ ನೀಡುವ ಮೂಲಕ ಅವುಗಳ ಜೀರ್ಣೋದ್ಧಾರ ಮಾಡಲಾಗುತ್ತದೆ. ಅವ್ಯವಹಾರ ತಡೆಯುವ ಉದ್ದೇಶದಿಂದ ಕೂಲಿ ಹಣವನ್ನು ನೇರವಾಗಿ ಕೆಲಸ ಮಾಡಿದವರ ಬ್ಯಾಂಕ್‌ಖಾತೆಗಳಿಗೆ 15 ದಿನದೊಳಗೆ ಜಮೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಮನೆ ಮನೆಗೆ ಗಂಗೆ:

ಜಲಜೀವನ್‌ ಮಿಷನ್‌ ಯೋಜನೆಯಡಿ 2024ರೊಳಗಾಗಿ ಮನೆ ಮನೆಗೆ ಗಂಗೆ ಎಂಬ ಧ್ಯೇಯದೊಂದಿಗೆ ಹಳ್ಳಿಗಳಲ್ಲಿ ಮನೆ ಮನೆಗೆ ಕುಡಿಯುವ ನೀರು ಒದಗಿಸಲಾಗುತ್ತದೆ. ಕೇಂದ್ರ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆ ಈಗಾಗಲೇ ಕಾರ್ಯ ರೂಪಕ್ಕೆ ಬಂದಿದ್ದು, ಪ್ರತಿ ಮನೆಗೆ ನಲ್ಲಿಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತದೆ. ಇಡೀ ದೇಶದಲ್ಲಿ ಜೆಜೆಎಂ ಯೋಜನೆಯ ಕಾಮಗಾರಿಗಳು ವೇಗವಾಗಿ ಸಾಗುತ್ತಿವೆ ಎಂದು ತಿಳಿಸಿದರು.

ವಲಸೆ ತಡೆಗೆ ದುಡಿಯೋಣ ಬಾ ಅಭಿಯಾನ : ಪ್ರತಿ ಕುಟುಂಬಕ್ಕೆ 60 ದಿನ ಉದ್ಯೋಗ

ಎಲ್ಲರಿಗೂ ಉದ್ಯೋಗ ಒದಗಿಸುವುದು ಮತ್ತು ಯಾರೂ ಉಪವಾಸದಿಂದ ಇರದಂತೆ ನೋಡಿಕೊಳ್ಳುವ ದೃಷ್ಟಿಯಿಂದ ನರೇಗಾ ಕಾಮಗಾರಿಗಳನ್ನು ಎಲ್ಲೆಡೆ ಪರಿಣಾಮಕಾರಿಯಾಗಿ ಜಾರಿಗೆ ತರಲಾಗುತ್ತಿದೆ. ಇನ್ನೂ ಹೆಚ್ಚಿನ ಜನರು ನರೇಗಾ ಕಾಮಗಾರಿಯಲ್ಲಿ ಪಾಲ್ಗೊಳ್ಳಬೇಕು ಎನ್ನುವ ಸದುದ್ದೇಶದಿಂದ ಪ್ರಧಾನ ಮಂತ್ರಿ ಕ್ಯಾಚ್‌ರೇನ್‌ಕಾರ್ಯಕ್ರಮವನ್ನು ನರೇಗಾ ಅಡಿಯಲ್ಲಿ ಜಾರಿಗೆ ತರಲಾಗುತ್ತಿದೆ. ಮಳೆ ನೀರು ಹರಿದು ಹೋಗದಂತೆ ತಮ್ಮ ತಮ್ಮ ಮನೆಯ ವ್ಯಾಪ್ತಿಯಲ್ಲಿ ನೀರು ಇಂಗಿಸುವಿಕೆ ಕಾರ್ಯ ಮಾಡಲಾಗುತ್ತಿದೆ. ಇದರಿಂದ ಅಂತರ್ಜಲವೂ ಜಾಸ್ತಿಯಾಗಲಿದೆ ಎಂದು ತಿಳಿಸಿದರು.

ಹೊಸದಾಗಿ ಚುನಾಯಿತರಾದ ಗ್ರಾಪಂ ಸದಸ್ಯರಿಗೆ ಆಡಳಿತ ವ್ಯವಸ್ಥೆಯ ಕಾರ್ಯವೈಖರಿ, ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಪ್ರಮುಖ ಯೋಜನೆಗಳು ಸೇರಿದಂತೆ ಹಲವಾರು ವಿಷಯಗಳ ಕುರಿತು ತರಬೇತಿ ನೀಡಲಾಗುತ್ತಿದೆ. ತುಮಕೂರು, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತರಬೇತಿ ನಡೆದಿದ್ದು, ವಿಧಾನಸಭೆಯ ಅಧಿವೇಶನದ ಆನಂತರ ಎಲ್ಲ ಜಿಲ್ಲೆಗಳಲ್ಲಿ ತರಬೇತಿ ನಡೆಸುವ ಉದ್ದೇಶವಿದೆ ಎಂದು ಸಚಿವ ಈಶ್ವರಪ್ಪ ವಿವರಿಸಿದರು.
 

Follow Us:
Download App:
  • android
  • ios